ಉಳಿಕೆ
ಮಾತು ಉಳಿಸುವುದು
ರಾತ್ರಿಯಲ್ಲಿ ಬರಬಹುದಾದ
ಶ್ರೀಕೃಷ್ಣನಿಗೆ ಅನ್ನ ಉಳಿಸಿದಂತಲ್ಲ
ಎಂದಿನದೋ ಪ್ರತಿಜ್ಞೆಗಳಿಗೆ
ಮಣಿಕಟ್ಟು ಕತ್ತರಿಸಿ ರಕ್ತ ಬಸಿಯುವುದೂ ಅಲ್ಲ
ಅದೊಂದು ಮಾತಿಗೆ
ನೇಣುಬಿದ್ದು ಜತೆಗಿದ್ದವರ
ಜೀವಹಿಂಡುವುದು
ಕೊರಗಿ ಸೊರಗಿ
ಹಿಡಿತಕ್ಕೆ ಸಿಗದ
ಸೀಮೆಸುಣ್ಣ ಆಗುಳಿವುದು
ಎಲ್ಲೋ ಜಿನುಗುವ
ಮಿಲಿ ಲೆಕ್ಕದ ಕರುಣಹನಿಗೆ
ಬಾಯ್ಬಿಟ್ಟು ಕಾಯುವುದು
ಉಹೂಂ
ಇದಾವುದೂ ಅಲ್ಲ
ಮಾತು ಎದೆಯೊಳಗಿಷ್ಟು
ಉಳಿದಿರುವಾಗಲೇ
ಹೂಗಿಡದಂತೆ ಜೋಪಾನ
ಮಾಡಿ
ಎದೆನೆಲದ ಹಸಿ ಆರದಂತೆ
ಪೊರೆಯುವುದು
ಹಸುಗೂಸೊಂದು ಜೋಲಿಯಲಿ
ನಿದ್ದೆಜೊಂಪಿನಲಿ
ಮೆಲುನಗುವಾಗ
ಎಚ್ಚರದಲಿ ಹೆಜ್ಜೆಯೂರಿದಂತೆ
ಗೆಜ್ಜೆಯೂ ಸದ್ದು ಮಾಡದಂತೆ
ನಡೆಯುವುದು
ಮಾತು ಉಳಿಸುವುದೆಂದರೆ
ಮೌನದಲಿ ಗೀತೆ ಮಿಡಿದಂತೆ
ಒಲುಮೆಯಲಿ ಒಂದಾದಂತೆ
– ಎಸ್.ನಾಗಶ್ರೀ
ಚೆನ್ನಾಗಿದೆ ಕವನ
ಇತ್ತ ವಚನದ ಶ್ರೇಷ್ಠತೆ ಏನೆಂಬುದನ್ನು ತಿಳಿಯಪಡಿಸುವ ಕವನ
ಕವನ ಇಷ್ಟವಾಯಿತು.
‘ಎದೆನೆಲದ ಹಸಿ ಆರದಂತೆ ಪೊರೆಯುವುದು’ ವಾಹ್… ಅದ್ಭುತ ಸಾಲುಗಳು.
ಸೊಗಸಾದ ನವ್ಯ ಕವನ.