ಕೈಗೆ ಬಂದ ತುತ್ತು ಬಾಯ್ಗಿಲ್ಲಾ..

Share Button

ಒಡೀತಂತ್ಲೇ ಕೋಟಿ ಕೇರ್ಳದ್ ಕೂಲೀಗೆ!
ಏನ್ಲಾ ಅದು ಕೋತಿ ಕೂಲಿ ಕತೆ?
ಅಯ್ ಕೋತ್ ನನ್ಮಗ್ನೆ ಅದು ಕೋತಿಯಲ್ಲಾ ಕಣೋ ಕೋಟಿ ಕೋಟಿ. ಕೇರಳ್ದಲ್ಲಿ ಬಾಳ ಕಸ್ಟದಲ್ಲಿದ್ ಕೂಲಿ ಒಬ್ಬ ಇನ್ನೂ ಒಸಿ ಕಸ್ಟಪಟ್ಟು 350 ರೂ. ಕೊಟ್ಟು ಒಂದು ಸಿಂಗಲ್ ನಂಬರ್ ಲಾಟ್ರಿ ಟಿಕೇಟ್ ಕೊಂಡ್ಕೊಂಡ್ನಂತೆ ಕಲಾ. ಅವನ್ ಅದ್ರುಸ್ಟಕ್ಕೆ ಅದ್ಕೇ ಅದ್ಮೂರ್ ಕೋಟಿ ರೂಪಾಯ್ ಬಂಪರ್ ಒಡೀತಂತೆ ಕಲಾ! ನಿನ್ಮೊನ್ನೆಗಂಟ ಕೂಲಿ ಆಗಿದ್ದೋನು ಆಗ್ಬುಟ್ಟ ಕುಬೇರ.

ಊಂ ನಾನೂವೆ ಅತ್ತಾರ್ಸಲ ಲಾಟ್ರಿ ಟಿಕೇಟ ಕೊಂಡ್ಕೊಂಡ್ರೂವೇ ಒಂದ್ಕಿತ ಮಾತ್ರ ಬಂದಿತ್ತು ಐವತ್ರೂಪಾಯ್! ಅದೇ
ನನ್ನೆಂಡ್ರು ಟೀವೀನಾಗೆ ಕೇಳಿದ್ ಒಂದ್ ಕೊಚ್ಚನ್ಗೆ ಹಾನ್ಸರ್ ಮಾಡಿದ್ಕೇ ಒಡ್ದಿತ್ತು ಎಲ್ಡೂವೊರೆ ಸಾವ್ರದ್ ಬೌಮಾನ!

ಬುಡಪ್ಪ ಅವ್ರವ್ರ ಲಕ್ಕು ಅವ್ರವ್ರಿಗೆ. ಸಿವಾ ಮೊದ್ಲೇ ಅಣೇಮ್ಯಾಗೆ ಬರದ್ಬುಟ್ಟಿರ್ತಾನಂತೆ ಕಲಾ. ಯಾವ್ನಾರ ನನ್ಮಗ ನಂ
ಅಣೇಬರಾವ ಕರೆಕ್ಟಾಗಿ ಓದಿ ಏಳ್ಬುಟ್ಟಿದ್ರೆ ಕರೆಕ್ಟ್ ಟೇಂನಲ್ಲಿ ನಾಮೂ ಒಂದು ಒಳ್ಳೇ ಲಾಟ್ರಿ ಟಿಕೇಟ ತಗೊಂಡು ಆಗ್ಬುಡ್ಬೌದಲ್ವಾ ಕೋಟ್ಯಾಧಿಪತಿ?

ಏಯ್ ಅದು ಕೋಟ್ಯಾಧಿಪತಿ ಅಲ್ವಂತ್ಲಾ?
ಮತ್ತಿನೇನಂತ್ಲಾ?
ಅದು ಕೋಟ್ಯಧಿಪತಿ ಅಂತೆ. ಯಾವ್ದೋ ಚಾನಲ್ನಾಗೆ ಬುದ್ವಂತ್ರು ಪಂಡಿತ್ರುಗ್ಳು ಅರ್ಧ ಜಿನ ಚರ್ಚೆಮಾಡಿ ತೀರ್ಮಾನ್ಸವ್ರೆ. ಇ ಗೆ ಆ ಶೇರಿದ್ರೆ ಆ ಆಯ್ಕಿಲ್ವಂತೆ, ಆ ಆಗ್ಬೇಕೂಂದ್ರೆ ಅ ಗೆ ಅ ಶೇರ್ಬೇಕಂತ್ಲೇ!

ಅದ ಅತ್ತಾಗೆ ಬುಟ್ಟಾಕು. ಅದ್ರಿಂದ ನಮ್ಗೇನ್ ಬಂದಂಗಾತು? ಬಡ್ಡೀಐದಂದು ನಾನೂ ಒಂದು  ಶಿಂಗಲ್ ಅಂಕಿ ಟಿಕೇಟ್ ತಗೋಳೋಮಾ ಅಂತ ಯೋಸ್ನೇ ಮಾಡ್ತಾ ಇವ್ನಿ. ಆದ್ರೆ ನಂ ಕರ್ನಾಡ್ ಶರ್ಕಾರ್ದೋರು ಅದ್ನೇ ಬ್ಯಾನ್ ಮಾಡ್ಬುಟ್ಟವ್ರೇ?

ಟಿಕೇಟ್ ತಕ್ಕೊಂಡೋರ್ಗೆಲ್ಲಾ ಲಾಟ್ರಿ ಒಡ್ಯೋಕಿಲ್ಲಾ ತಕೋ. ಕೋಟ್ಗೋ, ಅತ್ಕೋಟ್ಗೋ ಒಬ್ಬನ್ಗೆ ಬರೋದು ಆ ಕೋಟಿ. ಉಳ್ದವ್ರಿಗೆಲ್ಲಾ ಚಿಕ್ಕೋದು ಚಿಲ್ರೆ ಬೌಮಾನಾನೇ. ಅದೂ ಚಿಕ್ದೇ ಇರೋರೂ ಬೇಕಾದಸ್ಟ್ ಜನ ಅವ್ರೆ ತಿಳ್ಕೋ.ಅಂಗೆ ಟಿಕೇಟ್ ತಕ್ಕೊಂಡೋರ್ಗೆಲ್ಲಾ ಬೌಮಾನ ಕೊಡ್ತಾ ಓದ್ರೆ ಕಂಪ್ನೀನೆ ಲಾಟ್ರಿ ಒಡೀಬೇಕಾಯ್ತದೆ. ಈ ಲಾಟ್ರೀ ಕಂಪ್ನೀಗ್ಳೂ, ಇನ್ಸೂರೆನ್ಸ್ ಕಂಪ್ನೀಗ್ಳೂ ಇವೆಲ್ಲ ಬದ್ಕಿರೋದೇ ಅದ್ಕೆ, ತಿಳ್ಕೋ.

ಅಕಸ್ಮಾತ್ ನಿಂಗೆ ಕೋಟಿ ಒಡ್ದೇಬುಡ್ತು ಅನ್ಕೋ, ನೀನೇನ್ಮಾಡೀಯೇ?

ನಾನು ಮೊದ್ಲು ಒಂದ್ ಐಕ್ಲಾಸ್ ತಾರ್ಸೀ ಬಂಗ್ಲೋ ಕಟ್ಟೀಸ್ಕೊಂತೀನಿ. ಆಗಿಂಕಾಲ್ಕೆ ಒಂದೂಕಾಲ್ ಕೋಟಿನಾಗೆ ಕೆ.ಆರೆಸ್ ಡ್ಯಾಂನೇ ಕಟ್ಟಿಸ್ಬುಟ್ರಂತೆ ನಂ ಇಸ್ವೇಸ್ವರ್ಯ್ನೋರು!

