ಬಿಸಿಲುನಾಡು ಬಳ್ಳಾರಿಯ ಓಯಸಿಸ್-ಸಂಡೂರು
ಆಂಧ್ರಪ್ರದೇಶಕ್ಕೆ ತಾಗಿಕೊಂಡಿರುವ ಗಡಿ ಜಿಲ್ಲೆ ಬಳ್ಳಾರಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಮೊದಲು ಸುಳಿಯುವುದೇ ಸುಡುಬಿಸಿಲು, ಗಣಿಗಾರಿಕೆ ಮತ್ತು ಸ್ಟೀಲ್ ಕಾರ್ಖಾನೆಗಳು. ಆದರೆ ಅಷ್ಟೇ ಪ್ರಸಿದ್ಧಿಯನ್ನು ಪಡೆದಿವೆ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ-ಹಂಪಿ ಮತ್ತು ತುಂಗಭದ್ರಾ ಜಲಾಶಯ. ಈ ಸಾಲಿನಲ್ಲಿ ಸೇರಿಸಲೇ ಬೇಕಾದ ಇನ್ನೊಂದು ಸ್ಥಳವೆಂದರೆ-ಸಂಡೂರು. ಇದನ್ನು ‘ಬಯಲು ಸೀಮೆಯ ಮಲೆನಾಡು’ ಅಥವಾ ‘ಬಳ್ಳಾರಿಯ ಓಯಸಿಸ್’ ಎಂದೇ ಕರೆಯುತ್ತಾರೆ. ಎತ್ತ ನೋಡಿದರೂ ಹಚ್ಚ ಹಸುರಿನ ಹೊದಿಕೆಯನ್ನು ಹೊದ್ದು ಮಲಗಿರುವ ಪರ್ವತ ಶ್ರೇಣಿಗಳು, ಇವುಗಳ ಮಡಿಲಲ್ಲಿರುವ ಪುರಾತನ ದೇಗುಲಗಳು, ವಿವಿಧ ರೀತಿಯ ಪ್ರಾಣಿ-ಪಕ್ಷಿ ಸಂಕುಲಗಳು, ವಿಶಾಲವಾಗಿ ಹರಡಿಕೊಂಡಿರುವ ಜಲಾಶಯ, ಅಲ್ಲಲ್ಲಿ ಕಾಣಸಿಗುವ ಹೊಲ-ಗದ್ದೆಗಳು, ತಣ್ಣಗಿನ ಹವೆ ಇವೆಲ್ಲವುಗಳಿಂದಾಗಿ ಇದು ಬಯಲು ಸೀಮೆಯ ಒಂದು ಸ್ಥಳ ಎಂಬುದೇ ಮರೆತುಹೋಗುತ್ತದೆ.
ಇದು ಬಳ್ಳಾರಿ ನಗರದಿಂದ 53 ಕಿ.ಮೀ ದೂರದಲ್ಲಿದೆ ಹಾಗೂ ಐತಿಹಾಸಿಕ ಸ್ಥಳ ಹಂಪಿಯಿಂದ 42 ಕಿ.ಮೀ ದೂರದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದು ‘ಘೋರ್ಪಡೆ’ ಎಂಬ ಮರಾಠಾ ರಾಜಮನೆತನದವರ ಆಡಳಿತಕ್ಕೊಳಪಟ್ಟು ‘ಸಂಡೂರು ಸಂಸ್ಥಾನ’ ಎಂದು ಕರೆಯಲ್ಪಡುತ್ತಿತ್ತು. ಇವರ ಆಡಳಿತದ ಕುರುಹಾಗಿ ಅರಮನೆ, ಕೋಟೆ ಮೊದಲಾದವುಗಳನ್ನು ಕಾಣಬಹುದು. ಬ್ರಿಟಿಷರ ಆಡಳಿತ ಕೊನೆಗೊಂಡ ಮೇಲೆ ಇದು ಅಖಂಡ ಭಾರತದ ಒಂದು ಭಾಗವಾಗಿ ವಿಲೀನವಾಯಿತು. ಪ್ರಸ್ತುತ ಇದು ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಆಗಿ ಪರಿಗಣಿಸಲ್ಪಟ್ಟಿದೆ. ಇದರಲ್ಲಿ 4 ಮುನ್ಸಿಪಲ್ ಪಟ್ಟಣಗಳು ಮತ್ತು 87 ಹಳ್ಳಿಗಳು ಒಳಗೊಂಡಿವೆ.
