ಕಂಗ್ಲೀಷ್–ಇಂಗ್ಲಿಷ್

Share Button

ನನ್ನ ಮಗ ಇನ್ನೂ ಎರಡು ವರ್ಷದವನಾಗಿದ್ದಾಗಲೇ, ನಾನೂ ನನ್ನ ಗಂಡ ಇಬ್ಬರೂ ಉದ್ಯೋಗಸ್ಥರಾದ್ದರಿಂದ ಮನೆಯಲ್ಲಿ ನೋಡಿಕೊಳ್ಳುವ  ಜನರಿಲ್ಲದೇ ಬಹುಬೇಗ ಒಂದು ಪ್ರೀ ಸ್ಕೂಲ್ ಗೆ ಸೇರಿಸಬೇಕಾಯಿತು. ಅಲ್ಲಿ ಅವನ ಮಿಸ್ ತುಂಬ ಸ್ನೇಹಮಯಿ, ಹಸನ್ಮುಖಿ,ಅಪಾರ ಹಾಸ್ಯಪ್ರಜ್ಞೆ ಯುಳ್ಳ ಲೀಲಾ ಮಿಸ್ ಬಹು ಬೇಗ ಅವನ ಮನ ಒಲಿಸಿಕೊಂಡು ಬಿಟ್ಟರು.ಹೋದ ಒಂದೆರಡು ತಿಂಗಳಲ್ಲಿ ಚೆನ್ನಾಗಿ ಅರಳು ಹುರಿದಂತೆ ಮಾತನಾಡಲು ,ಹಾಡು ಹೇಳಲು ಎಲ್ಲಾ ಕಲಿತು ಕೊಂಡು ಬಿಟ್ಟ.ಆದರೆ ಆತನ ಭಾಷೆ ಕನ್ನಡ-ಇಂಗ್ಲಿಷ್ ಎರಡೂ ಮಿಶ್ರವಾಗಿ ಒಂದು ಹೈಬ್ರಿಡ್ ಭಾಷೆಯಾಗಿ ಬಿಟ್ಟಿತು.ಎಷ್ಟೋ ಬಾರಿ ಏನು ಹೇಳ್ತಾ ಇದ್ದಾನೋ ತಿಳಿಯದೆ ನಗು ಬರುತ್ತಿತ್ತು.

ಒಮ್ಮೆ ಆತನನ್ನು ಊರಿಗೆ ಕರೆದು ಕೊಂಡು ಹೋದಾಗ ಅವನಿಗೆ ಹಳ್ಳಿಯ ವಾತಾವರಣ ಎಲ್ಲವೂ ಹೊಸದು. ಪ್ರಾಣಿ ಪಕ್ಷಿ ಎಲ್ಲದು ಬರಿ ಪುಸ್ತಕದಲ್ಲಿ ನೋಡಿದ್ದ ,ಈಗ ನಿಜವಾಗಿ ನೋಡುವಾಗ ಅವನಿಗೆ ಅಚ್ಚರಿಯೋ ಅಚ್ಚರಿ.ಎಲ್ಲವನ್ನು “ಇದೇನು,ಅದೇನು” ಅಂಥ ಕೇಳುತ್ತಾ,ಮುಟ್ಟಿ ನೋಡುತ್ತ,,ಚಪ್ಪಾಳೆ ತಟ್ಟುತ್ತ ಖುಷಿಯೋ ಖುಷಿ. ನಿಧಾನ ವಾಗಿ ಎಲ್ಲಾ ಪ್ರಾಣಿ ಪಕ್ಷಿ ಗಳ ಹೆಸರು,ವಸ್ತುಗಳ ಹೆಸರು ಎಲ್ಲಾ ಕನ್ನಡ ಇಂಗ್ಲಿಷ್ ನಲ್ಲೆಲ್ಲ ತಿಳಿಸಿ ಕೊಟ್ಟೆ. ಅವನು ತನ್ನ ಕಂಗ್ಲೀಷ್ ನಲ್ಲೆ ಎಲ್ಲದರ ಪರಿಚಯ ಮಾಡಿಕೊಂಡ.

ಅಲ್ಲಿ ಅವನ ವಯಸ್ಸಿನ ನನ್ನ ಕೊನೆ ಮಾವನ ಮಗಳು ಅವನಿಗೆ ಆಡಲು ಸಿಕ್ಕಿದಳು.ಅವಳು ಅಜ್ಜಿ ಜೊತೆ ಚೆನ್ನಾಗಿ ಆಡಿಕೊಂಡು ಯಾವ ಪ್ಲೇ ಹೋಂ ಸಹವಾಸಕ್ಕೂ ಹೋಗದೆ ಖುಷಿಯಾಗಿದ್ದ ಹುಡುಗಿ.ಅವಳಿಗೆ ಇವನ ಇಂಗ್ಲಿಷ್ ಪಾಠ ಶುರುವಾಯಿತು. ಅದೂ ಹೇಗೆ? ಒಮ್ಮೆ ಕೊಟ್ಟಿಗೆಯಲ್ಲಿ ಇಬ್ಬರು ಹಸು ಕರು,ಕುರಿ,ಕೋಳಿ ಎಲ್ಲಾ ನೋಡುತ್ತಾ ನಿಂತಿದ್ದಾರೆ.ಇವನು ಹೇಳಿದ್ದು “ಚಿನ್ನಿ ಹಸುಗೆ ಕನ್ನಡದಲ್ಲಿ ಕೌ ಅಂತಾರೆ ಗೊತ್ತಾ” ಅಂತ, ಇನ್ನೂ ಅವಳು ಸುಮ್ಮನಿದ್ದಾಳೆಯೇ “ಸಗಣಿಗೆ ಏನಂತಾರೆ”ಅಂದರೆ ಇವನ ಪ್ರಕಾರ ಅದು “ಅಂಬಾದು ಶಿಟ್ ಕಣೇ” ಕೇಳುತ್ತಿದ್ದ ನನ್ನ ಮಾವನಿಗೆ ನಗು ತಡೆಯಲಾರದೆ “ನೋಡು ನಿನ್ ಮಗ ಎಷ್ಟು ಚೆನ್ನಾಗಿ ಇಂಗ್ಲಿಷ್ ಪಾಠಮಾಡ್ತಾ ಇದ್ದಾನೆ” ಎಂದು ಅಣಕಿಸಿದರು. ನನಗೂ ನಗು ಬಂದು ತಮಾಷೆ ಎನಿಸಿದರೂ,ಒಂದು ರೀತಿಯ ವಿಷಾದ ಕೂಡ ಕಾಡದೇ ಇರಲಿಲ್ಲ.ನಮ್ಮ ಮನೆಮಾತು ನಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸದೇ ಇಂಗ್ಲಿಷ್ ಎಂಬ ಮಾಯಾಂಗನೆ ಹಿಂದೆ ಬಿದ್ದಿರುವ ನಾವೆಲ್ಲಾ ಮುಂದಿನ ಜನಾಂಗಕ್ಕೆ ಯಾವ ಭಾಷೆಯನ್ನ ಕೊಡುಗೆಯಾಗಿ ಕೊಡುತ್ತೆವೋ ಕಾಣೆ.

ಇಂದಿನ ಆಧುನಿಕ ವಿಜ್ಞಾನ ತಂತ್ರಜ್ಞಾನ ಗಳ, ಅಂತರ್ಜಾಲದ ಬಲೆ  ನಮ್ಮ ಭೂಮಿಯನ್ನ ಚೆನ್ನಾಗಿ ಸುತ್ತಿಕೊಂಡು ದಿನೇ ದಿನೇ  ಬಿಗಿಗೊಳಿಸುತ್ತ ಪ್ರಪಂಚವನ್ನು ಚಿಕ್ಕದಾಗಿಸುತ್ತಾ ಹೋಗುತ್ತಿದೆ. ನಮ್ಮ ಭೂಮಿಯೀಗ ಮಾನವನ ಬೆರಳ ತುದಿಯ ಒಂದು ಗೋಲಿಯಷ್ಟೇ. ಎಲ್ಲಿಗೆ ಹೊಡೆಯುವನೋ ಅಲ್ಲಿಗೆ ಬೀಳುವುದಷ್ಟೇ ಅದರ ಗುರಿ. ಇಂತಹ ಕನೆಕ್ಟೆಡ್ ಯುಗದಲ್ಲಿ ವಾಸಿಸುತ್ತಿರುವ ನಾವು ಅನಿವಾರ್ಯವೋ, ಇಲ್ಲಾ ಡಿಜಿಟಲ್ ಯುಗ ಸೃಷ್ಟಿಸಿರುವ ಅಧಿಕ ಹಣ ಗಳಿಕೆಯ ಉದ್ಯೋಗಾವಕಾಶಗಳಿಗೊ ಮಾರು ಹೋಗಿ ಎಲ್ಲರೂ ಇಂಗ್ಲಿಷ್ ನ ಮೋಹಕ್ಕೆ ಸಿಲುಕಿ ಹೋಗಿದ್ದೇವೆ.ಎಲ್ಲರಿಗೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು, ಪಟ ಪಟ ಇಂಗ್ಲಿಷ್ ನಲ್ಲಿ ಹುಳ್ಳಿ ಹುರಿದಂತೆ ಮಾತನಾಡಬೇಕು, ಓದು ಮುಗಿಸಿ ಒಳ್ಳೆ ಕೆಲಸ ಹಿಡಿದು ವಿದೇಶಕ್ಕೆ ಹಾರಬೇಕು, ಡಾಲರ್ ಯೂರೋ ಗಳಲ್ಲೆ ಕಮಾಯಿಸಬೇಕು ಅನ್ನೋ ಹಪಾಹಪಿಯೇ ನಮ್ಮಂತಹ ಮಧ್ಯಮ ವರ್ಗದ ಬಹುತೇಕ ಜನರದ್ದಾಗಿದೆ.

ಮಕ್ಕಳು ಶಾಲೆಯಲ್ಲಿ ಇಂಗ್ಲಿಷ್ ಮಾತನಾಡಿದರೆ ಸಾಲದು,ಹೊರಗಡೆ ವ್ಯವಹರಿಸುವುದು,ಮನೆಯಲ್ಲಿ ಮಾತನಾಡುವುದು ಎಲ್ಲವೂ ಇಂಗ್ಲಿಷ್ ನಲ್ಲೇ ಆಗಬೇಕು ,ಇಲ್ಲದಿದ್ದರೆ ಅವರ ಸಂಪರ್ಕ ,ಸಂವಹನ ಕೌಶಲ್ಯ ಸುಧಾರಿಸುವುದು ಹೇಗೆ,ನಾಳೆ ದಿನ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಇಂಟರ್ವ್ಯೂ ನಲ್ಲಿ ಧೈರ್ಯವಾಗಿ  ಉತ್ತರಿಸಿ ಕೆಲಸ ಗಿಟ್ಟಿಸದಿದ್ದರೆ ಹೇಗೆ? ಹಾಗಾಗಿ ಮೂರು ಹೊತ್ತು ಮಕ್ಕಳನ್ನು ಇಂಗ್ಲಿಷ್ ಮಾತನಾಡಲು ಗೋಳು ಹಾಕಿಕೊಳ್ಳುವ ಪೋಷಕರೂ ಇದ್ದಾರೆ. ನಾನಂತೂ ಈ ಬಗ್ಗೆ ಅಷ್ಟು ತಲೆ ಕೆಡಿಸಕೊಳ್ಳುವುದಿಲ್ಲ ,ಸ್ಕೂಲ್ನಲ್ಲಿ ಏನು ಕಲಿತರೋ ಕಲಿಯಲಿ, ಮನೆಯಲ್ಲಿ ಆರಾಮಾಗಿ ಇರಲಿ ಅನ್ನೋ ಮನೋಭಾವ ನನ್ನದು. ಆದರೆ ಒಂದು ದಿನ ನಾನು ಕೆಲಸ ಮಾಡುವ ಶಾಲೆಗೆ ಮಗಳನ್ನು ಕರೆದುಕೊಂಡು ಹೋದಾಗ,ನನ್ನ ಮಗಳು ಎಲ್ಲರೊಂದಿಗೂ ಚೆನ್ನಾಗಿ ಮಾತನಾಡಿಕೊಂಡು ಖುಷಿಯಾಗಿ ಕಾಲ ಕಳೆದಳು. ಸಂಜೆ ಹೊರಡುವ ಸಮಯ ಬಂದಾಗ, ನನ್ನ ಸಹೋದ್ಯೋಗಿಯೊಬ್ಬರು  “ನಿಮ್ಮ ಮಗಳು ಎಷ್ಟು ಚೆನ್ನಾಗಿ ಎಲ್ಲರ ಜೊತೆ ಹೊಂದಿಕೊಂಡಳು, ಎಷ್ಟು ಚೆನ್ನಾಗಿ ಹಳ್ಳಿ ಭಾಷೆ ಮಾತನಾಡುತ್ತಾಳೆ, ನನಗೆ ತುಂಬಾ ಇಷ್ಟವಾಯಿತು” ಅಂದಾಗ ನನಗೆ ಪಿಚ್ಚೆನಿಸಿತು.

“ಛೇ ಟೀಚರ್ ಆಗಿ ಮಕ್ಕಳಿಗೆ ಒಳ್ಳೆ ಭಾಷೆ ಕಲಿಸದಿದ್ದರೆ ಹೇಗೆ “ಅನ್ನಿಸಿ,ಮಕ್ಕಳಿಗೆ ಕಡ್ಡಾಯವಾಗಿ ಮನೆಯಲ್ಲಿ ಇಂಗ್ಲಿಷ್ ಮಾತನಾಡಬೇಕು ಎಂದು ಎಚ್ಚರಿಸಿ ಮಾತಾನಾಡಿಸಲು ತೊಡಗಿದೆ. ಒಂದೆರಡು ದಿನ ನನ್ನ ಕಾಟ ಸಹಿಸಿಕೊಂಡ ನನ್ನ ಮಕ್ಕಳು ನಂತರ ನನ್ನೊಡನೆ ಜಗಳಕ್ಕೇ ನಿಂತು ಬಿಟ್ಟರು “ಅಮ್ಮ ನೀನು ಇಂಗ್ಲಿಷ್ ನಲ್ಲಿ ಮಾತನಾಡಿಸಿದರೆ ನಮ್ಮಮ್ಮನೇ ಅಲ್ಲ ಅನ್ನಿಸುತ್ತೆ. ಸ್ಕೂಲ್ ನಲ್ಲಿ ಅಲ್ಲದೆ ಇಲ್ಲು ಕೂಡ ಆ ತಲೆನೋವು ಯಾರಿಗೆ ಬೇಕು. ಸ್ಕೂಲ್ ನಲ್ಲು ಮಿಸ್ ಕೇಳೋದಕ್ಕೆ ಉತ್ತರ ಹೇಳಬೇಕಾದರೆ ಮಾತ್ರ ನಾವು ಇಂಗ್ಲಿಷ್ ಬಳಸೋದು, ಇನ್ನು ಫ್ರೆಂಡ್ಸ್ ಹತ್ರಾನೂ ನಾವು ಕನ್ನಡನೆ ಮಾತಾಡೋದು, ಅವ್ರು ಎಲ್ಲಾ ನಮ್ಮ ಹಂಗೇನೆ ಮಾತಾಡೋದು. ನಿನ್ ಕಾಲಿಗೆ ಬೇಕಾದ್ರೂ ಬೀಳ್ತಿವಿ, ನಮ್ಮನ್ನು ಬಿಟ್ಬಿಡಮ್ಮ” ಎಂದಾಗ, ನಾನೂ ನಕ್ಕು ಸುಮ್ಮನಾದೆ.

ಆದರೆ ಬೆಂಗಳೂರಿಗೆ ಹೋದಾಗಲೆಲ್ಲ ಯಾವುದೇ ಮಾಲ್ ಅಥವಾ ದೊಡ್ಡ ಅಂಗಡಿ ಗಳಿಗೆ ಹೋದರೆ ಇಂಗ್ಲಿಷ್ ಇಲ್ಲದೆ ಬೇರೆ ಭಾಷೆ ಬಳಸುವುದೇ ಇಲ್ಲ.ಹಾಗಂತ ಅವರಿಗೆ ಕನ್ನಡ ಬರುವುದಿಲ್ಲ ಅಂತ ಏನೂ ಇಲ್ಲ,ಆದರೂ ನಾವು ಕನ್ನಡದಲ್ಲಿ ಕೇಳಿದರೆ ಇಂಗ್ಲಿಷ್ ನಲ್ಲಿ ಉತ್ತರ ಕೊಡುತ್ತಾರೆ. ಶುರುನಲ್ಲಿ ನನಗೆ ಸರಾಗವಾಗಿ ಇಂಗ್ಲಿಷ್ ಬಾರದೆ ಇರುವುದರ ಬಗ್ಗೆ ತುಂಬಾ ಮುಜುಗರ ವಾಗುತ್ತಿತ್ತು. ಆಮೇಲೆ ಒಂದು ದಿನ ಅನ್ನಿಸಿದ್ದು ನಾನು ಬದುಕುತ್ತಿರುವ ಪರಿಸರ,ಮನೆ, ಮಾಡುತ್ತಿರುವ ಸರ್ಕಾರಿ ಶಾಲೆಯ ಗಣಿತ ಟೀಚರ್ ಕೆಲಸ ಯಾವುದಕ್ಕೂ ಇಂಗ್ಲಿಷ್ ಅವಶ್ಯಕತೆ ಇಲ್ಲ. ಜೊತೆಗೆ ಎಲ್ಲೋ ವರ್ಷದಲ್ಲಿ ಒಂದೆರಡು ಬಾರಿ ಬೆಂಗಳೂರಿಗೆ ಹೋದರೆ ಎಲ್ಲೋ ಒಂದತ್ತು ನಿಮಿಷ ಯಾರಾದ್ರೂ ಅಂಗಡಿಯವರ ಹತ್ರ ಮಾತನಾಡಬೇಕಾಗಿ ಬರಬಹುದು. ಅಷ್ಟಕ್ಕೇ ಯಾಕೆ ತಲೆ ಕೆಡಿಸಿಕೊಳ್ಳುವುದು ಅನಿಸಿತು. ಈಗ ಯಾವುದೇ ಅಂಗಡಿ, ಮಾಲ್ ಗೆ ಹೋದರೂ ಕನ್ನಡದಲ್ಲೇ ನನಗೆ ಬೇಕಿದ್ದು ಕೇಳುತ್ತೇನೆ. ಒಂದೆರಡು ಕಡೆ “ಯಾಕ್ರೀ ಕನ್ನಡ ಬರೋಲ್ವ” ಅಂತ ದಬಾಯಿಸಿದ್ದೂ ಇದೆ.

ಒಮ್ಮೆಯಂತೂ ಬೆಂಗಳೂರಿನ ಒಂದು ದೊಡ್ಡ ಮಾಲ್ ಗೆ ಹೋದಾಗ ಜೊತೆಯಲ್ಲಿ ಬಂದವರೆಲ್ಲ ಬೇರೆ ಬೇರೆ ಶಾಪ್ ಗಳಿಗೆ ಚದುರಿ ಹೋಗಿ, ಕಾಲು ನೋವಿನಿಂದಾಗಿ ಅವರೊಂದಿಗೆ ಹೋಗಲಾರದ ನಾನು ಅಲ್ಲೇ ಒಂದು ಕಡೆ ಇದ್ದ ಕುರ್ಚಿಯಲ್ಲಿ ಕುಳಿತು ಸುತ್ತಾ ಮುತ್ತಾ ಓಡಾಡುತ್ತ ಇದ್ದವರು, ಅಕ್ಕ ಪಕ್ಕದ ಅಂಗಡಿಗಳ ನೋಡುತ್ತಾ ಕುಳಿತಿದ್ದಾಗ ನನ್ನ ಕಣ್ಣು ಅಲ್ಲೇ ಇದ್ದ ಒಂದು ಪುಸ್ತಕದ ಅಂಗಡಿ ಮೇಲೆ ಬಿತ್ತು. ಸರಿ ಒಂದು ಸ್ವಲ್ಪ ಹೊತ್ತು ಎಲ್ಲರೂ ಬರುವ ತನಕ ಕಾಲ ಕಳೆದರಾಯಿತು ಅಂದು ಕೊಂಡು ಒಳ ಹೊಕ್ಕೆ.
ಆದರೆ ಅಲ್ಲಿ ಸುತ್ತಾಡುತ್ತಾ ನೋಡಿದರೆ ಒಂದಾದರೂ ಕನ್ನಡ ಪುಸ್ತಕ ಕಣ್ಣಿಗೆ ಬೀಳಬಾರದ?.ಆಶ್ಚರ್ಯವೆನಿಸಿ ಅಲ್ಲಿದ್ದ ಮ್ಯಾನೇಜರ್ ಕೇಳಿದರೆ ಅವನೋ ನಿರ್ಭಾವುಕನಾಗಿ “ವಿ ಡೊಂಟ್ ಕೀಪ್ ಕನ್ನಡ ಬುಕ್ಸ್ ಮ್ಯಾಂ”ಎಂದಾಗ ಅಸಾಧ್ಯ ಸಿಟ್ಟು ಬಂದು “ಹಾಗಿದ್ರೆ ಬೆಂಗಳೂರಲ್ಲಿ ಯಾಕೆ ಅಂಗಡಿ ಇಟ್ಟಿದ್ದಿಯ,ಇಂಗ್ಲೆಂಡ್ ನಲ್ಲೊ ಅಮೆರಿಕದಲ್ಲೋ ಇಟ್ಕೋ ” ಅಂದ್ರೆ, ಆತ “ಏನ್ ಮಾಡೋದು ಮೇಡಂ ಜನ ಏನ್ ಕೇಳ್ತಾರೆ ಅದೇ ನಾವು ಮಾರ್ತಿವಿ,ಅದರಲ್ಲೇನು?” ಎಂದು ನನ್ನನ್ನೇ ಪ್ರಶ್ನಿಸಿದಾಗ ಮಾತು ಹೊರಡದೆ ಆಚೆ ಬಂದೆ.  ನಂತರ ಕುಳಿತು ಯೋಚಿಸಿದಾಗ ಆತನನ್ನು ಪ್ರಶ್ನಿಸುವ ನೈತಿಕ ಅಧಿಕಾರ ನನಗಿದೆಯೆ ಅನ್ನಿಸಿತು. ಏಕೆಂದರೆ ನನ್ನ ಮಕ್ಕಳೂ ಕೂಡ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಲ್ಲವೆ? ಈಗಿನ ಸಮಾಜದ ಒತ್ತಡಕ್ಕೆ ನಾನೂ ಒಳಗಾಗಿಲ್ಲವೆ ಅನಿಸಿತು.

-ಸಮತಾ.ಆರ್

17 Responses

  1. SmithaAmrithraj. says:

    ಸಮತಾ ಬರಹ ಹಿಡಿಸಿತು.

  2. Latha v.p. says:

    English vyamohadinda nanu horathagilla. Uthama lekhana

  3. km vasundhara says:

    ಬರಹ ಬಹಳ ಮಾರ್ಮಿಕವಾಗಿದೆ. ಕನ್ನಡವನ್ನು ಕನ್ನಡದವರೇ ಕೊಲ್ಲುತ್ತಿದ್ದೇವೆ. ನಾವುಗಳೇ ನಿಜವಾದ ಅಪರಾಧಿಗಳು.

  4. dayananddiddahallidc@gmail.com says:

    Good one

  5. Roopa shree a says:

    Wonderful

  6. Veena says:

    Uttama baraha. Nyjatheyinda kuudide.

  7. ನಯನ ಬಜಕೂಡ್ಲು says:

    ಮೊದಲನೆಯದಾಗಿ ನಿಮ್ಮ ಕನ್ನಡ ಪ್ರೀತಿ ಇಷ್ಟ ಆಯಿತು. ಇನ್ನೊಂದು ನಮ್ಮ ತನವನ್ನು ಬೇರೆಯವರ ಸಲುವಾಗಿ ಬಿಟ್ಟು ಕೊಡುವ ಅಗತ್ಯ ಇಲ್ಲ ಅನ್ನುವ ನಿರ್ಧಾರ. ಕೆಲವೊಮ್ಮೆ ಬೇರೆ ಭಾಷೆಗಳನ್ನು ಅರಿತಿರಬೇಕಾದದ್ದು ಅನಿವಾರ್ಯ,ಅದರ ಅರ್ಥ ನಮ್ಮ ಭಾಷೆಯನ್ನು ನಿರ್ಲಕ್ಷಿಸಬೇಕು ಅಂತ ಅಲ್ಲ. ಚೆನ್ನಾಗಿದೆ ಬರಹ

  8. Malavika,R says:

    ಬರಹ ಅತ್ಯುತ್ತಮ ವಾಗಿದೆ

  9. Hema says:

    ನಿಜ, ಕಂಗ್ಲಿಷ್ ಇಂದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ…ಚೆಂದದ ಬರಹ.

  10. ಬಿ.ಆರ್.ನಾಗರತ್ನ says:

    ವಾಸ್ತವಿಕ ಚಿತ್ರಣ.ಕನ್ನಡಿಗರೇ ಕನ್ನಡವನ್ನು ಉಪೇಕ್ಷೆ ಮಾಡುವ ಹಂತವನ್ನು ನೋಡಿ ಅಯ್ಯೋ ಎನಿಸುತ್ತಿದೆ.ಹಾಗೆಂದು ನಮ್ಮ ತನವನ್ನು ಬಿಟ್ಟುಕೊಡಬಾರದು.ಕನ್ನಡ ನಾಡಲ್ಲಿ ಕನ್ನಡ ದ ಪರಿಸ್ಥಿತಿ . ಧನ್ಯವಾದಗಳು.

  11. Krishnaprabha says:

    ಬಹಳ ಚೆನ್ನಾಗಿ ಬರೆದಿದ್ದೀರಿ… ನಾವೇನೂ ಮಾಡಲಾರದ ಸ್ಥಿತಿಯಲ್ಲಿ ಇದ್ದೇವೆ… ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತು ಮುಂದೆ ಕಾಲೇಜಿಗೆ ಸೇರಿದಾಗ ತಾವು ಅನುಭವಿಸಿದ ಕಷ್ಟಗಳು ನಮ್ಮ ಮಕ್ಕಳಿಗೆ ಆಗದಿರಲಿ ಅನ್ನುವ ಭಾವನೆ ಹೆತ್ತವರಿಗೆ (ನನ್ನನ್ನೂ ಸೇರಿ)

    • ಸಮತಾ says:

      ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  12. ಶಂಕರಿ ಶರ್ಮ says:

    ನಿಜ..ಯಾವುದೇ ಭಾಷೆ ಕಲಿತರೂ, ಮನೆಯಲ್ಲಿ ಮನೆ ಮಾತೇ ಚಂದ. ಪೋಷಕರು ಮಕ್ಕಳಿಗೆ ಮನೆಯಲ್ಲಿ ಮಾತೃಭಾಷೆಯಲ್ಲಿ ಸಂವಹನ ಮಾಡಿದರೆ ಅದು ಖಂಡಿತಾ ಸಾಧ್ಯ ಅನ್ನಿಸುತ್ತದೆ. ಸೊಗಸಾದ ಕಂಗ್ಲಿಷ್ ಬರಹ.

  13. Kamalakshi says:

    ಇಂಗ್ಲೀಷ್ ವ್ಯಾಮೋಹ ಎಲ್ಲಾರಿಗೂ ಇರುತ್ತೆ. ಆದರೆ ಕನ್ನಡ ಇಷ್ಟವಾದ ಸ್ಪಷ್ಟವಾಗಿ ಮಾತನಾಡುವ ಭಾಷೆ.
    Samatha you are a good writer. Keep it up.

  14. Kamalakshi says:

    ಇಂಗ್ಲೀಷ್ ವ್ಯಾಮೋಹ ಎಲ್ಲರಿಗೂ ಇರುತ್ತದೆ ಆದರೆ ನಮ್ಮ ಮಾತೃಭಾಷೆ ನಮಗೆ ಇಷ್ಟ..
    Samatha you are a good writer. Keep it up

  15. Kamalakshi says:

    You will become a good writer in future..Keep it up.
    ನನಗೂ ಇಂಗ್ಲೀಷ್ ಕಲಿಯಬೇಕು ಎಂಬ ಆಸೆ ಇದೆ.

  16. Anonymous says:

    Chennagi bardiddira samatha

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: