ನ್ಯಾನೋ ಕಥೆಗಳು
ಮಗನ ಪ್ರೀತಿ
ಮಗನೋರ್ವ ಜಾತ್ರೆಯಲ್ಲಿ ಆಟಿಕೆಗಳನ್ನು ಕೊಳ್ಳುವ ಸಲುವಾಗಿ ಓಡೋಡಿ ಮನೆಗೆ ಬಂದನು. ತಾಯಿಯ ಕಡುಬಡತನ ಅರಿಯದ ಚಿಕ್ಕವಯಸ್ಸು, ಅವಳಲ್ಲಿ ಗೋಗರೆದು ಕೊನೆಗೂ ಐದುರೂಪಾಯಿ ಗಿಟ್ಟಿಸಿಕೊಂಡುನು. ಅವನವ್ವ ದುಡ್ಡು ಕೊಡುವಾಗ ಪ್ರೀತಿಯಿಂದ ತಲೆಸವರಿ ” ಬೇಗನೆ ಮುರಿದು ಹಾಳಾಗುವ ವಸ್ತುಗಳನ್ನು ಕೊಳ್ಳಬೇಡ, ಸದಾ ಜೊತೆಗಿರ್ಬೇಕು ನೋಡಿ ತಗೊ” ಎಂದು ತಿಳಿಸಿದಳು. ಅಮ್ಮನ ಮಾತಿಗೆ ತಲೆದೂಗಿದ ಮಗ ಇಡೀ ಜಾತ್ರೆಯನ್ನು ಸುತ್ತುವರೆದ, ಕೊನೆಗೆ ಜಾತ್ರೆಯಲ್ಲಿಯೇ ತನ್ನ ಕೈಮೇಲೆ ‘ಅಮ್ಮ’ ಎಂದು ಅಚ್ಚೆಯನ್ನು ಹಾಕಿಸಿಕೊಂಡು ತಾಯಿಗೆ ತೋರಿಸಿದ. ಬಡತನಕ್ಕೆ ಬಾರದ ಕಣ್ಣೀರಮಳೆ ಮಗನ ಪ್ರೀತಿ ಕಂಡು ಪನ್ನೀರಾಗಿ ಹರಿಯಿತು.
ವಿಪರ್ಯಾಸ
ಪರಿಸರ ಉಳಿಸಿರಿ, Save Tree’s… ಎನ್ನುವ ಅಭಿಯಾನ ಮಾಡೋಣವೆಂದು ಪರಿಸರ ಕಾಳಜಿ ತೋರುವ ಸಂಘಟನೆಗಳೆಲ್ಲವು ಸಭೆ ಸೇರಿದವು. ಸಭೆಯಲ್ಲಿ ಭಿತ್ತಿ ಪತ್ರ ಮಾಡಿ ಮರಗಿಡಗಳ ಅವಶ್ಯಕತೆ, ಪ್ರಾಮುಖ್ಯತೆ ಕುರಿತು ಭಿತ್ತಿ ಪತ್ರ ಹಾಗೂ ಕರಪತ್ರ ಮಾಡಿಸಿ ಜನರಿಗೆ ಹಂಚಿ ಜಾಗೃತಿ ಮುಡಿಸೋಣವೆಂದು ನಿರ್ಧಾರವಾಯಿತು. ಕರಪತ್ರಕ್ಕೆ ಕಾಗದ ಮರದಿಂದಲೇ ಎನ್ನುವ ಮುಖ್ಯ ಅಂಶ ಸುಳಿಯದೇ ಇದ್ದುದ್ದು ವಿಪರ್ಯಾಸ.
,
ಗೂಢಾರ್ಥದ ಬೆನ್ನೇರಿ
ಪದೇ ಪದೇ ಶಾಲೆಗೆ ಗೈರು ಆಗುತ್ತಿದ್ದ ವಿದ್ಯಾರ್ಥಿಯೊಬ್ಬ ಮನೆಯ ಹತ್ತಿರವಿದ್ದ ಅವನ ತರಗತಿಯ ಸ್ನೇಹಿತನ ಬಳಿ ಹೋಗಿ ಶಿಕ್ಷಕರು ಬರೆಸಿದ ನೋಟ್ಸ್ ಪಡೆಯುತ್ತಿದ್ದ, ಅದರಲ್ಲಿ ಒಂದು ಪಾಠದಲ್ಲಿನ ಪ್ರಶ್ನೆಗೆ ಉತ್ತರವಾಗಿ ‘ಬಿಸಿಯನ್ನಕ್ಕಿಂತ ತಂಗಳನ್ನವೇ ಲೇಸು’ ಎಂದು ಬರೆದಿತ್ತು. ಗೈರಾದವನು ಅದರ ಗೂಢಾರ್ಥ ತಿಳಿಯಲಿಚ್ಛಿಸದೆ ಅಂದು ಅನ್ನ ಬಿಸಿಯಿದ್ದರು ತಿನ್ನದೇ ತಂಗಳಾಗಿಸಿ ತಿಂದನು. ಇಂದು ಜೀವನ ಪೂರ್ತಿ ತಂಗಳಲ್ಲಿಯೇ ತಿಂಗಳುಗಳನ್ನು ಮುಗಿಸುತ್ತಿದ್ದಾನೆ.
.
ಸಿರಿವಂತ ಮತ್ತು ಗುಣವಂತ ಪ್ರಾಣ ಸ್ನೇಹಿತರು ಆದರೆ ದೇವರು ಅವರವರ ಹೆಸರಿಗೆ ತಕ್ಕಂತೆ ಅವರನ್ನು ಇಟ್ಟಿದ್ದನು. ಮೊದಲೇ ಯೋಜಿಸಿದಂತೆ ದಸರಾ ರಜೆಯಲ್ಲಿ ಚಾರಣದ ಸಿದ್ಧತೆ ಮಾಡಿಕೊಂಡು ಬೆಟ್ಟ,ಗುಡ್ಡ, ಕಾಡು ಅಲೆಯಲು ಪ್ರಯಾಣ ಶುರುಮಾಡಿದರು.
ಸಿರಿವಂತ ಶೋಕಿಗೆ ಕೇವಲ ಹಣವನ್ನು ಮಾತ್ರ ತಂದಿದ್ದ, ಗುಣವಂತ ಹಣವಿಲ್ಲದೆ ಮನೆಯಲ್ಲಿದ್ದ ಕಡಕಲುರೊಟ್ಟಿ, ಚಟ್ನಿಯ ಜೊತೆಗೆ ನೀರಿನ ಬಾಟಲಿಯ ಬ್ಯಾಗ್ ಭಾರ ಹೊತ್ತುಕೊಂಡು ಬಂದು ನಡೆಯುತ್ತಿದ್ದ. ಮಿತ್ರನ ಭಾರದ ಬ್ಯಾಗ್ ಕಂಡು ಛೇಡಿಸಿದ್ದ ಸಿರಿವಂತ, ಬೆಟ್ಟ ಗುಡ್ಡಗಳಲ್ಲಿ ಅಲೆದಾಡಿ ಸುಸ್ತಾದ, ಅಲ್ಲಿ ಹಸಿವಿಗೆ ಹಣ ಸಹಕಾರ ನೀಡಲಿಲ್ಲ. ಗುಣವಂತನಲ್ಲಿ ರೊಟ್ಟಿಗೆ ಕೈ ಚಾಚಿದ, ರೊಟ್ಟಿ ತಿಂದ ನಂತರ ಬಂದ ಬಿಕ್ಕಳಿಕೆಯ ದಾಹಕ್ಕೆ ಬಾಟಲಿಯ ನೀರನ್ನು ಬ್ಯಾಗ್ ನಿಂದ ತಗೆದು ಮಿತ್ರ ಗುಣವಂತ ಕೊಟ್ಟಾಗ ಸಿರಿವಂತನ ದಾಹದ ಜೊತೆಗೆ ಅಹಂಕಾರವು ನಿವಾರಣೆಯಾಗಿತ್ತು.
ಕೆಲವೇ ಸಾಲುಗಳಲ್ಲಿ ನೀತಿಬೋಧನೆ ಮಾಡುವ ನ್ಯಾನೋ ಕಥೆಗಳು, ಸೊಗಸಾಗಿವೆ
ಧನ್ಯವಾದಗಳು ಮೇಡಮ್
ನಮ್ಮನ್ನು ಯೋಚನೆಗೆ ಹಚ್ಚುವ ಚಿಕ್ಕ ಚೊಕ್ಕ ನ್ಯಾನೋ ಕತೆಗಳು ತುಂಬಾ ಇಷ್ಟವಾಗುತ್ತವೆ.. ಧನ್ಯವಾದಗಳು.
ಧನ್ಯವಾದಗಳು ಸರ್
ನಿಮ್ಮ ನ್ಯಾನೊ ಕಥೆಗಳು ತುಂಬಾ ಸೊಗಸಾಗಿದಾವೆ ಸರ್
ಸುಪರ್ಬ್. ಒಂದೊಂದು ಕಥೆಯು ಅದ್ಭುತ ಪಾಠವನ್ನೇ ಹೇಳುತ್ತದೆ . ಜೀವನಕ್ಕೆ ಹತ್ತಿರವಾದ ನೀತಿ ತುಂಬಿದ ಕಥೆಗಳು .
ಪ್ರತಿ ನ್ಯಾನೋ ಕಥೆಗಳು ಸುಂದರವಾಗಿವೆ ಸರ್