ಬಳ್ಳಾರಿ ಜಿಲ್ಲೆಯ ಒಂದು ಭಾಗವಾದರೂ ಇಲ್ಲಿನ ಭೌಗೋಳಿಕತೆ ಮತ್ತು ಹವಾಮಾನ ಉಳಿದ ಕಡೆಗಳಿಗಿಂತ ಭಿನ್ನ. ಸುಮಾರು 30,562 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವು ವಿಸ್ತರಿಸಿದೆ. ಪಶ್ಚಿಮ ಘಟ್ಟದಲ್ಲಿ ಬೆಳೆಯುವಂತಹ ಕೆಲವು ಸಸ್ಯಗಳು, ವಿಶಿಷ್ಟ ಪ್ರಭೇದದ ಪಕ್ಷಿಗಳು,ಪ್ರಾಣಿಗಳು ಮತ್ತು ಹಾವುಗಳು ಇಲ್ಲಿನ ಬೆಟ್ಟಗಳಲ್ಲೂ ಕಂಡುಬರುತ್ತವೆ. ಅದರಲ್ಲೂ ಭಾರತದ ಕೆಲವೇ ಕೆಲವು ಪರ್ವತ ಶ್ರೇಣಿಗಳಲ್ಲಿ ಕಾಣಸಿಗುವ, ಹನ್ನೆರೆಡು ವರ್ಷಕ್ಕೊಮ್ಮೆ ಹೂ ಬಿಡುವ ಅಪರೂಪದ ನೀಲಕುರಿಂಜಿ ಹೂವುಗಳು (Strobilanthes kunthiana) ಇಲ್ಲಿನ ಬೆಟ್ಟಗಳಲ್ಲಿ ಅರಳುತ್ತವೆ. 2017 ರಲ್ಲಿ ಈ ಹೂವುಗಳು ಅರಳಿದ್ದವಂತೆ. ಆದ್ದರಿಂದ ಇನ್ನು ಇವುಗಳನ್ನು ಕಣ್ತುಂಬಲು 2029 ರವರೆಗೆ ಕಾಯಬೇಕು. ಜೊತೆಗೆ ಇಲ್ಲಿನ ಹವಾಮಾನವೂ ತಂಪಾಗಿದ್ದು ಅತ್ಯಂತ ಆಹ್ಲಾದಕರವಾಗಿರುತ್ತದೆ. ಇಲ್ಲಿಗೆ ಭೇಟಿನೀಡಲು ಸೂಕ್ತವಾದ ಸಮಯ ಸೆಪ್ಟೆಂಬರ್-ಅಕ್ಟೋಬರ್. 1934 ರಲ್ಲಿ ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಮಹಾತ್ಮ ಗಾಂಧೀಜಿಯವರು ಸೆಪ್ಟೆಂಬರ್ ನಲ್ಲಿ ಇಲ್ಲಿಗೆ ಬಂದಿದ್ದರಂತೆ. ಇಲ್ಲಿನ ಪ್ರಕೃತಿ ಸೌಂದರ್ಯದಿಂದ ಪ್ರಭಾವಿತರಾಗಿ “See See Sandur in September ” ಎಂದಿದ್ದರಂತೆ. ಇಲ್ಲಿನ ಪರ್ವತ ಶ್ರೇಣಿಗಳು ಜ್ವಾಲಾಮುಖಿಯಿಂದ ಉತ್ಪತ್ತಿಗೊಂಡಿದ್ದು ಅಪಾರ ಪ್ರಮಾಣದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರನ್ನು ಹೊಂದಿದ್ದು ದೇಶದ ಪ್ರಮುಖ ಗಣಿಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಪರಿಸರವಾದಿಗಳ ಹೋರಾಟದ ಫಲವಾಗಿ ಹಿಂದೊಮ್ಮೆ ಸ್ಥಗಿತಗೊಂಡಿದ್ದ ಗಣಿಗಾರಿಕೆಯು ಈಗ ಮರುಜೀವ ಪಡೆದು ನೂರಾರು ಕಂಪೆನಿಗಳ ವಶದಲ್ಲಿದ್ದು, ಪರಿಸರ ಪ್ರೇಮಿಗಳ ವಿರೋಧದ ನಡುವೆಯೂ ನಿರಂತರವಾಗಿ ಕಾರ್ಯಾಚರಿಸುತ್ತಿವೆ.
