ವಿಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್

Share Button

ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್.

ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ ಸೇರಿರುವ ಡಕ್ಕಾ ಜಿಲ್ಲೆಯ ಫರೀದ್ ಪುರದಲ್ಲಿ  30-11-1858 ರಂದು ಭಗವಾನ್ ಚಂದ್ರಭೋಸ್ ಹಾಗೂ ಬಾಮಾಸುಂದರಿ ಭೋಸ್ ರ ಮಗನಾಗಿ ಜಗದೀಶ್ಚಂದ್ರ ಬೋಸರು ಜನಿಸಿದರು. ತಂದೆ ಭಗವಾನ್ ಚಂದ್ರಬೋಸರು ಫರೀದ್‌ಪುರದ ಡೆಪ್ಯುಟಿ ಕಮಿಶನರಾಗಿದ್ದರು. ತಾಯಿ ವಾತ್ಸಲ್ಯಮಯಿ. ತಂದೆ ಕೊಡುಗೈ ದಾನಿಗಳಾಗಿದ್ದರು. 1880 ರಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮವು ತಲೆದೋರಿದಾಗ ಭಗವಾನ್‌ರು ಸ್ವಂತ ಹಣದಿಂದ ಗ್ರಾಮಾಂತರ ಜನರಿಗೆ ಸಹಾಯಹಸ್ತ ಚಾಚಿದರು. ಜಗದೀಶರು ಬಾಲ್ಯದಲ್ಲಿಯೇ ಬಹಳ ಚುರುಕಾಗಿದ್ದರು.ವಿಶೇಷವಾಗಿ ತಾನುಕಂಡಪ್ರಕೃತಿಯನ್ನು ವಿವರವಾಗಿ ತಿಳಿದುಕೊಳ್ಳಬೇಕೆಂಬಾಸೆ. ಒಂಭತ್ತನೆಯ ವರ್ಷದವರೆಗೆ ಊರಿನ ಪಾಠಶಾಲೆಯಲ್ಲಿ ಮಾತೃಭಾಷೆಯಲ್ಲಿಯೇ ವಿದ್ಯಾಭ್ಯಾಸವನ್ನು ಕೈಕೊಂಡರೆ ಮುಂದೆ ಕಲ್ಕತ್ತಾ ನಗರವನ್ನು ಕಲ್ಕತ್ತೆಯ ಸಂತ ಕ್ಸೇವಿಯರ್ ಶಾಲೆಯ ವಿದ್ಯಾರ್ಥಿಯಾದ ಇವನಿಗೆ ಇಂಗ್ಲಿಷ್ ಭಾಷೆಯ ವಿದ್ಯಾರ್ಥಿಗಳೊಂದಿಗೆ ಬೆರೆಯುವಂತಾಯಿತು. ಇಂಗ್ಲಿಷ್ ಬಾರದ ಇವನನ್ನು ಆ ಹುಡುಗರು ಬಹಳವಾಗಿ ರೇಗಿಸುತ್ತಿದ್ದರು. ಇದರಿಂದಾಗಿ ತನಗೆ ಒಂಟಿತನ ನೀಗಲು ನಾನಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಕೆಲವು ವೇಳೆ ಅಂತಹವರಿಗೆ ತಕ್ಕಪಾಠವನ್ನೂ ಕಲಿಸಿ ಸುಮ್ಮನಾಗಿಸುತ್ತಿದ್ದ!.ಶಾಲಾ ಶಿಕ್ಷಣದೊಂದಿಗೆ ಹೂಗಿಡಗಳು, ಪ್ರಾಣಿ ಪಕ್ಷಿಗಳನ್ನೂ ಸಾಕುತ್ತಿದ್ದ. ಹೀಗಾದರೂ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ.

ಕಾಲೇಜು ವಿದ್ಯಾಭ್ಯಾಸ– ಜಗದೀಶಚಂದ್ರರು ಮುಂದೆ ಕಾಲೇಜಿನಲ್ಲಿ ಬಿ.ಎ ತರಗತಿಗೆ ಸೇರಿದರು. ಈ ಪದವಿಗೆ ವಿಜ್ಞಾನ ವಿಷಯವೂ ಸೇರಿತ್ತಾದ್ದರಿಂದ ತನ್ನ ಒಲವಿನ ವಿಷಯವನ್ನೇ ಆಯ್ಕೆಮಾಡಿಕೊಂಡರು. ಸಸ್ಯವಿಜ್ಞಾನ ಅವರ ಆಕರ್ಷಣೆಯಾಗಿದ್ದು, ಅವರ ಹತ್ತೊಂಭತ್ತನೆ ವರ್ಷದಲ್ಲಿ ಪದವಿಪಡೆದರು. ನಂತರ ಅವರಿಗೆ ಐ.ಸಿ.ಎಸ್[ಇಂಡಿಯನ್ ಸಿವಿಲ್ ಸರ್ವಿಸ್] ಆಗುವ ಹಂಬಲವಿತ್ತು. ಆದರೆ ಅವರ ತಂದೆಗೆ ಇತರರ ಅಧೀನದಲ್ಲಿ ಮಗ ಕೆಲಸಮಾಡುವುದು ಇಷ್ಟವಿರಲಿಲ್ಲ. ಅವರಮ್ಮನಿಗೂ ಪುತ್ರ ಸಮುದ್ರದಾಚೆ ಹೋಗುವುದು ಬೇಡವಾಗಿತ್ತಾದರೂ ಕೆಲವು ಸಮಯ ಚಿಂತಿಸಿದ ತಾಯಿ ಮಗನ ಇಷ್ಟಾರ್ಥಕ್ಕೆ ವಿರುದ್ಧವಾಗಿ ತಾವು ವರ್ತಿಸುವುದು ಸರಿಯಲ್ಲವೆಂದು ಆತನನ್ನು ಹೊರದೇಶಕ್ಕೆ ಕಳುಹಿಸಲು ಅನುವು ಮಾಡಿಕೊಟ್ಟಳು. ಕೇಂಬ್ರಿಜ್ ನ ಕ್ರೈಸ್ಟ್ ಚರ್ಚ ಕಾಲೇಜಿಗೆ ಸೇರಿಕೊಂಡು ಅಲ್ಲಿಯ ಲ್ಯಾಟಿನ್ ಬಾಷೆಯನ್ನು ಕಲಿತುಕೊಂಡು ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಮುಂದೆ ಲಂಡನ್ ವಿಶ್ವವಿದ್ಯಾನಿಲಯದ ಬಿ.ಎಸ್.ಸಿಯನ್ನೂ ಮಾಡಿಕೊಂಡರು.

ಉದ್ಯೋಗ- ಶಿಕ್ಷಣ ಮುಗಿದಮೇಲೆ ಭಾರತಕ್ಕೆ ಬಂದ ಭೋಸರು ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮೂರು ವರ್ಷ ವೇತನವಿಲ್ಲದೆ ಕೆಲಸಮಾಡಿದರು. ವಿಜ್ಞಾನದಲ್ಲಿ ಬಲವಾದ ಸಂಶೋಧನೆ ಮಾಡಬೇಕೆಂಬ ಮನೋಭಿಲಾಶೆ ಅವರಲ್ಲಿತ್ತು. ಆದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಳ್ವಿಕೆಯ ಕಾಲದ ಆ ಘಟ್ಟದಲ್ಲಿ ಅಲ್ಲಿ ಅವರಿಗೆ ತಕ್ಕ ಗೌರವಾದರಗಳಾಗಲೀ ಸಂಶೋಧನೆಗೆ ಬೇಕಾದ ಉಪಕರಣಗಳಾಗಲೀ ದೊರೆಯಲಿಲ್ಲ.ಆದರೂ ಅವರ ಅಪಾರ ಜ್ಞಾನ, ಕಾರ್ಯದಲ್ಲಿ ಆಸಕ್ತಿ, ಸಂಪನ್ನ ಗುಣನಡತೆಗಳಿಂದ ಕಾಲೇಜಿನ ಹಿರಿಯರು ಆಕರ್ಷಿತರಾಗಿ ಅವರಿಗೆ ಸರಿಯಾದ ವೇತನವನ್ನು ಕೊಡಿಸಿದರು. ಬರುತ್ತಿದ್ದ ಸಂಬಳದಲ್ಲೇ ಉಳಿಸಿಕೊಂಡು ಅವರ ಸಂಶೋಧನೆಗೆ ತಕ್ಕ ಒಂದು ಪ್ರಯೋಗಶಾಲೆಯನ್ನೇ ಕೊಂಡುಕೊಂಡರು.

ರೇಡಿಯೋಜನಕ- ರೇಡಿಯೋವನ್ನು ಕಂಡುಹಿಡಿದವನು ಮಾರ್ಕೋನಿ ಎಂಬಾತನೆಂದು ಎಲ್ಲರೂ ಹೇಳುವುದಾದರೂ ನಿಜವಾಗಿ ಬೋಸರು ಇದರ ಸಂಶೋಧನೆಯನ್ನು ಸ್ವತಂತ್ರವಾಗಿ ನಡೆಸಿದ್ದರು. ಬೋಸರು ವಿದ್ಯುಚ್ಛಕ್ತಿಯನ್ನು ವಿಶೇಷವಾಗಿ ಅಭ್ಯಾಸಮಾಡಿ ಅದರ ಅಲೆಗಳನ್ನು ಕಳುಹಿಸಬೇಕಾದರೆ ಎಂತಹ ಉಪಕರಣಗಳಿರಬೇಕು?. ಹಾಗೆಯೇ ಅದು ಸೇರುವ ಸ್ಥಳದಲ್ಲಿ ಹೇಗೆ?. ಎರಡೂ ಸ್ಥಳಗಳ ಅಂತರ ಎಷ್ಟು ದೂರ ಎಂಬುದನ್ನೆಲ್ಲ ಸಂಶೋಧನೆಯಿಂದ ಕಂಡುಕೊಂಡು ಅದಕ್ಕೆ ಬೇಕಾದ ಉಪಕರಣೆಗಳನ್ನೆಲ್ಲ ತಾವೇ ರಚಿಸಿಕೊಂಡಿದ್ದರು. ಇಂಗ್ಲೆಂಡಿನ ರಾಯಲ್ ಸೊಸೈಟಿಯಲ್ಲಿ ತಮ್ಮ ಶೋಧವನ್ನು ಸಕಾರಣವಾಗಿ ಪ್ರದರ್ಶಿಸಿದ್ದರು. ಅಲ್ಲಿ ನೆರೆದಿದ್ದ ವಿಜ್ಞಾನಿಗಳು ಬೋಸರ ಸಾಧನೆಗೆ ಬೆರಗಾಗಿದ್ದರು.  1896ರಲ್ಲಿ ಬೋಸರು ವಿದ್ಯುತ್ ಅಲೆಗಳ ಬಗೆಗೆ ಒಂದು ಪ್ರಬುದ್ಧ ಪ್ರಬಂಧವನ್ನು ಬರೆದು ಕೊಟ್ಟಿದ್ದರು. ಇದನ್ನು ಇಂಗ್ಲೆಂಡಿನ ರಾಯಲ್ ಸೊಸೈಟಿಯು ಮೆಚ್ಚಿಕೊಂಡಿತು. ನೂರಾರು ವರ್ಷಗಳಿಂದ ಪ್ರಪಂಚದಲ್ಲೇ ಹೆಸರಾದ ರಾಯಲ್ ಸೊಸೈಟಿ ಬೋಸರಿಗೆ ಡಾಕ್ಟರ್ ಓಫ್ ಸೈನ್ಸ್ ಪ್ರಶಸ್ತಿಕೊಟ್ಟು ಗೌರವಿಸಿತು. ಇದರಿಂದಾಗಿ ಬಂಗಾಳವು ಅವರ ಸಂಶೋಧನೆಯ ಖರ್ಚನ್ನೂ ಕೊಟ್ಟು ಅವರಿಗೆ ಧನಸಹಾಯ ಮುಂದುವರಿಸಿತು. ಆಗಿನ ಕಾಲದಲ್ಲಿ ಸರಕಾರದ ಖರ್ಚಿನಿಂದ ಒಬ್ಬ ಭಾರತೀಯನನ್ನು ವಿದ್ಯಾಭ್ಯಾಸಕ್ಕಾಗಿಯಾಗಲೀ ಸಂಶೋಧನೆಗಾಗಿಯಾಗಲೀ ಹೊರದೇಶಕ್ಕೆ ಕಳಿಸುತ್ತಿರಲಿಲ್ಲ. ಈ ಸದಾವಕಾಶ ಜಗದೀಶರಿಗೆ ವಿಶೇಷವಾಗಿ ಲಭಿಸಿತು. ಇದನ್ನು ಗಮನಿಸಿದಾಗ ಅವರ ಜ್ಞಾನಶಕ್ತಿಯ ಅಗಾಧ ಅರಿವಾಗದಿರದು. ಇರುವ ಸಾಮಾಗ್ರಿಯನ್ನೇ ಅಳವಡಿಸಿಕೊಂಡು ತಮ್ಮ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತ ಗಳಿಸಿದ ಪ್ರಶಸ್ತಿಗಾಗಿ ಲಂಡನಿನ ಹೆಸರಾಂತ ‘ಸ್ಪೆಕ್ಟೇರ್’ ಹಾಗೂ ‘ಟೈಮ್ಸ್’ ಪತ್ರಿಕೆಯವರು ಅವರನ್ನು ಹೊಗಳಿದ್ದರು.

ಸಸ್ಯವಿಜ್ಞಾನಿ- ಸಸ್ಯಗಳಿಗೂ ಪ್ರಾಣಿಗಳಂತೆ ಜೀವವಿದೆ, ನೋವನ್ನು‌ಅನುಭವಿಸುತ್ತವೆ, ಚಿವುಟಿದಾಗ, ತುಂಡರಿಸಿದಾಗ ಬಳಲುತ್ತವೆ, ವಿಷಹೊಕ್ಕಾಗ ಕೆಲವೇ ನಿಮಿಷದಲ್ಲಿ ಸಾಯುತ್ತವೆ ಎಂದು ತೋರಿಸಿಕೊಟ್ಟರು ಜಗದೀಶರು. ಬೆಳಕಿನಕಡೆಗೇ ಸಸ್ಯ ಬಾಗಿ ಬೆಳೆಯುವುದೇಕೆ? ಕೆಲವು ಡೊಂಕಾಗಿ, ಕೆಲವುನೆಟ್ಟಗೆ ಎತ್ತರಕ್ಕೆ ಬೆಳೆಯುವುದೇಕೆ?.ಎಂಬೆಲ್ಲ ವಿಚಾರಗಳನ್ನು ಪ್ರಯೋಗಗಳ ಮೂಲಕ ತೋರಿಸಿಕೊಟ್ಟರು. ‘ಮೆಟ್ಟಿದರೆ ಮುನಿ’ ಇದರಲ್ಲಿ ಮಾತ್ರ ಕಣ್ಣಿಗೆಕಾಣುವಂತೆ ಇದ್ದು ಇಂತಹ ಪ್ರತಿಕ್ರಿಯೆ ಎಲ್ಲದರಲ್ಲೂ ಸುಪ್ತವಾಗಿರುತ್ತದೆ; ಎಂಬುದಾಗಿ ಸಸ್ಯಗಳ ಸಂವೇದನೆಯನ್ನು ಹಾಗೂ ತಾವೇ ತಯಾರಿಸಿ ರಚಿಸಿದ ಯಂತ್ರಗಳನ್ನು ತೋರಿಸಿದಾಗ ನೆರೆದವರು ಬೆರಗಾಗುತ್ತಿದ್ದರು. ಜಗದೀಶರ ಕೀರ್ತಿಬೆಳೆದು ಅವರು ಅಳವಡಿಸಿದ ಉಪಕರಣಗಳನ್ನು ಹಲವು ಪಾಶ್ಚಾತ್ಯ ದೇಶಗಳಲ್ಲಿ ಬಳಸುವುದು ಪ್ರಾರಂಭವಾಯಿತು.


ಇಂಗ್ಲೆಂಡಿನ ಡೇವಿ-ಪ್ಯಾರಡೆ, ಪ್ರಸಿದ್ಧ ಸಂಶೋಧನಾಲಯ. ಅಲ್ಲಿ ಜಗದೀಶರಿಗೆ ತಮ್ಮ ವೈಜ್ಞಾನಿಕ ಕಾರ್ಯವನ್ನು ಮುಂದುವರಿಸಬೇಕೆಂಬ ಕೋರಿಕೆ ಬಂತು.ಅವರ ಒತ್ತಾಯಕ್ಕೆ ಮಣಿದು ಸ್ವಲ್ಪಸಮಯ ಅಲ್ಲಿ ಕೆಲಸ ಮಾಡಿದರು. ಇಂಗ್ಲೆಂಡ್, ಪ್ರಾನ್ಸ್, ಜರ್ಮನಿ, ಅಮೇರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಪ್ರವಾಸಮಾಡಿ, ಅಲ್ಲಿನ ವಿಜ್ಞಾನ ಸಂಸ್ಥೆಗಳಲ್ಲಿ ತಮ್ಮ ಸಂಶೋಧನೆಗಳನ್ನು ವಿವರಿಸಿದರು.ಇಂದು ನಾವು ದೂರದಿಂದಲೇ ಟಿವಿ ಚಾಲೂಮಾಡಬಹುದು, ಕಾರಿನ ಬಾಗಿಲುಗಳನ್ನು ಲಾಕ್ ಮಾಡಬಹುದು, ಪೈಲೆಟ್ ರಹಿತ ವಿಮಾನವನ್ನು ಹಾರಿಸಬಹುದು. ಇಂತಹ ಸೌಲಭ್ಯದ ದೂರ ನಿಯಂತ್ರಕ ಕಂಡುಹಿಡಿದವರು ಜಗದೀಶ್ಚಂದ್ರಬೋಸರು.

ದಾಂಪತ್ಯ- ವೈದ್ಯ ಶಾಸ್ತ್ರ ಓದಿದ ಅಬಲಾಬೋಸ್ ಜಗದೀಶರ ಪತ್ನಿ. ಜಗದೀಶರ ತಂದೆ ತನ್ನ ಉದಾರಭಾವದಿಂದ ಬೇಕಾದಷ್ಟು ಖರ್ಚುಮಾಡಿ ಸಾಲದಹೊರೆಯನ್ನು ಹೊತ್ತಿದ್ದರು. ಇದನ್ನೆಲ್ಲ ಬೋಸರೇ ನಿರ್ವಹಿಸಿದಾಗ ಅಬಲಾಬೋಸ್ ಮಿತವ್ಯಯದಿಂದ ಸಂಸಾರ ತೂಗಿಸಿಕೊಂಡು ಪತಿಗೆ ನೆರವಾದರು. ಹಾಗೆಯೇ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಪತಿಗೆ ಮನೆಯ ವಿಚಾರಗಳಲ್ಲಿ ಸ್ವಲ್ಪವೂ ಯೋಚನೆ ಬರದಂತೆ ಗೃಹಕೃತ್ಯಗಳನ್ನು ತೊಡಗಿಸಿಕೊಂಡು ಪತಿಗೆ ತಕ್ಕ ಸತಿಯಾಗಿದ್ದರು. ಈ ದಂಪತಿಗಳಿಗೆ ಒಂದು ಮಗುವಾಗಿತ್ತು. ಆದರೆ ಅದು ಅಕಾಲದಲ್ಲಿ ತೀರಿಹೋಯಿತಂತೆ. ಅವರಿಬ್ಬರೂ ವಿದ್ಯಾರ್ಥಿಗಳನ್ನೇ ತಮ್ಮ ಮಕ್ಕಳಂತೆ ನೋಡಿಕೊಂಡರು. ಹೆಣ್ಣುಮಕ್ಕಳ ಪ್ರೌಢಶಾಲೆಯನ್ನು ಸ್ಥಾಪಿಸಿ ಅದರ ಹೊಣೆಯನ್ನು ಅಬಲಾಬೋಸ್ ನಿರ್ವಹಿಸುತ್ತಿದ್ದರು.

ಧರ್ಮ, ವೇದಾಂತ, ಆಧ್ಯಾತ್ಮ ವಿಷಯಗಳಿಗೆ ಖ್ಯಾತವಾಗಿದ್ದ ಭಾರತದ ಪ್ರಜೆಯೊಬ್ಬ ವಿಜ್ಞಾನದಲ್ಲಿ, ಅಸಾಧಾರಣ ಕಾರ್ಯಸಾಧಿಸಿರುವುದು ಇದೇ ಮೊದಲೆಂದು ಜಗತ್ತು ಕೊಂಡಾಡಿತು. 23-11-1937 ರಂದು ಜಗದೀಶ್ಚಂದ್ರಬೋಸರು ನಿಧನರಾದರು. ಜಗದೀಶ್ಚಂದ್ರರಿಂದಾಗಿ ಭಾರತಕ್ಕೆ ಗೌರವ ಬಂತು. ಇದ್ದರೆ ಹೀಗೊಬ್ಬ ಮಗ ಇರಬೇಕಲ್ಲವೇ!?

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

6 Responses

  1. ಧನ್ಯವಾದಗಳು ಹೇಮಮಾಲಾ ಹಾಗೂ ಓದುಗರಿಗೆ..

  2. ನಯನ ಬಜಕೂಡ್ಲು says:

    ಜಗದೀಶ ಚಂದ್ರ ಬೋಸ್ ರ ಬಗ್ಗೆ ಸ್ವಲ್ಪ ಗೊತ್ತಿತ್ತು, ಇವತ್ತು ಅವರ ಪೂರ್ತಿ ಇತಿಹಾಸದ ಪರಿಚಯವಾಯಿತು.

  3. ಹರ್ಷಿತಾ says:

    ಜಗದೀಶ ಚಂದ್ರ ಬೋಸ್ ಅವರ ಬಗ್ಗೆ ಬಹಳ ವಿಷಯಗಳನ್ನು ತಿಳಿಸಿದ್ದೀರಿ..ಧನ್ಯವಾದಗಳು

  4. Savithri bhat says:

    ಜಗದೀಶ ಚಂದ್ರ ಬೋಸ್ ಬಗ್ಗೆ ಬಹಳ ಚೆನ್ನಾಗಿ ಬರೆದಿರಿ
    ಧನ್ಯವಾಗಳು

  5. ಶಂಕರಿ ಶರ್ಮ says:

    ಮಹಾನ್ ವಿಜ್ಞಾನಿಯ ಬಗ್ಗೆ ಸವಿವರ ಸೊಗಸಾದ ಲೇಖನ ವಿಜಯಕ್ಕ

  6. parvathikrishna says:

    ವಿವರವಾದ ಲೇಖನ. ವಿಜ್ಞಾನಿ ಬೋಸ್ ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: