ತ್ರಿಪದಿ ಮತ್ತು ಸಾಂಗತ್ಯ
ಚಿನುಮಯನ ರೂಪಕ್ಕೆ ಬೆರಗಾಗಿ ನಿಂತ್ಯಲ್ಲೊ
ಹನುಮನೊಡೆಯನ ಮೂರ್ತಿನಿಜ ಕೀರ್ತಿ/ಆಗಸದಿ
ತನಿಯಾಗಿ ಬೆಳಗಿದವೊ ಮೈಕಾಂತಿ
ಮನಸಿನ ಮಾತಿಗೆ ಪದಗಳೆ ಬಾರವೊ
ಮನ ಭಾರ ತಂಗಿ ಪದ ಭಾರ /ಒಡಲಿನ
ಒಳಗುದಿ ಹೊರಗೆ ತರಲೆಂತೊ//
ಮಾನಸ ಲೋಕಕ್ಕೆ ಹಲವು ಕಾಮನಬಿಲ್ಲು
ಕಷ್ಟದ ಕಡಲಿಗು ನೊರೆಯೆಷ್ಟು
ಹಾರುವ ಹೋರುವ ತೆರೆಮೊರೆದಾಡುವ
ಆಡಿದ್ದೆ ಆನಂದ ನಮಗಷ್ಟೆ
ಕಷ್ಟವೊ ನೂರೆಂಟು ಸುಖವೊ ಕೇವಲ ಎಂಟು
ಕಷ್ಟದಲು ಸುಖವುಂಟು ಅರಿತವಗೆ
ಕಷ್ಟದಲೆ ಮಿಂದವನು ಸುಖದ ಪರಿಮಳವುಂಡು
ಕಟ್ಟಕಡೆಯಲಿ ಗೆಲುವು ಖಾತರಿ ಅವಗೆ
ಜೀವನ ಯಾತ್ರೆಗೆ ಎಷ್ಟು ನಿಲ್ದಾಣಗಳು
ಬರುವ ಹೋಗುವ ಮಂದಿ ನೂರಾರು
ಎದೆಮುಟ್ಟಿ ಕದ ತಟ್ಟಿ ಮನದ ಮಾತಾಡುವ
ಸಹಭಾವವುಳ್ಳವರು ಒಂದಿಬ್ಬರು
-ಮಹೇಶ್ವರಿ.ಯು
ಪರಿಚಯ ಹಲವಾರು ಆತ್ಮೀಯರು ಕೆಲವರು ಎಂಬ ಉಕ್ತಿ ತಿನ್ನು ನೆನಪಿಸುತ್ತದೆ ನಿಮ್ಮ ಈ ತ್ರಿಪದಿ .. ಸಾಂಗತ್ಯ ಅಭಿನಂದನೆಗಳು.
ತ್ರಿಪದಿಗಳು ಮತ್ತು ಸಾಂಗತ್ಯಗಳು ಅರ್ಥಪೂರ್ಣವಾಗಿವೆ
ಚೆನ್ನಾಗಿದೆ ಮೇಡಂ, ಕೊನೆಯ ಸಾಲುಗಳು ಇಷ್ಟವಾದವು.
ಜೀವನ ಯಾತ್ರೆಯಲ್ಲಿ ಕಷ್ಟ ಸುಖಗಳ ತುಲನೆ, ಮಾನವನ ಆತ್ಮೀಯ ಸಂಬಂಧಗಳ ಗಣನೆಗಳ ಬಗ್ಗೆ ಸೊಗಸಾಗಿ ಮೂಡಿಬಂದಿಹ ಕವನ.