ಇತ್ತೀಚೆಗೆ ನಾವು ಸಂಡೂರಿಗೆ ಒಂದು ದಿನದ ಪ್ರವಾಸವನ್ನು ಮಾಡಿ ಕೆಲವೊಂದು ಸ್ಥಳಗಳನ್ನು ಸಂದರ್ಶಿಸಿ ಬಂದೆವು. ನಾವು ಪ್ರಸ್ತುತ ವಾಸವಿರುವ ಬಳ್ಳಾರಿ ನಗರದಿಂದ ಬೆಳಿಗ್ಗೆ 7.30 ಕ್ಕೆ ಹೊರಟು ತೋರಣಗಲ್ಲು ಮಾರ್ಗವಾಗಿ ಸಂಡೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ತೋರಣಗಲ್ಲು ಪಟ್ಟಣವನ್ನು ದಾಟುತ್ತಿದ್ದಂತೆಯೇ ಭೌಗೋಳಿಕ ಲಕ್ಷಣಗಳಲ್ಲಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸಲಾರಂಭಿಸುತ್ತವೆ. ಈ ಪ್ರದೇಶ ಬಳ್ಳಾರಿಯ ಒಂದು ಭಾಗವೇ!? ಎಂಬಷ್ಟು ಆಶ್ಚರ್ಯವಾಗುತ್ತದೆ. ತೋರಣಗಲ್ಲಿನಿಂದ 11 ಕಿ.ಮೀ ಸಂಚರಿಸಿದಾಗ ರಸ್ತೆಯ ಎಡಭಾಗದಲ್ಲಿ ಮೊದಲು ಕಾಣಸಿಗುವುದೇ ಸಂಡೂರಿನ ಜೀವ ಸೆಲೆಯಾದ ವಿಶಾಲವಾದ ನಾರಿಹಳ್ಳ ಜಲಾಶಯ ಮತ್ತು ಅಣೆಕಟ್ಟು. ಸುತ್ತಲೂ ಪರ್ವತಶ್ರೇಣಿಗಳಿಂದ ಆವರಿಸಿರುವ ಈ ಜಲಾಶಯದ ಸೊಬಗು ವರ್ಣನಾತೀತ. ನೀರು ಎರಡು ಶಿಲಾ ಶಿಖರಗಳನ್ನು ಬೇಧಿಸಿ ಹರಿಯುವ ಈ ಸ್ಥಳವು ಸುಮಾರಾಗಿ ಥಾಯ್ಲೆಂಡಿನ ಜೇಮ್ಸ್ ಬಾಂಡ್ ದ್ವೀಪ(ಖಾವೊ ಸಿಂಗ್ ಕನ್) ವನ್ನು ಹೋಲುತ್ತದೆ ಎಂದೂ ಹೇಳಲಾಗುತ್ತದೆ.
ಎರಡು ಶಿಲಾಪರ್ವತವನ್ನು ಸೀಳಿಕೊಂಡು ಮಧ್ಯದಲ್ಲಿ ಹರಿಯುವ ಈ ಜಲಾಶಯವು ನಯನಮನೋಹರವಾಗಿದ್ದು ಪ್ರವಾಸಿಗರನ್ನು ಅತಿಯಾಗಿ ಆಕರ್ಷಿಸುತ್ತದೆ. ಜಲಾಶಯದ ತಳಭಾಗದಲ್ಲಿರುವ ಕಬ್ಬಿಣದ ಅದಿರಿನ ಪ್ರಭಾವದಿಂದಾಗಿ ಇದರ ನೀರು ಕೆಂಬಣ್ಣದಿಂದ ಗೋಚರಿಸುತ್ತದೆ. ಖ್ಯಾತ ನಿರ್ದೇಶಕ ದಿ. ಶ್ರೀ.ಪುಟ್ಟಣ್ಣ ಕಣಗಾಲರ ‘ಮಾನಸ ಸರೋವರ’ ಚಲನಚಿತ್ರವು ಈ ಸರೋವರದ ಆಸುಪಾಸಿನಲ್ಲೇ ಚಿತ್ರೀಕರಣಗೊಡಿದೆಯಂತೆ. ಈ ಸ್ಥಳದಲ್ಲಿ ಒಂದಷ್ಟು ಹೊತ್ತು ವಿಹರಿಸಿ, ಫೋಟೊಗಳನ್ನು ತೆಗೆದುಕೊಂಡು ನಮ್ಮ ಪ್ರಯಾಣ ಮುಂದುವರಿಸಿದೆವು. ಈ ಜಲಾಶಯದ ಹೊರಭಾಗವನ್ನು ಮೂರೂ ಬದಿಯಿಂದ ಸುತ್ತುವರಿದಿರುವ ರಸ್ತೆಯ ಮೂಲಕ, ಜಲಾಶಯದ ಸೊಬಗನ್ನು ಸವಿಯುತ್ತಾ ಕುಮಾರಸ್ವಾಮಿ ದೇವಾಲಯದ ಕಡೆಗೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.
ರಸ್ತೆಯ ಇಕ್ಕೆಲಗಳಲ್ಲೂ ಜೋಳದ ಹೊಲ, ಬಾಳೆಯ ತೋಟ ಮತ್ತು ಚೆಂಡು ಹೂವಿನ ತೋಟ. ಈ ರಸ್ತೆಗಳಲ್ಲಿ ನಾವು ಗಮನಿಸಿದ್ದು ಅತ್ಯಂತ ಎತ್ತರದಲ್ಲಿ ನಿರ್ಮಿಸಲಾಗಿದ್ದಂತಹ ರೈಲು ಮಾರ್ಗದಂತಹ ಕಂಬಿಗಳು. ಇದರಲ್ಲಿ ವಿರುದ್ಧ ದಿಕ್ಕಿನಲ್ಲಿ ಅತಿವೇಗದಲ್ಲಿ ಚಲಿಸುವಂತಹ ಲೋಹದ ಪೈಪ್‌ಗಳು. ಇವುಗಳು ಅದಿರನ್ನು ಗಣಿಗಾರಿಕಾ ಸ್ಥಳದಿಂದ ಕಾರ್ಖಾನೆಗೆ ತಲುಪಿಸಲು ಮಾಡಿದಂತಹ ವ್ಯವಸ್ಥೆಯಾಗಿದೆ. ಕಿಲೋ ಮೀಟರ್‌ಗಟ್ಟಲೆ ಚಲಿಸುವಂತಹ ಈ ವ್ಯವಸ್ಥೆಯ ಹಿಂದಿರುವ ತಾಂತ್ರಿಕ ಕೌಶಲ್ಯವನ್ನು ಕಂಡು ಬೆರಗಾಗಲೇ ಬೇಕು.