ಆಗಿರ್ಬೈದು ಕನ್ಲಾ,ಅಯ್ ಈಗಿನ್ ಕಾಲ್ದಾಗೆ ಅಂತ ಬಂಗ್ಲೆ ಕಟ್ಟೀಸ್ಕೋಳೋಕೆ ಕೋಟಿ ಸಾಕಾಯ್ಕಿಲ್ಲಾ; ಕೇಳಿಲ್ವಾ ಅವರ್ ಮನೆ ಕಟ್ಸಾಕೆ 16 ಕೋಟಿ ಖರ್ಚಾಯ್ತಂತೆ, ಇವರ್ ಮನೆ ಕಟ್ಸಾಕೆ 20 ಕೋಟಿ ಖರ್ಚಾಯ್ತಂತೆ ಅಂತ ಏಳೋದ್ನಾ?. ಒಂದು ಪುಟಾಣಿ ಮನೆ ಕಟ್ಟಿಸ್ಕೊಂಬೌದು ಅಷ್ಟೇಯಾ! ಮನೆ ಕಟ್ಟಿಸ್ಕೋಳೋಕೆ ಲಾಟ್ರೀನೇ ಕಾಯ್ಬೇಕಾಗಿಲ್ಲಾ. ಸಾಲ ಕೊಡೋಕ್ಕೇಂತ್ಲೇ ಅಂಗ್ಡೀ ಆಕ್ಕೊಂಡ್ ಕುಂತಿರ್ತಾರೆ, ಅವರ್ತಾವ ತಗೊಂಡು ಕಟ್ಟಿಸ್ಬೌದು.

ಊಂ ನೀನೇಳ್ದೇ ಅಂತಾ ಅವರ್ತಾವ ಸಾಲ ತಗೊಂಡು ಮನೆ ಕಟ್ಟಿಸ್ದೇ ಅನ್ಕೋ, ಅವರ್ ಸಾಲ ತೀರ್ಸೋದಿರ್ಲೀ ಬಡ್ಡಿ ಕಟ್ಟೋಕೆ ಮನ್ಯಾ ಮಾರ್ಬೇಕಾಯ್ತದೆ ಅಸ್ಟೇ. ಇಲ್ಕೇಳು ಕೋಟಿ ಬರೋದೂ ನಸೀಬ್ನಾಗಿರ್ಬೇಕು. ಇಲ್ದಿದ್ರೆ ಐಜೂರು ಅಜಾಮನ್ ಲಾಟ್ರಿ ಕತ್ಯಂಗೆ ಆಗೋಯ್ತದೆ!

ಅದ್ಯಾವ್ದು ಐಜೂರು? ಅದೇನ್ ಆ ಅಜಾಮನ್ ಕತೆ? ಒಸಿ ಕೇಳ್ಮಾ ನಂಗೂ ಏಳು.
ಅದೇ ಕಲಾ ರಾಮ್ನಗರ್ದ ಬಿರ್ಜ್ ದಾಟಿದ್ರೆ ಆ ಕಡೇಗಿರೋದೇ ಐಜೂರು.ಇಂದ್ಕೆಲ್ಲಾ ಈಗ್ನಂಗೆ ಬೀದ್ಬೀದ್ಗೂ ಕಟಿಂಗ್ ಸಾಪ್ಗಳು ಇರ್ನಿಲ್ಲಾ. ಮನೀ ತಾಕೆ ಡಬ್ಬ ಇಡ್ಕೊಂಬಂದು ಕಟಿಂಗು ಸೇವಿಂಗು ಮಾಡ್ಕೊಟ್ಟು, ಮಾಡಿಸ್ಕೊಂಡವ್ರು ಏನ್ ಕೊಡ್ತಾರೋ
ಅದ್ನ, ಅಂದ್ರೆ ದವ್ಸ, ತರ್ಕಾರಿ, ಬಟ್ಟೆ ಇಂಗೆ ಇಸ್ಕೊಂಡು ಓಯ್ತಾ ಇದ್ ಕಾಲ ಅದು. ಒಂದಪ ಅಜಾಮ ಗೌಡ್ರ ಗಡ್ಡ ಕೆರೆದದ್ಕೆ ಅವ್ರು ಇವನ್ಗೆ ಕೊಟ್ರಂತೆ ಒಂದು ಲಾಟ್ರಿ ಟಿಕೇಟಾ! ಈಗ ನಂತಾವ ಕೊಡೋಕ್ ಏನೂ ಇಲ್ಲಾ, ಮೊನ್ನೆ ಪ್ಯಾಟೇಗೆ ಓಗಿದ್ದಾಗ ಒಂದ್ ಲಾಟ್ರಿ ಟಿಕೇಟ್ ತಂದಿದ್ದೆ. ಇಕೋ ಅದ್ನ ನೀ ಮಡೀಕ್ಕೋ. ನಿನ್ ನಸೀಬ್ ಚೆನ್ನಾಗಿದ್ರೆ, ಇದ್ಕೇ ಕೋಟಿ ಒಡಿದ್ರೂ ಒಡಿಬೈದು ಅಂತ ಏಳ್ತಾ ಟಿಕೇಟ ಅವನ್ ಕೈನಾಗೆ ಮಡಿಗ್ದ.

ಇದ್ನ ಜ್ವಾಪಾನ್ವಾಗ್ ಮಡ್ಗಿರೂ, ಯಾತ್ಕೂ ಇರ್ಲೀ ಅದ್ರ ನಂಬ್ರ ಗುರ್ತಾಕಿಟ್ಕೊಂತೀನಿ ಅಮ್ತಾ ಪಾಕೀಟ್ ಡೈರೀನಾಗೆ ಬರೆದ್
ಮಡೀಕೊಡ್ರಂತೆ. ಈ ಅಜಾಮಾನೂ ಆ ಟಿಕೇಟ ತಕ್ಕೊಡೋಗಿ ಎಡ್ತೀ ಕೈನಾಗೆ ಮಡ್ಗೀ ಇದ್ನಾ ಎಲ್ಲಾದ್ರೂ ಜ್ವಾಪಾನ್ವಾಗಿ ಮಡ್ಗಿಟ್ಟಿರು. ಗೌಡ್ರು ಏಳ್ದಂಗೆ ಆ ಬೊಮ್ಮ ಕಣ್ಬುಟ್ರೆ ನಂಗೆ ಲಾಟ್ರಿ ಒಡಿದ್ರೂ ಒಡಿಬೌದು ಅಂದ್ನಂತೆ. ಆಕೀನೂ ಲಾಟ್ರಿ ಟಿಕೇಟಾ ತಿರುಗ್ಸೀಮುರುಗ್ಸೀ ನೋಡಿ ಲಕ್ಸ್ಮವ್ವನ್ ಮುಂದಿಟ್ ಊದ್ಬತ್ತಿ ಅಚ್ಚಿ ಪೋಟೋ ಇಂದ್ಕೆ  ಮಡ್ಗಿದ್ಲಂತೆ. ಮಾರ್ನೇ ಬೆಳಿಗ್ಗೆ ನೋಡ್ದ್ರೆ ಟಿಕೇಟು ನೆಲ್ದಮೇಲೆ ಬಿದ್ದಿತ್ತಂತೆ! ಅದು ಸರ್ಯಾದ ಜಾಗ ಅಲ್ಲಾ ಅಂತ ಭದ್ರವಾದ ತಾವಲ್ಲಿ ಮಡ್ಗಿ ಒಸೀ ಜಿನ್ಗಂಟ ಅದ್ನ ಮರ್ತೂಬುಟ್ರಂತೆ.

