ಲಾಕ್ ಡೌನ್ ಆಗದ ಹಕ್ಕಿ
ಹೊರ ಅಂಗಳದಲ್ಲಿ ಬೈಕು
ನನ್ನ ಹೊರದೆ ಹೊರ ಹೋಗದೆ
ನಿಂತಲ್ಲೆ ನಿಂತೂ ನಿಂತು
ಹತ್ತೆಂಟು ಹಕ್ಕಿ ಸ್ನೇಹ ಬೆಳೆಸಿತು
ದಿನ ಬೆಳಗುಸಂಜೆ ಎಷ್ಟೋ ಬಣ್ಣ
ಪುಚ್ಛ ಹಾಡು ಕೊರಳ ಜೋಡಿ
ಆಟ ಬೈಕು ಕನ್ನಡಿಗಳೆ ಒಡನಾಡಿ
ಕಾಗೆ ಕೂಡಾ ಕನ್ನಡಿ ಇಣುಕಿ
ತನ್ನ ಸೌಂದರ್ಯಕ್ಕೆ ಮಾರು
ಹೋಗಿ ಕರೆಯಿತು ಬಳಗ ಕೂಗಿ
ಚಿಕ್ಕ ಹಕ್ಕಿಗಳು ಕಾರು ಬಾನೆಟ್ಟ ಸಂದು
ಮೂಲೆ ಶೂ ಮಾಡಿಕೊಂಡವು ಗೂಡು
ಹಸಿರು ಹೂ ಗಿಡ ಬಳ್ಳಿ ಬೈಕು ಕಾರು
ಒಂದಾಗಿ ಬಾಂಧವ್ಯ ಹೆಣೆದು
ಹೊರಾಂಗಣ ಈಗ ಪುಟ್ಟ ಕಾಡು
ಬಂದ ಅತಿಥಿಗಳೆಲ್ಲ ಈಗ ಬಂಧುಗಳು
ಹೆಸರು ತಿಳಿಯಲು ಇದೆಯಲ್ಲ ಗೂಗಲ್ಲು!
ಕಳಿಂಗ ಕೀಚುಗ ಪೀರ ಟುವ್ವಿ ಕಬ್ಬಕ್ಕಿ
ಕುಟ್ರ ಕವುಜಗ ಚಿಟ್ಟು ಸಿಪಿಲೆ ಸೂರಕ್ಕಿ
ಎಲ್ಲ ಹೆಕ್ಕಿಯೂ ಯಾವುದು ನಮ್ಮ ಹಕ್ಕಿ!?
ಜೋಡಿಗಳು ಹೆಣೆದ ಗೂಡಲ್ಲಿ
ಇಟ್ಟೀತೆ ಮೊಟ್ಟೆ? ಕೊಟ್ಟೀತೆ ಕಾವು?
ಒಡೆದು ಬಂದ ಮರಿ ಕೇಳೀತೆ ಗುಕ್ಕು
ಕಿವಿ ತಲೆ ಮನಸಲ್ಲಿ ಇದೇ ಗುಂಗು
ಒಳಗೆ ಮಗು ಕಿಟಕಿ ಬಳಿ ಕುಣಿದು ಚಪ್ಪಾಳೆ
ಹಕ್ಕಿ ಕಿವಿ ನಿಮಿರಿ ಚಿಲಿಪಿಲಿ
ಆಗಾಗ ಒಳ ನೋಡಿ
ಬರಲೇನು ಒಳಗೆ?
ಬದಲೇಕೆ ಹೀಗೆ? ಕೇಳೀತು
ಆಸೆಗಣ್ಣಿಂದ ಮಗುವೊಟ್ಟಿಗೆ ನಿಂತ
ಮೊನ್ನೆಯ ವ್ಯಾಧ… ನಾನು!
– ಅನಂತ ರಮೇಶ್
ಮಾನವರೆಲ್ಲಾ ಮನೆಯಲ್ಲಿ ದಿಗ್ಬಂಧನದಲ್ಲಿರುವಾಗ , ಪ್ರಕೃತಿಯ ಇತರ ಜೀವಿಗಳು ಸ್ವಚ್ಛಂದದಿಂದ ಜೀವಿಸುತ್ತಿರುವುದನ್ನು ನೋಡಲು ಸಿಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ…ಚಂದದ ಕವನ.