ಪ್ರಾಣಿ..ಪ್ರೀತಿ

Spread the love
Share Button

ಪ್ರಾಣ ಇರುವುದೇ ಪ್ರಾಣಿ..ಜಗತ್ತಿನಲ್ಲಿರುವ ಸಕಲ ಪ್ರಾಣಿಜೀವಿಗಳಲ್ಲಿ ಮಾನವನು ತಾನು ಎಲ್ಲ ಜೀವಿಗಳಿಗಿಂತಲೂ ಅತಿಶ್ರೇಷ್ಠ ಎಂದು ಅಹಂಕಾರದಿಂದ ಮೆರೆಯುತ್ತಿರುವುದು ಪ್ರಕೃತಿ ನಾಶಕ್ಕೆ ಕಾರಣವಾಗಿದೆ. ಆದರೆ ಪ್ರಕೃತಿಯ ನಿಯಮದಂತೆ, ಹೆಚ್ಚು ಶಕ್ತಿಯುಳ್ಳ ಜೀವಿಯು ಮಾತ್ರ ಜಗತ್ತಿನಲ್ಲಿ ತನ್ನ ಇರುವಿಕೆಯನ್ನು ಭದ್ರಪಡಿಸಿಕೊಳ್ಳಬಹುದಷ್ಟೆ? ಆದರೂ, ಬುದ್ಧಿಜೀವಿಯಾದ ಮಾನವನು,ತನ್ನನ್ನುಳಿದೆಲ್ಲವೂ ತನಗಾಗಿ ಮಾತ್ರ ಎಂಬ ಧೋರಣೆ ತಳೆದು ಒಂದಿಲ್ಲೊಂದು ರೀತಿಯಲ್ಲಿ ಸಹಜೀವಿಗಳನ್ನು ನಾಶ ಪಡಿಸುತ್ತಾ ಬಂದಿರುವುದು ಅತ್ಯಂತ ಹೇಯಕೃತ್ಯವಾಗಿದೆ. ಈ ಜಗತ್ತಿನಲ್ಲಿ ವಾಸಿಸುವ ಅಸಂಖ್ಯಾತ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ವಾಸಿಸುವ ಹಕ್ಕಿದೆ ಎಂಬುದನ್ನು ಸ್ವಾರ್ಥಿ ಮಾನವನು ಅಲ್ಲಗಳೆದಿರುವುದೇ ಕಾರಣವಾಗಿದೆ, ಇಂದಿನ ಪ್ರಕೃತಿಯ ಅಸಮತೋಲನಕ್ಕೆ. ಜೀವಿಗಳ ಆಹಾರ ಪದ್ಧತಿಯನ್ನು ಸರಪಳಿ ಕ್ರಿಯೆಯಲ್ಲಿ ರೂಪಿಸಿದೆಯಲ್ಲ.. ಈ ನಿಸರ್ಗ.. ಆದರೆ ಮಾನವನು ಮಾತ್ರ ಅವನದೇ ನಿಯಮದಲ್ಲಿ ಮುಳುಗಿದ್ದು, ನಿಸರ್ಗ ದೇವತೆಗೆ ಮುಳುವಾಗಿರುವುದು ಮಾತ್ರ ಸಾರ್ವತ್ರಿಕ ಸತ್ಯ.

ಆನಂದಕ್ಕಾಗಿ ಬೇಟೆ, ಆಹಾರಕ್ಕಾಗಿ, ಮಾರಾಟಕ್ಕಾಗಿ ಪ್ರಾಣಿಗಳ ವಧೆ,  ಸರ್ವೇಸಾಮಾನ್ಯವಾಗಿದೆ. ಕಾಡಿನ ನಾಶದಿಂದ ಕಾಡುಪ್ರಾಣಿಗಳ ಜೀವನಕ್ಕೆ ಧಕ್ಕೆಯಾಗಿದೆ. ಮಲಿನ ನೀರಿನಿಂದ ಜಲಚರಗಳ ಬದುಕು ದುಸ್ತರವಾಗಿದೆ. ಅಸಂಖ್ಯಾತ ಜೀವ ಸಂಕುಲಗಳ ಸಂತತಿಗಳು ಇಂದು ಇದೇ ಕಾರಣಗಳಿಂದ ಅವನತಿಯತ್ತ ಸಾಗುತ್ತಿವೆ. ಇನ್ನಾದರೂ ಮಾನವನು ಎಚ್ಚೆತ್ತುಕೊಳ್ಳದಿದ್ದರೆ, ದುರಂತ ನಿಶ್ಚಿತವೆಂಬ ಎಚ್ಚರಿಕೆ ಗಂಟೆ ಈಗಾಲೇ ಮೊಳಗಲಾರಂಭಿಸಿದೆ.

ವರ್ಷದಲ್ಲಿ ಒಂದಿಲ್ಲೊಂದು ದಿನವು ಜಾಗತಿಕವಾಗಿ ಪ್ರಾಮುಖ್ಯತೆ ಹೊಂದಿರುವುದು ಈಗ ಸರ್ವೇಸಾಮಾನ್ಯ. ಆದರೆ ವಿಶ್ವ ಪ್ರಾಣಿಗಳ ದಿನವೂ ಅದರ ಜೊತೆಗೂಡಿರುವುದು ವಿಶೇಷವೇ ಸರಿ. ಮಾನವ ಕುಲಕ್ಕೆ ಇದೊಂದು ಅವಮಾನಕಾರಿ ವಿಷಯವೆಂದು ನನ್ನ ಭಾವನೆ. ಅವನೇ ಸ್ವತ: ಕೈಯಾರೆ ನಾಶ ಮಾಡುತ್ತಿರುವುದನ್ನು, ಅತ್ಯಂತ ಶೀಘ್ರಗತಿಯಲ್ಲಿ ಪುನ: ನಿರ್ಮಾಣ ಮಾಡಬೇಕಾಗಿದೆ. ಆದರೂ ಜಗತ್ತು ಉಳಿಯಬೇಕಾದರೆ ಮಾಡಲೇಬೇಕು..ಅದು ಅವನ ಆದ್ಯ ಕರ್ತವ್ಯ ಕೂಡಾ ಹೌದು.

ಮೊತ್ತಮೊದಲಾಗಿ, ಬಹಳ ದೊಡ್ಡ ಲೇಖಕರು ಹಾಗೂ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿಯಿದ್ದ ಹೆನ್ರಿಚ್ ಝಿಮ್ಮರ್ ಮೇನ್ ಎಂಬವರು ಜರ್ಮನಿಯ ಬರ್ಲಿನ್ ನಲ್ಲಿ 24ನೇ ಮಾರ್ಚ್ 1925ರಲ್ಲಿ ಪ್ರಾಣಿಗಳ ದಿನವನ್ನು ಆಚರಣೆಗೆ ತಂದರು. ಆ ಮೊತ್ತಮೊದಲ ಕಾರ್ಯಕ್ರಮಕ್ಕೆ 5,000ಕ್ಕೂ ಹೆಚ್ಚು ಜನರು ಸೇರಿದ್ದು ಒಂದು ದಾಖಲೆಯೇ ಸರಿ! ಮುಂದೆ, ಹೆನ್ರಿಚ್ ಅವರ ಎಡೆಬಿಡದ ಪ್ರಯತ್ನದಿಂದ, ಪ್ರಾಣಿಗಳ ಬಗ್ಗೆ ಬಹಳ ಒಲವಿರುವ ಹಾಗೂ ಅದರ ಪೋಷಕರೂ, ದಯಾಪರರೂ ಆಗಿದ್ದ ಫ಼್ರಾನ್ಸಿಸ್ ಎಂಬ ಸಂತರ ಹಬ್ಬದ ದಿನವಾದ ಒಕ್ಟೋಬರ 4 ರಂದು ಪ್ರಾಣಿಗಳ ದಿನವನ್ನು ಆಚರಿಸಲು ಕರೆನೀಡಲಾಯಿತು, ಹಾಗೆಯೇ 1929ನೇ ಇಸವಿಯಲ್ಲಿ ಈ ದಿನದಂದು ಆಚರಿಸಲು ಪ್ರಾರಂಭಿಸಲಾಯಿತು. ಹೆನ್ರಿಚ್ ಅವರ ಎಡೆಬಿಡದ ಪ್ರಯತ್ನದ ಫಲವಾಗಿ, 1931ರಲ್ಲಿ ವಿಶ್ವವ್ಯಾಪಿಯಾಗಿ ವಿಶ್ವಪ್ರಾಣಿಗಳ ದಿನವನ್ನಾಗಿ ಆಚರಿಸಲು ಪ್ರಾರಂಭವಾಯಿತು. ಈ ದಿನದಂದು, ಈಗಾಗಲೇ ಹದಗೆಟ್ಟು ಹೋದ ಜಗತ್ತನ್ನು, ಸಕಲ ಪ್ರಾಣಿಗಳಿಗೂ ವಾಸಿಸಲು ಯೋಗ್ಯವಾಗುವಂತೆ ರೂಪಿಸುವುದು, ಅವುಗಳ ಅಭಿವೃದ್ಧಿಗಾಗಿ ಶ್ರಮಿಸುವ ಪಣ ತೊಡುವುದಲ್ಲದೆ ಅದನ್ನು ಕಾರ್ಯ ರೂಪಕ್ಕೆ ಇಳಿಸುವುದು, ಅಸಹಾಯಕ ಪ್ರಾಣಿಗಳಿಗೆ ಅಗತ್ಯ ನೆರವು, ಮೂಲ ಉದ್ದೇಶವಾಗಿದೆ.

ಈ ಭುವಿಯನ್ನು ಪೂರ್ತಿ ಅವಲೋಕಿಸಿದಾಗ ನಿಜವಾಗಿಯೂ ಭಯವಾಗುತ್ತದೆ. ನಾವು ಚಿಕ್ಕಂದಿನಲ್ಲಿ ಕಾಣುತ್ತಿದ್ದ ಹಲವಾರು ಪ್ರಾಣಿಗಳು ನಮ್ಮ ಕಣ್ಣೆದುರಿಗೇ ನಶಿಸಿಹೋಗಿವೆ. ಪ್ರತಿ ಮನೆಯಲ್ಲೂ ಇರುತ್ತಿದ್ದ ಗುಬ್ಬಚ್ಚಿ ಗೂಡು, ಮಳೆಗಾಲದಲ್ಲಿ ದೇವರು ತಾಂಬೂಲ ತಿಂದು ಆಕಾಶದಿಂದ ಉಗುಳಿದ್ದೆಂದು ಹಿರಿಯರು ಹೇಳುತ್ತಿದ್ದ ಚಂದದ ಕೆಂಪು ವೆಲ್ವೆಟ್ ಹುಳ ಇಲ್ಲವೇ ಇಲ್ಲ. ಚಿಕ್ಕಂದಿನಲ್ಲಿ ಶಾಲೆಗೆ ನಡೆದುಕೊಂಡು ಹೋಗುವಾಗ, ಮಳೆಗಾಲದಲ್ಲಿ ದಾರಿಯಲ್ಲಿ ಅಲ್ಲಲ್ಲಿ ಕಾಣುವ ಕೆಂಪು ಹುಳಗಳು ನಮಗೆ ಕುತೂಹಲಕಾರಿಯಾಗಿದ್ದು, ಅವುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮ ಪಡುವುದಿತ್ತು.  ದಿನನಿತ್ಯ ಸಂಜೆ ಹೊತ್ತಿಗೆ ತಮ್ಮ ಗೂಡಿಗೆ ಮರಳುತ್ತಿದ್ದ ಆಕಾಶದ ತುಂಬಾ ಹಕ್ಕಿಗಳು ನಾಪತ್ತೆ. ಪ್ರತಿದಿನ  ಮುಸ್ಸಂಜೆ ಹೊತ್ತಿನಲ್ಲಿ ಮನೆಯ ಅಂಗಳದಲ್ಲಿ ಕುಳಿತು ಆಕಾಶದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಹಾರಾಡುವ ಹಕ್ಕಿಗಳು ಎಲ್ಲಿಗೆ ಹೋಗುತ್ತವೆ ಎಂಬ ಕುತೂಹಲದೊಂದಿಗೆ,ಎಣಿಸಲು ಪ್ರಯತ್ನಿಸಿ ಸೋತರೂ ಬಿಡದೆ ಎಣಿಸುತ್ತಲೇ ಕತ್ತಲಾವರಿಸುತ್ತಿತ್ತು.ಎಲ್ಲಾ ಇಂದು ನೆನಪು ಮಾತ್ರವಾಗಿದೆ.  ಹಾಗೆಯೇ  ನಮ್ಮ ಸುತ್ತುಮುತ್ತಲು ಕಾಣಸಿಗುತ್ತಿದ್ದ ಕೆಲವು ಪ್ರಾಣಿ ಪಕ್ಷಿಗಳು ಕಣ್ಮರೆಯಾಗಿವೆ. ಜಗತ್ತಿನ ಜನಸಂಖ್ಯೆ ಮಿತಿಮೀರಿ ಬೆಳೆಯುದರ ಜೊತೆಗೆ ಹಸಿರು ಕಾಡುಗಳ ನಾಶವೂ ಇತರ ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸಿದೆ.

