“ನೀರ್ ಕಡ್ಡಿ “- ಮನೆಯಂಗಳದ ಸಂಜೀವಿನಿ

Spread the love
Share Button

ಪ್ರಕೃತಿಯ ಮಡಿಲಲ್ಲಿ ಅವೆಷ್ಟು ಸಸ್ಯ ಸಂಕುಲಗಳು! ಆಯಾಯ ಪ್ರದೇಶದ ಭೌಗೋಳಿಕ ಅಂಶವನ್ನು ಹೊಂದಿಕೊಂಡು ಬೆಳೆಯುವ ಸಸ್ಯಗಳ ಸಂಖ್ಯೆಗೆ ಮಿತಿಯುಂಟೇ? ನೆಲದ ಮೇಲೆ ಬೆಳೆಯುವ ಪುಟ್ಟ ಗಿಡಗಳು, ಬಳ್ಳಿಗಳು, ಪೊದೆ ಸಸ್ಯಗಳು, ಆಕಾಶದೆತ್ತರಕ್ಕೆ ತನ್ನ ಕೊಂಬೆ ರೆಂಬೆಗಳನ್ನು ಚಾಚಿ ಬೆಳೆಯುವ ಮರಗಳು! ಮರಗಳನ್ನು ಆಶ್ರಯಿಸಿ ಬೆಳೆಯುವ ಬಂದಣಿಕೆ ಗಿಡಗಳು!  ಅರಳಿ ನಗುವ ಪರಿಮಳಭರಿತ/ರಹಿತ ಬಣ್ಣ ಬಣ್ಣದ ಹೂವುಗಳು! ಗಿಡ, ಮರ, ಬಳ್ಳಿಗಳಲ್ಲಿ ತೊನೆದಾಡುವ ವಿವಿಧ ರುಚಿಯ ರಸಭರಿತ ಹಣ್ಣುಗಳು! ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ಕೆಲವೊಂದು ಸಸ್ಯಗಳ ಪರಿಚಯವೂ ಇದೆ. ಕೆಲವೊಂದು ಸಸ್ಯಗಳ ಬಗ್ಗೆ ಓದಿ ಹಾಗೆಯೇ ಹಿರಿಯರಿಂದ/ಬಲ್ಲವರಿಂದ ಕೇಳಿ ತಿಳಿದುಕೊಂಡದ್ದಿದೆ. ಹೆಚ್ಚಿನ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ. ಸಸ್ಯದ ಭಾಗಗಳಾದ ಬೇರು, ತೊಗಟೆ, ಹೂವು, ಎಲೆ, ಹಣ್ಣು, ಬೀಜ ಎಲ್ಲದರಲ್ಲಿಯೂ ಮದ್ದಿಗೆ ಉಪಯುಕ್ತವಾಗುವ ಅಂಶಗಳಿವೆ. ಪ್ರತಿಯೊಂದು ಗಿಡದ ಔಷಧೀಯ ಗುಣವನ್ನು ತಿಳಿದುಕೊಂಡು, ಮನೆ ಮದ್ದಾಗಿ ಬಳಸುತ್ತಿದ್ದ ಹಿಂದಿನ ತಲೆಮಾರಿನವರ ಬುದ್ಧಿಶಕ್ತಿಗೆ ನಿಜವಾಗಿಯೂ ನಾವೆಲ್ಲರೂ ಚಿರಋಣಿಗಳಾಗಿರಬೇಕು.

