ಮೊಗ್ಗು ಮಾಲೆಯಾಗುವ ಹಾಗೆ
ಬಿಳಿ ಹಾಳೆಯ ತುಂಬಾ ಹರವಿಟ್ಟೆ
ಹೊಸ ಅರ್ಥಗಳ
ಹೊಸ ಶಬ್ದಗಳ
ಪದ ಪುಂಜಗಳನ್ನು
ಆದರೆ ಯಾಕೋ
ಅದು ಪದ್ಯವಾಗಲಿಲ್ಲ
ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ
ಇಂಪಾದ ಕಂಠವಷ್ಟೇ ಇತ್ತು
ಕವಿತೆ ಹಾಡಾಗಲು
ಸ್ವರ ನಾಭಿಯಿಂದುಲಿದು ಬರಬೇಕು !
ಬರ್ರೆಂದು ಸುರಿದ
ಜಡಿ ಮಳೆಯ ಹನಿ
ಟಪಟಪನೆ ಶಬ್ದಿಸುತ್ತಾ
ಮನೆಯ ಮಾಡಿನಿಂದಿಳಿದು
ಅತ್ತಿತ್ತ ಕೊರಕಲಿನಲಿ ಹರಿದು
ಬೇಲಿಯಂಚಿನ ಗಿಡಕೆ
ಜೀವ ತುಂಬುವ ಹಾಗೆ
ಮುಳ್ಳುಕಳ್ಳಿಯ ಮೇಲೂ
ಎದೆ ಹನಿ ಚಿಮುಕಿಸಿ
ಪ್ರೀತಿ ಬೆಳೆಯಬೇಕು
ಹಿಂಡು ಹಿಂಡಾಗಿ ಹಾರಿ
ಬೆಟ್ಟ ಗುಡ್ಡವ ಸುತ್ತಿ
ಹುಲ್ಲು ಚಪ್ಪರಿಯಿಂದ
ಒಂದೊಂದೇ ಕಡ್ಡಿಹೆಕ್ಕಿ
ಹಕ್ಕಿ ಗೂಡುಕಟ್ಟುವ ಪರಿಯಲ್ಲಿ
ನಾವೂ ಕಟ್ಟಬೇಕು
ನಮ್ಮೆದೆಯಲ್ಲೊಂದು ಮಹಲು ಮನೆ.
ಹುಡುಗನೊಳಗಿನ ಪ್ರೀತಿ
ನುಡಿ ಮುತ್ತಾಗುವ ತನಕ
ಕಲ್ಪನೆಯ ಕಂಬಳಿ ಹೊದ್ದು
ಮುಂಜಾವಿನ ಮಂಜುಹನಿಗೆ ಮೈಯೊಡ್ಡಿ
ಅರೆಬಿರಿದ ಮಲ್ಲಿಗೆ ಕೊಯ್ದು
ಮಾಲೆಯಾಗಿ ಮೊಗ್ಗರಳಿ ನಗುವ ಪರಿಗೆ
ಅವಳ ಕಣ್ಣಂಚಿನಲ್ಲಿ
ಹೊಸ ಕನಸು ಚಿಗುರುವಂತೆ
ಕಟ್ಟಬೇಕು ನಾವು ಪ್ರೀತಿ ಮಂದಿರವನ್ನು.
-ಪ್ರಭಾಕರ ತಾಮ್ರಗೌರಿ , ಗೋಕರ್ಣ
Very nice,
ಸುಂದರ ಹೋಲಿಕೆಗಳನ್ನೋಳಗೊಂಡ ಚಂದದ ಕವನ
ಸೊಗಸಾದ ಕವನ