ಸ್ವಯಂ ದೀಪ
ಏನಾದರೂ ಬರೆಯಬೇಕೆಂಬ ಅಮಲು,ಮತ್ತು
ಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,
ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…
ಅತ್ತ ಕವಿಯಾಗುವ ಆಸೆಯೂ ಅಳಿಯದೆ….
ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬ
ಕುದುರೆಗಳ ಲಗಾಮು ಹಿಡಿದು …..
ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆ
ಸ್ಪುರಿಸುವ ಒಂದೆರಡು ಸಾಲು ಕವನ ,
ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆ
ಬೆನ್ನಟ್ಟಲಾಗದೆ….ಆ ಕ್ಷಣ
ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತ
ನನ್ನ ಭಾವಗಳ ಬಸಿರು ಹರಿದು……
ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆ
ಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತು
ಬಿಸಿಯುಂಡ ಹಾಲಿನ ಮೇಲೆ ಮೃದುವಾದ ಕೆನೆ ತೇಲುವಂತೆ,
ಮೈತುಂಬ ಮುಳ್ಳು ತುಂಬಿಕೊಂಡ ಗಿಡದಲ್ಲೂ ಹೂವು ಬಿಟ್ಟಿತ್ತು.
ಸಾಕಿನ್ನು ವೃಥಾ ಪ್ರಲಾಪ..ಬೆಳಕಿಗಾಗಿ ಅನ್ಯರ ಕಾಯದೇ
ನಿಂತಿರುವೆ ಕೈಯಲ್ಲೊಂದು ಪುಟ್ಟ ಹಣತೆ ಹಿಡಿದು…
– ವಿದ್ಯಾ ಶ್ರೀ ಎಸ್ ಅಡೂರ್.
ಸ್ವಂತಕ್ಕೆ ಸಮಯ ಎಂಬುದು ಬಹುಮಹಿಳೆಯರ ಪಾಲಿಗಿಲ್ಲ. ದ್ವಂದ್ವವನ್ನು ಹಾಗೂ ಮನಸ್ಸಿನ ನಿರ್ಧಾರವನ್ನು ಚೆನ್ನಾಗಿ ತಿಳಿಸಿದ್ದೀರಿ.ಕೊನೆಯ ಎರಡುಸಾಲು ಮನತಟ್ಟಿತು.
ಸೂಪರ್. ಪ್ರತಿಯೊಬ್ಬ ಗೃಹಿಣಿಯ ಮನದಾಳದ ಮಾತುಗಳು.
ಸುಪರ್ ಕವನ.ಧನ್ಯವಾದಗಳು
‘ಬೆಳಕಿಗಾಗಿ ಅನ್ಯರ ಕಾಯದೇ ನಿಂತಿರುವೆ ಕೈಯಲ್ಲೊಂದು ಪುಟ್ಟ ಹಣತೆ ಹಿಡಿದು’..ಇದು ಸ್ವಾಭಿಮಾನದ ಪ್ರತೀಕ. ಕವನ ಇಷ್ಟವಾಯಿತು.
ಧನ್ಯವಾದಗಳು ಮೇಡಂ
ಸ್ವಾಭಿಮಾನ ತುಂಬಿದ ಬದುಕಿನ ಸ್ವಯಂ ಗೀತೆಯೇ ಹೆಣ್ಣು… ಸೊಗಸಾದ ಕವನ.