‘ತಪವೂ- ಒಲವೂ- ಚಲನೆಯೂ’
ನಾನು ತಪಸ್ವಿನಿಯಲ್ಲ,
ನಿಶ್ಚಿಂತ ಮೌನದ ಧ್ಯಾನಕೆ
ನನಗೆ ವ್ಯವಧಾನವಿಲ್ಲ.
ಬೆಳಗು ಬೈಗೆನದೆ
ಗಡಿಯಾರದೊಡನೆ ಓಡುವ
ನನಗೆ ಸಮಯವೆಲ್ಲಿ?!
ಕಾಲನೇ ನನ್ನ ಕಾದಲ,
ಮಿಸುಕಾಡಲು ಬಿಡದೆ ನನ್ನ
ಬಿಗಿಹಿಡಿದು ಬಂಧಿಸಿರುವ-ನಲ್ಲ..!
ಅರೆಗಳಿಗೆಯೂ ಮರೆತೂ
ಮೈಮರೆತು ನಿಲಲಾಗದು,
ಗೆಲುವಿನತ್ತಲಿರುವ ಪಯಣ
ನಿಲಿಸಲಾಗದು..
ನನ್ನ ಧ್ಯಾನವೂ ಈಗ
ಕಾಲನೊಟ್ಟಿಗಿನ ಒಲವಿನ
ಪಯಣ; ಉಸಿರ ಪಣಕ್ಕಿಟ್ಟ
ಅಗಮ್ಯ ನಿಲುದಾಣದೆಡೆಗಿನ
ನಿರಂತರ ಚಲನ..
- ವಸುಂಧರಾ. ಕೆ. ಎಂ., ಬೆಂಗಳೂರು
ಕವಿತೆ ಹುಟ್ಟುವುದೇ ವ್ಯವಧಾನವಿಲ್ಲದ ಈ ಗಳಿಗೆಯಲ್ಲಿ ವಸುಂಧರಾ. ಚೆಂದಿದೆ ಕವಿತೆ.
ಧನ್ಯವಾದಗಳು ಸ್ಮಿತಾ….
ಸೊಗಸಾಗಿದೆ..ಇಷ್ಟವಾಯಿತು.
‘ಕಾಲನೊಟ್ಟಿಗಿನ ಒಲವಿನ ಪಯಣ’–ಸಾಲು ಬಹಳ ಇಷ್ಟವಾಯಿತು .ಚೆಂದದ ಕವನ .
ಕವನವು ಸುಂದರವಾದ ಪದಗಳಿಂದ ರಚನೆಯಾಗಿದೆ.ಧನ್ಯವಾದಗಳು
ಸೂಪರ್. ನಿಜ, ಒಂದಿಷ್ಟೂ ಬಿಡುವಿಲ್ಲ,
ಆದರೂ ಅಸ್ಪಷ್ಟ ಸಾಲುಗಳೂ ಬಿಡದಂತೆ ಕಾಡುತ್ತಿವೆಯಲ್ಲ….
ಬಿಡದೆ ಕಾಡುವ ಸಾಲುಗಳು ಚೆನ್ನಾಗಿ ಮೂಡಿ ಬಂದಿವೆ.