ಆದ್ಯತೆ…
.
ಸಾವು ಹೊಸ್ತಿಲ ಕದ ಬಡಿದಾಗ
ಅದು ಹೇಗೆ ತಯಾರಿಲ್ಲದ ನಾನು
ಎದ್ದು ಹೋಗಿಬಿಡುವುದು
ನನ್ನ ಕಣ್ಣಿಂದೊಮ್ಮೆ ನೋಡು
ಸಾವೇ ಎಂದು ಕೇಳಿಕೊಳುವೆ
ಇವೆ.. ಮಕ್ಕಳಿವೆ, ಮನೆಯಿದೆ, ಗಂಡನಾದಿ
ಬಳಗವಿದೆ ಹೇಗೆ ಬರಲಿ ನಿನ್ನೊಡನೆಂದು
ಕೇಳಿಕೊಳಲೇ
ಹೀಗೆಂದು ಕೇಳಿ ನೋಡಲೇ
ಸಾವಿಗೇನಂತೆ ನಿತ್ಯ ಸಮಾರಾಧನೆ-
ದಾಸೋಹ. ಹುಟ್ಟೆಂಬುದು ಬಲು ಕಷ್ಟ
ಸಂಕಟ. ನಡುವ ಈ ಬದುಕು ಮಾತ್ರ
ಅತಿ ತುಟ್ಟಿ..
ಹೀಗೆಂದು ಹೇಳಿ ನೋಡಲೇ
ಅತಿಯಾಸೆ ನನಗಿಲ್ಲ ಮಮಕಾರ
ಬಿಡುತ್ತಿಲ್ಲ, ಮಕ್ಕಳಿನ್ನೂ ಚಿಕ್ಕವೆಂದು
ಅಮ್ಮಬೇಕೆಂದು ಅಳುತ್ತವೆಂದು
ಕಾರಣ ನೀಡಲೇ.
ಮನೆಯ ಸಾರಣೆ, ಕುಂಡದ ಹೂಗಳ
ಪೋಷಣೆ ಆಗಬೇಕಿದೆ ಇನ್ನು,
ಅತಿಥಿಗಳು ಬರಬೇಕಿದೆ ಈ ಹಬ್ಬಕೆಂದು
ಹೇಳಿ ನೋಡಲೆ..
ಇವರಿಗೊಂದೂ ತಿಳಿಯದು, ಅನ್ನಕೆ
ನೀರಿಡುವುದು, ಒಗ್ಗರಣೆ ಸಿಡಿಸುವುದು
ಪಾಪ, ಹಸಿದಿರುತ್ತಾರೆ ನಾ ಹೀಗೆ
ಪಟ್ಟನೆದ್ದು ಬಂದರೆಂದು ಹೇಳಿ ನೋಡಲೆ
ಹಣೆ ಬಳಿ ಇಣುಕುವ ಬಿಳಿ ಕೂದಲಿಗಿಷ್ಟು
ಬಣ್ಣ, ತುಟಿಗೆ ರಂಗು, ಕಾಡಿಗೆಯನು
ಒಮ್ಮೆ ನನಗಾಗಿ ಹಚ್ಚಿ ; ನಗಲೊಮ್ಮೆ
ಅವಕಾಶ ನೀಡೆಂದು ಕೇಳಿಕೊಳಲೇ
ಆಗಲಿರು ಇನ್ನೂ ಕೊಂಚ ವಯಸ್ಸು
ಮುಪ್ಪೇನು ಮೈಗಡರಿದೆಯಷ್ಟೇ
ಯೌವನ ಕುಣಿದಿಲ್ಲವೇ ಮನದಲಿ
ಕಾಣದೆ ನಿನಗೆಂದು ಹೇಳಿ ನೋಡಲೇ
ಕೊಂಚ ನಿಲ್ಲೆಂದು ಕೇಳಿಕೊಳಲೇ….
.
ಅಬ್ಬಾ..ಅದೆಷ್ಟು ಆದ್ಯತೆಗಳಿವೆ ಮಹಿಳೆಗೆ! ಕವನ ಇಷ್ಟವಾಯಿತು
ಸೂಪರ್. ಇವತ್ತಿನ ಪರಿಸ್ಥಿತಿ ಮಾನವನ ಸ್ವಯಂಕೃತ ಅಪರಾಧ, ಆದರೂ ಅಂಜದೆ ಸಾವಿನ ಮುಂದೆ ಮಂಡಿಸಲು ಎಷ್ಟೊಂದು ಅಹವಾಲುಗಳಿವೆ…..
Nice one
ಆದ್ಯತೆ ಕವನ ಮನಸಿಗೆ ಹಿಡಿಸಿತು. ನವ್ಯ ಕಾವ್ಯ ಸಪರ್
ಮನಸ್ಸಿನ ಬೆರಗು, ತಲ್ಲಣ, ಇಚ್ಛೆ.. ಎಲ್ಲವನ್ನೂ ಹೆಣೆದ ಸೊಗಸಾದ ಕವನ.
ತನಗಾಗಿ ಎಂದೂ ಬದುಕದ ಹೆಣ್ಣು ಮಕ್ಕಳ ನಿತ್ಯ ತಲ್ಲಣಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದೆ ಈ ಕವನ.
ಅರ್ಥ ಪೂರ್ಣ ಕವನ ಚೆನ್ನಾಗಿದೆ