ಮೊರೆ
ಜಂತಿ ಮನೆಯ ಕಟ್ಟಿಸಿರುವೆ
ಕಿಟಿಕಿ ದ್ವಾರ ತೆರೆದೆ ಇರುವೆ
ಬಾ ಮನೆಗೆ ಬಾ
ಹುಳದ ಅವರೆಯನ್ನೆ ತರುವೆ
ಶಾಲಿ ಕಾಳು ಚೆಲ್ಲಿಬಿಡುವೆ
ಬಾ ಮನೆಗೆ ಬಾ
ನಾಲ್ಕೇ ಆದರೇನು ಸೆಳೆಯೆ
ಹತ್ತಿ ಬಿತ್ತಿ ಕೊಯ್ಯದಿರುವೆ
ಬಾ ಮನೆಗೆ ಬಾ
ಹಿತ್ತಿಲಲ್ಲಿ ಒಣಗಿ ತೃಣವು
ವಸತಿಯಾಗೆ ಕಾಯುತಿಹುದು
ಬಾ ಮನೆಗೆ ಬಾ
ಗೂಡು ಕಿತ್ತು ಎಸೆವುದಿಲ್ಲ
ಕೊಳಕು ಎಂದು ಮುನಿವುದಿಲ್ಲ
ಬಾ ಮನೆಗೆ ಬಾ
ಗದ್ದಲವಿದೆನದೆ ನಲಿವೆ
ಸುಕೃತ ಸುಪ್ರಭಾತವೆನುವೆ
ಬಾ ಮನೆಗೆ ಬಾ
ಚಿತ್ರ ನೋಡಿ ಬೇಸರಾಗಿ
ಅತ್ತಲೆಸೆದು ಹೋಗುತಿಹರು
ಬಾ ಮನೆಗೆ ಬಾ
ವಸ್ತು ಸಂಗ್ರಹದಿ ಕಂಡು
ಬೆಚ್ಚುತೆದೆಯು ಬಿರಿಯುತಿಹುದು
ಬಾ ಮನೆಗೆ ಬಾ
ಇರುವೆಯೆಲ್ಲೊ ಉಸಿರು ಹಿಡಿದು
ಚರಮಗೀತೆಯಾಗದಿರಲಿ
ಬಾ ಮನೆಗೆ ಬಾ
ಬೂದಿಯಿಂದ ಎದ್ದುಬರುವ
ಕವಿಸಮಯದ ಜೀವಿಯಿಲ್ಲ
ಗಳಹಲೇತಕೆ
ಎಣಿಕೆಗಳವೆ ಅಳಿಸಿ ಮೆರೆದ
ಮದದ ಅಟ್ಟಹಾಸ ಮರೆತು
ಅಳುವುದೇತಕೆ
ನುಂಗಿ ನೊಣೆದೆ, ವಿಷದ ಜ್ವಾಲೆ
ಬೆನ್ನು ಹಿಡಿಯೆ ದಿಗಿಲಿಗೀಗ
ಶರಣು ಎನುತಿಹೆ
ನಿಯಮ ಮೀರಲಿಲ್ಲ ತಾಯಿ
ನರನಿಲ್ಲದ ಜಗವ ಮಾಡು
ಬೇಡುತಿರುವೆವು
(ಶಾಲಿ = ಭತ್ತ)
— ರತ್ನ
Nice one
ಮಾನವನ ಮದದ ಅಟ್ಟಹಾಸದಿಂದ ನವೆಯುತ್ತಿರುವ ನಿಸರ್ಗ ಜೀವಿಗಳ ಬಗ್ಗೆ ಕಳಕಳಿ ತುಂಬಿದ ಭಾವನಾತ್ಮಕ ಕವನ.