ಕವಿ ಕೆ.ಎಸ್.ನ ನೆನಪು 3 : ವಿಸೀ ಹಾಗೂ ಕೆ ಎಸ್ ನ
ವಿಸೀ ಹಾಗೂ ಕೆ ಎಸ್ ನ ಕೃಷ್ಣಾರ್ಜುನ ಬಾಂಧವ್ಯ.
ಕಾವ್ಯಲೋಕದ ಸಂದರ್ಭದಲ್ಲಿ ಕೆ ಎಸ್ ನ ಹಾಗೂ ವಿಸೀ ಅವರದ್ದು ಕೃಷ್ಣಾರ್ಜುನ ಬಾಂಧವ್ಯ.ಅದರಿಂದ ಆಚೆಗೂ ಪೂಜ್ಯ ವಿಸೀಯವರು ನಮ್ಮ ತಂದೆಯವರಿಗೆ ಆಪತ್ಬಾಂಧವರೇ.ಹಣಕಾಸು ಸಹಾಯ ,ಸಾಂತ್ವನ,ಬೆಂಬಲ ಹೀಗೆ ಹಲವಾರು ರೂಪಗಳಲ್ಲಿ ವಿಸೀಯವರು ನೆರವಾಗುತ್ತಿದ್ದರು.
ವಿಸೀಯವರು ಮೈಸೂರಿನಲ್ಲಿದ್ದಾಗ ಹಾಗೂ ಬೆಂಗಳೂರಿದ್ದಾಗ ಕೆ ಎಸ್ ನ ಅವರ ಕಾವ್ಯಪೋಷಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.ನಮ್ಮ ತಂದೆಯವರು ಬೆಂಗಳೂರಿನ ಕರ್ಣಾಟಕ ಗೃಹಮಂಡಳಿ (ಆಗ ಮೈಸೂರು ಹೌಸಿಂಗ್ ಬೋರ್ಡ್)ಯಲ್ಲಿ ಕೆಲಸದಲ್ಲಿದ್ದಾಗ ಅವರ ಕಚೇರಿ ಪಂಪಮಹಾಕವಿ ರಸ್ತೆಯ ಗ್ರೇನ್ ಮರ್ಚಂಟ್ಸ್ ಬ್ಯಾಂಕ್ ನ ಕಟ್ಟಡದಲ್ಲಿತ್ತು ವಿಸೀಯವರದು ,ಅಲ್ಲೆ ಸ್ವಲ್ಪ ಕೆಳಗೆ ಚಾಮರಾಜಪೇಟೆ ಎರಡನೆಯ ಮುಖ್ಯ ರಸ್ತೆಯ ಮೊದಲನೆಯ ಮನೆ. ಕಚೇರಿಯಿಂದ ಕಾಲ್ನಡಗೆಯ ದೂರದಲ್ಲಿದ್ದ ಅವರ ಮನೆಗೆ ನಮ್ಮ ತಂದೆಯವರು ಪ್ರತಿದಿನ ಸಾಯಂಕಾಲ ಹೋಗುತ್ತಿದ್ದರು.ಮೊದಲು ತಾವು ಹೊಸದಾಗಿ ಬರೆದಿದ್ದ ಪದ್ಯವನ್ನು ವಿಸೀಯವರಿಗೆ ಓದುತ್ತಿದ್ದರು.ವಿಸೀಯವರು ಅದೇ ಪದ್ಯವನ್ನು ಮತ್ತೊಮ್ಮೆ ಗಟ್ಟಿಯಾಗಿ ಓದಿಕೊಂಡು ,ಧ್ವನಿ,ಲಯ,ಆಶಯ ಮುಂತಾದ ದೃಷ್ಟಿಯಿಂದ ತಮ್ಮಅಭಿಮತ ತಿಳಿಸುತ್ತಿದ್ದರು.