ಬಿರು ಬೇಸಗೆಯ ದಿನಗಳು ಕಳೆದು, ಭೂಮಿತಾಯಿಯ ಮೇಲೆ ವರುಣನ ಕೃಪಾಕಟಾಕ್ಷವಾದಾಗ ಆಕೆ ಸಂಭ್ರಮಿಸುವ ಪರಿಯದು ವರ್ಣಿಸಲಸದಳ. ಮಳೆಗಾಲ ಬಂದಾಗ ಹುಟ್ಟಿ, ಮಳೆಗಾಲ ಮರೆಯಾದಾಗ ಸತ್ತು ಹೋಗುವ ಅಸಂಖ್ಯಾತ ಗಿಡಗಳಿವೆ. ಅಂತಹ ಸಸ್ಯಗಳಲ್ಲೊಂದು ನೀರ್ ಕಡ್ಡಿ ಗಿಡ. ನನ್ನ ತವರು ಮನೆಯಲ್ಲಿ ಸೋಣ (ಶ್ರಾವಣ) ತಿಂಗಳಿನಲ್ಲಿ ಮಾಡುವ ಹೊಸ್ತಿಲಪೂಜೆಯಲ್ಲಿ ನಾವು ನೀರ ಕಡ್ದಿ ಎಂಬ ಗಿಡವನ್ನು ಉಪಯೋಗಿಸುತ್ತಿದ್ದೆವು. ಪ್ರಾಥಮಿಕ ಶಾಲಾ ದಿನಗಳಲ್ಲಿ, ಧಾರಾಳ ನೀರಿನಂಶವಿರುವ ಮೃದು ಕಾಂಡವನ್ನು ಹೊಂದಿರುವ ಈ ಸಸ್ಯವನ್ನು  ಸ್ಲೇಟು ಉಜ್ಜಲು ಕೂಡಾ ಬಳಸುತ್ತಿದ್ದೆವು. ಕಳೆದ ವರ್ಷ, ನನಗೆ ಗೊತ್ತಿದ್ದ ನೀರಕಡ್ಡಿ ಗಿಡದ  ಬಗ್ಗೆ ಏನಾದರೂ  ವೈಜ್ಞಾನಿಕ ಮಾಹಿತಿ ಏನಾದರೂ ಸಿಗಬಹುದೆ ಅನ್ನುವ ಗೂಗಲ್ ಹುಡುಕಾಟ ನಡೆಸಿದ್ದೆ. ಆಗ ಕಣ್ಣಿಗೆ ಬಿದ್ದದ್ದು ಇನ್ನೊಂದು ವಿಧದ ನೀರಕಡ್ಡಿ ಗಿಡ! ಬಹುಶಃ ನೀರು ಹಿಡಿದಿಟ್ಟುಕೊಳ್ಳುವ ಗುಣದಿಂದಾಗಿ ಒಂದೇ ಹೆಸರು ಬಂದಿರಬೇಕು. ಎರಡು ರೀತಿಯ ಗಿಡಗಳ ಮಧ್ಯೆ ಹೋಲಿಕೆಯೆಂದರೆ ಮೃದು ಕಾಂಡ ಹಾಗೂ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಕೇವಲ ಮಳೆಗಾಲದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಈ ಸಸ್ಯಗಳು.

ನನಗೆ ಗೊತ್ತಿದ್ದ ನೀರಕಡ್ಡಿ ಗಿಡ ಹಾಗೂ ಗೂಗಲ್ ಹುಡುಕಾಟದಲ್ಲಿ ಸಿಕ್ಕಿದ ನೀರಕಡ್ಡಿ ಗಿಡಗಳ ನಡುವೆ ಹಲವು ವ್ಯತ್ಯಾಸ! ಬಣ್ಣ, ಎಲೆಗಳ ಸಂರಚನೆ,ಹೂವು, ಕಾಯಿ ಎಲ್ಲವೂ ಭಿನ್ನ. ಪ್ರತಿ ಮಳೆಗಾಲದಲ್ಲಿ ನಮ್ಮ ಮನೆಯ ಸುತ್ತ ಹೇರಳವಾಗಿ ಕಾಣಿಸಿಕೊಳ್ಳುವ, ಕಳೆ ಗಿಡವೆಂದು ನಾನು ನಂಬಿದ್ದ ಗಿಡವೂ ಹತ್ತು ಹಲವು ಔಷಧೀಯ ಗುಣಗಳುಳ್ಳ ನೀರಕಡ್ಡಿ ಗಿಡವೆಂದು ತಿಳಿದು ಅಚ್ಚರಿಯಾಗಿತ್ತು. ಈ ಗಿಡವನ್ನು ಕಪ್ಪೆ ಮೆಣಸಿನ ಗಿಡವೆಂದೂ ಕರೆಯುವರು ಅನ್ನುವ ಮಾಹಿತಿಯೂ ಸಿಕ್ಕಿತ್ತು.  ಸಮಯ ಸಿಕ್ಕಿದಾಗ, ಈ ಗಿಡದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಲೇಖನ ಬರೆಯುವ ಯೋಚನೆ ಇದ್ದರೂ ಕಾರ್ಯಗತವಾಗಿರಲಿಲ್ಲ. ಮತ್ತೇ ಮರೆತೇ ಹೋಗಿತ್ತು.

ಒಂದು ವಾರದ ಹಿಂದೆ, ನಮ್ಮ ಮನೆಯ ಸುತ್ತ ಮುತ್ತ ಎಲ್ಲೆಂದರಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆಗೆಯಬೇಕೆಂದು ಹೊರಟಿದ್ದೆ. ಆಗ ಹುಲುಸಾಗಿ ಬೆಳೆದ ನೀರ್ ಕಡ್ಡಿ ಗಿಡಗಳು ಕಣ್ಣಿಗೆ ಕಾಣಿಸಿದವು. “ನೀನು ನಮ್ಮನ್ನು ಮರೆತೇ ಬಿಟ್ಟಿದ್ದೀಯಾ” ಅಂತ ಗಿಡಗಳು ನನ್ನನ್ನು ಅಣಕಿಸಿದಂತಾಯಿತು. ಕೂಡಲೇ ಕಾರ್ಯಪ್ರವೃತ್ತಳಾಗಿ  Plant app  application ಬಳಸಿ ನೀರ್ ಕಡ್ಡಿ ಗಿಡದ ವೈಜ್ಞಾನಿಕ ಹೆಸರು ಹುಡುಕಿದೆ. Peperomia pellucida  ಅಂತ ವೈಜ್ಞಾನಿಕ ಹೆಸರು ಹೊಂದಿರುವ ಈ ನೀರ್ ಕಡ್ಡಿ ಗಿಡ Piperaceae ಎಂಬ ಕುಟುಂಬಕ್ಕೆ ಸೇರಿದ ಸಸ್ಯವೆಂದು ಗೊತ್ತಾಯಿತು.

ವೀಳ್ಯದೆಲೆ, ಕರಿಮೆಣಸು ಜಾತಿಗೆ ಸೇರಿದ ಗಿಡ. ಆರರಿಂದ ಹದಿನೆಂಟು ಇಂಚು ಎತ್ತರಕ್ಕೆ ಬೆಳೆಯುವ  ಈ ಗಿಡದ ವಿಶೇಷ ಏನಪ್ಪಾ ಅಂದ್ರೆ ಈ ಗಿಡದ ಕಾಂಡದ ತುಂಬಾ ನೀರು. ಹೃದಯದ ಆಕಾರವನ್ನು ಹೋಲುವ ಹೊಳೆಯುವ ತಿಳಿ ಹಸಿರು ಎಲೆಗಳು. ಕೋಲುಕಡ್ದಿಗೆ ಅಂಟಿಸಿದಂತೆ ಕಾಣುವ ಹೂವು- ಹಣ್ಣು- ಬೀಜಗಳು. ಈ ಗಿಡದ ಮೂಲ ದಕ್ಷಿಣ ಅಮೇರಿಕಾವೆಂದೂ, ಆದರೆ ಈಗ ಜಗತ್ತಿನ ಎಲ್ಲೆಡೆ ಕಂಡು ಬರುವುದೆಂದೂ ಮಾಹಿತಿ ಸಿಕ್ಕಿತು.  ಜಗತ್ತಿನ ವಿವಿಧ ದೇಶಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಈ ಗಿಡವನ್ನು ಬಳಸುವರಂತೆ. ಕಣ್ಣಿನ ಉರಿಯನ್ನು ಕಡಿಮೆ ಮಾಡಲು ಎಲೆ ಮತ್ತು ಕಾಂಡದ ರಸ ಬಳಸುವರಂತೆ. ಸಾಮಾನ್ಯ ಶೀತ, ಕೆಮ್ಮು, ಜ್ವರ, ಗಂಟಲುನೋವು, ತಲೆನೋವು,  ಭೇದಿ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಅಲ್ಲದೆ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗಳನ್ನು ಗುಣಪಡಿಸಲು ಈ ಗಿಡವನ್ನು ಬಳಸುವರಂತೆ. ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಶಕ್ತಿಯೂ ಇದೆಯಂತೆ.

ಇನ್ನೊಂದು ಖುಷಿಯ ವಿಷಯವೆಂದರೆ Vietnam’s Crab claw ಎಂದೂ ಕರೆಸಿಕೊಳ್ಳುವ ಈ ಗಿಡವನ್ನು ಅಡುಗೆಯಲ್ಲಿ ಹೇಗೆ ಬಳಸಬಹುದು ಅನ್ನುವ ಹೊಸ ಮಾಹಿತಿಗಳು ಸಿಕ್ಕಿದವು. ಹಲವು ಅಡುಗೆಗಳ ಪಾಕವೈವಿಧ್ಯಗಳ ವಿಡಿಯೋ ಕೂಡಾ ಅಂತರ್ಜಾಲ ಪ್ರಪಂಚವನ್ನು ಸೇರಿಕೊಂಡಿದೆ.  ಸ್ತುತಿ ಕೃಷ್ಣರಾಜ ಅನ್ನುವವರು ಈ ಗಿಡದ ಎಲೆಯನ್ನು ಬಳಸಿ ತಂಬುಳಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ಈ ಗಿಡದ ಎಲೆಗಳನ್ನು ಬಳಸಿ ಮಾಡುವ ಮೊಸರು ರಾಯಿತ, ತಂಬುಳಿ ಹಾಗೂ ಗಿಡದ ಕಾಂಡವನ್ನು ಸಾರು ಮಾಡುವ ಬಗ್ಗೆ ಮಾಹಿತಿ ಸಿಕ್ಕಿತು. ಅಲ್ಲದೆ ಮೈಗ್ರೇನ್ ತಲೆ ನೋವಿನಿಂದ ಬಳಲುವವರು ಈ ಗಿಡದ ಎಲೆಗಳನ್ನು ತಿಂದರೆ, ಮೈಗ್ರೇನ್ ತಲೆನೋವು ಕಡಿಮೆಯಾಗುವ ಬಗ್ಗೆಯೂ ಪರಿಣಿತ ಆಯುರ್ವೇದ ವೈದ್ಯರ ಮಾಹಿತಿಯೂ ಸಿಕ್ಕಿತು.

ಸಸ್ಯಗಳು ನೀರನ್ನು ಹೀರಿಕೊಳ್ಳುತ್ತವೆ ಅನ್ನುವುದನ್ನು ಸಾಬೀತುಪಡಿಸಲು ನೀಡುವ ಪ್ರಾತ್ಯಕ್ಷಿಕೆಗಳಲ್ಲಿಯೂ ಈ ಗಿಡವನ್ನು ಬಳಸುವ ಬಗ್ಗೆಯೂ ಮಾಹಿತಿ ಸಿಕ್ಕಿತು.  ಬಣ್ಣದ ನೀರು  ಈ ಗಿಡದ ಮೂಲಕ  ಹರಿಯುವುದನ್ನು ಕಂಡ ಮಕ್ಕಳ ಕಣ್ಣಲ್ಲಿ ಮೂಡುವ ಹೊಳಪಿಗೆ  ಬೆಲೆ ಕಟ್ಟಲುಂಟೇ?  ಸ್ಲೇಟ್ ಉಜ್ಜಲು, ಹೊಸ್ತಿಲ ಪೂಜೆಯಲ್ಲಿ ಹಾಗೂ ಪ್ರಯೋಗದ ವಸ್ತುವಾಗಿ ಬಳಕೆ ಆಯಿತೇ ವಿನಃ ಈ ಗಿಡದ ಔಷಧೀಯ ಗುಣಗಳನ್ನು ಜನರು ಅಷ್ಟಾಗಿ ಗುರುತಿಸಲಿಲ್ಲವೆಂದು ಸಸ್ಯಶಾಸ್ತ್ರ ಅಧ್ಯಾಪಕರೊಬ್ಬರು ಖೇದ ವ್ಯಕ್ತಪಡಿಸಿದರೆನ್ನುವ ಮಾಹಿತಿಯೂ ಸಿಕ್ಕಿತು.