ಸ್ವಲ್ಪ ಮುಂದೆ ಹೂಗುತ್ತಿದ್ದಂತೆಯೇ ಕ್ರೌಂಚಗಿರಿ/ ಸ್ಕಂದ ಗಿರಿ(ಸ್ವಾಮಿಮಲೈ ಶ್ರೇಣಿಯ ಒಂದು ಬೆಟ್ಟ)ಯ ಏರುಹಾದಿ ಆರಂಭವಾಗುತ್ತದೆ. ಇಲ್ಲಿ ನಮ್ಮನ್ನು ಎದುರುಗೊಂಡಿದ್ದು ಸಾಲುಗಟ್ಟಿ ನಿಂತ ಅದಿರು ಸಾಗಿಸುವ ಲಾರಿಗಳು. ರಸ್ತೆಯ ತುಂಬಾ ಅಲ್ಲಲ್ಲಿ ವೇಗನಿಯಂತ್ರಕ ಹಂಪ್(ಉಬ್ಬು)ಗಳ್ನು ನಿರ್ಮಿಸಲಾಗಿರುವುದರಿಂದ ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಬೆಟ್ಟವನ್ನು ಏರುತ್ತಿದ್ದಂತೆಯೇ ತಪ್ಪಲಿನಲ್ಲಿರುವ ಜಲಾಶಯ, ಹೊಲಗದ್ದೆಗಳು ಮತ್ತು ಸಂಡೂರು ಪಟ್ಟಣವು ಅತ್ಯಂತ ರಮಣೀಯವಾಗಿ ಗೋಚರಿಸುತ್ತವೆ. ಬೆಟ್ಟದ ಮೇಲೆ ಅಲ್ಲಲ್ಲಿ ಜೆ.ಸಿ.ಬಿ, ಹಿಟಾಚಿ ಮೊದಲಾದ ಯಂತ್ರಗಳ ಮೂಲಕ ಗಣಿಗಾರಿಕಾ ಕೆಲಸ ಸಾಗುತ್ತಿತ್ತು. ಇವು ಕೇವಲ ಮೇಲ್ನೋಟಕ್ಕೆ ಕಂಡುಬರುವಂತಹ ದೃಶ್ಯಗಳು. ಹೊರಗಿನಿಂದ ರಮಣೀಯವಾಗಿ ಕಾಣುವ ಈ ಬೆಟ್ಟಗಳ ಇನ್ನೊಂದು ಬದಿಯಲ್ಲಿ ಆಳವಾದ ಗಣಿಗಾರಿಕೆ ನಡೆಯುತ್ತಿರುತ್ತದೆ.(ಕನ್ನಡ ಚಲನಚಿತ್ರಗಳಲ್ಲಿ ಕಾಣಸಿಗುವ ಗಣಿಗಾರಿಕೆಯ ದೃಶ್ಯಗಳು ಬಹುಪಾಲು ಇಲ್ಲಿಯೇ ಚಿತ್ರೀಕರಣಗೊಂಡದ್ದಾಗಿರುತ್ತದೆ). ಭೂದೇವಿಯ ಒಡಲನ್ನು ಅಗೆಯುವ ಈ ಚಿತ್ರಣವು ಪ್ರಕೃತಿಪ್ರಿಯರ ಮನಸ್ಸನ್ನು ಘಾಸಿಗೊಳಿಸದೆ ಇರಲಾರದು. ಇಲ್ಲಿನ ಅಪಾರ ಪ್ರಮಾಣದ ಖನಿಜ ಸಂಪತ್ತೇ ಪ್ರಕೃತಿಗೆ ಮಾರಕವಾಗಿ ಶಾಪವಾಗಿದೆ. ಆ ಮಾತೆಯಾದರೋ ಈ ನೋವನ್ನು ಸಹಿಸಿಕೊಂಡು ತಣ್ಣನೆ ಮಲಗಿರುವಂತೆ ಭಾಸವಾಗುತ್ತದೆ. ಇದನ್ನೆಲ್ಲ ನೋಡುವಾಗ ಈ ಅದಿರಿನ ನಿಕ್ಷೇಪಗಳು ಎಲ್ಲೋ ಬಂಜರು ಭೂಮಿಯಲ್ಲಿರಬಾರದಿತ್ತೇ? ಎಂದೆನಿಸಿತು. ಪರಿಸರವಾದಿಗಳ ಹೋರಾಟದ ಫಲವಾಗಿ ಒಂದೊಮ್ಮೆ ಸ್ಥಗಿತಗೊಂಡಿದ್ದ ಗಣಿಗಳು ಇಂದು ಅವ್ಯಾಹತವಾಗಿ(ಅಕ್ರಮ?ಸಕ್ರಮ?) ನಡೆಯುತ್ತಿವೆ. ಇವುಗಳಿಂದಾಗಿ ಕೆಲವೊಂದು ಹಳ್ಳಿಗಳ ಚಿತ್ರಣವೇ ಬದಲಾಗಿದೆ. ಎಲ್ಲಿ ನೋಡಿದರೂ ಕೆಂಪಾದ ಧೂಳು,ಕಲುಷಿತಗೊಂಡ ನೀರು, ಇದರಿಂದಾಗಿ ಹುಟ್ಟಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳು ಇಲ್ಲಿನ ಸ್ಥಳೀಯರ ಬದುಕನ್ನು ದುಸ್ಥರವಾಗಿಸಿದೆ. ಒಂದು ಕಡೆಯಿಂದ ದೇಶದ ಆರ್ಥಿಕತೆ, ಲಕ್ಷಾಂತರ ಕಾರ್ಮಿಕರ ಬದುಕು ಮತ್ತೊಂದೆಡೆಯಿಂದ ಮಾನವನ ಅತಿಯಾದ ದುರಾಸೆ ,ಪ್ರಕೃತಿಯ ನಾಶ. ಇವೆಲ್ಲದರ ಮಧ್ಯೆ ನಮ್ಮ ಮನಸ್ಸು ತೊಳಲಾಡುತ್ತದೆ.
ಸುಮಾರು 5 ಕಿ.ಮೀ ಬೆಟ್ಟ ಏರಿದಾಗ ಕುಮಾರಸ್ವಾಮಿ ದೇವಾಲಯದ ಕಮಾನು ಕಾಣಿಸಿತು. ಇದನ್ನು ಪ್ರವೇಶಿಸುತ್ತಿದ್ದಂತೆಯೇ ಕಾಡಿನಿಂದ ಸುತ್ತುವರಿದ ಪ್ರಶಾಂತ ವಾತಾವರಣದಲ್ಲಿರುವ ಕುಮಾರಸ್ವಾಮಿ ದೇವಾಲಯ ಕಾಣಿಸಿತು. ಹಕ್ಕಿಗಳ ಚಿಲಿಪಿಲಿ ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿಯ ವಾಹನವಾದ ನವಿಲಿನ ಕೂಗು ನಮ್ಮನ್ನು ಸ್ವಾಗತಿಸಿತು. ದೇವಸ್ಥಾನದ ಆವರಣವನ್ನು ಪ್ರವೇಶಿಸಿದಾಗ ಮೊದಲು ಕಾಣುವುದು ಬೃಹದ್ ಗಾತ್ರದ ಅಶ್ವತ್ಥ ಮರ. ಇದರ ಮುಂಭಾಗದಲ್ಲಿ ಅರ್ಜುನ ವೃಕ್ಷಗಳಿಂದ ಸುತ್ತುವರಿದ ತಿಳಿನೀರಿನ ಪುಷ್ಕರಣಿ. ಸ್ವಾಗತ ಗೋಪುರದ ಮೂಲಕ ಒಳಪ್ರವೇಶಿಸಿದಾಗ ಹೂತೋಟದ ಮಧ್ಯದಲ್ಲಿರುವ ಕುಮಾರಸ್ವಾಮಿ ದೇವಾಲಯವು ಕಾಣಿಸಿತು. ಇದು 8-10ನೇ ಶತಮಾನದ ಸಮಯದಲ್ಲಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿದ್ದು 1996 ರವರೆಗೆ ಈ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿರಲಿಲ್ಲವಂತೆ. ನಂತರ ಘೋರ್ಪಡೆ ರಾಜವಂಶಸ್ಥರು ಇಲ್ಲಿನ ನಿಯಮಾವಳಿಗಳಲ್ಲಿ ಸುಧಾರಣೆಯನ್ನು ತಂದು ಸ್ತ್ರೀಯರೂ ದೇವಸ್ಥಾನವನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟರಂತೆ. ಈ ದೇವಾಲಯದ ಒಂದು ಭಾಗದಲ್ಲೇ ಗಣಪತಿಯ ವಿಗ್ರಹವೂ ಇದೆ. ಕುಮಾರಸ್ವಾಮಿ ದೇವಾಲಯದ ಬಲಭಾಗದಲ್ಲಿ ತಾಯಿ ಪಾರ್ವತೀ ದೇವಿಯ ದೇಗುಲವಿದೆ. ಇದು 7-8 ನೇ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಾಣವಾಗಿತ್ತು. ಈ ಎರಡೂ ದೇವಾಲಯಗಳು ಅತ್ಯಂತ ವಿಶಿಷ್ಟವಾದ ವಾಸ್ತು ವಿನ್ಯಾಸವನ್ನು ಹೊಂದಿವೆ.
