ಬೈಕರ್ ಗಳ ದುನಿಯಾ
ಬೈಕರ್ ಗಳನ್ನು ನೋಡಿದ್ದೀರಾ? ಬೈಕರ್ ಎಂಬ ಪದವನ್ನಾದರೂ ಕೇಳಿದ್ದೀರಾ? ಕೆಲವು ವರುಷಗಳ ಹಿಂದೆ ನನಗೂ ಅಷ್ಟೆಲ್ಲ ಪರಿಚಯವಿಲ್ಲದ ಶಬ್ದವಾಗಿತ್ತು ಈ “ಬೈಕರ್”. ಬೈಕ್ ಚಲಾಯಿಸುವವರು ಅಥವಾ ಆಸಕ್ತರು ಎಂಬ ಅಸ್ಪಷ್ಟ ಉತ್ತರವಷ್ಟೇ ನನ್ನ ಬಳಿ ಇದ್ದದ್ದು. ಹೆಣ್ಣುಮಕ್ಕಳಿಗೆ ಮದುವೆ ಆಗುತ್ತಲೇ ಹೊಸದೊಂದು ಪ್ರಪಂಚದ ಪರಿಚಯವಾಗುತ್ತದೆ ಅನ್ನುತ್ತಾರಲ್ಲ! ನನಗೆ ಪರಿಚಯವಾದ ಹೊಸ ಲೋಕವೇ ” ಬೈಕರ್ ಗಳ ದುನಿಯಾ “.
ಇನ್ನೇನೋ ಕೆಲಸಕ್ಕೆ ಸೇರಿಯಾಗಿತ್ತು. ಮನೆಯಲ್ಲಿ ಭರದಿಂದ ವರಾನ್ವೇಷಣೆ ಜರಗುತ್ತಿತ್ತು. ಅದೊಂದು ದಿನ ಅಪ್ಪ ಕರೆ ಮಾಡಿ “ಒಳ್ಳೆ ಮಾಣಿ(ಹುಡುಗ), ಆದರೆ ಫೇಸ್ಬುಕ್ನಲ್ಲಿ ಏನೂ ಚಿತ್ರಗಳೇ ಇಲ್ಲ, ನೀನು ಒಮ್ಮೆ ನೋಡು” ಎಂದು ಫೇಸ್ಬುಕ್ ಖಾತೆಯ ಕೊಂಡಿಯೊಂದನ್ನು ಕಳುಹಿಸಿದರು. ನಾನು ತಡಮಾಡದೆ ಫೇಸ್ಬುಕ್ ತೆರೆದೆ. ಖಾತೆಯನ್ನು ಮೇಲಿನಿಂದ ಕೆಳಗೆ ವರೆಗೂ ಸ್ಕ್ರಾಲ್ ಮಾಡಿದೆ. ಕಣ್ಣಿಗೆ ಬಿದ್ದದ್ದು ಬರೀ ಬೈಕು, ಬೈಕು, ಬೈಕು! ಅಪರೋಪಕ್ಕೆ ಒಂದೆರಡು ಫೋಟೋಗಳಲ್ಲಿ ಬೈಕಿನ ಪಕ್ಕಕ್ಕೆ ಬೈಕ್ ಕುಮಾರರೂ ನಿಂತಿದ್ದರು. ಕಪ್ಪು ಬಟ್ಟೆಯುಟ್ಟು, ದಪ್ಪವಾದ ಮುಖವಾಡವನ್ನು ತೊಟ್ಟು ಯುದ್ಧಕ್ಕೆ ಹೊರಟುನಿಂತ ವೀರನಂತಿತ್ತು ಅವರ ಆ ಭಂಗಿ. ಇಡೀ ಖಾತೆಯನ್ನು ಜಾಲಾಡಿದರೂ ಅವರ ಮುಖದರುಶನವಾಗಲಿಲ್ಲ ಎಂಬುವುದು ಮಾತ್ರ ಕಟು ಸತ್ಯ. ಇದು ಬೈಕರ್ ಎಂಬ ಕಾಯಿಲೆಯ ಪ್ರಮುಖ ಲಕ್ಷಣಗಳಲ್ಲಿ ಒಂದು ಎಂದು ಅಂದು ನನಗೆ ತಿಳಿದಿರಲಿಲ್ಲ.
ದ್ವಿಚಕ್ರ ವಾಹನಗಳ ನಿತ್ಯೋಪಯೋಗದ ಅರಿವಿದ್ದರೂ, “ಬೈಕಿಂಗ್ ಎಂಬ ಹವ್ಯಾಸ” ನನಗೆ ಹೊಸದಾಗಿತ್ತು. ಹೆಚ್ಚೆಂದರೆ ಒಂದೈವತ್ತು ಕಿಲೋಮೀಟರುಗಳು ಹೋಗಬಹುದು ಎಂಬುದಾಗಿತ್ತು ನನ್ನ ಪರಿಕಲ್ಪನೆ. ಆದರೆ ನನ್ನ ಗರಿಷ್ಠ, ಬೈಕರ್ ಗಳ ಕನಿಷ್ಠವೆಂಬುದು ನಿಧಾನವಾಗಿ ಮನವರಿಕೆ ಆಗತೊಡಗಿತು. ಫೋಟೋಗಳಲ್ಲಿ “ಕೂಲ್” ಆಗಿ ಕಾಣುವ ಈ ಹವ್ಯಾಸವು ಶರೀರಕ್ಕೆ ಅಷ್ಟೆಲ್ಲ “ಕೂಲ್” ಆಗಿರುವುದಿಲ್ಲ ಎಂಬುವುದು ಅರಿವಾಗ ತೊಡಗಿತು. ಬೈಕುಗಳೆಲ್ಲಾ ಒಂದೇ, ಬೈಕರ್ ಗಳೆಲ್ಲಾ ಒಂದೇ ಎಂಬ ನನ್ನ ದೃಷ್ಟಿಕೋನವನ್ನೂ ಕಷ್ಟ ಪಟ್ಟು ಬದಲಾಯಿಸಿದರು ಪತಿರಾಯರು.
ಹೌದಪ್ಪ! ಮದುವೆಗೆ ಒಂದು ಉಡುಗೆ, ಮನೆಯಲ್ಲಿ ಹಾಕಲು ಬೇರೆ, ಕಚೇರಿಗೆ ಬೇರೆ ಎಂಬಂತೆಯೇ ಬೈಕುಗಳಲ್ಲಿಯೂ ಹಲವಾರು ವಿಧಗಳಿವೆ. ಕಚೇರಿಗಳಿಗೆ ಪ್ರಯಾಣಿಸಲು, ಮಾರುಕಟ್ಟೆಯಿಂದ ಸಾಮಗ್ರಿಗಳನ್ನು ತರಲು, ನೆಂಟರ ಮನೆಗಳಿಗೆ ತೆರಳಲೆಂದೆಲ್ಲ ನಾವು ಉಪಯೋಗಿಸುವ, ಎಲ್ಲರಿಗೂ ಪರಿಚಯವಿರುವ ಬೈಕುಗಳನೆಲ್ಲ ಕಂಮ್ಯುಟೆರ್ ಬೈಕ್’ಗಳು ಎಂದು ಕರೆಯಬಹುದು. ಇನ್ನು ಬಹುತೇಕರ ಪ್ರೀತಿಯ ಬೈಕು – ಬುಲೆಟ್ ‘ವಿಂಟೇಜ್ ಬೈಕ್’ ಎಂಬ ವಿಭಾಗಕ್ಕೆ ಸೇರುತ್ತದೆ. ರೇಸಿಂಗ್ ನಲ್ಲಿ ಉಪಯೋಗಿಸುವ ಬೈಕುಗಳನ್ನು ‘ಸೂಪರ್ ಬೈಕ್, ಸೂಪರ್ ಬೈಕ್ ಅಥವಾ ಟ್ರಾಕ್ ಬೈಕ್’ ಎನ್ನಲಾಗುತ್ತದೆ. ದೂರಯಾತ್ರೆಗಳಿಗೆ ಉಪಯೋಗಿಸುವ ಬೈಕುಗಳು ‘ಟೂರಿಂಗ್ ಬೈಕ್’ ಆದರೆ, ಕಷ್ಟಕರವಾದ ಗುಡ್ಡ ಬೆಟ್ಟಗಳನ್ನು ಹತ್ತಬಹುದಾದ ಬೈಕುಗಳೇ ‘ಅಡ್ವೆಂಚರ್ ಬೈಕ್’ ಗಳು. ಕೆಸರು ಹೊಂಡಗಳಲ್ಲಿ ಓಡಿಸಲೆಂದೇ ಇರುವ ಬೈಕುಗಳನ್ನು ‘ಡರ್ಟ್ ಬೈಕ್’ ಎಂದು ಕರೆಯುತ್ತಾರೆ. ಇವುಗಳ ಉಪಯೋಗಗಳು, ವೇಗ, ಶೈಲಿ, ಹಾಗು ಉಪಯೋಗಿಸಿರುವ ಘಟಕಗಳಿಗೆ ಅನುಸಾರವಾಗಿ ಇವುಗಳ ಬೆಲೆಯೂ ಬದಲಾಗುತ್ತದೆ.
