ನನ್ನ ದೇವರು….
ಆಜಾನು ಸುಪ್ರಭಾತ ಕೇಳಿ
ಎದ್ದೇಳಿ ಏಳಿ ಎಂದು ಜನರನ್ನೂ
ತನ್ನನ್ನೂ ಎಚ್ಚರಿಸಿಕೊಳ್ಳಲು
ನನ್ನ ದೇವರೆಂದೂ ಮಲಗಿಲ್ಲ.
ಹಾಲು ಮಜ್ಜನ, ತೀರ್ಥ ನೈವೇದ್ಯ
ಉಪಚಾರ ಪಡೆದು; ಘಳಿಗೆ ನೋಡಿ
ಬಾಗಿಲು ತೆಗೆಯಲು ನನ್ನ ದೇವರೆಂದೂ
ಗುಡಿಯ ಮೂರ್ತಿಯಾಗಿಲ್ಲ.
ಧೂಪ ದೀಪ ಮಂಗಳಾರತಿಗೆ
ಪ್ರಸನ್ನವಾಗಿ ಸಾಲುನಿಂತ ಭಕ್ತಗಣ
ಪರಿವಾರಕೆ ದರ್ಶನ ಕೊಡಲು
ನನ್ನ ದೇವರೆಂದೂ ಒಂದೆಡೆ ನಿಂತಿಲ್ಲ.
ಕಷ್ಟ ಕಾಲದಲ್ಲೂ ಹೂಹಾರ
ಚಿನ್ನಬೆಳ್ಳಿ ಅಲಂಕಾರ; ವೃಥಾ
ವ್ರತ-ನೇಮಗಳ ಪುರಸ್ಕಾರ
ನನ್ನ ದೇವರೆಂದೂ ಅಪೇಕ್ಷಿಸುವುದಿಲ್ಲ
ತಾನು ಘನವಂತನೆಂದೂ, ಮಹಾ
ಮಹಿಮನೆಂದೂ, ಸರ್ವರೊಳಿತಿನ
ಉದ್ಧಾರಕನೂ, ದೇವರ ಪ್ರತಿನಿಧಿ
ಪ್ರವಾದಿಯೂ ತಾನೆಂದು ಪ್ರವರ ಹೇಳಿಲ್ಲ.
ನನ್ನ ದೇವರಿಗೆ ಕತ್ತಲಲ್ಲೂ ಕರುಣೆ;
ನಿಮಿತ್ತದಲ್ಲೂ ಸೈರಣೆಯಿದೆ. ಎಲ್ಲಕ್ಕೂ
ಮಿಗಿಲಾಗಿ ಮಿಡಿವ ಹೃದಯದೊಡನೆ
ಸ್ವಲ್ಪ ಹೆಚ್ಚೇ ವಿವೇಕವೂ ಇದೆ.
– ವಸುಂಧರಾ ಕದಲೂರು
ಚಂದದ ಕವನ
ವಾವ್ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಪಡಿಮೂಡಿಸಿರುವ ಕವನ.ಚೆನ್ನಾಗಿದೆ
ವಾಹ್… ಬಹಳ ಅರ್ಥಪೂರ್ಣ ಕವಿತೆ.
ಭಗವಂತ ಸರ್ವವ್ಯಾಪಿ…ನಿರ್ಮೋಹಿ, ನಿರ್ಗುಣಿ. ಮಾನವನ ಢಂಬಾಚಾರದ ಪ್ರವೃತ್ತಿಯನ್ನು ಸೊಗಸಾಗಿ ಬಿಚ್ಚಿದೆ ನಿಮ್ಮ ಕವನ.
ಭಗವಂತ ಸರ್ವಾಂತರ್ಯಾಮಿ ಎಂಬ ಉಕ್ತಿಗೆ ಒಪ್ಪುವ ಕವನ. ತುಂಬಾ ಇಷ್ಟವಾಯಿತು.