ದಿವ್ಯ ಜ್ಞಾನ ನೀಡು.
ದೇವಾ…
ನಿನ್ನ ದಿವ್ಯಜ್ಞಾನದ ಜ್ಯೋತಿಯು
ನಮ್ಮೀ ಕಣ್ಣುಗಳಲ್ಲಿ ತುಂಬಿ ಬೆಳಕಾಗಲಿ
ಮನಕಡರಿರುವ ಪೊರೆಯದು ತೊಲಗಲಿ
ನಿನ್ನ ಕರುಣೆಯ ಬೆಳಕು ನಂದಾದೀಪವಾಗಲಿ
ನೇಸರನ ಬೆಚ್ಚನೆಯ ಒಲವಿಗೆ
ಕರಿಮೋಡ ಕರಗಿ ಪ್ರೇಮಧಾರೆಯಾಗುವಂತೆ
ಬಾಳಲ್ಲಿ ಮುಸುಕಿರುವ ಮೌಢ್ಯದ
ತಮವನ್ನಳಿಸಿ ನೆಲೆ ನೀಡೆಯಾ…
ಅಲೆಯುತಿಹೆನು ಕಗ್ಗತ್ತಲ ಕಾನನದಲಿ
ವಿಷಜಂತುಗಳಿರುವೆಡೆಯಲ್ಲಿ! ರಣಹದ್ದುಗಳ
ನೆರಳಿನಲ್ಲಿ ಅಂಧಕಾರದ ಅಮಲು ನೆತ್ತಿಯ
ಸುಳಿಯಲ್ಲಿ ಅಡಗಿದೆ ಕಣ್ಕಟ್ಟು ಮಾಡುತ್ತಿದೆ
ಅಲೆಅಲೆಯಾಗಿ ತೇಲಿ ಬರುತಿದೆ ಪ್ರಣವನಾದ
ಪ್ರಾಣವಾಯುವಿನಲ್ಲಿ ಅದೇನೋ ಸದ್ದು ಸಡಗರ
ದುಂಧುಭಿ ಮೊಳಗಲಿದೆ ಅಂತರಾಳದ ಕದನಕ್ಕೆ
ಒಳಿತನ್ನೇ ಮಾಡೆಂದೆ ಬಳುವಳಿ ನೂರಾರು ತಂದೆ
ಧೂರ್ತಲೋಕದೊಳು ಮೂರ್ತರೂಪ ತಳೆದೆ
ಸಟೆಯನ್ನೇ ನುಡಿವ ಜನರೊಳು ಮೂಕನಾದೆ
ಸಕಲವೂ ನನ್ನದೆನ್ನುವವರ ಕಂಡು ಹಸನ್ಮುಖಿ
ವಿಷವಾಯುವದೆಲ್ಲವ ಹೀರಿದೆ ಕಡುಗಪ್ಪು ಶಿಲೆಯಾದೆ…
– ಚಿನ್ನು ಪ್ರಕಾಶ್ , ಶ್ರೀರಾಮನಹಳ್ಳಿ
ಜ್ಞಾನದ ಬೆಳಕಿನ ಹುಡುಕಾಟ,
ಬದುಕೆಂಬ ರಣಭೂಮಿಯಲ್ಲಿ ಹೋರಾಟ. Nice one
ಕಷ್ಟ ಕಾರ್ಪಣ್ಯಗಳೇ ತುಂಬಿದ ಈ ಕತ್ತಲ ಪಥದಲ್ಲಿ ಸಾಗಲು ದೈವ ಕಾರುಣ್ಯದ ಬೆಳಕ ದೀವಿಗೆಯ ಅಗತ್ಯದ ಬಗೆಗೆ ಮನದುಂಬಿ ಬರೆದ ಕವನ ಮನಮುಟ್ಟುವಂತಿದೆ..ಧನ್ಯವಾದಗಳು.