ಕಾರಣಾಂತರಗಳಿಂದ ಈ ದೇವಸ್ಥಾನಗಳು ಅವಗಣನೆಗೆ ಒಳಪಟ್ಟು ವರ್ಷಾನುಗಟ್ಟಲೆ ದಟ್ಟ ಅರಣ್ಯ ಮಧ್ಯದಲ್ಲಿ ಯಾರಿಗೂ ಕಾಣದಂತೆ ಹುದುಗಿ ಹೋಗಿದ್ದುವು. ವರ್ಷಗಳ ನಂತರ 15 ನೇ ಶತಮಾನದಲ್ಲಿ ಘೋರ್ಪಡೆ ರಾಜವಂಶಸ್ಥರ ಆಡಳಿತ ಸಮಯದಲ್ಲಿ ಈ ದೇವಸ್ಥಾನಗಳು ಬೆಳಕಿಗೆ ಬಂದು ಜೀರ್ಣೋದ್ಧಾರ ಕೆಲಸಗಳು ಕೈಗೊಂಡು ನಿಧಾನವಾಗಿ ಪ್ರಸಿದ್ಧಿಯನ್ನು ಪಡೆದವು. ಈಗ ಈ ದೇವಾಲಯಗಳು ಪುರಾತತ್ವ ಇಲಾಖೆಯ ಜವಾಬ್ದಾರಿಯಲ್ಲಿವೆ. ದೇವರ ದರ್ಶನವನ್ನು ಮಾಡಿ ಇಲ್ಲಿನ ಅರ್ಚಕರ ಬಳಿ ದೇವಸ್ಥಾನದ ಪೌರಾಣಿಕ ಮಹತ್ವದ ಕುರಿತು ಕೇಳಿದೆವು. ಅವರು ತಿಳಿಸಿದ್ದೇನೆಂದರೆ-ಕುಮಾರ ಸ್ವಾಮಿಯು ಸೂಕ್ತ ವಯಸ್ಸಿಗೆ ಬಂದಾಗ, ಆತನಿಗೆ ಇಷ್ಟವಿಲ್ಲದಿದ್ದರೂ ತಾಯಿ ಪಾರ್ವತಿಯು ಕನ್ಯೆಯನ್ನು ಹುಡುಕಲು ತೊಡಗಿದಳು. ಒಮ್ಮೆ ಪಾರ್ವತಿಯು ಕುಮಾರನ ಬಳಿ ಬಂದು ನಿನಗೊಬ್ಬ ಕನ್ಯೆಯನ್ನು ಆರಿಸಿದ್ದೇನೆ ಎಂದಳು. ಆತ ಕನ್ಯೆ ಹೇಗಿದ್ದಾಳೆ? ಎಂದು ಕೇಳಿದಾಗ ತಾಯಿ ಪಾರ್ವತಿಯು ನನ್ನಂತೆಯೇ ಇದ್ದಾಳೆ ಎಂದಳು. ಆಗ ಕುಮಾರನು ಹಾಗಾದರೆ ಆಕೆಯೂ ನನಗೆ ಮಾತೃ ಸಮಾನಳು ಎಂದನು. ಇದರಿಂದ ಕುಪಿತಗೊಂಡ ತಾಯಿಯು ಹಾಗಾದರೆ ನಾನು ಕುಡಿಸಿದ ಎದೆ ಹಾಲನ್ನು ಹೊರಹಾಕು ಎಂದಳು. ತಕ್ಷಣವೇ ಕುಮಾರನು ವಾಂತಿಯ ಮೂಲಕ ಅದನ್ನು ಹೊರಹಾಕುತ್ತಾನೆ. ಈ ಹಾಲೇ ವಿಭೂತಿಯ ರೂಪವನ್ನು ತಾಳಿ ಸಮೀಪದ ಬೆಟ್ಟದಲ್ಲಿ(ವಿಭೂತಿ ಬೆಟ್ಟ) ಸಂಗ್ರಹಗೊಂಡಿತು. ವಾಂತಿಯ ಜೊತೆಗೆ ಹೊರಬಂದ ರಕ್ತವು ಲೋಹದ ರೂಪವನ್ನು ತಾಳಿ ಇಲ್ಲಿನ ಬೆಟ್ಟಗಳಲ್ಲಿ ನಿಕ್ಷೇಪಗೊಂಡಿತು. ಆದ್ದರಿಂದ ಇಲ್ಲಿನ ಬೆಟ್ಟಗಳಿಗೆ ಲೋಹಾದ್ರಿ ಎಂಬ ಹೆಸರೂ ಇದೆ. ಈ ದೇವಾಲಯದ ಮಹತ್ವಕ್ಕೆ ಸಂಬಂಧಿಸಿ ಇನ್ನೂ ಹಲವಾರು ಪೌರಾಣಿಕ ಕಥೆಗಳಿವೆ. ದೇವಾಲಯದ ಆವರಣದಲ್ಲೇ ನಾಗ ಶಿವನ ಗುಡಿಯೂ ಇದೆ. ದೇವಾಲಯದ ಸುತ್ತಲೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿಗೃಹಗಳ ಸಮುಚ್ಚಯವೂ ಇದೆ.
ನಮ್ಮ ಹಾವ-ಭಾವ, ಮಾತುಗಳನ್ನು ಗಮನಿಸುತ್ತಿದ್ದ ಅರ್ಚಕರು ನೀವು ಯಾವ ಊರಿನವರು? ಎಂದು ಕೇಳಿದರು. ನಾವು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು ಎಂದೆವು. ಆಗ ಅವರು ನಗುತ್ತಾ ನಾನೂ ಸುಳ್ಯದ ಜಾಲ್ಸೂರಿನವನು,ಕಳೆದ 26 ವರ್ಷಗಳಿಂದ ಇಲ್ಲಿ ಅರ್ಚಕನಾಗಿದ್ದೇನೆ ಎಂದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಅಪರಿಚಿತ ಊರಿನಲ್ಲಿ ನಮ್ಮವರು ಅನಿರೀಕ್ಷಿತವಾಗಿ ಸಿಕ್ಕಾಗ ನಮಗೆ ಅದೆಷ್ಟು ಸಂತೋಷವಾಗುತ್ತದೆ ಅಲ್ಲವೇ? ಮಾತ್ರವಲ್ಲದೆ ಅರ್ಚಕರ ಪತ್ನಿಯ ಸಹೋದರ ನನ್ನ ಪತಿಯ ಸಹಪಾಠಿ ಎಂಬುದು ತಿಳಿದಾಗ ನಮಗೆ ಇನ್ನಷ್ಟು ಖುಷಿಯಾಯಿತು. ಅವರು ತಮ್ಮ ಮನೆಗೆ ಬರಲೇಬೇಕು ಎಂದು ಅತ್ಯಂತ ಪ್ರೀತಿಯಿಂದ ಆಹ್ವಾನಿಸಿದರು. ಅವರ ಮಾತನ್ನು ಮನ್ನಿಸಿ ದೇವಸ್ಥಾನದಿಂದ ಹೊರಟು ಬೆಟ್ಟವನ್ನಿಳಿದು ಸುಮಾರು 8 ಕಿ.ಮೀ ದೂರದಲ್ಲಿರುವ ಸಂಡೂರು ನಗರದಲ್ಲಿದ್ದ ಅವರ ಮನೆಗೂ ಭೇಟಿ ನೀಡಿ ಅವರ ಕುಟುಂಬದವರ ಪರಿಚಯವನ್ನೂ ಮಾಡಿಕೊಂಡೆವು. ಅಲ್ಲಿ ಉಪಹಾರವನ್ನು ಸ್ವೀಕರಿಸಿ ಸ್ವಲ್ಪ ವಿಶ್ರಾಂತಿಯನ್ನು ಪಡೆದು ಅವರಿಂದ ಬೀಳ್ಕೊಂಡೆವು.
ಸಂಡೂರು ಪಟ್ಟಣದ ಮಧ್ಯಭಾಗದಲ್ಲೇ ಇರುವ ಇನ್ನೊಂದು ಸ್ಥಳ-ಶಿವ ವಿಲಾಸ ಅರಮನೆ. ಇದು ಘೋರ್ಪಡೆ ರಾಜ ವಂಶಸ್ಥರಿಂದ ನಿರ್ಮಿಸಲ್ಪಟ್ಟಿದ್ದು ನಯನಮನೋಹರವಾಗಿದೆ ಎಂದು ಕೇಳಿ ತಿಳಿದಿದ್ದೆವು. ಮಾತ್ರವಲ್ಲದೆ ಹಲವಾರು ತೈಲಚಿತ್ರಗಳು, ಪ್ರಾಚೀನ ವಸ್ತುಗಳನ್ನೂ ಹೊಂದಿರುವ ಈ ಅರಮನೆಯು 2012 ರಲ್ಲಿ ಇದು ಐಷಾರಾಮಿ ಖಾಸಗಿ ರೆಸಾರ್ಟ್ ಆಗಿ ಪರಿವರ್ತಿತವಾಗಿದೆ. ನಾವು ಮುಖ್ಯದ್ವಾರದಲ್ಲಿ ಅಲ್ಲಿನ ಸಿಬ್ಬಂದಿಗಳಿಂದ ತಿಳಿದದ್ದೇನೆಂದರೆ ಅಲ್ಲಿ ಮೊದಲೇ ರೂಮ್ ಬುಕ್ ಮಾಡಿದವರಿಗೆ ಮಾತ್ರ ಪ್ರವೇಶ ಎಂದು. ಆದ್ದರಿಂದ ಹೊರಭಾಗದಿಂದಲೇ ಅರಮನೆಯ ಸೌಂದರ್ಯವನ್ನು ಸವಿದೆವು.
