ಸಾಹೇಬರು ಇದ್ದಾರೇನ್ರಿ… ?

Share Button

ನಾನು ಸರ್ಕಾರಿ ಕಚೇರಿಗಳಿಗೆ ಹೋದಾಗಲೆಲ್ಲ ಅಲ್ಲಿಗೆ ಬರುವ ಜನರು ಅಟೆಂಡರನನ್ನೋ,ಮತ್ತಾರನ್ನೋ ಸಾಹೇಬರು ಇದ್ದಾರೇನ್ರಿ ಎಂದು ಕೇಳಿದಾಗ ಸಾಹೇಬರು ಈ ಪದ ನನಗೆ ಅಪ್ಯಾಯಮಾನವಾಗಿ ಕೇಳಿಸುತ್ತದೆ. ಹೀಗಾಗಿ ಸಾಹೇಬರು ಪದ ನನ್ನಲ್ಲಿ ಚಿಂತನೆ ಮೂಡಿಸಿತು. ಸಾಹೇಬರು ಶಬ್ದದಲ್ಲಿ ಅದೆಷ್ಟು ವಿಶಾಲ ಅರ್ಥ ಇದೆಯಲ್ಲ ಎನಿಸಿತು. ಸಾಹೇಬರು ಎಂದರೆ ದೊಡ್ಡವರು ಎಂಬುದು ಸಾಮಾನ್ಯ ಅರ್ಥ.ಸಾಹೇಬ ಸಾಬರೂ ಆಗುತ್ತಾರೆ, ಸಾಬೀಯೂ ಆಗುತ್ತಾರೆ, ಸಾಹೀಬರೂ ಆಗುತ್ತಾರೆ,ಸಾಬಜಿಯೂ ಆಗುತ್ತಾರೆ.ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟದ್ದು.

ಸಾಹೇಬ ಅಥವಾ ಸಾಹೀಬ ಶಬ್ದ ಕನ್ನಡದ್ದಲ್ಲ.ಮೂಲತಹ ಪರ್ಶಿಯನ್. ಅಲ್ಲಿಂದ ಉರ್ದು,ಹಿಂದಿ. ನಂತರ ಅದು ದೇಸೀತನ ಪಡೆದುಕೊಂಡು ಎಲ್ಲ ಭಾರತೀಯ ಭಾಷೆಗಳಲ್ಲೂ ರಾರಾಜಿಸುತ್ತಿದೆ. ಚೋದ್ಯವೆಂದರೆ ಇಂಗ್ಲೀಷ್ನಲ್ಲೂ ಸಾಹೇಬ ಪದ ಬಳಕೆಯಲ್ಲಿದೆ. ಬಹುಶ ಇಂಗ್ಲೀಷರು ಬಾರತಕ್ಕೆ ಕಾಲಿರಿಸಿದಾಗ ಇಲ್ಲಿ ಬಳಕೆಯಲ್ಲಿದ್ದ ಸಾಹೇಬ ಶಬ್ದ ಅವರನ್ನು ಆಕರ್ಷಿಸಿರಬೇಕು.ಇದರಲ್ಲೆನೋ ವಿಶೇಷತೆ ಇದೆಂದು ಅವರಿಗನ್ನಿಸಿರಬೇಕು.ಅದಕ್ಕವರು ಇದನ್ನು ತಮ್ಮದಾಗಿಸಿಕೊಂಡರು.ಅದರ ಪರಿಣಾಮವಾಗಿ ಈ ದೇಸಿ ನೆಲಕ್ಕೆ ಪರಕೀಯರಾಗಿ ಬಂದ ಬ್ರಿಟೀಷರೇ ಪರಂಗಿ ಸಾಹೇಬರಾಗಿ ಬಿಟ್ಟರು. ಅವರು ದೊಡ್ಡವರಾದರು, ದೊಡ್ಡ ಸಾಹೇಬರಾದರು. ನಾವು ಅವರ ಗುಲಾಮರಾದೆವು, ಅಡಿಯಾಳಾದೆವು. ನೋಡಿ, ಇದು ಸಾಹೇಬ ಪದದ ಮಹಾನತೆ.

ಅಧಿಕಾರಿ, ಒಡೆಯ, ಯಜಮಾನ, ಎಂದೆಲ್ಲ ಅರ್ಥ ನೀಡುವ ಸಾಹೇಬ ಪದ ದೊಡ್ಡವರಿಗೆ ಕೊಡುವ ಮರ್ಯಾದೆಯ, ಗೌರವದ ಶೈಲಿ‌ಎಂದೇ ಹೇಳಬಹುದು. ಆದರೆ ಇದನ್ನು ಬಳಸುವ ಬಗೆ ಇದೆಯಲ್ಲ ಅದು ಮಾತ್ರ ಭಿನ್ನ, ವಿಭಿನ್ನ.

