ಗಝಲ್
ಕರಿಮಬ್ಬು ಹರಡುತ ಎಗ್ಗಿಲ್ಲದೆ ಕುಗ್ಗಿದ ಪ್ರಭಾಪ್ರಸರಣ ಕಾಡಿಸಿತು ಸಖಿ
ಬಿರುನುಡಿ ಉಕ್ಕೇರಿ ಎಗ್ಗಳದಿ ಮೈದಳೆದು ಹೃದಯದಂಗಣ ಬಾಡಿಸಿತು ಸಖಿ
ಕರುಬುವ ಜಿದ್ದಿನ ಕುಟಿಲತೆ ವೈರಾಗ್ಯ ಸೃಷ್ಟಿಸದೇ ಮುನ್ನಡೆಗೆ
ಬರಡುತನ ನಿರ್ಲಕ್ಷಿಸಿ ಮುನ್ನುಗ್ಗಲು ಧೈರ್ಯಸೈರಣೆ ಕೊಡಿಸಿತು ಸಖಿ
ನಿರಾಶೆ ಸರಿದ ಮನದಲಿ ನಿರೀಕ್ಷೆ ತೋರಣವೆದ್ದು ನಿಂತಿತು
ಭರವಸೆಯ ಬೆಳಕಿನ ಕನ್ನಡಿ ಬದುಕಿಗೆ ಆಶಾಕಿರಣ ಮೂಡಿಸಿತು ಸಖಿ
ತಿರೆಧರಿಸಿದ ಕ್ಷಮೆಯನು ಯೋಚಿಸಿ ಚಿತ್ತದ ಭೀತಿಯು ತೊಲಗಿತು
ಸಿರಿಯುಕ್ಕಿದ ಚೆಲುವಲಿ ಪಲ್ಲವಿಸಿ ಲತಾಕಾವಣ ನೋಡಿಸಿತು ಸಖಿ
ಪರಿಪುಷ್ಟ ಹಾಸದೆಸಳುಗಳ ಹರಡಿಸುತ ಪದ್ಮಗಳು ಸೊಗಸುಕ್ಕಿ ಬಿರಿಯಿತು
ಪರಿಶೋಭಿತ ಸೌಂದರ್ಯದಲಿ ಕಾಂತಿತೋರಣ ಕೂಡಿಸಿತು ಸಖಿ||
– ಪದ್ಮಾ ಆಚಾರ್ಯ, ಪುತ್ತೂರು
Beautiful
WOOW
ಬಿರುನುಡಿಗಳಿಗೆ ಕುಗ್ಗದೆ, ನಿರಾಶಾ ಭಾವನೆ ತೊಲಗಿ, ಆಶಾ ಭಾವ ಎಚ್ಚೆತ್ತ ಬಗೆ ಅನುಪಮ!…ಪದ್ಮ ಬಿರಿದ ಪರಿ ಮನತುಂಬಿತು. ಸೊಗಸಾದ ಗಝಲ್..ಧನ್ಯವಾದಗಳು ಪದ್ಮಾ ಮೇಡಂ.