ಸಂಡೂರಿನಲ್ಲಿ ನೋಡಲೇ ಬೇಕಾದ ಇನ್ನೂ ಕೆಲವೊಂದು ಸ್ಥಳಗಳಿವೆ. ಸಂಡೂರಿನ ಕೋಟೆ, ಹರಿಶಂಕರ ದೇವಾಲಯ, ಅಗಸ್ತ್ಯ ತೀರ್ಥ, ಭೀಮ ತೀರ್ಥ, ಗಂಡಿ ಮಾರಮ್ಮ ದೇವಾಲಯ, ಲಕ್ಷ್ಮೀ ನರಸಿಂಹ ದೇವಾಲಯ, ಆಯುರ್ವೇದ ಸಸ್ಯ ಸಂರಕ್ಷಣಾ ವನ ಮತ್ತು ‘ಸಂಡೂರಿನ ಯಾಣ’ ಎಂದು ಕರೆಯಲ್ಪಡುವ ಉಬ್ಬಲ ಗುಂಡಿ ಶಿಲಾ ಶಿಖರಗಳು. ಮಾತ್ರವಲ್ಲದೆ ರಜಾ ಸಮಯವನ್ನು ಆನಂದಿಸಲು, ಸಾಹಸ ಕ್ರೀಡೆಗಳನ್ನೂ ಒಳಗೊಂಡ ಹಲವಾರು ಖಾಸಗಿ ರೆಸಾರ್ಟ್ ಗಳೂ ಇಲ್ಲಿ ಇವೆ. ಆದರೆ ಇದಕ್ಕಾಗಿ ಮೊದಲೇ ಕಾದಿರಿಸಬೇಕಾಗುತ್ತದೆ. ಸಮಯದ ಅಭಾವದಿಂದ ನಮಗೆ ಎಲ್ಲಾ ಸ್ಥಳಗಳನ್ನು ಸಂದರ್ಶಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮತ್ತೊಮ್ಮೆ ಬರುವ ಆಶಯದೊಂದಿಗೆ ಬಳ್ಳಾರಿಗೆ ಹಿಂದಿರುಗಿದೆವು. ಕೆಂಧೂಳು, ಗುಂಡಿ ತುಂಬಿರುವ ರಸ್ತೆಗಳು ಮತ್ತು ಅದಿರು ಲಾರಿಗಳ ಅಬ್ಬರ ನಮ್ಮನ್ನು ಸ್ವಲ್ಪಮಟ್ಟಿಗೆ ಕಂಗೆಡಿಸುತ್ತವೆಯಾದರೂ ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಗಳು ಪುನ: ಬರುವಂತೆ ಕೈ ಬೀಸಿ ಕರೆಯುವುದರಲ್ಲಿ ಸಂಶಯವಿಲ್ಲ.
-ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ
ತುಂಬಾ ಸವಿವರವಾಗಿ ಸಂಡೂರನ್ನು, ಅದರ ಪ್ರಾಕೃತಿಕ ಪರಿಸರ ಹಾಗೂ ಐತಿಹಾಸಿಕತೆಯನ್ನು ಪರಿಚಯಿಸಿದ್ದೀರಿ. ಅದೇ ಊರಲ್ಲಿ ಆಡಿ ಬೆಳೆದ ನನ್ನಂತಹವರಿಗೆ ಇದು ತವರನ್ನು ನೆನಪಿಸಿದಂತೆ! ಧನ್ಯವಾದಗಳು
Super about ನಮ್ಮ ಸಿಮ್ಲಾ
Lovely article…Tempted to visit this place!!
Very nice narration.
ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..
ಸವಿವರವಾಗಿ ಬಳ್ಳಾರಿ ಯ ಸಂಡೂರು ಬಗ್ಗೆ ಹೇಳಿರುವಿರಿ ಮೇಡಂ
Thank you..
ಮಾಹಿತಿಪೂರ್ಣ ಬರಹ.
Thank you Nayanakka
ಸಂಡೂರು ಬಗೆಗಿನ ಸಮಸ್ತ ವಿವರಗಳು, ಪ್ರಾಕೃತಿಕ ಸೌಂದರ್ಯದ ಜೊತೆಗೆ ಸಾಂದರ್ಭಿಕ ಚಿತ್ರಗಳು ..ಅತ್ಯಂತ ಅಮೋಘವಾಗಿ ಮೂಡಿಬಂದಿರುವ ಲೇಖನ ತುಂಬಾ ಖುಷಿ ಕೊಟ್ಟಿತು..ಧನ್ಯವಾದಗಳು ಹರ್ಷಿತ ಮೇಡಂ.
ಧನ್ಯವಾದಗಳು
ಮಾಹಿತಿಪೂರ್ಣ ಲೇಖನ
ಧನ್ಯವಾದಗಳು
ಹರ್ಷಿತಾ ತುಂಬಾ ಚೆನ್ನಾಗಿ ವರ್ಣಿಸಿ ಬರೆದ ಬಳ್ಳಾರಿ,ಹಂಪಿಗೆಲ್ಲಾ ನಾವು1999ರಲ್ಲಿ ನೋಡಿ ಬಂದೆವು .ಬೆಟ್ಟದಿಂದ ಇಳಿಮುಖ ರೈಲುದಾರಿ ದೂರದಿಂದ ನೋಡಿ ಬಂದೆವು. ನೀವು ವಿವರಿಸಿದ ಚಿತ್ರದ ಮೂಲಕ ನನಗೆ ಮನದಟ್ಟು ಆಯಿತು. ಹರ್ಷಿತಾ ಧನ್ಯವಾದ . ಸುಂದರ ಮನಮೋಹಕ ದೃಶ್ಯದ ವರ್ಣನೆ ಕೇಳಿ ಒಮ್ಮೆ ಹೋಗಿಬರುವ ಎಂದು ಎನಿಸಬಹುದು.
Thank you
ಸಂಡೂರು ಪ್ರವಾಸ ಅನುಭವ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.