ಮಾನವನು ಪ್ರಾಣಿಗಳನ್ನು ಸಾಕುತ್ತಾನೆ.. ಯಾಕಾಗಿ? ಅವುಗಳಿಂದ ಏನಾದರೂ ಉಪಯೋಗವಿದ್ದರೆ ಮಾತ್ರ ಅಲ್ಲವೇ? ಹಾಲಿಗಾಗಿ, ಮಾಂಸಕ್ಕಾಗಿ, ದುಡಿಸಿಕೊಳ್ಳುವುದಕ್ಕಾಗಿ, ರಕ್ಷಣೆಗಾಗಿ, ಉಣ್ಣೆಗಾಗಿ ಮಾತ್ರವಲ್ಲದೆ ಮುದ್ದುಮಾಡಲು; ಕುರಿ, ಆಡು, ದನ, ಕೋಳಿ,ನಾಯಿ, ಬೆಕ್ಕು, ಗಿಳಿ ಸಹಿತ ಬಣ್ಣ ಬಣ್ಣದ ಹಕ್ಕಿಗಳು, ಬಣ್ಣದ ಮೀನು ಇತ್ಯಾದಿಗಳು ಅವನ ಸಾಕುಪ್ರಾಣಿಗಳು. ಅವುಗಳಾದರೋ,  ಸ್ವತಂತ್ರವಾಗಿಲ್ಲದೆ ಮಾನವನ ಪಂಜರದೊಳಗೆ ಬಂದಿಯಾಗಿ ತಮ್ಮ ಜೀವನವನ್ನು ಸವೆಸುತ್ತವೆ.

ನಾವೇನು ಮಾಡಬಹುದು? ಕೆಳಸ್ತರದಲ್ಲಿ, ಮೊದಲನೆಯದಾಗಿ ಕಾಡು ವೃದ್ಧಿಗಾಗಿ ವೃಕ್ಷಗಳನ್ನು ಬೆಳೆಸಬೇಕು. ಪ್ರಕೃತಿಯೊಡನೆ ಬೆರೆತು ಬಾಳುವುದು ಜೀವನದ ಅವಿಭಾಜ್ಯ ಅಂಗವಾಗಬೇಕು. ಸ್ವತಂತ್ರ ಪ್ರಾಣಿಗಳು ಮಾತ್ರ, ತಮ್ಮ ಆರೋಗ್ಯವಂತ ಸಂಕುಲಗಳನ್ನು ವೃದ್ಧಿಮಾಡಿಕೊಳ್ಳಬಲ್ಲವು ಎಂಬ ಅರಿವು ಮೂಡಬೇಕು. ಪರಮಾತ್ಮನ ದಿವ್ಯ ಸೃಷ್ಟಿಯಾದ ಈ ವಸುಂಧರೆಯು ಎಲ್ಲರ ತಾಯಿ, ಇಲ್ಲಿ ಸಕಲ ಜೀವಿಗಳಿಗೂ ವಾಸಿಸುವ ಹಕ್ಕು ಸಮಾನವಾಗಿದೆ ಎಂಬ ತಿಳುವಳಿಕೆ ಎಲ್ಲರಲ್ಲೂ ಜಾಗೃತವಾಗಬೇಕು. ಪ್ರತಿಯೊಂದು ಜೀವಿಯೂ ಈ ಅನೂಹ್ಯ ಪ್ರಕೃತಿಯ ಅವಿಭಾಜ್ಯ ಅಂಗ ಎಂಬ ಸುಂದರ ಪರಿಕಲ್ಪನೆಯನ್ನು ಸಾಕಾರರೂಪಗೊಳಿಸುವ ನಿಟ್ಟಿನಲ್ಲಿ ಜಗದ ಜನರೆಲ್ಲರೂ ಎಚ್ಚತ್ತುಕೊಳ್ಳಲಿ.. ಎಲ್ಲೆಡೆ ಹಸಿರು ಕಾನನಗಳ ಸೃಷ್ಟಿಯಾಗಿ, ಸಮೃದ್ಧಿಯಿಂದ ನಗುವ ಭುವಿಯು ನಮ್ಮದಾಗಲಿ.

ಶಂಕರಿ ಶರ್ಮ, ಪುತ್ತೂರು.

2 Responses

  1. ನಯನ ಬಜಕೂಡ್ಲು says:

    ಪರಿಸರದ ಬಗ್ಗೆ, ಪ್ರಾಣಿ ಸಂಕುಲವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವಂತಹ ಬರಹ.

  2. ಶಂಕರಿ ಶರ್ಮ says:

    ಲೇಖನ ಓದಿದ ಸಾಹಿತ್ಯ ಬಂಧುಗಳಿಗೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ನಯನ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: