ಅಪ್ಪ…! ಒಂದು ಸಂಭ್ರಮಲೋಕ
ಆಗಬಲ್ಲನು ಕಠೋರತೆಯಲು ಅಂತಃಕರಣಿ
ಜೀವಂತಿಕೆಯ ನಿರ್ಮಾತೃನಿವನು
ಗೊತ್ತಿಲ್ಲ ಜಗಕೆ…! ಸಹಿಸಿಕೊಂಡಿಹನು
ಎಷ್ಟೊಂದು ಪ್ರಹಾರಗಳ
ಬದುಕಿನ ಜೋಳಿಗೆ ತುಂಬಿಸಲು
ತಿರುಗುವನು ಹೊತ್ತುಕೊಂಡು
ಹಿಂದಿರುಗುವನು ಮಕ್ಕಳ ಲೋಕದೆಡೆಗೆ
ಹರಡುತಲಿದೆ ಮಕ್ಕಳ ಪ್ರಪಂಚ
ಕುಗ್ಗುತ್ತಲೇ ಇರುವನ್ಯಾಕೆ ಅಪ್ಪ
ಭಾರವಾದ ನೊಂದ ಮನಸಿನಲಿ
ನೋವಾಗುವುದು ಸರಿಯೇ…!
ಅರಗಳಿಗೆಯ ನಿಷ್ಠುರತೆಯಲಿ
ಕೊನೆಯಾಗದೇ ಉಳಿಯುವದು
ವಾತ್ಸಲ್ಯತೆಯ ಸಂಭ್ರಮಲೋಕ
ಜಗತ್ತಿನ ಸುಂದರ ತೋಟಗಾರ ಅಪ್ಪ
ಬೆಳೆಸುವನು ಸಂಸಾರ ಸಸ್ಯಕಾಶಿಯನು
ಹಸಿರು ತುಂಬಿದ ಕಣ್ಣುಗಳಲ್ಲಿ
ಹರಿಸುವನು ಸಾಮರ್ಥ್ಯದ ರಕ್ತ
ಬೇರುಗಳಲ್ಲಿ ಪರಿಶ್ರಮದ ಬೆವರು
ಉಸಿರಾಗಿಸುವನು ಆತ್ಮವಿಶ್ವಾಸವನು
ಗುರಿ ಮುಟ್ಟಿಸಬಲ್ಲ ಗುರುದೇವನಿವನು
-ರಾಘವೇಂದ್ರ ದೇಶಪಾಂಡೆ, ಹೊಸಪೇಟೆ
ಅಪ್ಪನ ಭಾವನೆ, ಜವಾಬ್ದಾರಿ ಉತ್ತಮವಾಗಿದೆ
ಉತ್ತಮ ವಾಗಿ ಮೂಡಿಬಂದಿದೆ ರಾಘವೇಂದ್ರ ದೇಶಪಾಂಡೆ…
ಅಪ್ಪ ಎಂದರೆ ಅಚ್ಚರಿಯ ಲೋಕವೂ ಹೌದು. ಚೆನ್ನಾಗಿದೆ ಕವನ
ಸುಂದರವಾಗಿ ಮೂಡಿ ಬಂದಿದೆ
ಅಪ್ಪನ ನಿರ್ಮಲ ಪ್ರೀತಿಗೆ ಸೊಗಸಾದ ಕವನದ ಕಾಣಿಕೆ..ಧನ್ಯವಾದಗಳು.