ಪುಸ್ತಕ ನೋಟ : ಮೇಘದ ಅಲೆಗಳ ಬೆನ್ನೇರಿ… (ಪ್ರವಾಸ ಕಥನ)

Share Button

ಬಿ.ಆರ್.ನಾಗರತ್ನ

ಮೇಘದ ಅಲೆಗಳ ಬೆನ್ನೇರಿ. (ಪ್ರವಾಸ ಕಥನ)
ಲೇಖಕರು: ಶ್ರೀಮತಿ ಹೇಮಮಾಲಾ.

ಶ್ರೀಮತಿ ಹೇಮಮಾಲಾ ತಮ್ಮ ಮೊದಲ ಮಾತುಗಳಲ್ಲಿ ದೇಶಸುತ್ತಿ, ಕೋಶ‌ಓದಿ ಜ್ಞಾನಾರ್ಜನೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಸತ್ಯವಾದ ಮಾತು. ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಇಪ್ಪತ್ತೆರಡು ವರ್ಷ ಸೇವೆ ಸಲ್ಲಿಸಿರುವ ಇವರು ತಮ್ಮ ಕಾರ್ಯ ನಿರ್ವಹಣೆಯ ಸಂಬಂಧದಲ್ಲಿ ಪ್ರವಾಸ ಮಾಡಿದ್ದು ಯೂರೋಪ್ ಮತ್ತು ಪೂರ್ವೋತ್ತರ ದೇಶಗಳಿಗೆ. ಆಗ ಪ್ರವಾಸಿಗರಂತೆ ಕಾಲ ಕಳೆಯಲು ಸಮಯದ ಅಭಾವವಿತ್ತು. ಅವರು ಸ್ವಯಂ ನಿವೃತ್ತಿ ಪಡೆದ ನಂತರ ತಮ್ಮ ಮುಂದಿನ ಪ್ರವಾಸ ಕೈಗೊಂಡಿದ್ದು ಮನದ ಹಂಬಲವನ್ನು ಪೂರ್ಣಗೊಳಿಸಲಿಕ್ಕಾಗಿ. ಇದು ಸಂತಸದ ವಿಷಯ. ಹಿಮಾಲಯದ ತಪ್ಪಲಿನಲ್ಲಿರುವ ‘ಚಾರ್‌ಧಾಮ್’ ಪುಣ್ಯಕ್ಷೇತ್ರಗಳಿಗೆ ತೆರಳಿದಾಗ ಪಡೆದ ಅನುಭವಗಳನ್ನು ದಾಖಲಿಸಿ ‘ಚಾರ್‌ದಾಮ್’ ಎಂಬ ಪ್ರವಾಸ ಸಾಹಿತ್ಯ ಕೃತಿಯನ್ನು ಹೊರತಂದಿದ್ದಾರೆ. ಪ್ರಸ್ತುತ ಅವರ ಎರಡನೆಯ ಕೃತಿ ಮೇಘದ ಅಲೆಗಳ ಬೆನ್ನೇರಿ ಈಗ ಹೊರಬಂದಿದೆ.

ಇವರು ಚಾರಣ ಪ್ರಿಯರು. ಹಾಗಾಗಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದೊಡನೆ ಸಂಪರ್ಕದಲ್ಲಿ ಅವರು ಆಗಿಂದಾಗ್ಗೆ ಏರ್ಪಡಿಸುವ ಚಾರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರ ಮೊದಲ ಚಾರಣ ಪ್ರವಾಸ ಈಶಾನ್ಯ ಭಾರತದ ಮೇಘಾಲಯಕ್ಕೆ. ಅಲ್ಲಿ ಮೇಘಗಳ ಸರಮಾಲೆಯೊಂದಿಗೆ ಅನೇಕ ಮನತಣಿಸುವ ಜಲಪಾತಗಳು, ನದೀಕಣಿವೆಗಳ ಪರಿಚಯ ಮಾಡಿಸಿದ್ದಾರೆ. ಇವರ ವಿವರಣೆಯಲ್ಲೊಂದು ವಿಶೇಷತೆಯಿದೆ. ಅವರು ತಂಗಿದ್ದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಕಟ್ಟಢ, ನದಿ, ಹಳ್ಳಿಯ ಮನೆ, ಜನರು, ಜಲಪಾತಗಳ ಮನೋಹರ ಚಿತ್ರಗಳನ್ನೂ ಪುಸ್ತಕದಲ್ಲಿ ಅಳವಡಿಸಿದ್ದಾರೆ. ನೀಡುವ ವಿವರಗಳಲ್ಲಿ ಜಲಪಾತದ ಎತ್ತರ, ನದಿಯ ಹರಿವು, ಅಲ್ಲಿನ ಜನಜೀವನದ ಬವಣೆಗಳು, ಎಲ್ಲದರ ಪರಿಚಯ ಮಾಡಿಸಿದ್ದಾರೆ. ಅವರು ಎಲ್ಲಿಗೆ ತೆರಳಿದರೂ ಅಲ್ಲಿನ ಪ್ರಯಾಣದ ಹಾದಿ, ದುರ್ಗಮತೆ, ಎಲ್ಲವನ್ನು ದಾಖಲಿಸಿ ಚಾರಣದಲ್ಲಿ ಆಸಕ್ತಿಯಿರುವ ಓದುಗರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಈ ಪ್ರವಾಸದಲ್ಲಿ ಉಂಟಾದ ಕೆಲವು ಕಠಿಣ ಅನುಭವಗಳ ಬಗ್ಗೆ, ಅಸಮರ್ಪಕ ವ್ಯವಸ್ಥೆಯ ಬಗ್ಗೆ ಪ್ರಸ್ತಾಪವಿದೆ. ಲೇಖಕಿಯ ಅಸಮಾಧಾನವೂ ಇದೆ. ವಿಶೇಷವಾಗಿ ಶಿಲ್ಲಾಂಗಿನಲ್ಲಿನ ಡಾರ್ಮಿಟರಿ, ಮತ್ತು ಅಲ್ಲಿನ ಆರೋಬಿಂದೋ ಆಶ್ರಮದ ವ್ಯವಸ್ಥೆ. ಉಳಿದಂತೆ ನಿಸರ್ಗದ ರಮಣೀಯತೆಯ ಸುಂದರ ವರ್ಣನೆ ಓದುಗರಿಗೆ ಮುದ ನೀಡುತ್ತದೆ.

ಎರಡನೆಯ ಚಾರಣ ಪೂರ್ವ ಕರಾವಳಿಯ ಓಡಿಶಾ ರಾಜ್ಯಕ್ಕೆ. ಅಲ್ಲಿನ ಪ್ರಸಿದ್ಧ ಜಗನ್ನಾಥಪುರಿ ಮತ್ತು ಅಲ್ಲಿಗೆ ತಲುಪುವ ಹಾದಿಯಲ್ಲಿ ಚಿಲಿಕಾ ಸರೊವರದ ಅಂಚಿನಲ್ಲಿ ದೋಣಿಪ್ರವಾಸ, ಕಾಲ್ನಡಗೆಗಳು ವಿವರವಾಗಿ ಮೂಡಿಬಂದಿವೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಲೇಖಕಿಯು ತನ್ನ ತಾಯಿಯವರನ್ನೂ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ‘ನೃಸಿಂಗಪಟ್ಟಣ’ ಎಂಬಲ್ಲಿಗೆ ಹೋದ ಅವರು ‘ಲೂನಾಪಾನಿ’ ಎಂಬ ಟೆಂಟ್ ಕ್ಯಾಂಪಿನಲ್ಲಿ ಒಂದು ದಿನ ಉಳಿಯುತ್ತಾರೆ. ಅಲ್ಲಿನ ಸುನಾಮಿ ಸಂಕಟಕ್ಕೆ ಒಳಗಾದ ಊರನ್ನು ನೋಡಿ ಅದರ ವಿವರಗಳನ್ನು ವರ್ಣಿಸುತ್ತಾರೆ. ಅಲ್ಲದೆ ಚಿಲಿಕಾ ಸರೊವರದ ಸಮೀಪದ ಹಳ್ಳಿಯೊಂದರಲ್ಲಿ ಅಸಂಖ್ಯ ಬೀಡಾಡಿ ದನಕರುಗಳಿವುದರ ಬಗ್ಗೆ ಪ್ರಚಲಿತವಿರುವ ದಂತಕತೆಯ ಪ್ರಸ್ತಾಪ ಮಾಡಿದ್ದಾರೆ. ಮಾಲಿಂಗಪಟ್ಟಣ ಎಂಬ ಕುಗ್ರಾಮದಲ್ಲಿ ‘ಭಭಕುಂಡಲೇಶ್ವರ’ ದೇವಾಲಯದ ಅರ್ಚಕರ ಮನೆಯಲ್ಲಿ ಇವರ ಕೋರಿಕೆಯನ್ನು ಮನ್ನಿಸಿ ಹಿತ್ತಾಳೆ ಪಾತ್ರೆಯ ತುಂಬ ಚಹಾ ಮಾಡಿಕೊಟ್ಟು ತಮ್ಮ ಸಹೃದಯತೆಯನ್ನು ತೋರಿದ್ದು ಮರೆಯಲಾಗದ ಅನುಭವ. ಸುನಾಮಿ ಸಂತ್ರಸ್ತರಿಗೆ ನಿರ್ಮಿಸಿದ್ದ ಕಟ್ಟಡದಲ್ಲಿ ಇವರು ವಾಸ್ತವ್ಯವಿದ್ದು ಅಲ್ಲಿಯೇ ಹೊಸವರ್ಷದ ಆಗಮನವನ್ನು ಸ್ವಾಗತಿಸಿದ ಆಚರಣೆ ಕೂಡ ಅವಿಸ್ಮರಣೀಯ.

ಕೋನಾರ್ಕದ ಸೂರ್ಯದೇವಾಲಯವನ್ನು ಸಂದರ್ಶಿಸಿದ ಲೇಖಕಿ ಅಲ್ಲಿನ ಸ್ಥಳೀಯ ಹಿನ್ನೆಲೆ, ಇತಿಹಾಸದ ವಿಷಯಗಳ ಉಪಯುಕ್ತ ಮಾಹಿತಿ ನೀಡಿದ್ದಾರೆ, ಅದನ್ನು ನಿರ್ಮಾಣ ಮಾಡಿದನೆಂಬ ಮುಖ್ಯಶಿಲ್ಪಿ ‘ಬಿಸುಮಹಾರಾಣ’ನ ಬಗ್ಗೆ ತಿಳಿಸಿರುವ ದಂತಕತೆ ನಮ್ಮ ಬೇಲೂರಿನ ಶಿಲ್ಪಿ ಶ್ರೇಷ್ಠ ಜಕ್ಕಣಾಚಾರಿಯ ಕಥೆಗೆ ಹೋಲಿಕೆಯಾಗುವಂತಿದೆ. ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧ ಮಾಡಿದ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ‘ಧವಳಗಿರಿ’ ಅಶೋಕನ ಹೃದಯ ಪರಿವರ್ತನೆಯಾಗಿ ಯುದ್ಧವನ್ನು ತ್ಯಜಿಸಿ ಬೌದ್ಧಧರ್ಮವನ್ನು ಸ್ವೀಕರಿಸಿದ ಸ್ಥಳ. ಇzರ ಮಹತ್ವ, ಪೂರ್ವೇತಿಹಾಸ, ಅವನ ಕಾಲದ ಶಾಸನಗಳ ಬಗ್ಗೆ ತಿಳಿಸಿರುವ ಮಾಹಿತಿ ಅತಿ ಮುಖ್ಯವಾಗಿದೆ. ಭುವನೇಶ್ವರದ ಅತಿ ದೊಡ್ಡ ‘ಲಿಂಗರಾಜ ದೇವಾಲಯ’ವನ್ನು ದರ್ಶಿಸಿ ಮಾಹಿತಿಯನ್ನೊದಗಿಸಿದ್ದಾರೆ. ಅದೇ ರೀತಿ ಪುರಿಯ ಜಗನ್ನಾಥ ಮಂದಿರದ ಇತಿಹಾಸ, ಅದಕ್ಕೆ ಸಂಬಂಧಿಸಿದ ದಂತಕತೆಯೂ ಕುತೂಹಲಕರವಾಗಿದೆ.

ಪಶ್ಚಿಮ ಬಂಗಾಲ ರಾಜ್ಯದ ಸಮುದ್ರ ತೀರದ ಆಖಾತ ಪ್ರದೇಶದಲ್ಲಿ ಹರಡಿರುವ, ನೆರೆಯ ಬಾಂಗ್ಲಾದೇಶದಲ್ಲಿಯೂ ಮುಂದುವರೆದಿರುವ ಸುಂದರಬನ ಇವರ ಮೂರನೆಯ ಪ್ರವಾಸ ತಾಣ. ಇಲ್ಲಿಯೂ ಲೇಖಕಿಯ ಸೂಕ್ಷ್ಮ ಅವಲೋಕನ, ವಿಷಯ ಗ್ರಹಿಕೆ ಸ್ತುತ್ಯವಾಗಿದೆ. ಬನದ ವಿಸ್ತಾರ, ಇಲ್ಲಿ ಸಮುದ್ರದೆಡೆಗೆ ಹರಿಯುವ ನದಿಗಳು, ಇಲ್ಲಿ ವಾಸಿಸುವ ಪ್ರಾಣಿಸಂಕುಲ, ದ್ವೀಪಸಮೂಹಗಳಲ್ಲಿರುವ ಜನರ ಕಷ್ಟಕರ ಜೀವನಕ್ರಮ, ಎಲ್ಲವನ್ನೂ ಲೇಖನ ಒಳಗೊಂಡಿದೆ. ಇಲ್ಲಿಗೆ ಹೇಗೆ ತಲುಪಬೇಕೆನ್ನುವ ಬಗ್ಗೆ ಮಾಹಿತಿಯೂ ಇದೆ.

ದೇವಾನಾಂಪ್ರಿಯ ಅಶೋಕನು ಸ್ಥಾಪಿಸಿದ ಅನೇಕ ಸ್ಥೂಪಗಳು, ನಮ್ಮ ರಾಷ್ಟ್ರೀಯ ಲಾಂಚನವಾಗಿ ಸ್ವೀಕರಿಸಿರುವ ಅಶೋಕಚಕ್ರ ಮತ್ತು ಸಿಂಹಗಳಿರುವ ಸ್ಥಂಭ, ಉತ್ತರಪ್ರದೇಶದ ಸಾರಾನಾಥದ ವೈಶಿಷ್ಟ್ಯ. ಲೇಖಕಿ ಇವುಗಳ ಪರಿಚಯದೊಡನೆ ನೀಡುವ ವಿವರಣೆ ಓದುಗರಿಗೆ ಕಣ್ಣಿಗೆ ಕಟ್ಟುವಂತಿದೆ. ಇಲ್ಲಿಗೂ ತಲುಪುವ ಬಗ್ಗೆ ಮಾಹಿತಿಯಿದೆ.

ಲೇಖಕಿ ಭಾರತದ ಉತ್ತರ ಗಡಿಯ ಭಾಗ ‘ಲಡಾಕ್’ ಕೇಂದ್ರಾಡಳಿತ ಪ್ರದೇಶದಂತಹ ದುರ್ಗಮ ಜಾಗಗಳನ್ನು ಸಂದರ್ಶಿಸಿದ್ದಾರೆ. ಪವಿತ್ರವಾದ ಸಿಂಧೂನದಿ ಜಂಸ್ಕರ್ ನದಿಯೊಡನೆ ಸಂಗಮವಾಗುವ ಸ್ಥಳ ಇಲ್ಲಿದೆ. ಈ ಪ್ರದೇಶವೊಂದು ಶೀತ ಮರುಭೂಮಿಯಂತಿದೆ. ಸಮುದ್ರ ಮಟ್ಟದಿಂದ  11000 ಅಡಿ ಎತ್ತರವಿರುವ ತೀವ್ರತರ ವಾಯುಗುಣ ಹೊಂದಿರುವ ಸ್ಥಳವನ್ನು ಪರಿಚಯಿಸಿದ್ದಾರೆ. ಇಲ್ಲಿನ ಜನರ ಜೀವನ ರೀತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಾಗೆಯೇ ‘ಲೇಹ್’ ಪಟ್ಟಣದ ಪ್ರಸಿದ್ಧ ಡ್ರೂಪ್ ಪದ್ಮಾ ಕಾರ್ಪೋಸ್ಕೂಲ್’ ಬಗ್ಗೆ ತಿಳಿಸಿದ್ದಾರೆ. ಇದನ್ನು ನಾವೊಂದು ಹಿಂದಿ ಚಲನಚಿತ್ರದಲ್ಲಿ ಕಂಡಿದ್ದೆವು. ಇಲ್ಲಿ ಆಧುನಿಕತೆಯು ಕಾಲಿಟ್ಟು ಇಲ್ಲಿನ ಜನಜೀವನದಲ್ಲಿ, ಮತ್ತು ಪರಿಸರದಲ್ಲಿ ಉಂಟುಮಾಡಿರುವ ದುಷ್ಟ ಪರಿಣಾಮಗಳ ಬಗ್ಗೆ ನಮ್ಮ ಗಮನ ಸೆಳೆದಿದ್ದಾರೆ. ಲಡಾಕಿನ ತುತ್ತತುದಿಯ ನುಬ್ರಾಕಣಿವೆಯ ದುರ್ಗಮ ದೃಶ್ಯಗಳ ಚೇತೋಹಾರಿ ಅನುಭವ, ಅಲ್ಲಿಗೆ ಹೋಗುವ ರಸ್ತೆಗಳ ಭಯಂಕರ ಪ್ರಯಾಣ, ಸಮುದ್ರಮಟ್ಟದಿಂದ 17982 ಅಡಿ ಎತ್ತರದಲ್ಲಿ ಹಾದು ಹೋಗುವ ಅತಿ ಎತ್ತರದ ವಾಹನ ರಸ್ತೆ, ವಾತಾವರಣದ ಅನಿಶ್ಚಿತತೆ, ನಯನ ಮನೋಹರ ಪ್ರಕೃತಿದೃಶ್ಯಗಳು, ಭಾರತದ ಗಡಿಯ ಅಂತಿಮ ಗ್ರಾಮ ಟುರ್ ಟುಕ್ ಸಂದರ್ಶನ, ಅಲ್ಲಿನ ಭಾರತ ಸರ್ಕಾರ ನಡೆಸುತ್ತಿರುವ ಶಾಲೆ, ಗಡಿರೇಖೆ ಎಲ್ಲವನ್ನೂ ಅಚ್ಚುಮೂಡಿಸಿದ್ದಾರೆ ಲೇಖಕಿ.

 

ನಮ್ಮ ನೆರೆ ರಾಷ್ಟ್ರವಾದ ನೇಪಾಳಕ್ಕೂ ಲೇಖಕಿ ಭೇಟಿಕೊಟ್ಟಿದ್ದಾರೆ. ಅಲ್ಲಿನ ‘ಜೋಂಸಮ್’ ತಲುಪುವಾಗ ಅನುಭವಿಸಿದ ಪ್ರಯಾಸದ ಪ್ರಯಾಣ, ಆದರೆ ಅಲ್ಲಿ ತಲುಪಿದ ಮೇಲೆ ‘ನೀರು ಗೆಸ್ಟ್ ಹೌಸ್’ ತಲುಪಿದಾಗ ಸಿಕ್ಕಿದ ನೆಮ್ಮದಿ ಎಲ್ಲವೂ ಓದುಗರಿಗೆ ಕುತೂಹಲ ಹುಟ್ಟಿಸುತ್ತದೆ. ಅಲ್ಲಿ ಕಳೆದ ಒಂದು ದಿನದ ಅನುಭವ ಅವಿಸ್ಮರಣೀಯವಾಗಿದೆ.

