ತೆರಳದಿರಲಹುದೇ…
ಬೆಳಗುತಿಹ ದಿನಕರನು
ಸೆಳೆಯುತಲಿ ಮೇದಿನಿಯ
ಮುಳುಗದೆಯೆ ಬಾನಿನಲಿ ನಿಲ್ಲಲಹನೇ|
ಬಿಳುಪಾದ ಚಂದಿರನು
ಹೊಳೆಯುತಿರೆ ಗಗನದಲಿ
ಕಳೆಗುಂದಿ ಸೊರಗುತಲಿ ಬಾಡದಿಹನೇ||
ಬಿರಿಯುತಲಿ ಕಂಗೊಳಿಸಿ
ಮೆರೆಯುತಿಹ ಸುಮರಾಜಿ
ಬರಿದಾಗಿ ಸಂಜೆಯಲಿ ಮುದುಡದಿಹುದೇ|
ಹರಿಯುತಿಹ ಹೊಳೆಯೊಂದು
ಸರಿಯುತಿರೆ ಕಡಲೆಡೆಗೆ
ಧರೆಯಲ್ಲಿ ತೊಡರುಗಳ ಕಾಣದಿಹುದೇ ||
ಮುಗಿಲೊಡಲ ಜಲರಾಶಿ
ಜಿಗಿಯುತಲಿ ಮಳೆಯಾಗಿ
ಯುಗಯುಗದಿ ವಸುಧೆಯನು ತೊಳೆಯದಿಹುದೇ|
ಹೊಗಳದೆಯೆ ಹಾಡುತಿಹ
ಖಗರಾಣಿ ಕೋಗಿಲೆಯು
ಸೊಗಸಾದ ಗಾನವನು ಹಾಡದಿಹುದೇ ||
ಬವಣೆಯಲಿ ಬೇಯದೆಯೆ
ಭವದೊಳಗೆ ಬಾಳುತಲಿ
ತವರಾಜ ಮೆಲುವವನ ಕಾಣಲಹುದೇ|
ಭವನದೊಳು ಮೆರೆದರೂ
ಜವರಾಯ ಕರೆದಾಗ
ಭುವನವನು ಬಿಟ್ಟು ತೆರಳದಿರಲಹುದೇ ||
(ಕುಸುಮ ಷಟ್ಪದಿ)
-ಪರಿಣಿತ ರವಿ
ಕವನ ಬಹಳ ಇಷ್ಟವಾಯಿತು..ಯಾವುದೇ ಒತ್ತಕ್ಷರ ಇಲ್ಲದೆ ಕುಸುಮ ಷಟ್ಪದಿ ಯಲ್ಲಿ ಬರೆದುದು ಭಾವಗೀತೆ ಯಂತೆ ರಾಗವಾಗಿ ಹಾಡು ವಂತೆ ಇದೆ
SUPER
ಸೊಗಸಾದ ಕವನ.