ಅಸ್ತಿತ್ವ
ಅದೆಷ್ಟು ಆಯುಧಗಳ
ಒಗ್ಗೂಡಿಸುತ್ತಲೆ ಇರುವಿರಿ
ನನ್ನ ಅಸ್ತಿತ್ವ ಅಳಿಸಲು
ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ
ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು
ನನ್ನ ಅಸ್ತಿತ್ವ ಅಳಿಸಲು
ಪಾವಿತ್ರ್ಯತೆ ಅಂಧಶ್ರದ್ಧೆ ನಂಬಿಕೆಗಳ
ಶೃಂಕಲೆ ತೊಡಿಸಿದಿರಿ ಮೈಮನಕ್ಕೆ
ನನ್ನ ಅಸ್ತಿತ್ವ ಅಳಿಯಲು
ಹಿಂಸೆ ಅತ್ಯಾಚಾರಗಳಗೈದು ದುರ್ಬಲಗೊಳಿಸಿ
ಅಬಲೆ ನಾನೆಂದು ನಂಬಿಸಿದಿರಿ
ನನ್ನ ಅಸ್ತಿತ್ವ ಅಳಿಸಲು
ನ್ಯಾಯ ದೇಗುಲ ಕರಿಕೋಟು
ಮಾಧ್ಯಮ,ಆರಕ್ಷಕ ಠಾಣೆ
ಎಲ್ಲವೂ ನಿರತ
ನನ್ನ ಅಸ್ತಿತ್ವ ಅಳಿಸಲು
ಅಕ್ಷರಗಳಲಿ, ದೃಶ್ಯಗಳಲಿ,ಜಾಹೀರಾತುಗಳಲಿ
ಬಿಕರಿಯಾಗುತ್ತಿದೆ ಹೆಣ್ಣ ಮೈ
ಇದೇ ಅವಳ ಅಸ್ತಿತ್ವವೇ
ಮಸಣದಲ್ಲಿ ಹೆಣ್ಣಿನ ದನಿಗಳು
ಮಾರ್ಧನಿಸುತ್ತಿವೆ
ನನ್ನ ದೌರ್ಜನ್ಯದ ಕೇಸು ಏನಾಯಿತು?
ನಾನೂ ಹೇಳುತ್ತಿರುವೆ ನಿಮ್ಮಲ್ಲಿಗೆ ಬರುವ
ನನ್ನ ಸರದಿ ಎಂದೋ
ನಾ ಹೇಗೆ ಅಳಿಯುವೆ ನಿನ್ನ ಹೊರತು?
ನೀವು ತುಳಿದರು, ಜರಿದರೂ,
ಅಳಿವು ಒಮ್ಮೆ ಅದು ನನ್ನದು – ನಿನ್ನದು
-ಜ್ಯೋತಿ ಎಸ್.ದೇಸಾಯಿ
ಸಮಾಜದಲ್ಲಿ ಹೆಣ್ಣಿನ ಮೇಲಿನ ದಬ್ಬಾಳಿಕೆ ಸತತವಾಗಿ ನಡೆಯುತ್ತಲೇ ಇರುವುದರ ಬಗ್ಗೆ ಅತೀವ ಕಾಳಜಿ ಹೊಂದಿರುವ ಭಾವಪೂರ್ಣ ಕವನ..ಚೆನ್ನಾಗಿದೆ.
ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