ನಾಮಪದವಾಗಿ, ವಿಶೇಷಣವಾಗಿ ನಮ್ಮಲ್ಲಿ ರೂಢಿಯಲ್ಲಿರುವ ಸಾಹೇಬ ನಿಜಕ್ಕೂ ವಿಶಿಷ್ಟ ಅರ್ಥ ಕೊಡುತ್ತದೆ.ಹೆಸರುಗಳ ಮುಂದೆ ಸಾಹೇಬತನ ಬಂದಾಗ ಅವರು ದೊಡ್ಡವರು ಎಂಬುದಷ್ಟೇ ಅಲ್ಲ ಅವರು ಹಿಂದುವೋ ಮುಸ್ಲಿಮರೋ ಎಂದು ಗೊಂದಲಕ್ಕೆ ಬೀಳುವ ಸಾಧ್ಯತೆಗಳಿವೆ.ಸಾಹೇಬತನದ ಹೆಸರಿನವರು ಜಾತ್ಯತೀತರಾಗಿ ಮೆರೆಯುವದುಂಟು. ನಾನಾಸಾಹೇಬ, ಭಾವುಸಾಹೇಬ, ಪಾಪಾಸಾಹೇಬ, ಅಪ್ಪಾಸಾಹೇಬ, ಅಣ್ಣಾಸಾಹೇಬ, ಕಾಕಾಸಾಹೇಬ, ಬಾಪುಸಾಹೇಬ, ತಾತ್ಯಾಸಾಹೇಬ, ದಾದಾಸಾಹೇಬ, ಭಯ್ಯಾಸಾಹೇಬ, ಬಾಬಾಸಾಹೇಬ, ಮಾಮಾಸಾಹೇಬ, ರಾಜಾಸಾಹೇಬ, ಬಾಳಾಸಾಹೇಬ ಇವೇ ಮೊದಲಾದವುಗಳು ಹಿಂದೂ ಹೆಸರಿನ ಸಾಹೇಬರು. ಆದರೆ ಈ ಹೆಸರುಗಳ ಮೂಲ ಹೆಸರುಗಳೇ ಬೇರೆ ಇರುತ್ತವೆ. ಮನೆಯವರು ಅಥವಾ ನೆರೆ-ಹೊರೆಯವರು, ಗೆಳೆಯರು ಪ್ರೀತಿಯಿಂದ, ಅಚ್ಛಾದಿಂದ ಇಂಥ ಅಡ್ಡಹೆಸರಿನಿಂದ ಕರೆಯಲಾರಂಭಿಸಿದ ಮೇಲೆ ಈ ಹೆಸರುಗಳೇ ಅವರ ಕಾಯಂ ನಿಕ್ ನೇಮ ಯಾ ಪೆಟ್‌ನೇಮ ಆಗಿಬಿಟ್ಟು ಅವರು ಈ ಹೆಸರುಗಳಿಂದಲೇ ಜನರ ಬಾಯಲ್ಲುಳಿದುಬಿಡುತ್ತಾರೆ. ನಾರಾಯಣ-ನಾನಾಸಾಹೇಬ, ಪಾಪಣ್ಣ-ಪಾಪಾಸಾಹೇಬ, ಭಾವು-ಭಾವುಸಾಹೇಬ, ಅಪ್ಪಣ್ಣ, ಅಪ್ಪಯ್ಯ-ಅಪ್ಪಾಸಾಹೇಬ, ಬಾಬು-ಬಾಬಾಸಾಹೇಬ, ಬಾಳು-ಬಾಳಾಸಾಹೇಬ ಆಗಿಬಿಟ್ಟಿರುತ್ತಾರೆ. ಅಪ್ಪ,ಅಣ್ಣನಿಗೆ ಇನ್ನೂ ಹೆಚ್ಚಿನ ಮರ್ಯಾದೆ ಕೊಡಬೇಕೆಂದು ಅವರು ಅಣ್ಣಾಸಾಹೇಬ, ಅಪ್ಪಾಸಾಹೇಬ ಎಂದು ಪರಿವರ್ತಿತರಾಗಿದ್ದಾರೆ. ಕರೆಯುವಾಗ ಸಾಹೇಬತನದಲ್ಲಿಯ ಹೇ ಲೋಪವಾಗಿ ಅಣ್ಣಾಸಾಬ, ಅಪ್ಪಾಸಾಬ, ಕಾಕಾಸಾಬ, ಬಾಳಾಸಾಬ, ನಾನಾಸಾಬ ಆಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಇಂಥ ಸಾಹೇಬರು ಬಹಳ. ಈ ಸಾಹೇಬತನ ನೆರೆಯ ಮಹಾರಾಷ್ಟ್ರದ ಕೊಡುಗೆ. ಮಹಾರಾಷ್ಟ್ರದ ಅನೇಕ ಸಂಸ್ಥಾನಗಳು ಈ ಭಾಗದ ಜತೆಗೆ ಘನಿಷ್ಠ ಸಂಬಂಧ ಹೊಂದಿದ್ದರಿಂದ ಇಲ್ಲಿಯ ಜನರ ಹೆಸರಿಗೆ ಸಾಹೇಬತನ ಅಂಟಿಕೊಂಡಿತು. ಮಹಾರಾಷ್ಟ್ರದಲ್ಲಿ ಸಂಸ್ಥಾನಿಕರನ್ನೆಲ್ಲ ಸಾಹೇಬ ಎಂದು ಗೌರವದಿಂದ ಕರೆಯುವ ಪದ್ಧತಿಯಿದೆ. ನಾನಾಸಾಹೇಬ ಪೇಶ್ವೆ ಪೇಶ್ವೆ ಸಂಸ್ಥಾನದ ಅತಿರಥ. ಈ ಸಂಸ್ಥಾನದೊಂದಿಗೆ ಸಂಬಂಧ ಹೊಂದಿದ್ದ ನರಗುಂದದ ಬಾಬಾಸಾಹೇಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎದ್ದು ಕಾಣುವ ಹೆಸರು.ಅಲ್ಲಿಯ ಸಂಸ್ಥಾನಗಳ ಮಹಿಳಾಮಣಿಗಳನ್ನೂ ಕೂಡ ಸಾಹೇಬ ಎಂದೇ ಗೌರವಯುತವಾಗಿ ಸಂಬೋಧಿಸುವದಿದೆ. ರಾಣಿ ಸಾಹೇಬ ಇದು ಆಗಿನ ಎಲ್ಲ ರಾಣಿಯರಿಗೆ ಸಂಬೋಧನೆಯಾದರೆ ರಾಜನ ತಾಯಿಯನ್ನು ತಾಯಿಸಾಹೇಬ, ಮಾಸಾಹೇಬ, ಮಾಯಿಸಾಹೇಬ ಎಂದು ಕರೆಯಲಾಗುತ್ತಿತ್ತು. ಇತರ ಹಿರಿಯ ಮಹಿಳೆಯರನ್ನು ಅಕ್ಕಾಸಾಹೇಬ ಎಂದು ಕರೆದು ತುಂಬು ಮರ್ಯಾದೆ ಕೊಡುವದಿದೆ. ಮಹಾರಾಷ್ಟ್ರದಲ್ಲಿ ದೊಡ್ಡವರನ್ನು, ಹಿರಿಯರನ್ನು ಮಾಮಾಸಾಹೇಬ, ಕಾಕಾಸಾಹೇಬ ಎಂದೂ ಕರೆಯುವದುಂಟು. ಅವರೇನೂ ಮಾಮಾನೋ, ಕಾಕಾನೋ ಆಗಿರಬೇಕೆಂದಿಲ್ಲ. ಅದು ಪ್ರೀತಿ-ಗೌರವದ ಸಂಕೇತ. ಈಗಲೂ ಸಹ ಉತ್ತರ ಕರ್ನಾಟಕದ ಹಲವೆಡೆ ದೊಡ್ಡ ಮನೆತನದ ಮಹಿಳೆಯರನ್ನು ಗೌರವದಿಂದ ಸಾಹೇಬ ವಿಶೇಷಣದೊಂದಿಗೆ ಕರೆಯಲಾಗುತ್ತದೆ.

ಮೈಸೂರು ಕಡೆ ಸಾಹೇಬರು ಕಡಿಮೆ.ಅಲ್ಲಿ ಸಾಹೇಬರೆಲ್ಲ ಸಾಬ ಅಥವಾ ಸಾಬಿ ಆಗಿರುತ್ತಾರೆ.ನಾಡಿನ ನೀರದೊರೆ ಅಬ್ದುಲನಜೀರಸಾಹೇಬ ನಜೀರಸಾಬರಾಗಿಬಿಟ್ಟರೆ ಜನಸಾಮಾನ್ಯರ ಬಾಯಲ್ಲಿ ನೀರುಸಾಬ ಆದರು. ಜಟಕಾ ಒಡೆಯ ಹುಸೇನಸಾಹೇಬ ಹುಸೇನ ಸಾಬಿ ಆಗಿಬಿಟ್ಟಿದ್ದಾನೆ. ಅಲ್ಲಿ ಸಾಹೇಬರೆಲ್ಲ ಕನ್ನಡೀಕರಣಗೊಂಡು ಸಾಬಿ ಆಗಿಬಿಟ್ಟಿದ್ದಾರೆ. ಸಾಹೇಬರನ್ನೆಲ್ಲ ಕನ್ನಡೀಕರಣಗೊಳಿಸಿದ ಮೈಸೂರಿಗರಿಗೆ ಧನ್ಯವಾದ ಹೇಳಬೇಕು.

ಮುಸ್ಲಿಮರಲ್ಲಿಯಂತೂ ಬಹುತೇಕರು ಸಾಹೇಬರೇ. ದೊಡ್ಡಮನೆತನದವರೆಲ್ಲ ಸಾಹೇಬರೇ. ಹುಸೇನಸಾಹೇಬ, ಪೀರಸಾಹೇಬ, ಗಜಬರಸಾಹೇಬ, ನನ್ನುಸಾಹೇಬ, ಶೌಕತಸಾಹೇಬ, ಶೇಖಸಾಹೇಬ, ಮೀಯಾಸಾಹೇಬ, ಅಲಿಸಾಹೇಬ, ಮೀರಾಸಾಹೇಬ, ಮಹಮ್ಮದಸಾಹೇಬ, ನಜೀರಸಾಹೇಬ, ಗೌಸಸಾಹೇಬ, ಮಕ್ತುಮಸಾಹೇಬ, ನಬೀಸಾಹೇಬ, ಫಕರುಸಾಹೇಬ, ದಸ್ತಗಿರಸಾಹೇಬ ಹೀಗೆ ಸಾಹೇಬರ ಸಂತಾನ ಮುಂದುವರೆಯುತ್ತದೆ. ಕರೆಯುವಾಗ ರೂಢಿಯಲ್ಲಿ ಇವರೆಲ್ಲ ಸಾಬರೇ. ಪೀರಸಾಹೇಬ-ಪೀರಸಾಬ, ನನ್ನುಸಾಹೇಬ-ನನ್ನುಸಾಬ ಹೀಗೆ. ಮೂಲಹೆಸರು ಫಕರುದ್ದೀನ ಇದ್ದದ್ದು ಫಕರುಸಾಹೇಬ ಆಗಿ ಫಕರುಸಾಬ, ಶೌಕತ ಅಲಿ ಇದ್ದವನು ಶೌಕತಸಾಹೇಬ ಆಗಿ ಶೌಕತಸಾಬ ಎಂದು ಕರೆಸಿಕೊಳ್ಳುತ್ತ ಆಡುಮಾತಿನಲ್ಲಿ ಸಾಬರಾಗಿಬಿಟ್ಟಿದ್ದಾರೆ. ನಮ್ಮೂರಲ್ಲಿ ಸಾಹೇಬರ ಸಂಖ್ಯೆ ಹೆಚ್ಚು,ನನಗೂ ಅವರದು ಹೆಚ್ಚಿನ ಸಂಪರ್ಕ.ಒಮ್ಮೊಮ್ಮೆ ನನಗೆ ಇವರ ಹೆಸರು ನೆನಪಾಗುವದೇ ಇಲ್ಲ.ಆಗೆಲ್ಲ ಏನ್ ಸಾಹೇಬ ಎಂದು ಪ್ರೀತಿಯಿಂದ ಕರೆಯುತ್ತೇನೆ.ಅವರು ಫುಲ್ ಖುಷ್.

ಸಾಹೇಬ ಶಬ್ದ ಒಂದು ತೆರದಲ್ಲಿ ಸಾಮಾಜಿಕ ನ್ಯಾಯದಂತೆ,ಹಿಂದೂ ಮುಸ್ಲಿಮ್ ಭಾವೈಕ್ಯತೆಯಂತೆ ಗೋಚರಿಸುತ್ತದೆ.ರಾಜ ಮನೆತನಗಳಿಂದ ಹಿಡಿದು ಸಾಮಾನ್ಯ ಕುಟುಂಬಗಳವರೆಗೂ ರಾರಾಜಿಸುವ ಇದು ಸಮಾಜದಲ್ಲಿ ಸಾಮಾಜಿಕ ನ್ಯಾಯ ಒದಗಿಸುವಂತಿದೆ.ಹಿಂದೂ ಮುಸ್ಲಿಮ್ ಇಬ್ಬರಲ್ಲೂ ಕಾಣುವ ಇದು ಇವರಿಬ್ಬರ ಮಧ್ಯದ ಸಾಮರಸ್ಯದ ಕೊಂಡಿಯೂ ಆಗಿ ಮೆರೆಯುತ್ತಿದೆ.ಸಾಮಾಜಿಕ ನ್ಯಾಯ,ಬಾವೈಕ್ಯತೆಯ ಪ್ರತೀಕವಾಗಿರುವ ಸಾಹೇಬ ಪದ ನನಗೆ ಬಹುಪ್ರಿಯ, ವಿಶೇಷ ಗೌರವಾದರ.

ಉತ್ತರಭಾರತದಲ್ಲಿ ನೋಡಬೇಕು ಈ ಸಾಹೇಬಗಿರಿಯನ್ನು.ಅಲ್ಲಿ ಎಲ್ಲರೂ ಸಾಬಜಿಯೇ. ದಿಲ್ಲಿ ಅಥವಾ ಮತ್ತಿತರ ನಗರ, ಪಟ್ಟಣಗಳಲ್ಲಿಯ ಯಾವದೇ ರಾಜಕಾರಣ , ಅಧಿಕಾರಿಗಳ ಕಚೇರಿ, ಮನೆಗಳಿಗೆ ಹೋದರೆ ಅಲ್ಲಿ ಪರಿಚಾರಕರು ನಿಮ್ಮನ್ನು ಆಯಿಯೆ ಸಾಬಜಿ‌ ಎಂದೇ ಗೌರವದಿಂದ ಒಳಕರೆಯುತ್ತಾರೆ. ಸಾಬಜಿ ಬಾಹರ ಗಯೆ ಹೈ ಎಂದೋ ಅಥವಾ ಸಾಬಜಿ ಅಂದರ ಹೈ ಅಭಿ ಆಯೆಂಗೆ, ಆಪ ಬೈಠಿಯೇ ಸಾಬಜಿ ಎಂದು ಬಂದವರನ್ನೆಲ್ಲ ಸಾಬಜಿ ಎಂದು ಸಂಬೋಧಿಸಿ ಮರ್ಯಾದೆ ನೀಡುತ್ತಾರೆ. ಬಂದವರನ್ನೆಲ್ಲ ಅತಿಥಿಗಳಂತೆ ಕಂಡು ಗೌರವಿಸುವ ಸತ್ಸಂಪ್ರದಾಯ ಅಲ್ಲಿದೆ.

ಇನ್ನು ಸರ್ಕಾರಿ ಕಚೇರಿಗಳಲ್ಲಿ ನೋಡಬೇಕು ಈ ಸಾಹೇಬತನದ ಠೀವಿಯನ್ನು.ಇಲ್ಲಿ ಸಾಹೇಬತನದ ಕಾಣಿಕೆ ಬ್ರಿಟೀಷರದು. ಇಲ್ಲಿ ಸಾಹೇಬತನದ ಸಾಮಾಜಿಕ ನ್ಯಾಯವನ್ನು ನಿಷ್ಠೆಯಿಂದ ಪಾಲಿಸಲಾಗುತ್ತದೆ. ಇಲ್ಲಿ ಅಟೆಂಡರನಿಂದ ಹಿಡಿದು ಆ ಕಚೇರಿಯ ಮೆಲಾಧಿಕಾರಿಯವರೆಗೂ ಎಲ್ಲರೂ ಸಾಹೇಬರೇ. ದೊಡ್ಡಸಾಹೇಬರು, ಸಣ್ಣ ಸಾಹೇಬರು, ನಡವಿನ ಸಾಹೇಬರು ಹೀಗೆ ಸಾಹೇಬತನದ ಸಾಮಾಜಿಕ ನ್ಯಾಯವಿದೆ. ಕಚೇರಿಗಳಿಗೆ ಬರುವ ಜನಸಾಮಾನ್ಯರಿಗೆ ಮೊದಲು ಎದುರಾಗುವವರೆಂದರೆ ಅಟೆಂಡರುಗಳೇ. ಜನರ ಪಾಲಿಗೆ ಇವರೇ ಸಾಹೇಬರು. ಜನರಿಗೆ ತಮ್ಮ ಕೆಲಸ ಆಗಿ ಕಾಗದ ಕೈ ಸೇರುವದು ಇವರಿಂದಲೇ. ಕೆಲವೊಂದು ಸಲ ಈ ಸಾಹೇಬರೇ ಅತ್ಯಂತ ಉಪಯುಕ್ತ ಸಾಹೇಬರಾಗಿರುತ್ತಾರೆ. ಅಂತೆಯೇ ಜನರಿಗೆ ಇವರೇ ಮೊದಲು ಸಾಹೇಬರು. ನಂತರ ಉಳಿದ ಸಾಹೇಬರು.

ತಾಲೂಕು ಮಟ್ಟದ ಕಚೇರಿಗಳಲ್ಲಿಯೂ ಇದೆ ಸಾಹೇಬಗಿರಿ.ಅzರಲ್ಲೂ ತಹಸೀಲದಾರ ಕಚೇರಿಗೆ ಬನ್ನಿ.ಅಟೆಂಡರ ಸಾಹೇಬರು,ಎಸ್.ಡಿ,ಎಫ್.ಡಿ ಸಾಹೇಬರು.ಶಿರಸ್ತೇದಾರ ಸಾಹೇಬರು,ರೇಶನ್ ಕಾರ್ಡ ಸಾಹೇಬರು,ಪೆನ್ಶನ್ ಸಾಹೇಬರು.ನಂತರವೇ ತಹಸೀಲದಾರ ಸಾಹೇಬರು.ಇನ್ನು ತಹಸೀಲದಾರರಿಗೆ ಎ.ಸಿ., ಡಿ.ಸಿ.ಸಾಹೇಬರಾದರೆ ಇವರಿಗೆ ವಿಭಾಗಾಧಿಕಾರಿಗಳು ಹಾಗೂ ವಿಧಾನಸಭೆ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು,ಕಾರ್ಯದರ್ಶಿಗಳು ಸಾಹೇಬರು.ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲಿಯವರಿಗೆ ಸಾಹೇಬರಾದರೆ ಇವರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಹೇಬರು,ಇವರಿಗೆ ರಾಜ್ಯ ಮಟ್ಟದ ಅಧಿಕಾರಿಗಳು ಸಾಹೇಬರು.ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಇವರಿಗೆಲ್ಲ ದೊಡ್ಡ ಸಾಹೇಬರು.

ಜನಸಾಮಾನ್ಯರಿಗೆ ಪೊಲೀಸರು ಎಂದರೆ ಗೌರವ. ಅದು ಭಯಪೂರಿತವಾಗಿದ್ದಿರಲೂ ಬಹುದು. ಸಾಮಾನ್ಯ ಪೊಲೀಸನು ಕೂಡ ಜನರಿಗೆ ಸಾಹೇಬನೇ. ಪೊಲಿಸರಿಗೆ ಹೆಡ್ ಕಾನಸ್ಟೇಬಲ್, ಎ. ಎಸ್. ಆಯ್. ಸಾಹೆಬರು.ಇವರಿಗೆ ಪಿ.ಎಸ್.ಆಯ್.ಸಾಹೆಬರು. ಪಿ‌ಎಸ್.ಆಯ್.ಗೆ ಸಿ.ಪಿ.ಆಯ್.ಸಾಹೆಬರಾದರೆ ಅವರಿಗೆ ಡಿ.ಎಸ್.ಪಿ.,ಎಸ್.ಪಿ ಸಾಹೆಬರು.ಇವರುಗಳಿಗೆ ಡಿ.ಆಯ್.ಜಿ.,ಆಯ್.ಜಿ ಸಾಹೇಬರು.ನ್ಯಾಯಾಲಯಗಳಲ್ಲಿ ವಕೀಲರಿಗೆ ಮುನ್ಸೀಫ ಸಾಹೇಬರಾದರೆ ಡಿ.ಜೆ.,ಸಿ.ಜೆಯವರು ದೊಡ್ಡ ಸಾಹೇಬರು. ಬಸ್ಸುಗಳಲ್ಲಿಯೂ ಸಾಹೇಬಕಿ ಮೆರೆದಿದೆ.ಪ್ರಯಾಣಿಕರಿಗೆ ಕಂಡಕ್ಟರು, ಡ್ರೈವ್ಹರುಗಳು ಸಾಹೇಬರು. ಸಾಹೇಬರ ಈ ಬಸ್ ಎಲ್ಲಿ ಹೋಗ್ತದರಿ ಎಂದು ಕಂಡಕ್ಟರುಗಳನ್ನು ಕೇಳುತ್ತಾರೆ. ಇಲ್ಲಿ ನಾವ ಇಳಿತೇವರಿ ಒಂಸ್ವಲ್ಪ ಬಸ್ ನಿಂದರಸ್ಸರಿ ಡ್ರೈವರ ಸಾಹೇಬರ ಎಂದು ಹಳ್ಳಿ ಪ್ರಯಾಣ ಕರು ಡ್ರೈವ್ಹರನನ್ನು ಗೋಗರೆಯುವದನ್ನು ನೋಡಬೇಕು. ಖಾಸಗಿ ಇರಲಿ,ಸರ್ಕಾರಿ ಇರಲಿ ನಮ್ಮ ಜನ ಡಾಕ್ಟರುಗಳನ್ನು ಸಹ ಸಾಹೇಬರೆ ಎಂದೇ ಸಂಬೋಧಿಸುತ್ತಾರೆ. ಏನಾರೆ ಮಾಡಿ ಡಾಕ್ಟರ ಸಾಹೇಬರ ನಮ್ಮವರ ಜೀವಾ ಉಳಸರಿ ಎಂದು ಪರಿಪರಿಯಾಗಿ ಡಾಕ್ಟರರನ್ನು ಬೇಡಿಕೊಳ್ಳುವ ದೃಷ್ಯ ಕರುಳು ಹಿಂಡುತ್ತದೆ.ಹೀಗೆ ಸಾಹೇಬತನ ನಮ್ಮ ಜೀವನವನ್ನೇ ಆವರಿಸಿದೆ.

ರಾಜಕಾರಣಗಳನ್ನೂ ಕೂಡ ಸಾಹೇಬತನ ಬಿಟ್ಟಿಲ್ಲ. ಜನರಂತೂ ಸರಿಯೇ, ಸರ್ಕಾರಿ ಅಧಿಕಾರಿಗಳಿಗೂ ಸಹ ಶಾಸಕರು ಸಾಹೇಬರಾದರೆ ಸಚಿವರು ದೊಡ್ಡ ಸಾಹೇಬರು. ಶಾಸಕರು,ಸಚಿವರುಗಳ ಮಕ್ಕಳು ಕೂಡ ಇವರಿಗೆ ಸಣ್ಣ ಸಾಹೇಬರೇ.ಅಷ್ಟೇ ಅಲ್ಲ ಶಾಸಕರು, ಸಚಿವರುಗಳ ಹಿಂದೆಮುಂದೆ,ಆಜುಬಾಜು ಓಡಾಡಿಕೊಂಡಿರುವ ಮರಿ ಪುಢಾರಿಗಳೂ ಅಧಿಕಾರಿಗಳಿಗೆ ಸಾಹೇಬರೇ ಬಾಜು ಸಾಹೇಬರು,ಹಿಂದಿನ ಸಾಹೇಬರು ಎಂದೆಲ್ಲ ಇವರಿಗೆ ವಿಶೇಷಣಗಳಿವೆ. ಶಾಸಕರು, ಸಚಿವರ ಕಿವಿಯೂದುವವರನ್ನು ಅಧಿಕಾರಿಗಳಿಗೆ ನಡವಿನ ಸಾಹೇಬರು. ತಮ್ಮವರನ್ನು ಕೈಯ್ಯಲ್ಲಿಟ್ಟುಕೊಂಡಿರುವ ಶಾಸಕರು,ಸಚಿವರ ಪತ್ನಿಯರು ಅಧಿಕಾರಿಗಳಿಗೆ ಅಕ್ಕರೆಯ ಅಮ್ಮಾವರು.ಶಾಸಕರಿಗೆ ಸಚಿವರು ಸಾಹೇಬರು,ಇವರ ಪಿ.ಎಸ್.ರೂ ಕೂಡ ಸಾಹೇಬರೇ,ಸಣ್ಣ ಸಚಿವರಿಗೆ ಹಿರಿಯ ಸಚಿವರು ಸಾಹೇಬರು.ಇವರಿಗೆಲ್ಲ ಮುಖ್ಯಮಂತ್ರಿಯವರು ಪರಮ ಸಾಹೇಬರು.ಮುಖ್ಯಮಂತ್ರಿಗಳಿಗೆ ಸಾಹೇಬರಿಲ್ಲ ಎಂದಂದುಕೊಂಡರೆ ಅದು ತಪ್ಪು.ಹೈ ಕಮಾಂಡು,ಅದರ ಕೆಲ ಪ್ರಮುಖರು ಮುಖ್ಯಮಂತ್ರಿಗಳಿಗೆ ಸಾಹೇಬರು.ಹೈಕಮಾಂಡಿನಿಂದ ರಾತ್ರಿ ಏನಾದರೂ ಮುಖ್ಯಮಂತ್ರಿಗಳಿಗೆ ತುರ್ತು ಫೋನ ಬಂದರೆ ಈ ಸಾಹೇಬರ ಕೈಕಾಲುಗಳು ಆಡುವದೇ ಇಲ್ಲ.ಇಂಥ ತಾಕತ್ತಿರುವದು ಹೈಕಮಾಂಡ ಸಾಹೇಬತನದಲ್ಲಿ ಮಾತ್ರ.

ಸರ್ಕಾರಿ ಅಧಿಕಾರಿಗಳಿಗೆ,ಶಾಸಕರು,ಸಚಿವರಿಗೆ ಜನರು ತಮ್ಮ ಕೆಲಸಕ್ಕಾಗಿ ಅರ್ಜಿ ಬರೆಯುವ ಪರಿ ನೋಡಬೇಕು. ಮೆಹರ್ಬಾನ ತಹಸೀಲದಾರ ಸಾಹೇಬರು, ಜಿಲ್ಲಾಧಿಕಾರಿ, ಇಂಜಿನಿಯರ ಸಾಹೇಬರೆಂದೇ ಸಂಬೋಧಿಸುತ್ತಾರೆ. ಮೆಹರ್ಬಾನ ಶಾಸಕರು, ಸಚಿವರು ಎಂದೂ ಬರೆಯುತ್ತಾರೆ. ಸೀದಾ ತಹಸೀಲದಾರ ಅಥವಾ ಜಿಲ್ಲಾಧಿಕಾರಿಗಳೆಂದು ಜನರಿಗೆ ಅರ್ಜಿ ಬರೆದೇ ಗೊತ್ತಿಲ್ಲ.ಎಂಥ ಕಲಿತವರು,ಉಚ್ಚ ಶಿಕ್ಷಣ ಪಡೆದವರೂ ಕೂಡ ಇದೇ ರೀತಿ ಅರ್ಜಿ ಬರೆಯುತ್ತಾರೆ.ಸಾಹೇಬತನ ನಮಗೆ ಮಾಡಿರುವ ಮೋಡಿ ಇದು.

ಬಾಪೂಜಿ ಎಂದೂ ಜನಪ್ರಿಯರಾಗಿದ್ದ ಮಹಾತ್ಮಾ ಗಾಂಧೀಜಿ ಮಾತ್ರ ನಮ್ಮ ಜನರ ಹಿರಿತನದ ಬಾಯಲ್ಲಿ ಸಿಕ್ಕು ಪುಣ್ಯಕ್ಕೆ ಬಾಪುಸಾಹೇಬ ಗಾಂಧಿ ಆಗಲಿಲ್ಲ. ಹಾಗಾಗಿದ್ದರೆ ಅದು ಗಾಂಧಿಯವರ ಹಿರಿಮೆಗೆ ಮತ್ತೊಂದು ಗರಿಯಾಗುತ್ತಿತ್ತು. ಒಂದು ವೇಳೆ ಅವರೂ ಬಾಪುಸಾಹೇಬರಾಗಿದ್ದರೆ ಸ್ವಾತಂತ್ರ್ಯಾನಂತರ ಬಹುಶ ಎಲ್ಲ ಗಾಂಧಿ ಭಕ್ತರ ಮನೆಗಳಲ್ಲಿ ಒಬ್ಬೊಬ್ಬ ಬಾಪುಸಾಹೇಬ ನಾಮಾಂಕಿತರು ಇರುತ್ತಿದ್ದರು.

ಸಾಹೇಬತನದ ಗೌರವದಿಂದ ವಂಚಿತರಾದ ಒಂದು ವರ್ಗವೂ ನಮ್ಮಲ್ಲಿದೆ. ಅವರೆಂದರೆ ಶಿಕ್ಷಕರು. ಇವರೆಂದೂ ಯಾರಿಂದಲೂ ಸಾಹೆಬರೆಂದು ಸಂಬೋಧಿಸಲ್ಪಡಲಿಲ್ಲ, ಪಡುವದೂ ಇಲ್ಲ. ನಿಜವಾಗಿ ನೋಡಿದರೆ ಮೊಟ್ಟಮೊದಲ ಸಾಹೇಬತನದ ಮರ್ಯಾದೆ ಶಿಕ್ಷಕರಿಗೆ ದೊರೆಯಬೇಕಿತ್ತು. ವಿಧಿ ನಮಗೆ ಬಾಳು ಕೊಟ್ಟರೆ ಅದನ್ನು ರೂಪಿಸುವ ಕುಶಲಮತಿಗಳು ಶಿಕ್ಷಕರು. ಮಕ್ಕಳಿಗೆಲ್ಲ ಇವರೇ ನಿಜವಾದ ಜೀವನದ ಸಾಹೇಬರು.ಯಾರೂ ಅವರನ್ನು ಮಾಸ್ತರ ಸಾಹೇಬರೆ ಎಂದು ಕರೆದಿದ್ದು ನಾ ಕಾಣೆ.ಆದರೆ ಶಿಕ್ಷಕರದೇಕೋ ಈ ಗರಿಮೆಯಿಂದ ವಂಚಿತರಾದುದು ಅವರಿಗೆ ಸಮಾಜ ಮಾಡಿದ ಅನ್ಯಾಯ ಎನಿಸುತ್ತದೆ.

ನಮ್ಮ ಮನೆಯಲ್ಲೂ ಇಬ್ಬರು ಸಾಹೇಬರು ಈಗ ಅವತರಿಸಿದ್ದಾರೆ. ನಮಗೆ ಮೊಮ್ಮಗ ಹುಟ್ಟಿದಾಗ ಮನೆಗೆ ಬಂದಿದ್ದ ನಮ್ಮ ಆತ್ಮೀಯರಾದ ಜ್ಞಾನಪೀಠಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಮೊಮ್ಮಗನಿಗೊಂದು ಒಳ್ಳೆಯ ಹೆಸರು ಇಡಲು ಕೋರಿದೆ. ತಕ್ಷಣ ಅವರು ಅಮೋಘವರ್ಷ ಅಂತಿಡು ಎಂದರು. ಆಯಿತು. ಅದೇ ಹೆಸರಾಯಿತು. ಅವನವ್ವ ಅವನಿಗೆ ಅಮ್ಮು ಎಂದು ಪ್ರೀತಿಯಿಂದ ಕರೆಯುತ್ತಾಳೆ. ಉಳಿದ ನಾವೆಲ್ಲ ಅಮೋಘ ಎಂದು ಕರೆಯುತ್ತೇವೆ. ಎರಡನೆಯವ ವಿಹಾನ.ಇಬ್ಬರನ್ನೂ ಅಚ್ಛಾದಿಂದ ಸಾಹೇಬರೇ‌ ಎನ್ನುತ್ತೇವೆ. ಎಂಟು ವರ್ಷದ ಅಮೋಘನಿಗೂ, ನಾಲ್ಕು ವರ್ಷದ ವಿಹಾನನನಿಗೂ ಸಾಹೇಬರೇ ಎಂದು ಕರೆಯಿಸಿಕೊಳ್ಳುವದರಲ್ಲಿ ಏನೋ ಒಂದು ಅಭಿಮಾನ. ಸಾಹೇಬರೇ ಎಂದು ಕರೆಯದಿದ್ದರೆ ಸಾಹೇಬ ಅಂತ ಕರಿ ಅಂದ್ರ ನಾ ಬತ್ತೀನಿ ಎನ್ನುತ್ತಾನೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಮೋಘ ಅಮ್ಮುಸಾಹೇಬ – ಅಮ್ಮುಸಾಬ,ವಿಹಾನ ವಿಹುಸಾಹೇಬ ಆಗಿಬಿಡುವ ಲಕ್ಷಣಗಳಿವೆ. ಅಮೋಘ ಅಮ್ಮುಸಾಹೇಬ – ಅಮ್ಮುಸಾಬ,ವಿಹಾನ ವಿಹುಸಾಹೇಬ, ವಿಹುಸಾಬ ಆದರೆ ಅದರಲ್ಲಿ ನಮಗೆ ಆಶ್ಚರ್ಯವೇನಿಲ್ಲ. ಅದು ನಮಗೆಲ್ಲ ಖುಷಿಯೂ ಹೌದು. ಏಕೆಂದರೆ ನನ್ನ ತಂದೆ ನಾರಾಯಣ ಆಗಿದ್ದವರು ನಾನಾಸಾಹೇಬ ಎಂದೇ ರಾಜಕಾರಣ ಹಾಗೂ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾಗಿದ್ದರು. ನಾನಾಸಾಹೇಬರ ಮರಿಮಗ ಅಮ್ಮುಸಾಹೇಬ, ವಿಹುಸಾಹೇಬ ಎಂದು ಗುರ್ತಿಸಿಕೊಂಡರೆ ಮುತ್ತಜ್ಜನ ಸಂಪ್ರದಾಯ ಮುಂದುವರೆಸಿದ ಹೆಮ್ಮೆ ನಮಗಾಗುತ್ತದೆ.

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇ ಎಂದು ಡಿ.ವಿ.ಜಿ.ಯವರು ಉಗ್ಗಡಿಸಿದ್ದು ಅದೆಷ್ಟು ಅರ್ಥಪೂರ್ಣ! ವಿಧಿ ಈ ವಿಶ್ವಬದುಕಿನ ದೊಡ್ಡ ಸಾಹೇಬ ಎಂದು ಸಾರಿರುವದು ಸಾಹೇಬತನದ ಶ್ರೇಷ್ಠತೆಗೆ ಸಾಕ್ಷಿ.

-ಪ್ರಕಾಶ ದೇಶಪಾಂಡೆ , ಹುಕ್ಕೇರಿ

     

3 Responses

  1. ಧರ್ಮಣ ಧನ್ನಿ says:

    ಸಾಹೆಬರು ಇದ್ದಾರೆನ್ರಿ . ಸಾಹೆಬ ಪದ ಬಳಕೆಯ ಕುರಿತು ಚೆನ್ನಾಗಿ ತಿಳಿಸಿದರು.ಧನ್ಯವಾದಗಳು

  2. Hema says:

    ಬರಹ ಬಹಳ ಸೊಗಸಾಗಿದೆ, ಸಾಹೇಬರೇ !

  3. ಶಂಕರಿ ಶರ್ಮ says:

    ಸಾಹೇಬರ ಬಗೆಗಿನ ನಿಮ್ಮ ವಿಸ್ತೃತ ಲೇಖನ ತುಂಬಾ ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: