ಉದುರಿದ್ದು ನಾಲ್ಕು ಹನಿಗಳು
ಟಪಟಪನೆ ಉದುರಿದ ನಾಲ್ಕು ಹನಿಗೆ
ಭುಗಿಲೆದ್ದ ಒಡಲ ಧಗೆ
ಕನಸಿನ ಲೋಕದ
ಬಾಗಿಲು ತೆರೆದಂತೆ
ಹೊರ ಹೊಮ್ಮಿದ
ಮಣ್ಣ ವಾಸನೆ
ಬಿಸುಸುಯ್ದು ಮೆಲ್ಲನೆ ನಾಚಿ
ನಸು ನಕ್ಕ ವಸುಂಧರೆ
ತಣ್ಣಗೆ ನರಳಿ ಕಣ್ಮುಚ್ಚಿ
ಹೊರಳಿ ಬಾಯಾರಿ
ಅರಳಿದ ಮರ , ಗಿಡಬಳ್ಳಿ
ಅಂಗಾಂಗ ನಿಶ್ಯಬ್ದ
ನೀರವ ನಿರಾತಂಕ ತೊನೆದು
ಪುಳಕಗೊಂಡ ಶೃಂಗಾರ ಬಗೆ
ಚಿಗುರು ಹಸಿರು ಹೊರಚಾಚಿ
ಬೆರಗಾದ ಬಗೆ……
ಗುಡಿಸಲಲಿ , ತೊಟ್ಟಿಲಲಿ
ಗಿರಿಗಳಲಿ , ವನಗಳಲಿ
ಪುಟ್ಟ ಕಂದಮ್ಮಗಳು
ಪ್ರತಿ ಪಶು ,ಪಕ್ಷಿಗಳು
ಕೇಕೇ ಹಾಕಿ ನಕ್ಕ ನಗೆ
ಜೀವ ಪ್ರಪಂಚವೇ
ಮರು ಹುಟ್ಟು ಪಡೆವ ಹಾಗೇ
ಉದುರಿದ್ದು ನಾಲ್ಕು ಹನಿಗಳು !
-ಪ್ರಭಾಕರ ತಾಮ್ರಗೌರಿ, ಗೋಕರ್ಣ
ಚೆನ್ನಾಗಿದೆ
ಸೂಪರ್ ಕವನ
ಒಳ್ಳೆಯ ಕವನ.
ಚಂದದ ಕವನ.