ಗುಜರಾಥಿನ ಕಛ್, ಭುಜ್, ಪ್ರದೇಶಗಳಿಗೆ ಲೇಖಕಿ ಹೋಗಿದ್ದ ಅನುಭವಗಳು ವಿಶಿಷ್ಟವಾಗಿವೆ. ಪ್ರಸಿದ್ಧ ಅಭಿನೇತಾ ಶ್ರೀ ಅಮಿತಾಭ್ ಬಚ್ಚನ್ ಗುಜರಾಥಿನ ಪ್ರವಾಸೋದ್ಯಮದ ಪ್ರಚಾರದಲ್ಲಿ ಹೇಳಿದ ಮಾತು ಕಛ್ ನಹೀ ದೇಖಾ ತೋ ಕುಚ್ ನಹೀ ದೇಖಾ ಎಂಬುದು ಅಲ್ಲಿನ ವೈವಿಧ್ಯಮಯ ಪ್ರವಾಸಿ ಕ್ಷೇತ್ರಗಳ ಬಗ್ಗೆ ಅತಿಶಯೋಕ್ತಿಯಲ್ಲ. ಲೇಖಕಿಯು ಈ ಪ್ರವಾಸಕ್ಕೆ ಖಾಸಗಿ ಪ್ರವಾಸಿ ಸಂಸ್ಥೆಯ ಮೂಲಕ ಹೋಗಿದ್ದಾರೆ. ಕಛ್ ಪ್ರದೇಶಕ್ಕೆ ಹೋದಾಗ ಅವರಿಗೆ ಆಶ್ಚರ್ಯಕರ ದೃಶ್ಯಗಳು ಕಾಣ ಸಿಗುತ್ತವೆ. ಪಶ್ಚಿಮ ತೀರ ಪ್ರದೇಶವಾದ ಕಚ್‌ನಲ್ಲಿ ರಣ್ ಎಂಬುದೊಂದು ಉಪ್ಪು ತುಂಬಿದ ಬಿಳಿ ಮರಳುಗಾಡು. ಅಂತಹ ಬಂಜರು ಸ್ಥಳವನ್ನು ಒಂದು ಪ್ರವಾಸಿ ತಾಣವಾಗಿ ಪರಿವರ್ತಿಸಿರುವ ಅಲ್ಲಿನ ಪ್ರವಾಸೋದ್ಯಮ ಇಲಾಖೆಗೆ ಒಂದು ಸಲಾಮು. ಅಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಸುಸಜ್ಜತ ಟೆಂಟುಗಳು, ಅಲ್ಲಿನ ವ್ಯವಸ್ಥೆಗಳು ಅಭಿನಂದನೀಯ. ಲೇಖಕಿ ಅಲ್ಲಿನ ಸೂಯಾಸ್ತ ದರ್ಶನ, ರಣ್ ಉತ್ಸವದ ಅನುಭವ, ಅಲ್ಲಿಗೆ ಹೇಗೆ ತಲುಪುವ ದಾರಿಯಲ್ಲಿ ಮೂಸಿಯಂ, ಮಂದಿರ ಮುಂತಾದ ಪರಿಚಯ ಮಾಡಿಸಿರುವುದು ನೆನಪಿನಲ್ಲಿ ಉಳಿಯುತ್ತವೆ. ಹಾಗೆಯೇ ಭುಜ್ ನಗರದ ಸಮೀಪವೇ ಇರುವ ಕಲಾಗ್ರಾಮ ‘ಭುಜೋಡಿ’ಯ ದರ್ಶನ ಮಾಡಿಸಿದ್ದಾರೆ. ಅಲ್ಲಿ ಏರ್ಪಡಿಸುವ ಧ್ವನಿಬೆಳಕು ಪ್ರದರ್ಶನ ಎಲ್ಲವೂ ಸುಂದರವಾಗಿ ಮೂಡಿಬಂದಿವೆ. ಇಲ್ಲಿಯೂ ಅಲ್ಲಿಗೆ ಹೇಗೆ ತಲುಪಬೇಕೆಂಬ ಮಾಹಿತಿಯಿದೆ.

ಆಂದ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಭೂಗರ್ಭದೊಳಗೆ ಪ್ರಕೃತಿಯೇ ನಿರ್ಮಿಸಿರುವ ಸುಣ್ಣದ ಕಲ್ಲಿನ ಸೋರುವಿಕೆಯಿಂದ ಉಂಟಾಗಿರುವ ವೈವಿಧ್ಯಮಯ ಕಲಾಕೃತಿಗಳಿರುವ ಬೆಲಮ್‌ಕೇವ್ಸ್ ಮಾಹಿತಿಯು ತುಂಬ ಕುತೂಹಲಕಾರಿಯಾಗಿದೆ. ಗುಹೆಗಳೊಳಗೆ ಸಾಗಿ ಕಂಡ ಸ್ಟಾಲಕ್ಟೈಟ್ ಮತ್ತು ‘ಸ್ಟಾಲಗ್ಮೈಟ್ ಶಿಲಾರಚನೆಗಳು ಒಂದು ಅಪೂರ್ವ ದೃಶ್ಯಗಳು. ಜೊತೆಗೆ ಅಲ್ಲಿಗೆ ಸಮೀಪದಲ್ಲೇ ಇರುವ ಹಲವಾರು ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯನ್ನೂ ನೀಡಿದ್ದಾರೆ.

ಉತ್ತರಾಖಂಡ ರಾಜ್ಯದ ಚಾರಣತಾಣಗಳಲ್ಲಿ ಒಂದಾದ ‘ಹೂಗಳ ಕಣಿವೆ’ ಗೆ ಚಾರಣ ಮಾಡಿ, ಮಾರನೆಯ ದಿನ ಸಮೀಪದಲ್ಲೇ ಇರುವ ಬದರೀನಾಥಕ್ಕೂ ಹೋಗಲು ಲೇಖಕಿ ಬಯಸುತ್ತಾರೆ, ಆದರೆ ಅಲ್ಲಿ ಉಂಟಾದ ಹವಾಮಾನ ವೈಪರೀತ್ಯ, ಪರ್ವತರಸ್ತೆಗಳಲ್ಲಿ ಭೂಕುಸಿತದ ದೆಸೆಯಿಂದ ಅಲ್ಲಿಗೆ ಹೋಗಲಾಗದೇ ಹಿಂದಿರುಗುತ್ತಾರೆ.

ಎಲ್ಲ ಸ್ಥಳಗಳನ್ನೂ ಸುತ್ತಿಬಂದ ಇವರು ನಮ್ಮೂರಿನ ಸಮೀಪದಲ್ಲೇ ಇರುವ ಚಾರಣ ಸ್ಥಳ ಭೀಮನ ಬೆಟ್ಟಕ್ಕೂ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ. ಇದು ಮಳವಳ್ಳಿಯ ಬಳಿ ಹಲಗೂರು ಗ್ರಾಮಕ್ಕೆ ಸಮೀಪವಿದೆ. ಇದಕ್ಕೊಂದು ಪೌರಾಣಿಕ ಕತೆಯಿದೆ. ಆದರೆ ಇಲ್ಲಿಗೆ ಹತ್ತಲು ಕೈಕಾಲು ಗಟ್ಟಿ ಇದ್ದವರಿಗೆ ಮಾತ್ರ ಸಾಧ್ಯ.

ಲೇಖಕಿ ಹೇಮಮಾಲಾ ತಮ್ಮ ಚಾರಣ, ಪ್ರವಾಸಗಳ ಅನೂಭವಗಳನ್ನು ಅಚ್ಚುಕಟ್ಟಾಗಿ ದಿನಚರಿಯಂತೆ ದಾಖಲಿಸಿ ನಮಗೆ ನೀಡಿದ್ದಾರೆ. ಓದುಗರಿಗೆ ಕುತೂಹಲ ತಣಿಸುವಂತಿದೆ. ಚಾರಣಿಗರಿಗಂತೂ ಉಪಯುಕ್ತ ಮಾಹಿತಿಯಾಗಿದೆ. ಓದುಗರು ಈ ಪ್ರವಾಸ ಕಥನವನ್ನು ನಿಧಾನವಾಗಿ ಓದಿ ನಂತರ ಕಣ್ಮುಚ್ಚಿ ಮನಸ್ಸಿನ ಪರದೆಯ ಮೇಲೆ ಅದನ್ನು ಕಲ್ಪನೆ ಮಾಡಿಕೊಂಡಾಗ ನಿಜಕ್ಕೂ ಮೇಘಗಳ ಬೆನ್ನೇರಿದ ಅನುಭವ ಆಗದಿರದು. ಇದಕ್ಕಾಗಿ ಅವರಿಗೆ ಧನ್ಯವಾದಗಳು.

-ಬಿ.ಆರ್.ನಾಗರತ್ನ. ಮೈಸೂರು.

6 Responses

  1. Hema says:

    ಆಸಕ್ತರು ಪ್ರೀತಿಯಿಂದ ಓದಿದಾಗ ಪುಸ್ತಕ ಬರೆದುದಕ್ಕೆ ಸಾರ್ಥಕ. ‘ಮೇಘದ ಅಲೆಗಳ ಬೆನ್ನೇರಿ’ ಪ್ರವಾಸ ಕಥನದ ಎಲ್ಲಾ ಬರಹಗಳನ್ನು ಪ್ರೀತಿಯಿಂದ ಓದಿ, ಸಾರಾಂಶವನ್ನು ಚೆಂದಕೆ ಕಟ್ಟಿ ಕೊಟ್ಟ ಬಿ.ಆರ್ ನಾಗರತ್ನ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

  2. Ranganath Nadgir says:

    SHRIMATI Hemamala awara Virachita Erdoo Prawasa Kathnagalu Tumba Chennagiddu, awara erdaneya pustakada Kuritagi Vishleshane Madida
    Smt B.R.Nagaratna Awarannu abhinadisutta Kelawe Pyaragalalli Savistar Mahiti Neddiddu ,Awarnaneeya,Prawasa Kathana Bareyuwadu Ashtu Sulabhada Matalla, , Sachitra sahita Needalada Mahityodane ,i Nammanne Allige Karedoyyttare. Awara Sahitya Krushi Munduwareyali endu Shubha Haraisuttewe,
    Hubballiya Nadgir And Family.. Date, 8th oct, 2020.

  3. ನಯನ ಬಜಕೂಡ್ಲು says:

    ಚಂದದ ಪುಸ್ತಕ ಪರಿಚಯ. ಪ್ರವಾಸ ಕಥನ ಗಳನ್ನು ಹೆಚ್ಚಿನವರು ಬರೆದಿದ್ದಾರೆ, ಆದ್ರೆ ಹೇಮಮಾಲಾ ಅವರ ಪ್ರವಾಸ ಕಥನಗಳಲ್ಲಿ ಮಾಹಿತಿಯ ಜೊತೆಗೆ ಸರಾಗವಾಗಿ ಆ ಪುಸ್ತಕವನ್ನು ಓದಿಸಿಕೊಂಡು ಹೋಗಲು ಬೇಕಾದಂತಹ ಒಂದು ಆಪ್ತತೆ ಇದೆ. ಬರಹಗಳಲ್ಲಿ ಒಂದು ಸೆಳೆತ ಇದೆ.

  4. Savithri bhat says:

    ಪುಸ್ತಕ ಪರಿಚಯ ಬಹಳ ಚೆನ್ನಾಗಿ ಬರೆದಿದ್ದೀರಿ.

  5. ಶಂಕರಿ ಶರ್ಮ says:

    ಹೇಮಮಾಲಾರವರ ಪ್ರವಾಸ ಕಥನದ ಈ ಪುಸ್ತಕದ ಮುಖಪುಟವೇ ಅತ್ಯಂತ ಆಕರ್ಷಕವಾಗಿದ್ದು ಮನಸೆಳೆಯುವಂತಿದೆ. ಸೊಗಸಾದ ಪುಸ್ತಕದ ಪರಿಚಯವನ್ನು ಅತ್ಯಂತ ಚೆನ್ನಾಗಿ ಮಾಡಿರುವ ನಾಗರತ್ನ ಮೇಡಂ ಅವರಿಗೆ ಧನ್ಯವಾದಗಳು.

  6. Anonymous says:

    ನಾನು ಬರೆದ ಪುಸ್ತಕ ಪರಿಚಯ ಬರಹಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್ಲಾ ಸಾಹಿತ್ಯ ಸಹೃದಯರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: