ನನ್ನಾತ್ಮವೇ…!
ಇರುಳ ಕಡುಕಪ್ಪಿನಲಿ ಬಿರು ಬೆಳಕು ಕಾಣುವ ಮನವನ್ನು ನೀಡೆನಗೆ ನನ್ನಾತ್ಮವೇ
ಬೇಕು ಬೇಡೆಂದರು ನೂರಾರು ಬವಣೆಗಳು ನನಗಂತೇ…ಅಲ್ಲ ನನ್ನಂತೆ ನೂರಾರು
ನೀ ಸತ್ಯ ಎನ್ನುವರು ನೂರಲ್ಲಿ ಹಲವರು ನೀ ಮಿಥ್ಯ ಎನ್ನುವರು ಇನ್ನುಳಿದ ಕೆಲವರು
ಅವರವರ ಭಾವ ಅವರವರಿಗಿರಲಿ ನಿನ್ನಿರವ ನಂಬಿಕೆಯು ಮಾತ್ರ ನನಗಿರಲಿ
ಬದುಕು ನೀ ನೀಡಿದೆ ಬವಣೆಯೂ ನೀಡಿದೆ ಬಾಳುವ ಪರಿಯನ್ನು ನೀ ನೀಡದಾದೆ
ಬಾಡದಿರಲಿ ಈ ಬಾಳ ಹೂಬನ ನವರಸ ಜೀವನ ಫಲರಸ ಹೀರುವಮುನ್ನ
ಬಾಡದಿರಲಿ ಈ ಬಾಳ ಹೂಬನ ನವರಸ ಜೀವನ ಫಲರಸ ಹೀರುವಮುನ್ನ
ಸೋಲಿನೆಡೆಗೋ ಗೆಲುವಿನೆಡೆಗೊ ಸಾಗುತಿಹುದು ಅಗಮ್ಯ ಅಗೋಚರವೀ ಪಯಣ
ಗೆಲುವೊಂದೆ ಬೇಕೆಂಬ ಹಟವಿಲ್ಲ ನನಗೆ ಸೋಲನ್ನು ತೋಳಲ್ಲಿ ಬಳಸಲು ಭಯವಿಲ್ಲ
ಗಮನದ ಗತಿಯಲ್ಲಿ ಕಲ್ಲಿರಲಿ ಮುಳ್ಳಿರಲಿ ಮಜಲನ್ನು ಮುಟ್ಟುವ ಮನವಿರಲಿ ಒಲವಿರಲಿ
ಶಾಂತಿ ಸಹನೆಯು, ಸಂಯಮ ಮನದಲ್ಲಿ ಸಂಗಾತಿಯಾಗಿರಲಿ ಬಾಳಿನ ಗುರಿಯಲ್ಲಿ
ಬೇಸರ ಸರಕಾದ ನೌಕೆ ಬಾಳಾಗದಿರಲಿ ಇದ್ದರೂ ಪ್ರೀತಿಯ ಕಡಲ ತೀರವಿರಲಿ
ಸೌಖ್ಯ ಸಂತೋಷ ಆನಂದವಲೆಯಾಗಿ ಆಗೊಮ್ಮೆ ಈಗೊಮ್ಮೆ ಆ ದಡವ ಮುಟ್ಟಲಿ!
-ರೋಹಿಣಿ ಸತ್ಯ
ಚೆನ್ನಾಗಿದೆ ಮೇಡಂ ಕವನ, ಬಾಳಲ್ಲಿ ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸುತ್ತೇನೆ ಅನ್ನುವ ಭಾವ ಆವರಿಸಿದೆ.
ಬಾಳ ಪಯಣ ಮನ ಮುಟ್ಟುವಂತಿದೆ.
ಬಾಳದೋಣಿ ಸಾಗುವ ಪರಿ ಸೊಗಸಾಗಿ ಮೂಡಿ ಬಂದ ಚಂದದ ಕವನ .