ದುಡಿಯುವ ಕೈಗಳೇ…ದೇಶ ಕಟ್ಟುವ ಕೈಗಳು
ದುಡಿಯುವ ಕೈಗಳಿಗೆ
ದುಡಿಮೆಯೇ ದೇವರು
ದೇಶ ಕಟ್ಟೋ ಕೈಗಳಿಗೆ
ಉದ್ಯೋಗವೇ ಉಸಿರು.
ಬೇಡುತ ತಿಂದು ಭೂಮಿಗೆ
ಹೊರೆಯಾಗಲಾರರು
ದುಡಿಯುತ ಬೆಳೆದು ನಾಡಿಗೆ
ದೊರೆಯಾಗುವರು.
ಶ್ರದ್ಧೆಯಲಿ ದುಡಿಯೋ
ಶ್ರಮಿಕರಿಗೆ ಶ್ರಮವೇ ಶಕ್ತಿ
ಶುದ್ಧ ಮನದ ಕಾಯಕ
ಯೋಗಿಗಳಿಗೆ ಬೆವರೇ ಭಕ್ತಿ.
ಕುಟುಂಬ ಭಾರವ ಹೊತ್ತು
ದಿನವ ದುಡಿಯುವರು
ಕಷ್ಟಪಟ್ಟು ತಮ್ಮವರಿಗಾಗಿ
ಅನುದಿನ ಬಾಳುವರು.
ವಿಧವಿಧದ ಕಾಯಕಗಳಲಿ
ಕೈಲಾಸ ಕಂಡವರು
ವಿವಿಧ ಕೌಶಲ್ಯಗಳ ಕರಗತವ
ಮಾಡಿಕೊಂಡವರು.
ವಿಶ್ವದೆಲ್ಲೆಡೆ ಹಗಲಿರುಳೆನ್ನದೆ
ದುಡಿಯುವ ವರ್ಗ
ವಿಶ್ವದಿ ಕರ್ಮಗಳಲಿ ದುಡಿದು
ಕಾಣುವರು ಸ್ವರ್ಗ.
ಕೈ ಕೆಸರಾದರೆ ತಾನೇ
ಬಾಯಿ ಮೊಸರು ಆಗುವುದು
ಮೈ ಮುರಿದು ದುಡಿದರೆ
ಬಾಳ ಬೆಳಗುವುದು.
ಮಾತಾ ಪಿತಾ ಗುರು
ದೈವಗಳ ಪೂಜಿಸುವ
ಕೃಷಿಕ ಸೈನಿಕ ಶಿಕ್ಷಕ
ಕಾರ್ಮಿಕರ ಗೌರವಿಸುವ.
-ಶಿವಮೂರ್ತಿ.ಹೆಚ್, ದಾವಣಗೆರೆ.
ನಮ್ಮ ಅನ್ನದಾತ ರೈತ…
ಒಳ್ಳೆಯ ಕವನ.
ಹೌದು, ಇಲ್ಲಿ ಎಲ್ಲರೂ ಪರಸ್ಪರ ಕೈ ಜೋಡಿಸಿದಾಗಲೇ ಬದುಕು. ಶ್ರಮಿಕರ ಶ್ರಮವನ್ನು ಬೆಂಬಲಿಸಿದಾಗ ಅದು ಅವರಲ್ಲಿ ಮತ್ತೆ ದುಡಿಯುವ ಚೈತನ್ಯ ತುಂಬುವುದು.
ಶ್ರಮಜೀವಿಗಳ ಬೆವರಿನ ಬೆಲೆ ಅರಿತರೆ ಉತ್ದಾನ ಸಾಧ್ಯ.. ಸೊಗಸಾದ ಕವನ.