ಗಜಲ್ : ನೆನಪು
.
ಮರದ ಗೆದ್ದಲಿನಂತೆ ಕೊರೆಯುತಿದೆ ಹಳೆ ನೆನಪು
ಕಟ್ಟಿಗೆಯ ಹುಳುವಿನಂತೆ ಕುಟುಕಿದೆ ಹಳೆ ನೆನಪು
ಸ್ನೇಹ ಸುಖ ದುಃಖಗಳ ಶಾಶ್ವತ ಲಾಭವನ್ನನುಭವಿಸಿ
ಅದರ ಸಂಕೋಲೆಯಲಿ ತೊಳಲಾಡಿಸಿದೆ ಹಳೆ ನೆನಪು
ಸಾಲಸೂಲಗಳ ಮಧ್ಯ ಹೆಣಗಾಡಿ ಇಣುಕಿ ತಿಣುಕಿ
ತೀರಿಸಲಾಗದೆ ಬಳಲಿ ಬೆಂಡಾಗಿಸಿದೆ ಹಳೆ ನೆನಪು
ಗಂಜಿ ಘಟಿಗಿ ಕುಡಿದ ಜಿಂದಗಿಯಲ್ಲಿ ಯಾವುದನ್ನು
ಲೆಕ್ಕಿಸದೆ ಗುಂಡಿಗೆಯ ಗಟ್ಟಿಯಾಗಿಸಿದೆ ಹಳೆ ನೆನಪು
ದುಲ್ಹನ್ ನಂತಿರುವ ಹೊಸ ವರ್ಷದಿ ಅಭಿನವನ
ನುಡಿಯಂತೆ ಹೊಸದನ್ನು ತೋರಿಸಿದೆ ಹಳೆ ನೆನಪು.
-ಶಂಕರಾನಂದ ಹೆಬ್ಬಾಳ, ಬಾಗಲಕೋಟ
ಚೆನ್ನಾಗಿದೆ ಮತ್ತೆ ಮತ್ತೆ ಕಾಡೋ ಹಳೆ ನೆನಪು
ಗೆದ್ದಲು ಮರವ ಕೊರೆದಂತೆ ,ಕಟ್ಟಿಗೆಯನ್ನು ಹುಳ ಕೊರೆದಂತೆ ನೆನಪು ಮನಸ್ಸನ್ನು ಕೊರೆಯುತ್ತದೆ ಆದರೆ ಹೊಸ ವರ್ಷದಲ್ಲಿ ಮತ್ತೆ ಮದುವಣಗಿತ್ತಿಯಂತೆ ಹೊಸತನ್ನು ತೋರಿಸುತ್ತಿದೆ ಆ ಹಳೆ ನೆನಪು.
ಅರ್ಥಪೂರ್ಣವಾಗಿ ಬರೆದಿರುವಿರಿ ಸರ ಶರಣು ತಮಗೆ
ತಮ್ಮ ಈ ಸಾಹಿತ್ಯ ಹಳೆಯ ನೆನಪುಗಳನ್ನು ಹೊಸತರ ತಿಳಿಸು ಪ್ರಯತ್ನ ಅದ್ಭುತ ಧನ್ಯವಾದ ಸರ
ಹೊಸ ವರುಷಕೆ ಹೊಮ್ಮಿದ ಸುಂದರ ಕವನ ಚೆನ್ನಾಗಿದೆ.