ಪ್ರತಿ ಮಳೆಗಾಲ ಕಾಣಿಸಿಕೊಳ್ಳುವ ಇಷ್ಟೊಂದು ಉಪಯುಕ್ತವುಳ್ಳ ಸಸ್ಯಗಳನ್ನು  ಕಳೆಗಿಡವೆಂದುಕೊಂಡು ಕಿತ್ತು ಎಸೆಯುತ್ತಿದ್ದೆನಲ್ಲಾ ಅನ್ನುವ ವ್ಯಥೆಯೂ ಆಯ್ತು.  ಈ ನೀರಕಡ್ಡಿ ಗಿಡದ ತಂಬುಳಿ ಮಾಡುವೆನೆಂದು ನಿಶ್ಚಯಿಸಿದೆ.  ಎಲೆಗಳನ್ನು ಸ್ವಲ್ಪ ಬೇಯಿಸಿ ಬಳಿಕ ತೆಂಗಿನ ತುರಿ, ಹುರಿದ ಒಣಮೆಣಸಿನ ಕಾಯಿ ಹಾಗೂ ಜೀರಿಗೆ ಜೊತೆ ರುಬ್ಬಿ, ಬಳಿಕ ಮಜ್ಜಿಗೆ, ಉಪ್ಪು ಸೇರಿಸಿ (ಸ್ವಲ್ಪ ಬೆಲ್ಲ-ಸಿಹಿ ಪ್ರಿಯರಿಗೆ) ಸಾಸಿವೆ ಒಗ್ಗರಣೆ ಕೊಟ್ಟು ತಂಬುಳಿ ತಯಾರಿಸಿದ್ದೂ ಆಯಿತು, ಅನ್ನದ ಜೊತೆ ಕಲಸಿ ತಿಂದಿದ್ದೂ ಆಯಿತು.  ಸೂಪರ್ ರುಚಿ ಮಾರಾಯರೇ… ನೀವು ಕೂಡಾ ನೀರ ಕಡ್ಡಿ ಎಲೆಯ ತಂಬುಳಿ ಮಾಡುವಿರಲ್ಲಾ ?

-ಕೃಷ್ಣಪ್ರಭಾ.ಎಂ. ಮಂಗಳೂರು

16 Responses

 1. ನಯನ ಬಜಕೂಡ್ಲು says:

  ಸೂಪರ್. ಬಾಲ್ಯದ ನೆನಪುಗಳು ಮರುಕಳಿಸುವುದರೊಂದಿಗೆ ಅಡುಗೆಯಲ್ಲೂ ಈ ಸಸ್ಯದ ಉಪಯೋಗದ ಕುರಿತು ಗೊತ್ತಾಗಿ ಆಶ್ಚರ್ಯವಾಯಿತು.

  • Krishnaprabha says:

   ನಿಮ್ಮ ಅಭಿಮಾನದ ಮಾತುಗಳಿಗೆ ಧನ್ಯವಾದಗಳು ನಯನಾ

 2. Savithri bhat says:

  ಬಾಲ್ಯದಲ್ಲಿ ಸ್ಲೇಟು ಉಜ್ಜಲು ಬಳಸುತ್ತಿದ್ದ ನೀರುಕಡ್ಡಿ ಗಿಡ ಹಲವು ಕಾಯಿಲೆಗೆ ಔಷಧಿ ಯಾಗಿಯೂ ,ಅಡಿಗೆ ಮನೆಗೆ ಸೇರಿ ವಿವಿಧ ಖಾದ್ಯ ವಾಗಿ ಉಪಯೋಗಿಸುವ ಬಗ್ಗೆ ಸುಂದರ ಮಾಹಿತಿ ನೀಡಿದ ನಿಮಗಿದೋ ವಂದನೆಗಳು

