“ಕಿವಿ ಕೊಡುವುದು”…..?

Spread the love
Share Button

ಎಂದಿನಂತೆ “ಕೇಳಿರಿ, ಕೇಳಿರಿ, ಕಿವಿಕೊಟ್ಟು ಕೇಳಿರಿ. ನಿಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ರಸ್ತೆಬದಿಯಲ್ಲಿ ಅಥವಾ ಚರಂಡಿಗಳಲ್ಲಿ ಬಿಸಾಡಬೇಡಿ. ನಿಮ್ಮ ಮನೆಯ ಬಳಿ ಬರುವ ಕಸ ಸಂಗ್ರಹಕಾರರಿಗೆ ಕೊಡಿ….” ಅನ್ನುವ ಘೋಷಣೆಯೊಂದಿಗೆ ಬಂದೇ ಬಿಟ್ಟಿತು ಕಸ ಸಂಗ್ರಹಣಾ ವಾಹನ. ದಿನಾಲೂ ಅದೇ ಘೋಷಣೆ…. ವಾಹನ ಕಸ ಸಂಗ್ರಹಣೆ ಮಾಡುತ್ತಾ ಮುಂದೆ ಸಾಗಿದಂತೆ ನನ್ನ ಮನಸ್ಸಿನಲ್ಲಿ ಎಂದೂ ಬರದ ಯೋಚನೆ ಅಂದು ಬರಲು ಪ್ರಾರಂಭವಾಯಿತು. ಕಿವಿಕೊಟ್ಟು ಕೇಳಿರಿ ಅಂತ ಘಂಟಾಘೋಷವಾಗಿ ಹೇಳಿದರೂ ಕೇಳದಂತಿರುವ ಜನರೂ ಇರುವರಲ್ಲಾ!  ರಸ್ತೆ ಬದಿಯಲ್ಲಿಯೋ, ಹರಿಯುವ ನದಿಗೋ ಕಸ ಬಿಸಾಡದಿದ್ದರೆ ಕೆಲವು ಜನರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲವೇನೋ! ಅದಿರಲಿ.. ಈ “ಕಿವಿ ಕೊಡುವುದು” ಅನ್ನುವ ಶಬ್ದ ತುಂಬಾನೇ ಕಾಡಿತು ಆ ದಿನ.

ಅಷ್ಟಕ್ಕೂ ಕಿವಿ ಕೊಡುವುದು ಅಂದರೇನು? ಕಿವಿ ಕತ್ತರಿಸಿ ಕೊಡುವುದಂತೂ ಅಲ್ಲವೇ ಅಲ್ಲ. ಕಥೆಗಳಲ್ಲಿ ಓದಿರುವ ಹಾಗೆ ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರಿಗೆ ಹೆಬ್ಬೆರಳು ಕೊಟ್ಟ ಏಕಲವ್ಯನಂತೆ, ಶಿವನಿಗೆ ತನ್ನ ಕಣ್ಣು ಕೊಟ್ಟ ಬೇಡರ ಕಣ್ಣಪ್ಪನಂತೆ, ಕಿವಿ ಕೊಟ್ಟ ಯಾರ ಕಥೆಯನ್ನೂ ಓದಿಲ್ಲ. ಕಿವಿ ಕೊಡು ಅಂದರೆ ಗಮನವಿಟ್ಟು ಕೇಳು ಎಂದರ್ಥ. ಕದ್ದು ಕೇಳಿಸಿಕೋ ಅನ್ನಬೇಕಾದರೆ ಕದ್ದು ಕಿವಿ ಕೊಡು ಅನ್ನಬೇಕಾಗುತ್ತದೆ. ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯ ಮಾಸ್ತರರು ತಾವು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರಿಸದಿದ್ದರೆ ಕಿವಿ ಹಿಂಡಲು “ಎಲ್ಲಿ ಕಿವಿ ಕೊಡು” ಅನ್ನುತ್ತಿದ್ದ ನೆನಪು. ಸಾಮಾನ್ಯವಾಗಿ ನಮ್ಮ ತಲೆ ಬೇರೇನನ್ನೋ ಯೋಚಿಸುತ್ತಿರುವಾಗ ಯಾರಾದರೂ ಹತ್ತಿರ ಕುಳಿತವರು ಅಥವಾ ಎದುರಿರುವವರು ಹಲವು ಬಾರಿ ಪ್ರಶ್ನೆ ಕೇಳಿದರೂ ನಮಗೆ ಗೊತ್ತಾಗುವುದೇ ಇಲ್ಲ.  ಯಾಕೆಂದರೆ ನಮ್ಮ ಗಮನ ಬೇರೆ ಕಡೆ ಇರುತ್ತದೆ. ಕಿವಿಗೆ ಬಿದ್ದ ಮಾಹಿತಿ ಮೆದುಳಿಗೆ ಹೋಗಿದ್ದರೂ  ಬುದ್ಧಿಗೆ ಹೋಗಿರುವುದಿಲ್ಲ. ಕಿವಿಯಿದ್ದೂ ಕಿವುಡನಂತಾಗುವುದು ನಮ್ಮ ಪರಿಸ್ಥಿತಿ. ನಮ್ಮ ಗಮನ ಕೇಳುವಲ್ಲಿಯೇ ಇದ್ದರೆ ಆಗ ನಾವು ಕೇಳಿದ ಮಾಹಿತಿ ಮೆದುಳಿಗೆ ರವಾನೆಯಾಗಿ ನಮ್ಮ ಬುದ್ಧಿಗೂ ಬೇಗನೇ ತಲುಪುವುದು. ಕೆಲವೊಮ್ಮೆ ಕೇಳಿದರೂ ಕಿವುಡನಂತಿರಬೇಕಾಗುವುದು ಬೇರೆ ವಿಷಯ!

ಕಿವಿಕೊಡುವಷ್ಟೇ ಕೊಡಬೇಕು. ಕಿವಿ ಕೊಟ್ಟು ಕೇಳಿದ ಮಾತುಗಳೇ ಸತ್ಯ ಅಂದುಕೊಂಡವನು ಮೂರ್ಖನೇ ಸರಿ. ಕೆಟ್ಟದ್ದನ್ನು ನುಡಿಯಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೆಯೇ ಕೆಟ್ಟದ್ದನ್ನು ಕೇಳಬೇಡ ಅನ್ನುವ ಮೂರು ಕೋತಿಗಳ ಕಥೆಯೇ ಇದೆಯಲ್ಲವೇ? ವದಂತಿಗಳನ್ನು ಕಿವಿ ನೆಟ್ಟಗೆ ಮಾಡಿ ಕೇಳದೆ, ಕಿವಿ ಮುಚ್ಚಿ ಕಿವಿಗೆ ಬೀಳದಂತೆ ಜಾಗ್ರತೆ ವಹಿಸಬೇಕು. ಕಿವಿಕೊಟ್ಟರೆ, ಸಂಬಂಧಪಡದ ಅನವಶ್ಯ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸುಮ್ಮನೆ ಕಿರಿ ಕಿರಿ ಅನುಭವಿಸಬೇಕಾಗುವುದು. “ಆ ಕಿವಿಯಿಂದ ಕೇಳಿ ಈ ಕಿವಿಯಿಂದ ಬಿಟ್ಟರಾಯಿತು” ಅನ್ನುವ ಹಿರಿಯರ ಕಿವಿಮಾತಿಗೆ ಕಿವಿಕೊಟ್ಟರೆ ನಮಗೆ ಹಿತ. ಹಂಸಕ್ಷೀರ ನ್ಯಾಯ ಪರಿಪಾಲನೆ ಕಿವಿಗೂ ಅನ್ವಯವಾಗುತ್ತದೆ. ಕಿವಿಗೆ ಬಿದ್ದ ಕೆಟ್ಟ ಮಾತುಗಳನ್ನು ಅಲ್ಲಿಯೇ ಬಿಡಬೇಕು. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ, ನಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬಲ್ಲ ಒಳ್ಳೆಯ ಮಾತುಗಳನ್ನು ಮಾತ್ರ ಕೇಳಿಸಿಕೊಂಡರೆ ನಮಗೇ ಒಳ್ಳೆಯದು ಅಲ್ಲವೇ? ಹಾಗಾಗಿ ಕಿವಿ ಕೊಡುವುದು ಕೂಡಾ ಅವರವರ ವಿವೇಚನೆಗೆ ಬಿಟ್ಟದ್ದು. ಇನ್ನು ಕೆಲವರಿಗೆ ಕಿವಿ ಚುಚ್ಚುವ (ಸಂಬಂಧಗಳ ಮಧ್ಯೆ ಒಡಕು ಮೂಡಿಸಲು ಕಾರಣವಾಗುವಂತಹ ಮಾತುಗಳು) ಅಭ್ಯಾಸವಿರುತ್ತದೆ. ಅಂತಹವರ ಸಂಗದಿಂದ ದೂರವಿದ್ದು ಅವರ ಮಾತುಗಳಿಗೆ ಕಿವಿಕೊಡದಿರುವುದೇ ಉತ್ತಮ.

ಇನ್ನು ವಿದ್ಯಾರ್ಥಿಗಳ ವಿಷಯಕ್ಕೆ ಬಂದರೆ, ಶಿಕ್ಷಕರು ಮಾಡುವ ಪಾಠಪ್ರವಚನಗಳಿಗೆ ಕಿವಿ ಕೊಟ್ಟು ಕೇಳದಿದ್ದರೆ ಅವರಿಗೆ ಪಾಠಗಳು ಅರ್ಥವಾಗುವುದಿಲ್ಲ. ಕಿವಿಕೊಟ್ಟು ಏಕಾಗ್ರತೆಯಿಂದ ಕೇಳಿದ ಪಾಠ ಮನನ ಮಾಡಿಕೊಳ್ಳಲು ಸುಲಭವಾಗುವುದು. ಸುಮಾರು ವಿದ್ಯಾರ್ಥಿಗಳು ಶಿಕ್ಷಕರ ಮುಖವನ್ನೇ ನೋಡುತ್ತಾ ಪಾಠ ಕಿವಿಕೊಟ್ಟು ಕೇಳುವವರಂತೆ ನಟಿಸುವುದರಲ್ಲಿ ನಿಪುಣರು. ಇನ್ನು ಕೆಲವರು ಭೌತಿಕವಾಗಿ ಮಾತ್ರ ತರಗತಿಯಲ್ಲಿರುತ್ತಾರೆ, ಅವರ ಮನಸ್ಸು ಎಲ್ಲೋ ಅಲೆಯುತ್ತಿರುತ್ತದೆ. “ತರಗತಿಗೆ ಗೈರುಹಾಜರಾಗಿದ್ದರೆ ಆ ದಿನದ ಪಾಠಪ್ರವಚನಗಳು ಅರ್ಥವಾಗುವುದೇ ಇಲ್ಲ. ತರಗತಿಯಲ್ಲಿ ಕುಳಿತು ಪಾಠವನ್ನೂ ಕಿವಿಕೊಟ್ಟು ಕೇಳದಿದ್ದರೂ ಒಮ್ಮೆ ಓದುವಾಗ ಅರ್ಥವಾಗುತ್ತದೆ” ಅನ್ನುವ ಮಾತುಗಳನ್ನು ವಿದ್ಯಾರ್ಥಿಗಳಿಂದ ಕೇಳಿರುವೆ. ಅಂದರೆ ನಮಗೆ ಅರಿವಿಲ್ಲದೆ ಕಿವಿಗೆ ಬಿದ್ದ ಮಾಹಿತಿಯನ್ನು ಕಿವಿಗಳು ಮೆದುಳಿಗೆ ರವಾನಿಸುತ್ತವೆ. ಎಲ್ಲೋ ಕೇಳಿದ ಭಾಸವಾಗುವುದು.

ನನ್ನ ವಿದ್ಯಾರ್ಥಿಯೊಬ್ಬನ ನೆನಪಾಗುತ್ತಿದೆ.  ಅವನು ಪ್ರತಿಭಾವಂತ ವಿದ್ಯಾರ್ಥಿ. ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿರುವಾಗ ಕಣ್ಣು ಮುಚ್ಚಿ ನಿದ್ದೆಗೆ ಜಾರುವ ಅಭ್ಯಾಸ. ಒಂದು ದಿನ ಅವನನ್ನು ನಿಲ್ಲಿಸಿ, ನಾನು ಪಾಠ ಮಾಡುತ್ತಿದ್ದ ವಿಷಯದ ಮೇಲೆ ಪ್ರಶ್ನೆ ಕೇಳಿದಾಗ ಒಮ್ಮೆಗೇ ತಬ್ಬಿಬ್ಬಾದರೂ ಕೂಡಲೇ ಉತ್ತರಿಸಿದ. ಅಂದರೆ ಅವನು ನಿದ್ದೆಯಲ್ಲಿಯೂ ಪಾಠಕ್ಕೆ ಕಿವಿಕೊಡುತ್ತಿದ್ದನೆಂದಾಯಿತು. ಆದರೆ ಅದೇ ವಿದ್ಯಾರ್ಥಿ (ಈಗ ಅವನೂ ಉಪನ್ಯಾಸಕ) “ಮೇಡಂ, ನಾನು ನಿದ್ದೆ ತೂಗುವಾಗಲೆಲ್ಲಾ ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಒಂದು ದಿನ ನಿದ್ದೆ ಮಾಡಿರಲಿಲ್ಲ. ಆ ದಿನ ನೀವು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಿರಲಿಲ್ಲ” ಅನ್ನುವ ಮಾತು ಕೇಳಿ ನನಗೇ ಆಶ್ಚರ್ಯ. Multitasking ಸಾಮರ್ಥ್ಯ ಇರುವವರು ಬೇರೆ ಕೆಲಸ ಮಾಡುತ್ತಿದ್ದರೂ ಕಿವಿಕೊಟ್ಟು ಕೇಳುವರು. ನಮ್ಮ ಮಾತುಗಳನ್ನು ಅವರು ಕೇಳುತ್ತಿಲ್ಲವೆಂದು ಬಾಯಿಗೆ ಬಂದದ್ದು ಮಾತನಾಡಿದರೆ ಸಿಕ್ಕಿ ಬೀಳುವುದು ಖಂಡಿತಾ. ಜೋಕೆ!

-ಕೃಷ್ಣಪ್ರಭಾ ಎಂ, ಮಂಗಳೂರು

16 Responses

 1. ಬಿ.ಆರ್.ನಾಗರತ್ನ says:

  ವಾವ್ ಈಗಂತೂ ಕರೋನಾ ಪ್ರಯುಕ್ತ ಎಚ್ಚರಿಕೆ ಮಾತುಗಳನ್ನು ಕಿವಿಗೊಟ್ಟು ಕೇಳಿದರೆ ಒಳ್ಳೆಯ ದಾಗುತ್ತದೆ.ಚಂದದ ಬರಹ ಅಭಿನಂದನೆಗಳು ಮೇಡಂ

  • Krishnaprabha says:

   ಪ್ರತಿಕ್ರಿಯೆಗೆ ಧನ್ಯವಾದಗಳು..ಕೊರೋನಾ ಕಾರಣವಾಗಿ ಜೀವನಶೈಲಿ ಬದಲಾಗುತ್ತಿದೆ. ಬದಲಾಗಬೇಕಿದೆ

 2. Dr. Geetha M L says:

  Nice flow of thought Madam

 3. ನಯನ ಬಜಕೂಡ್ಲು says:

  ಸರಳ, ಸಹಜವಾದ ಒಂದು ವಿಷಯವನ್ನು ಎಷ್ಟು ಚಂದ ವಿವರಿಸಿದ್ದೀರಿ ಮೇಡಂ. ಸೂಪರ್. ನಿಮ್ಮ ನಿದ್ದೆ ಮಾಡುವ ವಿದ್ಯಾರ್ಥಿ ಯ ಬಗ್ಗೆ ಓದುವಾಗ, ನನ್ನ ಕಾಲೇಜಿನ ದಿನಗಳು ನೆನಪಾದವು ನಾನೂ ಪಾಠ ದ ಸಮಯದಲ್ಲಿ ತುಂಬಾ ನಿದ್ದೆ ಮಾಡ್ತಿದ್ದೆ. ಆದ್ರೆ ಲೆಕ್ಚರ್ ಸ್ ಕೈಗೆ ಸಿಕ್ಕಿ ಬೀಳಲಿಲ್ಲ ಯಾವತ್ತೂ…

  • Krishnaprabha says:

   ಮೆಚ್ಚುಗೆಗೆ ಧನ್ಯವಾದಗಳು ನಯನಾ.. ಅಂದರೆ ನೀವು ಅಧ್ಯಾಪಕರಿಗೆ ಗೊತ್ತಾಗದ ರೀತಿಯಲ್ಲಿ ನಿದ್ದೆ ಮಾಡುತ್ತಿದ್ದಿರಬೇಕು

 4. Anonymous says:

  ಈ ಮಾತುಗಳಿಗಂತೂ ಖಂಡಿತಾ ಕಿವಿ ಕೊಡ್ಲೇ ಬೇಕಾಗ್ತದೆ.ಅಷ್ಟು ಚಂದದ ಬರಹ

  • Krishnaprabha says:

   ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

 5. ASHA nooji says:

  ಚಂದದ ಬರಹ ಪ್ರಭ

 6. Somashekarappa says:

  Nice article

 7. Somashekarappa says:

  Good article

 8. ಶಂಕರಿ ಶರ್ಮ says:

  ನಿಮ್ಮ ಕಿವಿ ಕೊಡುವ ಲೇಖನವನ್ನು ನಾನು ಕಣ್ಣಿಟ್ಟು ಓದಿದೆ..ಲಘು ಹಾಸ್ಯ ಮಿಶ್ರಿತ ಚಂದದ ಬರಹ ..ಧನ್ಯವಾದಗಳು.

 9. ರಾಜೇಶ್ವರಿ ಕೆ says:

  ಅಕ್ಕ ನಾನು ಈ ವಿಷಯದಲ್ಲಿ ಹಲವಾರು ಭಾರಿ ಹ್ಯಾಮ್ಮಾರಿದ್ದೇನೆ, ಕೆಲವು ಮಕ್ಕಳು ಎಲ್ಲೋ ಗಮನ, ಇನ್ನೆಲ್ಲೋ ಕಿವಿ, ಇವರೇ ಒಂದೇ ಭಾರಿ ಹಲವಾರು ಕೆಲಸ ಮಾಡಬಲ್ಲ ಸಾಮರ್ಥ್ಯ ಉಳ್ಳ ಮಹಾನುಭಾವರು, ಹಂಸಕ್ಷೀರ ನ್ಯಾಯ ಪಂಚೇಂದ್ರಿಯಗಳಿಗೂ ಅನ್ವಯಿಸುವಂತದ್ದು, ಉತ್ತಮ ಲೇಖನ… ಸೂಪರ್

 10. ರಾಜೇಶ್ವರಿ ಕೆಂಭಾವಿ says:

  ಉತ್ತಮ ಲೇಖನ ಅಕ್ಕ, ಹಂಸಕ್ಷೀರ ನ್ಯಾಯ ಸಕಲ ಪಂಚೇಂದ್ರಿಯಗಳಿಗೂ ಅನ್ವಯಿಸೊತ್ತೇ, ಇನ್ನೂ ಮಲ್ಟಿಟಾಸ್ಕ್ ಟ್ಯಾಲೆಂಟ್ ಇರುವ ವಿದ್ಯಾರ್ಥಿಗಳ ಮುಂದೆ ನಾನೇ ಹಲವಾರು ಭಾರಿ ಹ್ಯಾಮಾರಿದ್ದೇನೆ, ಅವರ ಬುದ್ಧಿವಂತಿಕೆ ಮುಂದೆ ನನ್ನ ಮಾತೇ ಸ್ಥಬ್ಧ.., ಸೂಪರ್ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: