ಅಭಿಸಾರಿಕೆ

Share Button

ಅಹುದು ಈಕೆಯೇ
ಅಚ್ಛೋದ ಸರೋವರ ಕಾಣಿಸಿದ
ಬಾಣ ಭಟ್ಟನ ಕಾದಂಬರಿಯ ಕಾದಂಬಿನಿ:

ಹೇಗಿದ್ದರೂ…
ಪೊಡಪೊಟ್ಟೆಯ ಪೃಥೆ, ಪಂಚಮಿ ಪಾಂಚಾಲಿ
ರಾವಣ ಅಪಹರಿಸಿದ ಸೀತೆ ಈ ಹರಿಣಿ
ಮೈಮರೆತೂ ಮೈದೋರದ ಮೃಗತೃಷ್ಣೆ
ಕಪ್ಪಗಿದ್ದರೂ ಕೃಷ್ಣೆ
ಹೆಸರು ಮಹಾಶ್ವೇತೆ.

ದಂತ ಕತೆಯಲ್ಲ ಈ ಹಸ್ತಿ ದಂತದ ಬೊಂಬೆ
ದಂತ ಪಂಕ್ತಿಯ ಬಿಳುಪು ಚೆಲ್ಲಿ ಹಾಲ್ಬೆಳಗು
ಇರುಳಲ್ಲೂ ಮುಗಿಲ ತುಂಬಾ ತುಂಬು ನಗೆ
ಬೆಳದಿಂಗಳು

ಕಾವಳದಲ್ಲೂ ಕಳವಳಿಸದೇ ನಳನಳಿಸುವಳೆಂಬ
ಮಿಥ್ಯೆ ಮುರಿದ ಈ ಮುನ್ನೀರ ಮುಗುದೆ
ಭವದ ಬವಳಿಕೆಗೆ ಬಾಗಿ ಬಯಕೆಗೆ ತೂಗಿ
ಧಾವಂತದಲ್ಲೂ ದುಗುಡವೇರಿ
ಧಮನಿ ಧಮನಿಗಳಲಿ ಹರಿದು ಕೆನ್ನೀರು
ಕಪೋಲಗಳಿಗಿಳಿದ ಕಣ್ಣೀರ ತೋರಗೊಡದ ತರಳೆ

ಜವನಿಕೆಯೋ ಮದನಿಕೆಯೋ ಅಲ್ಲ
ಈ ಅಭಿಸಾರಿಕೆ ತನ್ನ ಮನವನರಿವ ಇನಿಯ
ತನುವ ಪೊರೆವ ತನ್ಮಯನನ್ನೇ ಕಾಮಿಸಿ
ಆ ಗಮನಕ್ಕೇ ಧ್ಯಾನಿಸಿ ಮುಪ್ಪಾದ ಉಪ್ಪು

ಒದಗುವುದು ಎಲ್ಲಾ ಮೇಲೋಗರಕ್ಕೆ ಮೇಲೆ
ಉದುರಿಸುವ ಖಾದ್ಯ ಪರಿಕರಕ್ಕೆ ಸಂ
ಸಾರಕ್ಕೆ ಸಂ ಬಂಧಗಳ ಸಂಕೋಲೆಗಳಿಗೆ
ಸಿಕ್ಕು ಸಿಗ್ಗ ಮರೆತು ಕೋಲೆ
ಬಸವನಂತೆ ಕವಡೆ ಕಟ್ಟಿಕೊಂಡು
ಗೋಣಲ್ಲಾಡಿಸಿದರೂ ಮನದ
ಮನ್ಮಥನ ಧ್ಯಾನ ಮುಗಿಯುವುದಿಲ್ಲ

ಮನದನ್ನೆಯ ಸೇರಲು ಆ ಪುಂಡರೀಕನಿಗಷ್ಟೇ
ಅಲ್ಲ ಮೂರು ಜನ್ಮ ಕಳೆವ ಶಾಪ
ಅದೇ ತಾಪ ಇವಳಿಗೂ  ಪಾಪ!
ಯಾವುದೋ ಜನ್ಮದ ಪಾಪ ಇದಲ್ಲ
ಹೆಣ್ಣಾದುದು, ತನ್ನ ಮನದಿನಿಯನ
ಸೇರಲು ಕಾದೇ ಹನಿಗಣ್ಣಾದುದು!

-ಆನಂದ್ ಋಗ್ವೇದಿ

2 Responses

  1. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ ಸರ್ . ಬಾಂಧವ್ಯದ ತಂತುಗಳ ಬೆಸೆಯುವ ಕಾಣದ ದಾರದ ಎಳೆ ಈಕೆ ……..
    ಅಭಿಸಾರಿಕೆ .

  2. Shankari Sharma says:

    ಚಂದದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: