ಶಾಲೆಯಲ್ಲಿ ದೈಹಿಕ ಶಿಕ್ಷೆ ಏಕೆ?
ಮಕ್ಕಳು ಸುಂದರವಾಗಿ ಅರಳಿ ನಿಂತಿರೋ ಹೂಗಳಿದ್ದಂತೆ. ಆ ಹೂಗಳಿಗೆ ಯಾವುದೇ ರೀತಿಯ ಘಾಸಿಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರ ಹಾಗು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳನ್ನು ಶಿಸ್ತಾಗಿ ಬೆಳೆಸಬೇಕಾದರೆ ಶಿಕ್ಷೆಯೂ ಒಂದು ಭಾಗ ಎಂದೇ ಪೋಷಕರು ಹಾಗು ಶಿಕ್ಷಕರು ಭಾವಿಸಿಬಿಟ್ಟಿದ್ದಾರೆ. ಅದರಲ್ಲೂ ದೈಹಿಕವಾಗಿ ದಂಡಿಸಿದರಷ್ಟೆ ಮಕ್ಕಳು ನಾವು ಹೇಳಿದ ಹಾಗೆ ಕೇಳುತ್ತಾರೆ, ಬುದ್ಧಿವಂತರಾಗುತ್ತಾರೆ ಎಂದೆಲ್ಲ ಭಾವಿಸಿ ಮಕ್ಕಳಿಗೆ ಹೊಡೆಯುವುದು, ಬೆಂಚಿನ ಮೇಲೆ ನಿಲ್ಲಿಸುವುದು, ಕುರ್ಚಿ ಕೂರಿಸುವುದು, ಇಟ್ಟಿಗೆಯನ್ನು ತಲೆಯ ಮೇಲೆ ಹೊತ್ತು ಶಾಲೆ ಸುತ್ತ ಸುತ್ತುವುದು, ಬಸ್ಕಿ ಹೊಡೆಸುವುದು, ಕೈಗಳಿಗೆ ಕೋಲಿನಿಂದ ಬಾರಿಸುವುದು, ಹೀಗೆ ಬುದ್ಧಿ ಕಲಿಸಲು ನಾನಾ ವಿಧಾನಗಳನ್ನು ಅನುಸರಿಸುವುದುಂಟು. ಆದರೆ ಇಂತಹ ಶಿಕ್ಷೆಗಳಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳನ್ನು ಗಮನಿಸಿದರೆ ಬೆಚ್ಚಿ ಬೀಳುವಂತಾಗುತ್ತದೆ.
ಇತ್ತೀಚೆಗಷ್ಟೆ ಮಕ್ಕಳು ಇಂತಹ ಶಿಕ್ಷೆಗಳಿಂದ ಪ್ರಾಣ ಕಳೆದುಕೊಂಡಿರುವುದು ಕಂಡು ಬಂದು ಇಡೀ ಸಮಾಜವೇ ಶಿಕ್ಷೆಯ ವಿರುದ್ಧ ತಿರುಗಿ ಬೀಳುತ್ತಿದೆ. ಇವತ್ತು ಶಿಕ್ಷಣವು ಮಗು ಕೇಂದ್ರಿತ ಶಿಕ್ಷಣವಾಗಿದ್ದು, ಮಗುವಿಗಾಗಿಯೇ ಶಿಕ್ಷಣ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಗುವಿನ ಮನಸ್ಸಿಗೆ ಮಗುವಿನ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ.
ಮಗು ಆತಂಕರಹಿತವಾಗಿ, ಭಯದಿಂದ ಮುಕ್ತವಾಗಿ ಕಲಿಯುವಂತಹ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಬೇಕಾಗಿದೆ. ಶಾಲೆಗೆ ಹೋಗುವುದೆಂದರೆ ಹಿಂಸೆಪಟ್ಟುಕೊಳ್ಳುವ, ದಿನಾ ಶಾಲೆಗೆ ಹೋಗಲು ರಗಳೆ ಮಾಡುವ ಸಂದರ್ಭವೇ ಬಾರದಂತೆ ಶಾಲೆಯೆಂದರೆ ಓಡೋಡಿ ಬರುವ, ಶಾಲೆ ಎಂದರೆ ಕುಣಿದು ಕುಪ್ಪಳಿಸಿ, ನಲಿಯುತ್ತ, ಹಾಡುತ್ತಾ, ಕಲಿಯುವ ತಾಣವಾಗಬೇಕು. ಯಾವುದೂ ಮಕ್ಕಳಿಗೆ ಹೊರೆಯಾಗಬಾರದು. ಇಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಶಿಕ್ಷಕರು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡು ಮಗುವಿಗೆ ಇಷ್ಟವಾಗುವ ವಿಧಾನದಿಂದ ಕಲಿಸುವಂತಾಗಬೇಕು.
ಮಕ್ಕಳು ಮಾಡುವ ತಪ್ಪುಗಳಿಗೆ ಅತ್ಯಂತ ಕನಿಷ್ಟ ಮಟ್ಟದ ಶಿಕ್ಷೆ ನೀಡುವಂತಿರಬೇಕು. ಶಿಕ್ಷೆ ಎಂದರೆ ಅದು ಮಗುವಿನ ಕಲಿಕೆಗೆ ಪೂರಕವಾಗಬೇಕು. ಉದಾಹರಣೆಗೆ ಮಗು ಮನೆಗೆಲಸ ಬರೆಯದಿದ್ದಲ್ಲಿ ಶಾಲೆಯಲ್ಲಿಯೇ ಕುಳಿತು ಎರಡು ಬಾರಿ ಬರೆಯುವಂತೆ, ಪಾಠ ಕಲಿತು ಬರದಿದ್ದಲ್ಲಿ, ಶಾಲೆಯಲ್ಲಿಯೇ ಕಲಿತು ಒಪ್ಪಿಸಿದ ನಂತರ ಮುಂದಿನ ಪಾಠಕ್ಕೆ ಹೋಗುವುದು, ಕಲಿಯಲಾರದ ಪ್ರಶ್ನೆಗುತ್ತರಗಳನ್ನು ಕಲಿತು ಎಲ್ಲರ ಮುಂದೆ ಕಪ್ಪುಹಲಗೆಯಲ್ಲಿ ಬರೆಸುವುದು, ಮಗುವಿಗೆ ವಿಶೇಷ ಬೋಧನೆ, ಹೀಗೆ ಪಾಠಕ್ಕೆ ಪೂರಕವಾದ ಶಿಕ್ಷೆ ನೀಡಿದರೆ ಸೋಮಾರಿ ಮಗುವಿಗೆ ಕೆಲಸ ಹೆಚ್ಚಿಸಿದಂತೆಯೂ ಆಯಿತು, ಪಾಠವನ್ನು ಕಲಿಸಿದಂತೆಯೂ ಆಗುತ್ತದೆ. ಯಾವುದೇ ಕಾರಣಕ್ಕೂ ಮಗುವಿಗೆ ದೈಹಿಕ ದಂಡನೆ ನೀಡಬಾರದು.
(ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ)
ಮಕ್ಕಳಿಗೆ ಹೊಡೆಯುವುದನ್ನು ಶಿಕ್ಷೆ ಎಂದು ಭಾವಿಸಿದರೆ, ಮಗು ಏಟು ತಿನ್ನುವುದನ್ನೇ ಹವ್ಯಾಸ ಮಾಡಿಕೊಂಡು ಏಟಿಗೆ ಹೆದರದೆ ಏಟು ತಿಂದು ಓದಿ ಬರೆಯುವುದನ್ನು ಕಡಿಮೆ ಮಾಡಬಹುದು. ಇನ್ನು ಕೆಲವು ಮಕ್ಕಳು ಏಟಿಗೆ ಹೆದರಿ ಶಾಲೆಗೆ ಬರುವುದನ್ನೇ ತಪ್ಪಿಸಿಬಿಡಬಹುದು. ಶಾಲೆಯೆಂದರೆ ಭಯಾನಕ ಕಲ್ಪನೆಯಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು. ಈ ಎಲ್ಲಾ ಕಾರಣಗಳಿಂದ ಮಗುವಿಗೆ ಶಿಕ್ಷೆ ನೀಡುವ ಬದಲು ದೈಹಿಕ ದಂಡನೆ ನೀಡುವ ಬದಲು ಪ್ರೀತಿಯಿಂದ ಮಗುವನ್ನು ಒಲಿಸಿಕೊಂಡು, ಕಲಿಕೆಯ ಮಹತ್ವವನ್ನು ತಿಳಿಸುತ್ತಾ ಕಲಿತ ಮಗುವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಜಾಣ ನೀನು, ಮನಸ್ಸು ಮಾಡಿದರೆ ಬೇಗ ಎಲ್ಲವನ್ನು ಕಲಿತುಬಿಡುತ್ತೀಯಾ ಎಂದು ಹುರಿದುಂಬಿಸಿದರೆ, ಕಲಿಕೆಯಲ್ಲಿ ಹಿಂದುಳಿದ ಮಗುವಿಗೂ ಕಲಿಕೆಯ ಆಸಕ್ತಿ ಮೂಡುತ್ತದೆ. ಚಿಕ್ಕ ಚಿಕ್ಕ ಬಹುಮಾನಗಳನ್ನು ನೀಡುವುದರ ಮೂಲಕವೂ, ಶಾಲೆಗೆ ಆಸಕ್ತಿಯಿಂದ ಬರಲು, ಮನೆಗೆಲಸ ಮಾಡಿಬರಲು, ಹೇಳಿದ್ದನ್ನು ಕಲಿತು ಬರುವಂತೆ ಪ್ರೋತ್ಸಾಹಿಸಬಹುದು.
ಪಾಠದ ಜೊತೆಗೆ ಹಾಡು, ಕಥೆಗಳು, ಪಾಠಕ್ಕೆ ಪೂರಕವಾದ ಛಾಯಾಚಿತ್ರಗಳು, ಚಿತ್ರಗಳು, ಮಾದರಿಗಳು ಹೀಗೆ ಬಳಸಿಕೊಂಡು ಪಾಠವನ್ನು ಹೆಚ್ಚು ಹೆಚ್ಚು ಆಸಕ್ತಿದಾಯಕವಾಗುವಂತೆ ಮಾಡಿದಲ್ಲಿ ಮಗುವಿಗೆ ಶಾಲೆಗೆ ಹೋಗುವುದೆಂದರೆ ಉತ್ಸಾಹ ತೋರುತ್ತದೆ. ಮತ್ತೊಂದು ವಿಚಾರವೆಂದರೆ ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುವುದು, ಕಲಿಕೆಯಲ್ಲಿ ಮುಂದಿರುವ ಮಕ್ಕಳನ್ನು ಹೊಗಳುವುದು, ಹಿಂದುಳಿದ ಮಕ್ಕಳನ್ನು ಬೈಯ್ದು ಹೀಯಾಳಿಸುವುದು ಹೀಗೆ ಮಾಡದೆ ಎಲ್ಲ ಮಕ್ಕಳನ್ನು ಒಂದೇ ರೀತಿ ಕಾಣುತ್ತ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಗಮನ ನೀಡಿ ಆ ಮಕ್ಕಳನ್ನೂ ಮುಖ್ಯವಾಹಿನಿಗೆ ತರಲು ಪ್ರೀತಿಯಿಂದ ಪ್ರಯತ್ನಿಸಬೇಕು. ಶಿಕ್ಷಕರೆಂದರೆ ಕೋಲು ಹಿಡಿದು ಹೆದರಿಸಿ ಬೆದರಿಸಿ ಕಲಿಸುವಂತಹ ಚಿತ್ರಣ ಮರೆಯಾಗಿ ಶಿಕ್ಷಕರೆಂದರೆ ಅಪ್ಪ ಅಮ್ಮನ ಬದಲಿಗೆ ಶಾಲೆಯಲ್ಲಿರುವ ಮಮತೆಯ ಪ್ರತೀಕ ಎನಿಸುವಂತ ಚಿತ್ರಣ ಮಕ್ಕಳಲ್ಲಿ ಮೂಡಿಸುವಂತಹ ಬದಲಾವಣೆ ಶಾಲೆಯಲ್ಲಾಗಬೇಕು. ಆಗ ಮಾತ್ರವೇ ಶಿಕ್ಷಣ ಯಶಸ್ವಿಯಾಗಿ ಎಲ್ಲ ಮಕ್ಕಳಿಗೂ ತಲುಪಿ ಶೇ.ನೂರರಷ್ಟು ಸಾಕ್ಷರತೆ ಸಾಧಿಸಿ ಇಡೀ ಸಮಾಜವೇ ಹಿಂಸೆಯಿಂದ ಮುಕ್ತವಾಗಿ ಮಾದರಿ ದೇಶ ಎನಿಸಲು ಸಾಧ್ಯವಾದೀತು.
-ಎನ್. ಶೈಲಜಾ ಹಾಸನ
ಉತ್ತಮ ಬರಹ. ಮಕ್ಕಳಿಗೆ ದಂಡಿಸಿದಾ ಉಂಟಾಗುವ ಪರಿಣಾಮಗಳ ಬಗ್ಗೆ ಲೆಖಕರು ಚೆನ್ನಾಗಿ ತಿಳಿದ್ದಾರೆ.ಅವರಿಗೆ ಧನ್ಯವಾದಗಳು
ನಾವು ಚಿಕ್ಕವರಿದ್ದಾಗ, ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಕೆಲಸ ಅಧ್ಯಾಪಕರದಾಗಿತ್ತು. ಸಣ್ಣ ಪುಟ್ಟ ಶಿಕ್ಷೆಗಳ ಬಗ್ಗೆ ಪೋಷಕರ ಆಕ್ಷೇಪಗಳೇನೂ ಇರಲಿಲ್ಲ. ಈಗಂತೂ, ಶಾಲೆಗಳಲ್ಲಿ ಶಿಕ್ಷೆ ಇರಲಿ, ಗದರಿಸುವಂತೆಯೇ ಇಲ್ಲ. ಅದರಿಂದಾಗಿಯೋ ಏನೋ, ಮಕ್ಕಳಿಗೆ ಅಧ್ಯಾಪಕರಲ್ಲಿ ಭಯ,ಭಕ್ತಿ, ಗೌರವ ಕಡಿಮೆಯಾಗಿದೆ ಎನಿಸುತ್ತದೆ. ಸಕಾಲಿಕ ಲೇಖನ ಚೆನ್ನಾಗಿದೆ.