ಗಣಪ ನೀನೇಕೆ ಹೀಗೆ?
ಗಣಪ ಗಣಪ ವಿದ್ಯಾ ಗಣಪ ನಿನಗೆ ವಂದನೆ
ಡೊಳ್ಳು ಹೊಟ್ಟೆ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ನಿನ್ನನಪ್ಪಿ ಒಪ್ಪಿಕೊಂಡಿಹೆ
ಎಲ್ಲ ತಪ್ಪು-ಒಪ್ಪು ನುಂಗಿ ದಪ್ಪವಾಗಿಹೆ
ಗಣಪ ಗಣಪ ಗೌರಿ ಗಣಪ ನಿನಗೆ ವಂದನೆ
ಗಜದ ಕರ್ಣ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ಕಿವಿಯ ಗುಟ್ಟು ನಿನಗೆ ಹೇಳುವೆ
ಎಲ್ಲ ಕೇಳಿ ಒಳ್ಳೆದು ಉಳಿಸಿ ದೊಡ್ಡದಾಗಿದೆ
ಗಣಪ ಗಣಪ ಶಂಕರ ಸುತ ನಿನಗೆ ವಂದನೆ
ಚಿಕ್ಕ ಬಾಯಿ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ಮಾತನೊಂದ ನಿನಗೆ ಹೇಳುವೆ
ಮಾತು ಮುತ್ತು ಎಂದು ತಿಳಿದು ಚಿಕ್ಕದಾಗಿದೆ
ಗಣಪ ಗಣಪ ಶಕ್ತಿ ಗಣಪ ನಿನಗೆ ವಂದನೆ
ಇಲಿಯ ಮೇಲೆ ಏಕೆ ಕೂತೆ ಹೇಳು ಸುಮ್ಮನೆ
ಕಂದ ಕೇಳು ಚಿಕ್ಕ ಇಲಿಯು ಯಾಕೆಂದು ಹೇಳುವೆ
ಚಿಕ್ಕ ಆಸೆ ಕನಸನೇರಿ ಸವಾರಿ ಮಾಡಿಹೆ
ಗಣಪ ಗಣಪ ಗಜಮುಖನೇ ನಿನಗೆ ವಂದನೆ
ನಿನ್ನ ಒಂದು ದಂತ ಏಕೆ ಸಣ್ಣದಾಗಿದೆ
ಕಂದ ಕೇಳು ದ್ವಂದ್ವ ನೀತಿ ಇದರಲಿ ಅಡಗಿದೆ
ಅನಗತ್ಯವಾದುದೆಂದು ತೆಗೆದು ಹಾಕಿದೆ
ಗಣಪ ಗಣಪ ಅಭಯ ಹಸ್ತ ನಿನಗೆ ವಂದನೆ
ನಿನಗೆ ಕೈಗಳೇಕೆ ಹೆಚ್ಚು ಹೇಳು ಸುಮ್ಮನೆ
ಕಂದ ಕೇಳು ಕರದ ಮಹಿಮೆ ನಿನಗೆ ಹೇಳುವೆ
ಕಷ್ಟ ನಷ್ಟಗಳ ನೆರವಿಗೆ ಕೈ ಸಿದ್ಧವಾಗಿದೆ
ಗಣಪ ಗಣಪ ಜಗನ್ನಾಥ ನಿನಗೆ ವಂದನೆ
ಮೋದಕವ ಕೈಯಲೇಕೆ ಹಿಡಿದೆ ಸುಮ್ಮನೆ
ಮುದ್ದು ಕಂದ ಸಿಹಿಯು ಬೇಕೆ ನಿನಗೆ ಸವಿಯಲು
ಕಷ್ಟಪಟ್ರೆ ಫಲವು ನಿನದೆ ಸಿಹಿಯ ತಿನ್ನಲು
ಗಣಪ ಗಣಪ ಎಷ್ಟು ಚೆಂದ ನಿನ್ನ ವರ್ಣನೆ
ಸರ್ವ ಸಿದ್ಧಿ ಬುದ್ಧಿ ನೀಡು ವಕ್ರತುಂಡನೆ.
– ಶಿವಾನಂದ್ ಕರೂರ್ ಮಠ್ , ದಾವಣಗೆರೆ
Nice sir
ತುಂಬಾ ಚೆನ್ನಾಗಿದೆ ಸರ್
Super sir…
ಚೆನ್ನಾಗಿದೆ ಸರ್. ಭಕ್ತಿಯಷ್ಟೇ ಅಲ್ಲ , ಬದುಕಿಗೆ ಬೇಕಾದ ನೀತಿ ಪಾಠ, ಜೀವನ ಮೌಲ್ಯಗಳನ್ನು ಸುಂದರವಾಗಿ ಹೆಣೆದಿರುವಿರಿ ಕವನದಲ್ಲಿ .
ಧನ್ಯವಾದಗಳು
ಶಿಶುಗೀತೆ ಅರ್ಥಪೂರ್ಣವಾಗಿದೆ
ಧನ್ಯವಾದಗಳು ಮೇಡಂ
ಚೆನ್ನಾಗಿದೆ. ಮಕ್ಕಳಿಗೆ ಇಷ್ಟವಾಗುತ್ತೆ
ಸುಂದರ
ಶಿಶುಗೀತೆಯಲ್ಲಿ ಪ್ರಶ್ನೆಗೆ ಉತ್ತರಿಸುವ ಪರಿ ಉತ್ತಮವಾಗಿದೆ ಸರ್
ಚಂದದ ಪ್ರಶ್ನೋತ್ತರಗಳು..ಸೊಗಸಾಗಿದೆ ಕವನ.