ಗುಡ್ ಗರ್ಲ್ ‘ಸ್ಮಾರ್ಟ್ ಗರ್ಲ್’ ಕೂಡ ಆಗಿರಲಿ
ಅದೊಂದು ದಿನ ಸಂಜೆ ಏಳು ಗಂಟೆಯ ಸಮಯ. ಕತ್ತಲಾಗಿತ್ತು. ಹೊರಗಡೆ ಎಲ್ಲೋ ಹೋಗಿ ಬರುತ್ತಿದ್ದ ನಾನು, ಮುಖ್ಯರಸ್ತೆಯಿಂದ ನಮ್ಮ ಬಡಾವಣೆಗೆ ತಿರುಗುವ ರಸ್ತೆಯ ಪಕ್ಕದ ಅಂಗಡಿಯಲ್ಲಿ ಸಣ್ಣ ವ್ಯಾಪಾರ ಮಾಡಿ ಹೊರಡುವವಳಿದ್ದೆ. ಅಲ್ಲಿಯೇ ಪಕ್ದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಎಳೆಯ ಯುವತಿಯೊಬ್ಬಳು ಯಾರ ಬಳಿಯೋ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಅವಳ ಮಾತಿನ ಶೈಲಿ, ಸ್ವಲ್ಪ ಅತಿ ಎನಿಸಿದ ಕಿಸಿಕಿಸಿ ನಗು….ನನ್ನ ಮನಸ್ಸಿಗಂತೂ ಹಿತವೆನಿಸಲಿಲ್ಲ. ಯಾರೋ ಬಾಯ್ ಫ್ರೆಂಡ್ ಜೊತೆ ಲಲ್ಲೆಮಾತುಗಳನ್ನಾಡುತ್ತಿರಬೇಕು, ಈಗಿನ ಹುಡುಗಿಯರಿಗೆ ಸಾಮಾಜಿಕ ಶಿಸ್ತು ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ತನ್ನ ಮಾತುಕತೆ, ಚರ್ಯೆಗಳನ್ನು ಪರಿಚಿತರು ಗಮನಿಸಿ ಈ ಹುಡುಗಿ ಹಾಗೆ..ಹೀಗೆ ಎಂಬ ಅಭಿಪ್ರಾಯ ತಳೆಯುತ್ತಾರೆ ಎಂಬ ಪರಿಜ್ಞಾನ ಇಲ್ಲ…ಇತ್ಯಾದಿ ನನ್ನ ಮನಸ್ಸಿನಲ್ಲಿ ಅಂದುಕೊಂಡೆ.
ಈಗ ಮಧ್ಯ ವಯಸ್ಸಿನಲ್ಲಿರುವ, ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ಬಂದ ಹೆಚ್ಚಿನ ಅಮ್ಮಂದಿರ ಅಭಿಪ್ರಾಯ ಹೀಗೆಯೇ ಇರುವ ಸಾಧ್ಯತೆ ಹೆಚ್ಚು. ಆಧುನಿಕ ಸವಲತ್ತುಗಳು, ಮೊಬೈಲ್ ಫೋನ್ ಗಳಿಲ್ಲದ ನಮ್ಮ ಬಾಲ್ಯಕಾಲದಲ್ಲಿ, ಹೆಣ್ಣು ಮಕ್ಕಳೆಂದರೆ ತಗ್ಗಿ ಬಗ್ಗಿ ನಡೆಯಬೇಕು, ಕೆಲಸ-ಬೊಗಸೆ ಕಲಿಯಬೇಕು, ಹುಡುಗರೊಂದಿಗೆ ಚೆಲ್ಲುಚೆಲ್ಲಾಗಿ ವರ್ತಿಸಬಾರದು, ಹೀಗಿರಬೇಕು, ಹಾಗಿರಬಾರದು ಎಂಬ ನಿರ್ದೇಶನದ ಲಕ್ಷ್ಮಣ ರೇಖೆಯ ಒಳಗೆ ಬೆಳೆದುಬಂದ ಕಾರಣ ‘ಗುಡ್ ಗರ್ಲ್ ಸಿಂಡ್ರೋಮ್‘ ನಮಗರಿಯದೆಯೇ ನಮ್ಮನ್ನು ಆವರಿಸುತ್ತಿತ್ತು. ನಮಗೆ ಏನು ಬೇಕು, ನಾವು ಹೇಗಿರಬೇಕು ಎಂಬುದಕ್ಕೆ ವೈಯುಕ್ತಿಕ ಆಯ್ಕೆಗೆ ಅವಕಾಶವೇ ಇಲ್ಲದಂತೆ ಇನ್ನೊಬ್ಬರ ಮೆಚ್ಚುಗೆ ಗಳಿಸಲು, ಇನ್ನೊಬ್ಬರಿಂದ ಅಂಗೀಕಾರ ಪಡೆಯಲು ನಾವು ಹೇಗಿರಬೇಕು ಎಂಬುದೇ ನಮ್ಮ ಆದರ್ಶವಾಗಿತ್ತು. ಆಗಿನ ಸಾಮಾಜಿಕ ಪರಿಸರದಲ್ಲಿ ಇದು ಸೂಕ್ತವೇ ಆಗಿತ್ತು.
ಇನ್ನೂ ಮಾತನಾಡುತ್ತಲೇ ಇದ್ದ ಆ ಯುವತಿ ಅಚಾನಕ್ ಆಗಿ ನನ್ನತ್ತ ನೋಡಿದಾಗ ನನಗೆ ಆಶ್ಚರ್ಯವಾಯಿತು. ಆಕೆ, ನನಗೆ ಪರಿಚಿತಳೇ ಆಗಿದ್ದಳು. ಸ್ನೇಹಿತೆಯೊಬ್ಬರ ಮಗಳು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನನ್ನನ್ನು ಗಮನಿಸಿದ ಆಕೆ ‘ಹಾಯ್ ಆಂಟಿ’ ಅಂದು ಪುನ: ಮಾತು ಮುಂದುವರಿಸಿದಳು. ಚಿಕ್ಕ ವಯಸ್ಸು,ವಿದ್ಯೆ ಇದೆ, ಕೈಯಲ್ಲಿ ದುಡ್ಡಿದೆ, ಮೇಲಾಗಿ ಸ್ವಾತಂತ್ರ್ಯ ಇದೆ, ಏನಾದರೂ ಮಾಡಿಕೊಳ್ಳಲಿ ಅಂತ ಒಂದು ಮನಸ್ಸು ಹೇಳಿತಾದರೂ, ಆಕೆ ಸ್ನೇಹಿತೆಯ ಮಗಳು, ಸೂಕ್ಷ್ಮವಾಗಿ ತಾಯಿಯ ಗಮನಕ್ಕೆ ತರುವುದು ಉತ್ತಮವಲ್ಲವೇ ಎಂದಿತು ಇನ್ನೊಂದು ಮನಸ್ಸು. ಕೆಲವು ದಿನಗಳ ನಂತರ ಆ ಸ್ನೇಹಿತೆಯ ಮನೆಗೆ ಭೇಟಿಕೊಟ್ಟಿದ್ದಾಗ, ಹೇಳಲೋ, ಬೇಡವೂ ಅಂತ ಅಳೆದೂ-ಸುರಿದೂ ಕೊನೆಗೆ, ಸಂಕ್ಷಿಪ್ತವಾಗಿ, ನಾನು ಗಮನಿಸಿದುದನ್ನು ಹೇಳಿದೆ.
ಆಕೆಗೆ ಅಸಮಾಧಾನ, ಚಿಂತೆ ಅಥವಾ ಮುಜುಗರ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ನನಗೆ ಅಚ್ಚರಿಯಾಗುವಂತೆ ಸ್ನೇಹಿತೆ ಪಕಪಕನೇ ನಗುತ್ತಾ ‘ ಓಹೋ ಅದಾ..…ಚೆನ್ನಾಗಿ ನಾಟಕ ಆಡುತ್ತೆ… ಅವರ ಕಂಪೆನಿ ಕ್ಯಾಬ್ ಮೈನ್ ರೋಡ್ ವರೆಗೆ ಬರುತ್ತೆ. ಕೆಲವೊಮ್ಮೆ ಕತ್ತಲಾಗುತ್ತೆ. ಆವಾಗ ಅಲ್ಲಿಳಿದು ಮನೆಗೆ ಫೋನ್ ಮಾಡಿ ತಿಳಿಸ್ತಾಳೆ. ಇಲ್ಲಿಂದ ಹೋಗಿ ಕರ್ಕೊಂಡು ಬರುವಷ್ಟು ಸಮಯ ಆ ಬಸ್ ಸ್ಟ್ಯಾಂಡ್ ನಲ್ಲಿ ಒಬ್ಳೇ ಇರ್ತಾಳಲ್ಲಾ.. ಯಾರಾದರೂ ಪಡ್ಡೆ ಹುಡುಗರು ಏನಾದ್ರೂ ನೆಪ ಮಾಡ್ಕೊಂಡು ಮಾತಾಡ್ಸೋದು, ಕಣ್ಣು ಹೊಡೆಯೋದು, ಹಲ್ಲಿ ಕಿಸಿಯೋದು ಮಾಡ್ತಾರಂತೆ. ಅದಕ್ಕೆ ಇವ್ಳೇ ಮಾಡ್ಕೊಂಡಿರೋ ಉಪಾಯ ಇದು. ಮನೆಗೊಮ್ಮೆ ತಿಳಿಸಿ ಆಮೇಲೆ ನನ್ನ ಬಳಿಯೋ, ಅವಳ ಫ್ರೆಂಡಿಗೋ ಬಾಯ್ ಫ್ರೆಂಡ್ ಗೆ ಮಾತಾಡಿದಂಗೆ ಸುಳ್ಳೇ ಸುಳ್ಳು ಮಾತಾಡ್ತಾಳೆ. ಕೆಲವೊಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಿಯೇ ಏಕಪಾತ್ರಾಭಿನಯ ಮಾಡ್ತಾಳೆ. ಅಪ್ಪ ಅಥವಾ ತಮ್ಮ ಬರುವಲ್ಲಿ ವರೆಗೆ ಹೀಂಗೆ ಮಾತಾಡ್ತಾಳಂತೆ . ಯಾವ ಪಡ್ಡೆ ಹುಡುಗರೂ ಇವ್ಳ ತಂಟೆಗೆ ಬಂದಿಲ್ವಂತೆ.
“ಈಗಿನ ಹುಡುಗೀರು ಸ್ಮಾರ್ಟ್ ಕಣೇ….ನಾವುಗಳು ಕಾಲೇಜಿಗೆ ಹೋಗ್ತಿರ್ಬೇಕಾದ್ರೆ, ಬಸ್ ಮಿಸ್ ಆಗಿ ಕತ್ತಲಾದ್ರೆ, ಯಾವನಾದ್ರೂ ಮಾತಾಡ್ಸಿದ್ರೆ ಪೆಕರು ಪೆಕರಾಗಿ ಅಳುಮುಂಜಿ ತರ ಇರ್ತಿದ್ವಿ ಅಲ್ವಾ..‘‘ ಅಂದಾಗ ‘ಜಾಣೆಯಿವಳು’ ಎಂದು ತಲೆದೂಗಿದೆ.
ಹೆಣ್ಣನ್ನು ಚುಡಾಯಿಸುವವರು ಅಂದೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ತ್ರೇತಾಯುಗದಲ್ಲಿಯೇ ರಾವಣನು ಸೀತೆಯನ್ನು ಕಾಡಿದ್ದನಷ್ಟೆ. ಇನ್ನು ಕಲಿಯುಗದಲ್ಲಿ ಕೇಳಬೇಕೆ? ಮಹಿಳೆಗೆ ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯವನ್ನು ಅಭಿವ್ಯಕ್ತಿ ಪಡಿಸುವ ಜಾಣ್ಮೆ, ಚಾಲಾಕಿತನ ಮತ್ತು ಅವಳ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಇದ್ದರೆ ಆಕೆ ತನ್ನನ್ನು ಸಂರಕ್ಷಿಸಿಕೊಳ್ಳಲು ಸುಲಭ. ಈಗಿನ ಕಾಲದಲ್ಲಿ ಗುಡ್ ಗರ್ಲ್ ಆಗಿದ್ದರೂ, ಸ್ಮಾರ್ಟ್ ಗರ್ಲ್ ಆಗಿದ್ದರೆ ಉತ್ತಮ.
– ಹೇಮಮಾಲಾ.ಬಿ, ಮೈಸೂರು
ಈ ಜಗವೆಂಬ ರಂಗಮಂಚದಲ್ಲಿ ವಿಧ ವಿಧ ದ ಪಾತ್ರ ಅನಿವಾರ್ಯ. ಚಂದ ದ ಬರಹ.
ಚೆನ್ನಾಗಿದೆ
ಈಗಿನ ಕಾಲದಲ್ಲಿ ಈ ರೀತಿಯ ಜಾಣ್ಮೆ ಬಹಳ ಅವಶ್ಯಕ..ಚೆನ್ನಾಗಿದೆ ಲೇಖನ
ಸಂದರ್ಭೋಚಿತ ..
ಕೆಟ್ಟನಡತೆ ಎಂಬ ಊಹೆಯೊಂದಿಗೆ ಓದಿದರೆ; ಅಂತಿಮವಾಗಿ ಚಾಲಾಕಿತನದ ಪರಿಚಯವಾಯ್ತು…!!
ಹೀಗೂ ಉಂಟೆ..ಒಳ್ಳೆ ಉಪಾಯ..ಬರಹ ಚೆನ್ನಾಗಿದೆ..
ಸಮಯೋಚಿತ ಮತ್ತು ಕಾಲಕ್ಕೂ ಅನ್ವಯ
ಚಂದದ ಲೇಖನ
ಹೌದಲ್ಲಾ.. ಇಂತಹದೊಂದು ಉಪಾಯ ಇದೆ ಎಂದು ತಿಳಿದು ನಿಜವಾಗಿಯೂ ಆಶ್ಚರ್ಯವಾಯಿತು. ಎಷ್ವಾದರೂ ಜೀವನ ಒಂದು ನಾಟಕರಂಗ ತಾನೇ..
ಬರಹವನ್ನು ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಹೌದಲ್ಲ ,ಬದಲಾವಣೆ ಜಗದ ನಿಯಮ. ಬದಲಾದಂತೆ ಅದಕ್ಕೆ ಹೊಂದಿಕೊಂಡು ಬದುಕುವುದು ಜಾಣತನ .ಚೆನ್ನಾಗಿ ತಿಳಿಸಿದ್ದೀರಿ.