ಇನ್ನು ಬೈಕ್ ಆಸಕ್ತರಲ್ಲೂ ವ್ಯತ್ಯಾಸಗಳಿವೆ. ಇಂದಿನ ತರುಣರಲ್ಲಿ ದೂರ ಯಾತ್ರೆಗಳನ್ನು ಇಷ್ಟಪಡುವ ದೊಡ್ಡದೊಂದು ಗುಂಪಿದೆ. ಇವರಲ್ಲಿ ಕೆಲವರಿಗೆ ಹೋಗುವ ತಾಣಗಳು ಮುಖ್ಯವಾಗಿದ್ದರೆ, ಇನ್ನು ಕೆಲವರಿಗೆ ಯಾತ್ರೆಯೇ ಮುಖ್ಯ. ಬೈಕ್ ಹತ್ತಿ ಹೊರಟರೆ ಸಾಕು , ಎಲ್ಲಾದರೇನು ಎಂಬವರ ಸಂಖ್ಯೆಯು ಕಡಿಮೆಯಲ್ಲ. ಕಡಿದಾದ ದಾರಿಗಳಲ್ಲಿ ಬೈಕ್ ಹಾರಿಸುವ ಆಸೆ ಕೆಲವರದ್ದಾದರೆ, ಇನ್ನು ಕೆಲವರಿಗೆ ಟ್ರಾಕುಗಳಲ್ಲಿ ವೇಗವಾಗಿ ಬೈಕ್ ಓಡಿಸುವುದೇ ಮಜಾ. ಸೂಪರ್ ಬೈಕುಗಳಲ್ಲಿ ಕಾರುಗಳಿಗಿಂತಲೂ ವೇಗವಾಗಿ ಹೋಗಲು ಇಷ್ಟಪಡುವವರು, ಕಸರತ್ತು ಮಾಡ ಬಯಸುವವರು ಹೀಗೆ ಬದಲಾಗುತ್ತದೆ ಇವರ ಹವ್ಯಾಸಗಳು. ಅದೂ ಅಲ್ಲದೆ ವಿಧ ವಿಧವಾದ ಬೈಕುಗಳನ್ನು ಕೊಳ್ಳುವುದೇ ಆನಂದ ಅನ್ನುವವರೂ ಇದ್ದಾರೆ. ಬೈಕುಗಳ ಆರೈಕೆ ಮಾಡಿ ಸಂತಸಪಡುವ ಗುಂಪೂ ಒಂದಿದೆ. ಬೈಕು ಯಾವುದಾದರೇನು ಬೈಕಾದರೆ ಸಾಕು ಎಂಬವರೂ ಹಲವರಿದ್ದಾರೆ. ಒಟ್ಟಿನಲ್ಲಿ ಇವರೆಲ್ಲರೂ ಬೈಕರ್ ಗಳೆ.
ಇವರ ಉಡುಗೆ ತೊಡುಗೆಗಳನ್ನು ನೋಡಿದ್ದೀರೇ? ಹೆಲ್ಮೆಟ್, ಜಾಕೆಟ್, ರೈಡಿಂಗ್ ಸೂಟ್, ಬೂಟ್, ಪ್ಯಾಂಟ್, ಗ್ಲೋಸ್ಸ್ ಹೀಗೆ ಸಾಗುತ್ತದೆ ತೊಡುಗೆಗಳ ಪಟ್ಟಿ. ಅವರ ಅವರ ಅಗತ್ಯ , ಹಾಗು ಇಷ್ಟಗಳಿಗೆ ಅನುಸಾರವಾಗಿ ಈ ರೈಡಿಂಗ್ ಗೇರ್ ( ತೊಡುಗೆಗಳನ್ನು) ಆಯ್ದು ಕೊಳ್ಳುತ್ತಾರೆ ಬೈಕರ್ ಗಳು. ಇವುಗಳೆಲ್ಲ ಸವಾರರ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಯಾಕೆ, ಬೈಕುಗಳನ್ನು ಶೃಂಗರಿಸುವುದನ್ನು ಇವರು ಮರೆಯುವುದಿಲ್ಲ. ತಮ್ಮ ಬೈಕುಗಳಲ್ಲಿ ತಮಗೆ ಇಷ್ಟ ಹಾಗು ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಹೆಂಡತಿ ಕೊಟ್ಟ ದಿನಸಿ ಪಟ್ಟಿಯನ್ನು ಮರೆತರು ತಮ್ಮ ಬೈಕುಗಳ ಅಗತ್ಯಗಳನ್ನು ಇವರು ಮರೆಯಲ್ಲ. ತಮ್ಮ ಬೈಕಿನನ್ನು ಪ್ರೀತಿಯಿಂದ , ಗರ್ವದಿಂದ ನೋಡಿ “ನೀನೆ ನನ್ನ ಮೊದಲ ಪ್ರೀತಿ” ಅನ್ನುವುದು ಇವರುಗಳ ಇನ್ನೊಂದು ಲಕ್ಷಣ. ಒಟ್ಟಿನಲ್ಲಿ ನಿಂತಲ್ಲಿ ಕುಂತಲ್ಲಿ ಇವರದ್ದು ಒಂದೇ ಧ್ಯಾನ.
ಇನ್ನು ನಮ್ಮ ಪರಿಸ್ಥಿತಿಗೆ ಬರೋಣ.ಮನೆಯ ಪಾರ್ಕಿಂಗ್ ಜಾಗವು ಕಡಿಮೆಯಾಗಿ , ಹೆಚ್ಚಿನ ಮೊತ್ತವನ್ನು ತೆತ್ತು ಬೈಕುಗಳನ್ನು ನಿಲ್ಲಿಸುವ ಸುಸ್ಥಿತಿ ನಮ್ಮದು. ಕಪಾಟುಗಳಲ್ಲಿ ರೈಡಿಂಗ್ ಗೇರುಗಳದ್ದೇ ಕಾರುಬಾರು. ಐಸ್ ಕ್ಯಾಂಡಿಗಳಂತೆ ಬಣ್ಣ ಬಣ್ಣದ ಹೆಲ್ಮೇಟುಗಳ ಸಂತೆಯೇ ಮನೆಯಲ್ಲಿದೆ. ವರುಷದ ಹಣಕಾಸು ಯೋಜನೆಯಲ್ಲಿ ನನಗಿಂತಲೂ ಬೈಕುಗಳಿಗೆ ಹೆಚ್ಚಿನ ಮೊತ್ತವನ್ನು ಮೀಸಲಿಡಬೇಕಾಗಿದೆ. ಇನ್ನು ಪ್ರವಾಸಗಳ ಕತೆಯೇ ಬೇರೆ. ಬಿಸಿಲು, ಮಳೆ, ದೂಳು ಎಲ್ಲವನ್ನು ಅನುಭವಿಸಬೇಕು. ಗೆಳೆತಿಯರೆಲ್ಲರೂ ಅಂದ ಚಂದದ ಬಟ್ಟೆಗಳನ್ನು ತೊಟ್ಟು ಪ್ರವಾಸಗಳ ಫೋಟೋಗಳನ್ನು ಹೊಡೆಸಿಕೊಂಡರೆ ನಾವು ಮತ್ತೆ ಅದೇ ಕೊಳಕಾದ ರೈಡಿಂಗ್ ಗಿಯರುಗಳಲ್ಲೇ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬೇಕು. ಪ್ರವಾಸದ ಕೊನೆಯಲ್ಲಿ ಮೈ ಕೈ ನೋವು ಕಟ್ಟಿಟ್ಟ ಬುತ್ತಿ.
ಸವಾಲುಗಳು ಹಲವಿದ್ದರೂ, ಯಾತ್ರೆಯು ಅಷ್ಟೊಂದು ಸುಗಮವಾಗಿರದಿದ್ದರೂ ಬೈಕ್ ಯಾತ್ರೆಗಳು ಒಂದಷ್ಟು ನೈಜ ಅನುಭವಗಳನ್ನು ಖಂಡಿತವಾಗಿಯೂ ಕೊಡುತ್ತದೆ. ನೇರ ಬೀಸುವ ಗಾಳಿಯಲ್ಲಿ ನುಗ್ಗುತ್ತಾ ಸಾಗುವಾಗ ಸಿಗುವ ಆನಂದವೇ ಬೈಕರ್ ಗಳ ಮತ್ತು ಎಂದರೆ ಸುಳ್ಳಾಗದು. ಆಗೊಮ್ಮೆ ಈಗೊಮ್ಮೆ ಗೊಣಗುತ್ತಿದ್ದರೂ ಬೈಕ್ ಸವಾರಿ ಎಂದರೆ ವಿಕ್ರಮಾದಿತ್ಯನ ಹಿಂದೆ ಬೇತಾಳನಂತೆ ಹತ್ತಿಕೊಳ್ಳಲು ನಾನು ಈಗ ಕಾಯುತ್ತಿರುತ್ತೇನೆ. ಹಾಗೆಯೇ “ಬೈಕರ್ ಗಳ ದುನಿಯಾ“ಕ್ಕೆ ನನ್ನದೂ ಪದಾರ್ಪಣೆಯಾಗಿ ಬಿಟ್ಟಿದೆ.
– ಪಲ್ಲವಿ ಭಟ್ , ಬೆಂಗಳೂರು
Wow… super.
ನಾನು ಕೂಡ ಬೈಕ್ ರೈಡಿಂಗ್ ಅಂದ್ರೆ ಗಂಡು ಮಕ್ಕಳಿಗೆ ಮಾತ್ರ ಇರೋದು ಅಂತ ಅಂದುಕೊಂಡಿದ್ದೆ, ಆದ್ರೆ ಇವತ್ತು ನಾನೂ ಕೂಡ ಬೈಕ್ ರೈಡ್ ಕಲಿತಿದ್ದೇನೆ. ದೂರ ದೂರದ ಪ್ರವಾಸಗಳಿಗೆ 4ವೀಲರ್ ಅಲ್ಲಿ ಹೋಗುವುದಕ್ಕಿಂತ ಬೈಕೇ ದಿ ಬೆಸ್ಟ್. ಒಂದು ಆಸೆ ಇದೆ ಬದುಕಲ್ಲಿ ಒಮ್ಮೆ ಆದರೂ ಬುಲೆಟ್ ಓಡಿಸ್ಬೇಕು ಅಂತ.
ಇಷ್ಟವಾಯಿತು ಬರಹ
ಧನ್ಯವಾದಗಳು. ಶೀಘ್ರದಲ್ಲೇ ಬುಲೆಟ್ ಓಡಿಸುವ ಅವಕಾಶವು ನಿಮ್ಮದಾಗಲಿ.
ಚಕ್ರವರ್ತಿಯ ಸಾಮ್ರಾಜ್ಞಿಯ ಬರಹ ಬೈಕಿನಂತೆ ವೇಗವಾಗಿ ಓಡಿಸಿಕೊಂಡಿದೆ. ಖುಷಿಯಾಯ್ತು
ಧನ್ಯವಾದಗಳು.
ಬೈಕರ್ ಗಳ ಮನೋಲೋಕದ ಅನಾವರಣ ಚೆನ್ನಾಗಿದೆ
ಧನ್ಯವಾದಗಳು.
Beautifully written pallavi. Biker ಹೆಂಡ್ತಿ ಜೀವನ ತುಂಬಾ ಕಷ್ಟ ಅಂತ ಅನ್ಕೊತಿದ್ದೆ ಆದ್ರೆ ಈಗಾ ಸದ್ಯದ ಪರಿಸ್ತಿತಿಗೆ Bikers, bike ಮತ್ತು ಅವರ Riding Gears ಬಗ್ಗೆ ಅನುಕಂಪ ಪಡುತ್ತಿದ್ದಿನಿ. I wish World recovers soon and we get many more rides.
ಧನ್ಯವಾದಗಳು.
ಬೈಕಲ್ಲೂ ಇಷ್ಟೆಲ್ಲಾ ಅಡಗಿರುವುದು ನನಗೊಂದು ವಿಸ್ಮಯ!
ಲೇಖನ ನಮ್ಮನ್ನೊಮ್ಮೆ ಆ ಲೋಕದಲ್ಲಿ ಸುತ್ತಾಡಿಸಿತು..
ಧನ್ಯವಾದಗಳು.
ಬಹಳ ರೋಚಕವಾಗಿದೆ ನಿಮ್ಮ ಬರಹ. ಬೈಕ್ ರೈಡರ್ ಗಳ ಅದ್ಭುತ ಸಾಹಸಗಾಥೆಗಳನ್ನು ಕೇಳಿದರೂ ಇದರ ಪೂರ್ವಭಾವಿ ತಯಾರಿಯ ಇಷ್ಟೊಂದು ವಿವರ,, ಅವಶ್ಯಕತೆಗೆ ತಕ್ಕಂತೆ ಇಷ್ಟೊಂದು ವಿಧದ ಬೈಕ್ ಗಳು ಇರುವುದು ತಿಳಿದಿರಲಿಲ್ಲ. ನಿಮ್ಮ ರೋಮಾಂಚಕ ಸಾಹಸ ಕಥನದ ವಿವರಗಳೂ ಬರಲಿ.
ಧನ್ಯವಾದಗಳು.
ಅಪರೂಪದ ವಿಷಯ..ಚೆಂದದ ನಿರೂಪಣೆ. ಲಡಾಖ್ ಗೆ ಹೋಗಿದ್ದಾಗ, ಅಲ್ಲಿಯ ಹಿಮಬೆಟ್ಟದ ದಾರಿಯಲ್ಲಿ, ಚಳಿ-ಹಿಮ-ಮಳೆಗೆ ಅಂಜದೆ, ಮೌಂಟನೇರಿಂಗ್ ಬೈಕುಗಳನ್ನೇರಿ ಸಾಗುತ್ತಿದ್ದ ಜೋಡಿಗಳನ್ನು ನೋಡಿಯೇ, ಆರಾಮವಾಗಿ ಕಾರಿನಲ್ಲಿ ಹೋಗುತ್ತಿದ್ದ ನಮಗೆ ಭಯವಾಗುತಿತ್ತು. 🙂 🙂 ನಿಮ್ಮಿಬ್ಬರ ಸಾಹಸ ಪ್ರವೃತ್ತಿಗೆ ಸಲಾಂ.
ಧನ್ಯವಾದಗಳು.
ಹೌದು..ನಿಮ್ಮ ಲೇಖನವು ನನ್ನಳಿಯನ ನೆನಪು ತಂದಿತು. ಅಮೇರಿಕದ ಕಾಡು ಮೇಡುಗಳ ಸೊಗಸಾದ ರಸ್ತೆಯಲ್ಲಿ ನೂರಾರು ಮೈಲಿ ಬೈಕ್ ಓಡಿಸಿ ಆನಂದಿಸುವ ಪರಿ ಚೆನ್ನವೇ. ಆದರೆ ಅಷ್ಟೇ ಜಾಗರೂಕರಾಗಿರುವುದೂ ಅಗತ್ಯವಿದೆ ಎನಿಸುತ್ತದೆ. ತಮ್ಮ ಸೊಗಸಾದ ಬೈಕ್ ಬರಹ ಓದಿ ಖುಷಿಯಾಯ್ತು. .
ಧನ್ಯವಾದಗಳು.