ತಿಂಗ ಕಳ್ಕೊಂಡು ಗೌಡ್ರ  ಮನೀಗೆ ಓದಾಗ, ಗೌಡ್ರು ಪೇಪರ್ ಮಡೀಕೊಂಡು ಕೂತಿದ್ರಂತೆ. ಇವನ್ನ ನೋಡ್ದೇಟ್ಗೇಯೇ ಬಾರೋ ಬಾ ನಿಂಗೇ ಕಾಯ್ತಾ ಕುಂತಿದ್ದೆ. ಇಕಾ ನಿನ್ತಾವ ಆವತ್ ಕೊಟ್ಟಿದ್ನಲ್ಲಾ ಆ ಟಿಕೇಟ್ಗೆ ಪಸ್ಟ್ ಬೌಮಾನ ಬಂದದೆ. ಬೇಗ ಓಗಿ ಆ ಟಿಕೇಟ್ ತತ್ತಾ. ಬೌಮಾನದ್ ಅಣಾ ಈಸ್ಕೋಮಾ ಅಂದ್ರಂತೆ. ನಂ ಅಜಾಮಂಗೆ ನಂಬೋಕೇ ಆಗ್ನಿಲ್ಲ. ಅದೆಂಗೇಳೀರಿ ಗೌಡ್ರೆ ನಂ ಟಿಕೇಟ್ಗೇ ಬೌಮಾನ ಬಂದದೇ ಅಂತಾ?

ಅದಕ್ಕೆ ಗೌಡ್ರು ತಂ ಪಾಕೀಟಿನಲ್ಲಿ ಗುರುತು ಹಾಕಿಕೊಂಡಿದ್ದ ನಂಬರ್ ತೋರಿಸಿ, ಪೇಪರ್ನಲ್ಲಿ ಅದೇ ನಂಬರ್ ಮೊದಲ ಬೌಮಾನ ಪಡೆದಿದ್ದನ್ನು ತೋರಿಸಿದರು. ನಂ ದೊರೆಗೆ, ಆಂ ಅದೇ ಅವನೆಸ್ರು ನಿಜ್ವಾಗ್ಲೂ ದೊರೆ ಸಿಂಗಾಸ್ನಾನೇ ಚಿಕ್ದಂದಾಗಿತ್ತು. ಬೌಮಾನದ ಅಣ ಕೈನಾಗೆ ಇರೋ ಕನ್ಸ ಕಾಣ್ತಾ, ಇವತ್ತೇ ಕೊನೆ, ನಾಳೆಯಿಂದ ಈ ಅಳ್ಳಳ್ಳಿ ತಿರ್ಗೋ ಕೆಲ್ಸಕ್ಕೆ ಪುಲ್ಸ್ಟಾಪ್ ಆಕಿ ನಗರಕ್ ಓಗಿ ಒಂದಂಗ್ಡಿ ತೆಗ್ಯೋ ಪಿಲಾನ್ ಆಕ್ಕೊಂಡು, ತನ್ನ ಮನೀಕಡೆ ಒಂಟಾ. ಐಜೂರು ಬಿರ್ಜ್ಮ್ಯಾಗೆ ಓಗೋವಾಗ ಇನ್ಮ್ಯಾಕೆ ನಿನ್
ಸಾವಾಸಾನೇ ಬ್ಯಾಡಾ ಅಂತ ಕೈನಾಗೆ ಮಡೀಕ್ಕೊಂಡಿದ್ ಡಬ್ಬಾನ ತೂದ್ ನೀರಿಗೆ ಎಸದ್ಬುಟ್ಟಾ. ಖುಸ್ ಖುಸ್ಯಾಗಿ ಸಿಳ್ಳೆ ಆಕ್ತಾ ಮನೀಗ್ಬಂದ ಗಂಡನ್ ನೋಡಿ ಪುಸ್ಪ ಅದು ಅವನೆಂಡ್ರು, ಚೋಜ್ಗಪಟ್ಗೊಂಡು ನಿಂತ್ಲು.

ದೊರೆ ಎಂಡ್ರಿಗೆ ತನ್ಗೆ ಲಾಟ್ರೀಲಿ ಮೊದಲ್ ಬೌಮಾನ ಬಂದದೆ ಅನ್ನೋದ್ನ ಗೌಡ್ರು ಏಳಿದ್ನ ಏಳ್ತಾ, ಎಲ್ಲಿ ಆವತ್ತು ನಿನ್ ಕೈನಾಗೆ ಒಂದು ಲಾಟ್ರಿ ಟಿಕೇಟ್ ಕೊಟ್ಟು ಜ್ವಾಪಾನ್ವಾಗಿ ಇಟ್ಟಿರು ಅಂದಿದ್ನಲ್ಲಾ ಅದ ತೆಕ್ಕೊಂಬಾ ಅಂದ.ಇವ್ಳು ಓಡೋಡೋಗಿ ದ್ಯಾವ್ರ ಪಟದ್ ಮುಂದೆ, ಇಂದೆ, ಗೋಲ್ಕದ್ ಒಳ್ಗೆ, ಕಬ್ಣದ್ ಪೆಟ್ಗೇಲಿ ಎಲ್ಲಾ ಕಡೇ ಉಡುಕಿದ್ರೂ ಚಿಕ್ನಿಲ್ಲಾ ಲಾಟ್ರಿ ಟಿಕೇಟು. ತಲೆ ಕೆರ್ಕೊಂತಾ ಬಂದು ಅರೇ ನಿಮ್ ಡಬ್ಬಾ ಎಲ್ಲಿ ಅಂತಾ ಕೇಳಿದ್ಲು.

ಅದಕ್ಕೆ ದೊರೆ ಅಯ್ ನಗರ್ದಲ್ಲಿ ಮಸೀನ್ ಕಟ್ ಅಂಗ್ಡೀ ಮಡೀಕೊಳ್ಳೋವ್ನು ನಾನು ಇನ್ ಅದ್ರ ಕೆಲ್ಸಾ ಇನ್ಯಾಕೆ? ಅಂತ ಐಜೂರ್ ಬಿರ್ಜ್ ಮ್ಯಾಗಿಂದ ತೂದ್ ಬಿಸಾಕ್ಬುಟ್ಟೆ ಅಂದ.  ಎಡ್ತಿ ಬಾಯ್ಬಾಯ್ ಬಡಕೊಂತಾ ನಾನು ಟಿಕೇಟ್ ಜ್ವಾಪಾನ್ವಾಗಿರ್ಲಿ ಅಂತಾ ಆ ಡಬ್ದ ಅಡೀಕೆ ಮಡ್ಗಿದ್ದೆ ಅನ್ನೋದಾ! ಇಂಗೆ ಒಂದುಮ ನಿನ್ನಣೇಲೀ ಬರೀನಿಲ್ಲಾ ಅಂದ್ರೆ, ಕೈಗೆ ಬಂದ್ರೂ ತುತ್ತು ಬಾಯಿಗ್ ಬೀಳಾಕಿಲ್ಲಾ ತಿಳ್ಕೋ.

-ಆರ್.ಎ.ಕುಮಾರ್ , ಮಂಡ್ಯ

3 Responses

  1. ಬಿ.ಆರ್.ನಾಗರತ್ನ says:

    ಬಡ್ಡಿ ಹೈದ,ಅರಿಸಿನ ಕೊಳಿಗಾಸೆಬಿದ್ದು ವಷ್ರ್ಷದ್ ಕೊರಳಿಗೆ ಕಲ್ಲಾಕ್ಕಾಂಡ ಕಲಾ.ನೀತಿ ಕತೆ ಮನಮುಟ್ಟುವಂತೆ ನಿರೂಪಿತವಾಗಿದೆ.ಮಂಡ್ಯದ ಭಾಷೆಯ ಸೊಗಸೇ ಸೊಗಸು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಕಣ್ರೀ. ನಿಮ್ ಭಾಷಿ ಚಲೋ ಇಷ್ಟ ಆತು ನೋಡ್ರಿ… ಕಥೀ ನೂ ಮಸ್ತಾಗೈತ್ರಿ.

  3. ಶಂಕರಿ ಶರ್ಮ says:

    ಮಂಡ್ಯದ ಆಡುಭಾಷೆಯ ಸೊಗಡು ಪಡಿಮೂಡಿ ಬಂದ ನಿಮ್ಮ ಕಥೀ.. ತುಂಬಾ ಚಲೋ ಐತಿ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: