ಲಾಕ್ ಡೌನ್ ಅಡುಗೆ ಮನೆಯಲ್ಲಿ ಕಲಿತ ಕೆಮೆಸ್ಟ್ರಿ
ನಾನು ಮಾಡಿದ ಪಾನಿಪುರಿಯ ವಾಟ್ಸಪ್ ಸ್ಟೇಟಸ್ ನೋಡಿದ ಎಸ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೆಳತಿಯೊಬ್ಬಳು ‘ತಾನೂ ಇದನ್ನೇ ಮಾಡಿದ್ದೇನೆಂದು, recession ಏನಾದ್ರೂ ಸ್ಟಾರ್ಟ ಆದರೆ ಈ company ಕೆಲಸ ಬಿಟ್ಟು ಒಂದು ಸಣ್ಣ ಹೊಟೇಲ್ ಹಾಕುತ್ತೇನೆ. ತಿನ್ನೋಕಾದ್ರೆ ಅವಶ್ಯಕ ಎಲ್ಲರೂ ಬರುತ್ತಾರೆ.ಹೇಗೋ ಚೆನ್ನಾಗಿ ದುಡೀಬಹುದು’ಎಂದಳು. ಅದಕ್ಕೆ ನಾನೂ ರಿಪ್ಲೈ ಮಾಡಿದೆ, ‘ಬಹುಶ್ಯಃ ಅದೂ ಕಷ್ಟ ಆಗಬಹುದೇನೋ ಏಕೆಂದರೆ ಈಗಾಗಲೇ ಹೊಟೆಲ್ ಬಿಸ್ನೆಸ್ ಪ್ರಾರಂಭಿಸಿದವರು ಇದರಲ್ಲಿ ನಿಂತಿರುತ್ತಾರೆ.ಇವರನ್ನು ಬಿಟ್ಟು ಈ ಲಾಕ್‍ಡೌನ್ ಸಮಯದಲ್ಲಿ 20% ಜನ master chef ಆಗೇ ಬದಲಾಗಿ ಇರುತ್ತಾರೆ. ಕಾರಣ ಅದರಲ್ಲೂ ಕಾಂಪಿಟೇಶನ್ ಎದುರಿಸಬೇಕಾಗುತ್ತದೆ ‘ಎಂದೆ.
ಹಾಗೆ ನೋಡಿದರೆ ಇದೂ ನಿಜವಾದ ವಿಷಯವೇ.ಕಾರಣ ಶೇ 40 ರಷ್ಟು ಜನರ whats app status ಈ ಸಮಯದಲ್ಲಿ ಬಗೆಬಗೆಯ ತಿಂಡಿ ತಿನಿಸುಗಳದೇ ಆಗಿದೆ. ಈ ಲಾಕ್ ಡೌನ್ ಸಮಯದಲ್ಲಿ ಮನಸ್ಸು ಮತ್ತು ಬುದ್ಧಿ ಖುಷಿಯಿಂದಿರಲು ಈ ರೀತಿಯ ಒಂದಲ್ಲಾ ಒಂದು ಚಟುವಟಿಕೆ ಮಾಡಬೇಕಾದದ್ದು ಅನಿವಾರ್ಯ ಕೂಡ.
ಆದರೆ ನಾನು ಇಲ್ಲಿ ಹೇಳ ಹೊರಟಿರುವದು ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕಂಡು ಕೊಂಡ ಕೆಮೆಸ್ಟ್ರಿ ಬಗ್ಗೆ. ಬೆಳಿಗ್ಗೆ ಎದ್ದು ಚಹ ಮಾಡುವಾಗ ಎಲ್ಲಾ ಸಾಮಾನನ್ನು ಒಂದೇ ಸಲ ಹಾಕಿ ಚಹ ಮಾಡಬಹುದಲ್ಲವೇ? ಯಾಕೆ ಒಂದೊಂದೇ ಹಾಕಬೇಕೆಂದು ಯೋಚಿಸಿದಾಗ ಹೊಳೆದದ್ದೇ, ಓಹ್! ಮೊದಲು ಸಕ್ಕರೆ ಬೆರೆಸುವದರಿಂದ ನೀರಿನ ಕುದಿಯುವ ಬಿಂದು ಹೆಚ್ಚಾಗಿ ಚಹಾಪುಡಿ ಹಾಕಿದ ತಕ್ಷಣ ಅದರ ಗುಣ ಬಿಡಲು ಅದು ಸಹಕರಿಸುತ್ತದೆ ಎಂದುಕೊಂಡೆ.
ಅರೆ! ನಮ್ಮಜ್ಜಿ ಕಾಲದಿಂದಲೂ ಟೀ ಮಾಡುತ್ತಿರುವದು ಇದೇ ರೀತಿಯಲ್ಲವೇ? ಮೊದಲು ಸಕ್ಕರೆ,ನಂತರ ಟೀ ಪೌಡರ್,ನಂತರ ಹಾಲು ಇದೇ ಕ್ರಮದಲ್ಲಲ್ಲವೇ? ಅವರೆಲ್ಲಾ ಏನು ಕೆಮೆಸ್ಟ್ರಿ ಕಲಿತಿದ್ದರೆ? ನೋಡೋಣ ಬೇರೆ ಏನಾದರೂ ಕಾರಣ ಇರಬಹುದೆಂದು ಗೂಗಲ್ಲನ್ನು ಕೇಳಿದರೆ ಅದೂ ಅದೇ ಕಾರಣವನ್ನು ಹೇಳಿತು.
ಸರಿ ಎಂದುಕೊಂಡು ಮಧ್ಯಾನ್ಹದ ಊಟ ತಯಾರಿಸಲು ಹೊರಟೆ.ಬೇಳೆಸಾರು ಮಾಡೋಣವೆಂದು ಕುಕ್ಕರಿನಲ್ಲಿ ಬೇಳೆ, ಈರುಳ್ಳಿ, ಟೊಮೆಟೋ ಎಲ್ಲಾ ಹಾಕಿ ಕೊನೆಯಲ್ಲಿ ಒಂದು ಟೇಬಲ್ ಸ್ಪೂನ್ ಎಣ್ಣೆ ಹಾಕುವಾಗ ಅರೇ! ಇದನ್ನೇಕೆ ಹಾಕಬೇಕೆಂದು ಯೋಚಿಸಿದಾಗ ಹೊಳೆದದ್ದು ಮತ್ತದೇ ಕೆಮೆಸ್ಟ್ರಿಯ ಕುದಿಯುವ ಬಿಂದು.ನೀರಿನದಕ್ಕಿಂತ ಎಣ್ಣೆಯ ಕುದಿಯುವ ಬಿಂದು ಹೆಚ್ಚಾಗಿದ್ದು ಅದು ಬೇಳೆ ಚೆನ್ನಾಗಿ ಬೇಯಿಸುವದರ ಜೊತೆಗೆ ಹೊರಗೆ ಉಕ್ಕಿ ಬಂದು ಅದರ ಸಾರವೆಲ್ಲಾ ಕಳೆದುಹೋಗುವದನ್ನು ತಡೆಯುತ್ತದಲ್ಲವೇ?!
ಮತ್ತೆ ಈರುಳ್ಳಿ ಟೊಮೆಟೋ ಹಾಕಿ ಪಲ್ಲೆ ಮಾಡುವಾಗ ಮೊದಲು ಈರುಳ್ಳಿಯನ್ನು ಹಾಕಿ ಫ್ರೈ ಮಾಡಬೇಕು ನಂತರ ಟೊಮೆಟೋ ಹಾಕಬೇಕು.ಯಾಕೆ ಹೀಗೆ?ಎಂದುಕೊಂಡು ಮತ್ತೆ ಯೋಚಿಸಿದಾಗ ಟೊಮೆಟೋ ಹುಳಿ ಅಂಶದಿಂದ ಈರುಳ್ಳಿ ಬೇಗ ಬೇಯುವದಿಲ್ಲವೇನೋ ಎಂದುಕೊಂಡೆ.ಮತ್ತೆ ಗೂಗಲ್ಲನ್ನು ಕೇಳಲಾಗಿ ಅದು ನನ್ನ ಯೋಚನೆಯ ಜೊತೆಗೆ ಇನ್ನೂ ಒಂದು ಕಾರಣವನ್ನೂ ತೋರಿಸಿತು ಅದೇನೆಂದರೆ ಈರುಳ್ಳಿಯಲ್ಲಿನ ಸಿಹಿ ಅಂಶ ಚೆನ್ನಾಗಿ ಬಿಡಲು ಈ ಮೆಥೆಡ್ ಸಹಕಾರಿ ಎಂದು.
ಅಂತೂ ಈ ಲಾಕ್ ಡೌನ್ ಅಡುಗೆ ಮನೆಯಲ್ಲೂ ಕೆಮೆಸ್ಟ್ರಿ ಕಲಿತಿದ್ದಲ್ಲದೇ,ತಲೆತಲಾಂತರಗಳಿಂದ ಕೆಮೆಸ್ಟ್ರಿ ಕಲಿಯದೆಯೂ ಚೆನ್ನಾಗಿ ಅಡುಗೆ ಕಲೆ ಕಲಿತಿರುವ ಹೆಣ್ಣು ಕುಲದ ಬಗ್ಗೆ ಹೆಮ್ಮೆಯೂ ಎನಿಸಿತು.
– ಬೀನಾ ಶಿವಪ್ರಸಾದ, ಬೆಂಗಳೂರು
ಸಕಾಲಿಕ ಬರಹ..ಚೆನ್ನಾಗಿದೆ.
ಹೌದು, ಈ ಲಾಕ್ ಡೌನ್ ಎಲ್ಲರಿಗೂ ಸಾಕಷ್ಟು ಪಾಠಗಳನ್ನು ಕಲಿಸಿದೆ.
ಸುಪರ್aduge ಕೆಮೆಸ್ಟ್ರಿ
ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ
ಅಡುಗೆ, ಕೆಮಿಸ್ಟ್ರಿ ಲೇಖನ ಚೆನ್ನಾಗಿದೆ
ಅಡುಗೆ ಕೋಣೆಯಲ್ಲಿ ಎಲ್ಲಾ ಹೆಂಗೆಳೆಯರೂ ವಿಜ್ಞಾನಿಗಳಾಗಿಬಿಡುತ್ತಾರೆ..ತಮಗೆ ತಿಳಿಯದಂತೆ, ಅಲ್ಲವೇ? ಸೊಗಸಾದ ಸಕಾಲಿಕ ಬರಹ.