ಜತೆಗೆ ಅವರು ಕೆ ಎಸ್ ನ ರವರಿಗೆ ಟಿ ಎಸ್ ಎಲಿಯಟ್ ,ಎಜ್ರಾ ಪೌಂಡ್,ಆಡೆನ್,ಲೂಯಿ ಮೆಕನಿಸ್ ಮುಂತಾದವರ ಕವಿತೆಗಳನ್ನೂ ಓದಿ ಹೇಳುತ್ತ ಇದ್ದರು ವಿಸೀಯವರು , “ಬರೀ ಗಂಡ ಹೆಂಡತಿ ವಿಚಾರಾನೇ ಎಷ್ಟು ದಿನ ಬರೆದುಕೊಂಡು ಇರ್ತೀರಿ ,ಅದರಿಂದ ಆಚೆಗೂ ಯೋಚನೆ ಮಾಡಿ ” ಎಂದು ವಿಸೀ ಒಮ್ಮೆ ನೀಡಿದ ಕಿವಿಮಾತಿನಿಂದ ಪ್ರೇರಣೆ ಪಡೆದ ಕವಿ ಮುಂದೆ ಕಾಮದಹನ, ರಾಮಬಂಟ, ಸ್ವಪ್ನಸುಂದರಿ, ಕಾಲದ ಹೊಳೆ, ಕಲಿಯಾಗಿ ಬಾ ಕೃಷ್ಣ, ಸಂಸಾರ ರಾಜ್ಯಾಂಗ, ಡೊಮಿನಿಯನ್ ಮುಂತಾದ ವಿಭಿನ್ನ ವಸ್ತುಗಳನ್ನು ನಿರ್ವಹಿಸುವ ಕವನಗಳನ್ನು ಬರೆದು ದಾಪತ್ಯ ಗೀತೆಗಳ ಗುಂಗಿನಿಂದ ಹೊರಬರಲು ತಮಗೆ ಸಾಧ್ಯ ಎಂಬುದನ್ನು ಸಿದ್ಧಪಡಿಸಿದರು.
ಚರ್ಚೆಗಳ ನಂತರ ವಿಸೀಯವರು ಸಾಯಂಕಾಲದ ವಾಯುವಿಹಾರಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜಿನತ್ತಲೋ ಲಾಲಾಬಾಗಿನತ್ತಲೋ ಹೊರಟಾಗ ನಮ್ಮ ತಂದೆಯವರೂ ಅವರನ್ನು ಅನುಸರಿಸುತ್ತಿದ್ದರು.ಹಲವಾರು ಬಾರಿ ಇವರಿಬ್ಬರ ಜತೆ ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿಗಳೂ ಇರುತ್ತಿದ್ದರು.( ಶಾಸ್ತ್ರಿಗಳು ಚಾಮರಾಜಪೇಟೆಯ ಸೇಂಟ್ ತೆರೆಸಾ ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿದ್ದರು. ಆ ಕಾಲದ ಪ್ರಸಿದ್ಧ ಪಂಡಿತರು. ಸಂಸ್ಕೃತದ ಹಲವಾರು ಕೃತಿಗಳ ಭಾವಾನುವಾದ ಕನ್ನಡಕ್ಕೆ ತಂದು ಜಯಚಾಮರಾಜ ಒಡೆಯರ್ ರವರಿಂದ ಸನ್ಮಾನಿತರಾದವರು) ವಿಸೀಯವರ ಜರಿಯಿಲ್ಲದ ಬಿಳಿರುಮಾಲು, ಶಾಸ್ತ್ರಿಗಳ ಕರಿಟೋಪಿ ,ಮತ್ತು ನಮ್ಮ ತಂದೆಯವರ ಬರಿತಲೆ .ಈ ಮೂವರನ್ನೂ ನೋಡಿ ಚಾಮರಾಜಪೇಟೆಯ ಜನ ಥ್ರೀ ಮಸ್ಕಟೀರ್ಸ್(three musketeers )ಎಂದು ತಮಾಷೆ ಮಾಡುತ್ತಿದ್ದರು ಎಂದು ನಮ್ಮ ತಂದೆಯವರು ನೆನಪಿಸಿಕೊಳ್ಳುತ್ತಿದ್ದರು.ವಿಸೀ ಮತ್ತು ನಮ್ಮ ತಂದೆಯವರೊಂದಿಗೆ ನಾನೂ ಒಮ್ಮೆ ಅವರೊಂದಿಗೆ ಹೋಗುವ ಅವಕಾಶ ಒದಗಿತ್ತು.
ವಿಸೀಯವರ ಮನೆಗೆ ಮೊದಲ ಬಾರಿ ತಂದೆಯವರ ಜತೆ ಹೋಗಿದ್ದಾಗ ಮೊದಲು ನನ್ನನ್ನು ಮಾತನಾಡಿಸಿ ಏನು ಕೆಲಸ ಮಾಡುತ್ತ ಇದ್ದೀಯಾ ಎಂದು ಕೇಳಿದರು. ನಾನು ಬ್ಯಾಂಕ್ ಕೆಲಸದ ಪ್ರವರ ಒಪ್ಪಿಸಿದಾಗ,”ಸಂತೋಷ,ಮೊದಲು ಹೊಟ್ಟೆಪಾಡು ಆಮೇಲೆ ಹವ್ಯಾಸಗಳು” ಎಂದರು. ಎಷ್ಟೆಂದರೂ ಅವರು ಅರ್ಥಶಾಸ್ತ್ರಿಗಳಲ್ಲವೆ.!
1975ರ ಫೆಬ್ರವರಿಯಲ್ಲಿ ನಮ್ಮ ತಂದೆಯವರ ಷಷ್ಟಿಪೂರ್ತಿ ಶಾಂತಿ ಸಮಾರಂಭಕ್ಕೆ ವಿಸೀಯವರು ಸಾಯಂಕಾಲ ಆಗಮಿಸಿ ಆತಿಥ್ಯ ಸ್ವೀಕರಿಸಿ,ಹಾರೈಸಿ ,ಕುಟುಂಬದವರೊಡನೆ ಭಾವಚಿತ್ರ ತೆಗೆಸಿಕೊಂಡ ಕ್ಷಣಗಳು ಇನ್ನೂ ನೆನಪಿನಲ್ಲಿ ಹಸಿರಾಗಿದೆ.
ನಮ್ಮ ತಂದೆಯವರ ಬದುಕು ಬರಹ ಕುರಿತ ಅಭಿನಂದನ ಗ್ರಂಥ “ಚಂದನ” ಬಿಡುಗಡೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಭ್ರಮಿಸಿದ್ದರು ವಿಸೀ.
ಒಮ್ಮೆ ನಮ್ಮ ತಂದೆಯವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಬೇಕಾದಾಗ, ವಿಸೀಯವರು ಆಸ್ಪತ್ರೆಗೆ ಬಂದು ದುಃಖಿಸಿದರು. ಕಣ್ಣೀರು ಮತ್ತು ಮೌನ ಬಿಟ್ಟು ಬೇರಾವ ಪ್ರತಿಕ್ರಿಯೆಯೂ ಅವರಿಗೆ ಅಂದು ಸಾಧ್ಯವಾಗಲಿಲ್ಲ.
ವಿಸೀ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ನೋಡಿ ಬಂದ ನಮ್ಮ ತಂದೆಯವರನ್ನು ಆವರಿಸಿದ್ದು ತಮ್ಮ ಜೀವನುದುದ್ದಕ್ಕೂ ವಿಸೀಯವರು ನೀಡುತ್ತ ಬಂದಿದ್ದ ಪ್ರೋತ್ಸಾಹ,ಬೆಂಬಲ ಮತ್ತು ವಾತ್ಸಲ್ಯಗಳ ಕನವರಿಕೆಯೇ.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=28430
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ನಿವೃತ್ತ ಉಪ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು )
(ಮುಂದುವರಿಯುವುದು….)
ಉತ್ತಮ ಮಾಹಿತಿಯೊಂದಿಗೆ ಬರುತ್ತಿರುವ ಬರಹ.ಅದನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತಿರುವನಿಮಗೆ ಅಭಿನಂದನೆಗಳು ಸಾರ್.
ಬಹಳ ಸೊಗಸಾದ ಲೇಖನ ಸರಣಿ. ಯೇ… ದೋಸ್ ತಿ… ಹಮ್ ನಹಿ ಛೋಡೆಂಗೆ… ಹಾಡು ನೆನಪಾಗ್ತಿದೆ ಲೇಖನ ಓದುವಾಗ.
ಮಹೋನ್ನತ ಕವಿಗಳಲ್ಲೊಬ್ಬರಾದ ತಮ್ಮ ತಂದೆವರ ಬಗೆಗಿನ ವಿಶೇಷ ಮಾಹಿತಿಗಳುಳ್ಳ ತಮ್ಮ ಬರಹವು ಸಂಗ್ರಹಯೋಗ್ಯವಾಗಿದೆ…ಧನ್ಯವಾದಗಳು ಹಾಗೂ ಅಭಿನಂದನೆಗಳು.