  • Krishnaprabha says:

   ಈ ಗಿಡವು ಔಷಧೀಯ ಗುಣವುಳ್ಳದ್ದು ಅನ್ನುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿರುವುದು ಕೂಡಾ ಇತ್ತೀಚಿನ ವರ್ಷಗಳಲ್ಲಿ…

   ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

 3. Asha nooji says:

  ನೀರು ಕಡ್ಡಿಯ ಮಾಹಿತಿ ಸರಿಯಾಗಿ ವಿವರಿಸಿರುವಿರಿ
  ನಮಗೆ ಗೊತ್ತೇ ಇಲ್ಲದ ಎಷ್ಟು ಸಸ್ಯಗಳು ನಮ್ಮ ಕಣ್ಣಿಗೆ ಕಂಡರೂ ಅದು ಔಷಧೀಯ ಸಸ್ಯ ಎಂದು ಪರಿಗಣಿಸದೆ ಕಿತ್ತು ಬಿಸುಟುವರು .ತುರಿಕೆ ಗಿಡ ಅದರಿಂದ ತಂಬುಳಿ ಮಾಡಲು ಆಗುತ್ತೆ ಎಂದು ನನಗೆ ಮೊನ್ನೆ ತಾನೆ ಗೊತ್ತಾಯಿತು.ಪ್ರಭ ಇದರಲ್ಲು phd madu ..

  • Krishnaprabha says:

   ನಿಮ್ಮ ಮೆಚ್ಚುಗೆಯ ಹಾಗೂ ಅಭಿಮಾನದ ಮಾತುಗಳಿಗೆ ಕೃತಜ್ಞತೆಗಳು…ತುರಿಕೆ ಗಿಡ ಬಳಸಲು ಇನ್ನೂ ಹಿಂದೇಟು ಹಾಕುತ್ತಿರುವೆ

 4. Sunanda k says:

  ನೀರ್ ಕಡ್ಡಿ ಎರಡು ರೀತಿ ಬಿಳಿ ಮತ್ತು ಕೆಂಪು.ಇದನ್ನುಬೇರಿನಿಂದ ನೀರನ್ನು ಹೀರುತ್ತದೆ ಎಂದು ಪ್ರಯೋಗ ಮಾಡಲು ಶಾಲೆಗಳುಲ್ಲಿ ಉಪಯೋಗಿಸುವುದು ತಿಳಿದಿತ್ತು.ಆದರೆ ಅದನ್ನು ಆಹಾರದಲ್ಲಿ . ಆರೋಗ್ಯದಲ್ಲಿ ಉಪಯೋಗಿಸುವುದು ನಿಮ್ಮಿಂದ ತಿಳಿಯಿತು.ನಮ್ಮಲ್ಲೆಲ್ಲಾ ಸಾಧಾರಣವಾಗಿ ಬೆಳೆಯುವ ನೀರ್ಕಡ್ಡಿಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡಿ.

  • Krishnaprabha says:

   ನನಗೂ ಈ ಗಿಡದ ಎಲೆಗಳನ್ನು ಅಡಿಗೆಯಲ್ಲಿ ಬಳಸುವ ವಿಡಿಯೋಗಳನ್ನು ಕಂಡಾಗ, ಆಶ್ಚರ್ಯ ಆಯಿತು..
   ಧನ್ಯವಾದಗಳು ಅಕ್ಕ

 5. Santosh Shetty says:

  ಪ್ರಕೃತಿ ಯ ವೈಶಿಷ್ಟ್ಯವನ್ನ ವರ್ಣಿಸುತ್ತಾ …ಗಿಡವೊಂದರ ಉಪಯುಕ್ತತೆಯನ್ನು ತಮ್ಮ ಲೇಖನದಲ್ಲಿ ಹೇಳಿದ ರೀತಿ ಆಕರ್ಷಕವಾಗಿತ್ತು.
  ಒಮ್ಮೆ ಬಾಲ್ಯದತ್ತ ತಿರುಗಿ ನೋಡಿದಾಗ…. “ಹೌದಲ್ವಾ..ನಾನೂ ಮರೆತಿದ್ದೆ “..ಅನ್ನಿಸದಿರಲಿಲ್ಲ.
  ಬದುಕಿನ ಜಂಜಾಟದಲ್ಲಿ.. ಅದೆಷ್ಟೋ … ಅನುಭವಗಳನ್ನ ಸವಿಯದೆ ಮರೆತಿದ್ದೆ.
  ಮತ್ತೆ ತಮ್ಮ ಸವಿನೆನಪುಗಳ ಮೂಲಕ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ದ ಕೃಷ್ಣ ಪ್ರಭ, ತಮಗೆ ನನ್ನ ಕೃತಜ್ಞತೆಗಳು.

  • Krishnaprabha says:

   ತುಂಬಾ ಚೆನ್ನಾಗಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ಸಂತೋಷ್….
   ಇನ್ನೂ ಹೆಚ್ಚಿನ ಲೇಖನ ಬರೆಯಲು ಸ್ಫೂರ್ತಿ

 6. ಶಂಕರಿ ಶರ್ಮ says:

  ಸೋಣೆ ತಿಂಗಳಲ್ಲಿ ಹೊಸ್ತಿಲ ಪೂಜೆಗೆ ಮಾತ್ರ ನೆನಪಾಗುವ ಈ ನೀರು ಕಡ್ಡಿಯು ನಮ್ಮ ಕಡೆ ‘ಸೋಣೆ ಅಜ್ಜಿ’ ಎಂದೂ ಕರೆಸಿಕೊಳ್ಳುತ್ತದೆ. ಇದರ ಔಷಧೀಯ ಗುಣದ ಜೊತೆಗೆ ಅಡಿಗೆಮನೆಯ ತಂಬುಳಿಯ ಪಟ್ಟಿಗೆ ಇನ್ನೊಂದು ಸೇರ್ಪಡೆಗೆ ಕಾರಣರಾದಿರಿ!..ಧನ್ಯವಾದಗಳು.

  • Krishnaprabha says:

   ಈ ಗಿಡದ ಕಾಂಡದ ಸಾರು ವಿಶಿಷ್ಟ ರುಚಿ ಕೊಡುವುದೆಂದು ನನ್ನ ಸಹೋದ್ಯೋಗಿ ಮಾಹಿತಿ ನೀಡಿದರು…ಮೆಚ್ಚುಗೆಯ ನುಡಿಗಳಿಗೆ ವಂದನೆಗಳು

 7. Anonymous says:

  ಉತ್ತಮ ಬರಹ, ಒಳ್ಳೆಯ ಮಾಹಿತಿ

 8. Hema says:

  ನೀಲಿ ಶಾಯಿ ಅಥವಾ ಬಟ್ಟೆಗೆ ಹಾಕುತ್ತಿದ್ದ ನೀಲಿಪುಡಿಯನ್ನು ಬೆರೆಸಿದ ನೀರನ್ನು ಲೋಟದಲ್ಲಿ ಸುರಿದು, ಅದರೊಳಗೆ ಬಿಳಿಜಾತಿಯ ನೀರ್ ಕಡ್ಡಿಯ ಗಿಡವನ್ನು ಬೇರು ಸಮೇತ ಇರಿಸಿ, ಕಾಂಡ ನೀಲಿ ಬಣ್ಣವಾಗುತ್ತದೆ ಎಂದು ‘ಪ್ರಯೋಗ’ ಮಾಡಿ ಬೈಸಿಕೊಂಡ ದಿನಗಳು ನೆನಪಾದುವು. ಚೆಂದದ ಬರಹ.

  • Krishnaprabha says:

   ನಿಮ್ಮ ಅನುಭವ ಓದಿ ತಿಳಿದು ಸಂತಸ ಆಯಿತು…ಲೇಖನಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ… ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: