ವೈದ್ಯ ದೇವೋಭವ..!

Share Button

ಮಾನವನ ಜೀವನಕ್ಕೆ ಧನ ಸಂಪತ್ತು ಮುಖ್ಯವೇ ಹೌದು. ಆದರೆ, ಅದಕ್ಕಿಂತಲೂ ಬೆಲೆಬಾಳುವ ಸಂಪತ್ತು ಇನ್ನೊಂದಿದೆ,ಅದೇ ಆರೋಗ್ಯ ಸಂಪತ್ತು! ರೋಗ ರುಜಿನಗಳು ದೇಹವನ್ನು ಆವರಿಸಿದಾಗ ಅವುಗಳ ಉಪಶಮನಕ್ಕೆ ವೈದ್ಯರ ನೆರವು ಅತ್ಯಗತ್ಯ..    ರೋಗಿಗಳಿಗೆ ವೈದ್ಯರೇ ದೇವರು. ಅದಕ್ಕೇ ಇದೆ ಈ ಮಾತು..’ವೈದ್ಯೋ ನಾರಾಯಣೋ ಹರಿ:’ 

ಇದಕ್ಕಾಗಿ, ಪಶ್ಚಿಮ ಬಂಗಾಳದ ಪ್ರಸಿದ್ಧ ಡಾ. ಬಿಪಿನ್ ಚಂದ್ರರಾಯ್ ಅವರ ಹೆಸರಲ್ಲಿ ಪ್ರತೀ ವರ್ಷ ಜುಲೈ1ರಂದು ನಮ್ಮ ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು 1991 ರಿಂದ ಆಚರಿಸಲಾಗುತ್ತದೆ.  ಡಾ.ರಾಯ್ ಅವರು ಪಶ್ಚಿಮ ಬಂಗಾಳದ ಎರಡನೆಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವುದೂ ಅಲ್ಲದೆ, ಅವರ ಅಪ್ರತಿಮ ಸೇವೆಗಾಗಿ 1961ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ವನ್ನು ನೀಡಿ ಗೌರವಿಸಲಾಯಿತು. ಅವರು, ವೈದ್ಯಕೀಯದಲ್ಲಿ FRCS, MRCP ನಂತಹ ಎರಡೆರಡು ಉನ್ನತ ಪದವಿಗಳನ್ನು ಜೊತೆಗೆ ಒಂದೇ  ಬಾರಿಗೆ ಪಡೆದ ಅಪರೂಪದ ಮೇಧಾವಿಗಳು. ವಿಶೇಷವೆಂದರೆ, ಅವರ ಜನ್ಮದಿನ ಜುಲೈ 1 ರಂದು.. ಅಂತೆಯೇ ಸರಿಯಾಗಿ 80ವರ್ಷಗಳ ಬಳಿಕ ಜುಲೈ 1 ರಂದೇ ಅವರ ದೇಹಾಂತ್ಯವಾಯಿತು. ಅದಕ್ಕಾಗಿ ಇದೇ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವರ್ಷ ಪೂರ್ತಿ ರೋಗಿಗಳ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ ವೈದ್ಯರು ಸಮಾಜಕ್ಕೆ ನೀಡುವ ಕೊಡುಗೆ  ಅಪಾರ ಹಾಗೂ ಜಗತ್ತಿನಲ್ಲಿಡೀ ಇವರ ಸೇವೆಯು ಅತೀ ಅಗತ್ಯವೂ ಹೌದು. ಅದಕ್ಕಾಗಿ, ಅವರ ಸೇವೆಯನ್ನುಈ ದಿನ ನೆನೆದು ಗೌರವಿಸಲಾಗುತ್ತದೆ, ಅಲ್ಲದೆ ಅಗಲಿದ ಮಹಾಚೇತನಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುತ್ತದೆ. ಆದರೂ ಕೆಲವೊಮ್ಮೆ ಕೈಮೀರಿ ನಡೆಯುವ ವೈದ್ಯರ ಮೇಲಿನ ಹಲ್ಲೆಯಂತಹ ಅಹಿತಕರ ಘಟನೆಗಳು ಇಡೀ ಸಮಾಜಕ್ಕೇ ಕಪ್ಪು ಚುಕ್ಕೆಯನ್ನಿಡುವಂತಿದೆ. ಆದ್ದರಿಂದಲೇ ಕಳೆದ ವರ್ಷದ ಈ ದಿನದ ಘೋಷಣಾ ವಾಕ್ಯವು ಇಂತಹ ಹಿಂಸಾತ್ಮಕ ನಡವಳಿಕೆಯ ವಿರುದ್ಧವೇ ಆಗಿತ್ತು.

 

ಸುಮಾರು 30-40 ವರ್ಷಗಳಷ್ಟು ಹಿಂದಿನ ಕಾಲದ ವೈದ್ಯಕೀಯ ವ್ಯವಸ್ಥೆಯು ಈಗಿರುವಂತೆ ಸುವ್ಯವಸ್ಥಿತವಾಗಿಲ್ಲದಿದ್ದರೂ ಮಾನವೀಯ ಸಂಬಂಧಗಳು ವಿಪುಲವಾಗಿದ್ದುವು. ಯಾವುದೇ ಕುಟುಂಬಕ್ಕಾದರೂ ಆತ್ಮೀಯ ಕುಟುಂಬ ವೈದ್ಯರೊಬ್ಬರಿರುತ್ತಿದ್ದರು. ಅವರು ಕುಟುಂಬದ ಪ್ರತಿಯೊಂದು  ಆಗುಹೋಗುಗಳನ್ನೂ ಬಲ್ಲವರಾಗಿದ್ದು, ಬರೇ ಆರೋಗ್ಯದ ಸಮಸ್ಯೆಯಲ್ಲದೆ ಇತರ ಸಮಸ್ಯೆಗಳಿಗೂ  ಉಚಿತ ಸಲಹೆಗಾರರಾಗಿರುತ್ತಿದ್ದರು. ಮನೆಯಲ್ಲಿರುವ ಹಣ್ಣು ಹಂಪಲು, ತರಕಾರಿ, ವಿಶೇಷ ತಿಂಡಿಗಳಲ್ಲೂ ಅವರಿಗೆ ಪಾಲು ಇರುತ್ತಿತ್ತು. ಏನೇ ಅನಾರೋಗ್ಯವಿದ್ದರೂ ವೈದ್ಯರ ನಗುಮುಖದ ಸಮಾಧಾನದ ಮಾತುಗಳಿಂದಲೇ ಅರ್ಧಕ್ಕರ್ಧ ಮಾಯ! ರೋಗಿಯ ಸಮಸ್ಯೆಯು ವೈದ್ಯರು ಮುಟ್ಟಿ ನೋಡಿಯೇ ಅರಿತು ಬಿಡುತ್ತಿದ್ದರು.   ಶರೀರದಲ್ಲಿನ ಯಾವುದೇ ತೊಂದರೆಗಳಿಗೂ ಅವರಲ್ಲಿ ಔಷಧಿ ತಯಾರಿರುತ್ತಿತ್ತು.. ಅದರಲ್ಲೇ ಉಪಶಮನವೂ ಆಗುತ್ತಿತ್ತು. ಉಲ್ಬಣಿಸಿದ ಸಮಸ್ಯೆಗಳಿಗೆ ಮಾತ್ರ ಆಸ್ಪತ್ರೆಗೆ ಹೋಗಲು ಸೂಚಿಸುತ್ತಿದ್ದರು.

 

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಈಗ ಸಾವಿರಾರು ವೈದ್ಯರು.. ನೂರಾರು ಆಸ್ಪತ್ರೆಗಳು.. ಲೆಕ್ಕಕ್ಕೆ ನಿಲುಕದಷ್ಟು ರೋಗಗಳು! ನಮ್ಮ ಪ್ರತಿಯೊಂದು ಅಂಗಗಳಿಗೂ ಒಬ್ಬೊಬ್ಬರು ತಜ್ಞ ವೈದ್ಯರು! ಕುಟುಂಬ ವೈದ್ಯರೆಂಬುವವರು ಇಲ್ಲವೇ ಇಲ್ಲ ಎನ್ನಬಹುದು. ಆಸ್ಪತ್ರೆಗೆ ಹೋದರೆ ರೋಗ ಪರೀಕ್ಷೆಗಳಿಗಾಗಿ ಹತ್ತಾರು ಕಡೆಗಳಿಗೆ ಓಡಾಟ! ಒಂದು ಚಿಕ್ಕ ತೊಂದರೆಗೂ ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಹತ್ತಾರು ಪರೀಕ್ಷೆಗಳು. ಎಲ್ಲವೂ ಯಂತ್ರಮಯ.. ಮಾನವೀಯ ಸಂಬಂಧಗಳು ಅವನತಿ ಹೊಂದುತ್ತಿರುವುದು ಕಂಡು ಬರುತ್ತಿದೆ.ಆದರೂ ಸದ್ಯದ ಪರಿಸ್ಥಿಯಲ್ಲಿ, ಭೀಕರ ಕೊರೋನ ಅಂಟುರೋಗದ ಕಪಿ ಮುಷ್ಟಿಗೆ ಸಿಲುಕಿದ ರೋಗಿಗಳ ಚಿಕಿತ್ಸೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾ ಸಮಾಜಕ್ಕೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ವೈದ್ಯರ ಹಾಗೂ ಶುಶ್ರೂಷಕಿಯರ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸಲೇಬೇಕು.. ಈ  ವೈದ್ಯರ ದಿನವನ್ನು ಅವರಿಗೆ ಸಮರ್ಪಿಸಲೇಬೇಕು.

ವೈದ್ಯಕೀಯ ಪದ್ಧತಿಯಲ್ಲೂ ವಿವಿಧತೆ.. ಅಲೋಪತಿಯ ಜೊತೆ ಆಯುರ್ವೇದ, ಹೋಮಿಯೋಪತಿ ಇತ್ಯಾದಿ. ವೈದ್ಯಕೀಯದ ಬಗ್ಗೆ ತಿಳಿಯದಿದ್ದ ನನಗೆ ಅಯಾಚಿತವಾಗಿ ಅದರ ನಂಟು ಅಂಟಿದ್ದು ವಿಶೇಷವೇ ಎನ್ನಬಹುದು. ನನ್ನ ಅಮ್ಮ ಹತ್ತು ವರುಷಗಳಷ್ಟು ಕಾಲ ಅವಲಂಬಿತರಾಗಿಯೇ ಇರಬೇಕಾದ ಪರಿಸ್ಥಿತಿಯಲ್ಲಿ, ನಾನು ಶುಶ್ರೂಷಕಿಯಾಗಿ ಹಾಗೂ ಪುಟ್ಟ ವೈದ್ಯೆಯ ಪಾತ್ರವನ್ನೂ ಜಂಟಿಯಾಗಿ ನಿರ್ವಹಿಸಬೇಕಾಯಿತು. ನಿವೃತ್ತ ಜೀವನದ ಈ ಸಮಯದಲ್ಲಿ ಸಂಸ್ಥೆಯೊಂದರಿಂದ ಬಡವರಿಗಾಗಿರುವ ಸಂಘಟಿಸುತ್ತಿರುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಅಲ್ಲಿಯ ವೈದ್ಯರ ಸಹಾಯಕಿಯಾಗಿ ಸೇವೆ ಸಲ್ಲಿಸುವ ಸದವಕಾಶವು ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಬರುವ ಜನರ ಬಗ್ಗೆ ತಿಳಿಯುವಂತಾಯಿತು. ಅಲ್ಲಿಯ ಕೆಲವೊಂದು ಸಲಹೆಗಳು ನಮಗೂ ಉಪಯೋಗಕ್ಕೆ ಬರುವಂತಹುಗಳಾದರೆ, ಕೆಲವೊಮ್ಮೆ ನಾವೇ ಅವರಿಗೆ ಸಲಹೆಗಳನ್ನು ಕೊಡಲು ವೈದ್ಯರು ಪ್ರೋತ್ಸಾಹಿಸುವುದರಿಂದ ನಮಗೂ ಕೆಲವು ಮಾಹಿತಿಗಳು ಲಭ್ಯವಾಗುತ್ತಿರುತ್ತವೆ..ಮುಗ್ಧ ಬಡ ಜನರ ಅಸಹಾಯಕ ಪರಿಸ್ಥಿತಿಯ ಪ್ರತ್ಯಕ್ಷ ದರ್ಶನವೂ ಲಭ್ಯವಾಗುತ್ತಿರುತ್ತದೆ! 

ಆರೋಗ್ಯವೇ ಭಾಗ್ಯವೆಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಇಂದಿನ ದಿನಗಳಲ್ಲಿ, ರೋಗ ಬರದಂತೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಹಾದಿಯಲ್ಲಿ ಉತ್ತಮ ಆಹಾರ, ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ವೈದ್ಯರನ್ನು ಸಂಪರ್ಕಿಸುವ ಪ್ರಮೇಯವೇ ಬಾರದಂತೆ ಜಾಗರೂಕರಾಗಿರಲು ಕಲಿಯಬೇಕಿದೆ. 

-ಶಂಕರಿ ಶರ್ಮ, ಪುತ್ತೂರು.

5 Responses

  1. ASHA nooji says:

    ವೈದ್ಯಕೀಯಪ್ರಪಂಚದವರ್ಣನೆ ಸುಪರ್‍ AKKO

  2. ಬಿ.ಆರ್.ನಾಗರತ್ನ says:

    ಉತ್ತಮ ಮಾಹಿತಿಯೊಂದಿಗೆ ಅಂದಿನ ಇಂದಿನ ಮಾನವೀಯ ಸಂಬಂಧಗಳ ವಿಶ್ಲೇಷಣೆ ಇದೆ.ಹಾಗೆ ನಾವು ಸಮಾಜಮುಖಿ ಯಾಗಿ ಬದುಕು ನೆಡೆಸುವ ರೀತಿಯನ್ನು ಪುಟ್ಟ ಲೇಖನದಲ್ಲಿ ಪಡಿಮೂಡಿಸಿದ್ದಾರೆ.ಅಭಿನಂದನೆಗಳು.

  3. ನಯನ ಬಜಕೂಡ್ಲು says:

    Very nice article. ಇವತ್ತು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ವೈದ್ಯರು ರೋಗಿಗಳ ಸೇವೆಗೆ ನಿಂತಿದ್ದಾರೆ. ಇಂತಹವರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಿದರೂ ಕಮ್ಮಿ

  4. Krishnaprabha says:

    ಈ ಕೊರೋನಾದ ಕಾರಣವಾಗಿ, ಚಿಕಿತ್ಸೆ ನೀಡುವ ವೈದ್ಯರೂ ಕೂಡಾ ಸೋಂಕು ತಗುಲಿ, ಸಾವಿಗೀಡಾಗುತ್ತಿರುವುದು ನೋವಿನ ಸಂಗತಿ

  5. ಶಂಕರಿ ಶರ್ಮ says:

    ಬರಹವನ್ನು ಓದಿ, ಮೆಚ್ಚಿ, ಪ್ರತಿಕ್ರಯಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: