ಶಿಕ್ಷಣದಲ್ಲಿ ಸುಧಾರಣೆ- ಒಂದು ಚಿಂತನೆ.
ಬಸ್ ನಲ್ಲಿ ಹೋಗಬೇಕಾದರೆ ಓದಲು ಏನಾದರೊಂದು ಪುಸ್ತಕ ಇರಲಿ ಅಂತ ತೊತ್ತೋ- ಚಾನ್ ಎನ್ನುವ ಪುಸ್ತಕ ಖರೀದಿಸಿದೆ. ತೆತ್ಸುಕೊ ಕುರೊಯಾನಗಿ ಈ ಕೃತಿಯ ಲೇಖಕಿ. ಮೂಲ ಜಪಾನಿ, ಕನ್ನಡಕ್ಕೆ ಅನುವಾದ ವಿ.ಗಾಯತ್ರಿ. (ನ್ಯಾಶನಲ್ ಬುಕ್ ಟ್ರಸ್ಟ್ ,ಇಂಡಿಯಾ) ಬಸ್ ನಲ್ಲಿ ಓದುತ್ತಾ ಹೋದೆ. ಶಾಲಾ ಪರಿಸರ ಬೋಧನಾ ವ್ಯವಸ್ಥೆ, ಪಠ್ಯ ,ಪರೀಕ್ಷೆ ಇತ್ಯಾದಿಗಳಲ್ಲಿ ಏನೋ ದೋಷ ಕಾಣುತ್ತಿದ್ದ ನನಗೆ ಇಲ್ಲೇನೋ ಪರಿಹಾರ ಇದೆಯಲ್ಲ ! ಎಂದು ಅನ್ನಿಸಿತು.
ಓದಿರುವ ಪುಸ್ತಕದಲ್ಲಿ ವರ್ಣಿಸಲಾದ ಮಾದರಿ ಶಾಲೆಗೆ ಕಾಂಪೌಂಡ್ ಆಗಿರುವುದು ಗಿಡಮರಗಳು!.ಎರಡು ಮರಗಳ ನಡುವೆ ಇರುವ ಖಾಲಿ ಜಾಗವೇ ಪ್ರವೇಶ ದ್ವಾರ ! ಮರಗಳ ಕೊಂಬೆಗಳು ಪರಸ್ಪರ ಒಂದಕ್ಕೊಂದು ಹೆಣೆದುಕೊಂಡಿರುವುದು ಕಮಾನು. ಹಳೆಯ ರೈಲ್ವೆ ಬಂಡಿಗಳೇ ತರಗತಿ ಕೋಣೆಗಳು. ಮಕ್ಕಳು ಏನನ್ನು ಕಲಿಯಬೇಕೆಂದು ಬಯಸುತ್ತಾರೋ ಅದನ್ನೇ ಕಲಿಯುವ ವ್ಯವಸ್ಥೆ ಅಲ್ಲಿ ಇದೆ. ನಿರ್ದಿಷ್ಟ ತರಗತಿಯ ನಿಗದಿ ಪಡಿಸಿದ ಸ್ಥಳದಲ್ಲಿ ಕುಳಿತುಕೊಳ್ಳಬೇಕೆಂಬ ನಿಯಮವಿಲ್ಲ!! …
ಈಗ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇರುವ ಸಮಸ್ಯೆಗಳನ್ನು ಗಮನಿಸೋಣ.
ಶಾಲೆ, ಕಾಲೇಜ್ ,ವೃತ್ತಿಪರ ಕೋರ್ಸ್ ಗಳು ವಿದ್ಯೆಯನ್ನು ನೀಡುವ ವ್ಯವಸ್ಥೆಯ ಕುರಿತಾಗಿ ಆಯಾ ಕ್ಷೇತ್ರದ ಫಲಾನುಭವಿಗಳಲ್ಲಿ ವಿಚಾರಿಸುತ್ತಾ ಹೋದರೆ ಎಲ್ಲಾ ಕಡೆ ಅವ್ಯವಸ್ಥೆಯೇ ಎದ್ದುಕಾಣುತ್ತದೆ. ಉದ್ಯೋಗ ವ್ಯವಹಾರಗಳ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ವಿಚಾರಗಳು ಕಲಿಕಾ ವಿಷಯದಲ್ಲಿ ತುರುಕಿರುವ ಬಗ್ಗೆ ವಿಚಾರಿಸಿದಾಗ ವಿವರ ಸಿಗಬಹುದು. ಉದಾಹರಣೆಗೆ ಫಾರ್ಮಸಿ ಪಠ್ಯದಲ್ಲಿ ಇಂದು ಆಧುನಿಕವಲ್ಲದ ಔಷದಿಗಳ ವಿವರವಿರಬಹುದು. ಓಬಿರಾಯನ ಕಾಲದ ಸರಪಣಿ ಹಿಡಿದು ಅಳೆಯುವ ವಿಷಯ ಸಿವಿಲ್ ಇಂಜಿಯನಿರಿಂಗ್ ನಲ್ಲಿ ಇರಬಹುದು. ಇಂತಹ ಎಷ್ಟೋ ಪಠ್ಯ ವಿಷಯಗಳು ಒತ್ತಡ ಹಾಗೂ ಹಿಂಸೆಗಳಿಂದ ವಿದ್ಯಾರ್ಥಿಗಳಿಗೆ ಹೇರಲಾಗುತ್ತವೆ. ಮುಂದೆ ಉದ್ಯೋಗ ವ್ಯವಹಾರಗಳಲ್ಲಿ ಇವು ಏನೂ ಉಪಯೋಗಕ್ಕೆ ಬಾರದಿರುವುದೇ ಹೆಚ್ಚು !
ನನ್ನ ಅನುಭವ ಇರುವುದು ಕೇವಲ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ . ಇಲ್ಲಿ ಪಠ್ಯ ಪುಸ್ತಕಗಳು ಯಾವುದೋ ಉದ್ದೇಶಗಳನ್ನು ಇಟ್ಟುಕೊಂಡು ತಯಾರಾಗುತ್ತವೆ. ನಾವು ಕಲಿಯುತ್ತಿರುವ ಪಠ್ಯ ವಿಷಯಗಳನ್ನೆಲ್ಲಾ ಗಮನಿಸುತ್ತಾ ಹೋದರೆ ಅವುಗಳ ಉದ್ದೇಶ ಏನು ? ಅದು ಈಡೇರುವ ಸಾಧ್ಯತೆ ಇದೆಯಾ ? ಅಗತ್ಯ ಇದೆಯಾ ?ಎಂಬ ಬಗ್ಗೆ ನಮಗೆ ವಾಸ್ತವದ ಅರಿವಾಗುತ್ತದೆ. ಉದಾಹರಣೆಯಾಗಿ ಪಠ್ಯಗಳಲ್ಲಿ ಇರುವ ಒಂದೆರಡು ವಿಷಯಗಳನ್ನು ಹೇಳುತ್ತೇನೆ . ಪರಿಸರ ಮಾಲಿನ್ಯ , ಸಾವಯವ ಕೃಷಿ, ನೀರಿಂಗಿಸುವಿಕೆ ಇಂತಹ ಪಠ್ಯ ವಿಷಯಗಳ ಉದ್ದೇಶ ಎಲ್ಲರಿಗೂ ನೋಡಿದ ಕೂಡಲೆ ಅರ್ಥ ಆಗುತ್ತದೆ. ಕೃಷಿ ಮಾಡುವ ಉದ್ದೇಶ ಇಲ್ಲದ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅನುಭವ ಇಲ್ಲದ ಶಿಕ್ಷಕ ಇದನ್ನು ಬೋಧಿಸುತ್ತಾನೆ. ವಿದ್ಯಾರ್ಥಿ ಶಿಕ್ಷಕ ಇಬ್ಬರಿಗೂ ಕೃಷಿಯ ಬದಲಾಗಿ ಪರೀಕ್ಷೆಗೆ ಉತ್ತರಿಸುವುದೊಂದೇ ಉದ್ದೇಶವಾಗಿರುತ್ತದೆ!ಉತ್ತಮ ವಿದ್ಯಾರ್ಥಿ , ಅರಣ್ಯದ ರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಚೆನ್ನಾಗಿ ಪ್ರಬಂಧ ಬರೆದು ಅಂಕ ಗಳಿಸಿದ ವಿದ್ಯಾರ್ಥಿಗೆ ಇವೆಲ್ಲ ಜೀವನದ ಆದರ್ಶಗಳಾಗಿ ಉಳಿದಿವೆಯಾ !?
.
ಈಗ ರಬ್ಬರ್, ಗೇರು ಕೃಷಿ ಇತ್ಯಾದಿಗಳಿಗೆ ಉಪಯೋಗಿಸುವ ಕಾಡುಗಳು ಹಿಂದೆ ಸೊಪ್ಪು,ಸೌದೆಗಾಗಿ ಮೀಸಲಿಟ್ಟವುಗಳಾಗಿದ್ದವು . ಅವಲ್ಲ ಹಿಂದೆ ನೀರಿಂಗಿಸುವಿಕೆ , ಸಸ್ಯ ವೈವಿಧ್ಯ ,ಪ್ರಾಣಿ ವೈವಿಧ್ಯ ಗಳ ಮೂಲಕ ಪರಿಸರ ಸಮತೋಲನ ಕಾಪಾಡುತ್ತಿದ್ದವು .ಆ ಕಾಡನ್ನು ನಾಶ ಮಾಡುವ ಜನರು ಪರಿಸರದ ಪ್ರಾಮುಖ್ಯತೆ ಕುರಿತು ಪಠ್ಯಗಳಲ್ಲಿ ಓದಿಲ್ಲವೆ ?ಒಬ್ಬ ಹುಡುಗನಿಗೆ ಗಣಿತ ಕಷ್ಟ .ಇನ್ನೊಬ್ಬನಿಗೆ ಬರೆಯುವ ಕೆಲಸ ತುಂಬಾ ಕಷ್ಟ. ಹೀಗೆ ಅಕ್ಷರ ತಪ್ಪಾಗುವುದು ,ಚಿತ್ತಾಗುವುದು, ವಕ್ರವಕ್ರವಾಗುವುದು, ಓದುವುದಕ್ಕೆ ಬೇಕಾದ ಏಕಾಗ್ರತೆ ಇಲ್ಲ ,ನೆನಪಲ್ಲಿ ಉಳಿಯುವುದಿಲ್ಲ – ಮುಂತಾದ ಸಮಸ್ಯೆಗಳಿವೆ . ಆದರೆ ಅಂತಹ ಸಮಸ್ಯಾತ್ಮಕ ವಿದ್ಯಾರ್ಥಿಗೆ ಜೀವನಾವಶ್ಯಕವಾದ ಎಷ್ಟೋ ಕೌಶಲ್ಯ ಇರಬಹುದು. ಇಂತಹವರಿಗೆ ಸರಿಯಾಗಿ ತಲೆಯಲ್ಲಿ ಕೀಳರಿಮೆ ತುಂಬಿಸುವುದಷ್ಟೆ ಶಾಲೆಯ ಕೆಲಸ ಆಗುತ್ತದೆ. ಅವನಲ್ಲಿ ಇಲ್ಲದ ಸಾಮರ್ಥ್ಯದ ಕುರಿತು ಅವಮಾನಿಸುವುದಕ್ಕೆ ಶಾಲಾ ಶಿಕ್ಷಣ ವ್ಯವಸ್ಥೆ ಇದೆ ಎಂಬಂತೆ ಕಾಣುತ್ತದೆ. (a+b)²=a²+2ab+b² ತನಗೆ ಜೀವನದಲ್ಲಿ ಉಪಯೋಗಕ್ಕೆ ಬರಲಿಲ್ಲ ಎಂದು ಸಲ್ಮಾನ್ ಖಾನ್ ಅಭಿಪ್ರಾಯ ಪಟ್ಟಿರುತ್ತಾನೆ. ನಮ್ಮ ನೆರೆಯ ಪ್ರತಿಭಾವಂತ ನಿವೃತ್ತ ಐಎಎಸ್ ಅಧಿಕಾರಿಯವರ ಚಿಕ್ಕಪ್ಪ ಆತನ ಕುರಿತು ಮಾತನಾಡುತ್ತಾ ಆತ ಗಣಿತದಲ್ಲಿ ತೀರಾ ದಡ್ಡ ಆಗಿದ್ದ ಅಂತ ಹೇಳಿದರು. ಪ್ರಸಿದ್ಧ ಹಾಡುಗಾರರೊಬ್ಬರು ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ಅವರು ಕೇವಲ ಪದ್ಯ ಹೇಳಲಿಕ್ಕಾದಿತಷ್ಟೆ ಅವರನ್ನು ಶಿಕ್ಷಕರು ಹಂಗಿಸುತ್ತಿದ್ದರಂತೆ!.
ಆಸಕ್ತಿ ಸಾಮರ್ಥ್ಯ ಆಧರಿಸಿ ಶಿಕ್ಷಣ ಕೊಡಬೇಕು ಎಂಬುದನ್ನು ಮೇಲಿನ ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳಬಹುದು. ಇಂದು ರೂಪಣಾತ್ಮಕ , ಸಂಕಲನಾತ್ಮಕ ಎನ್ನುವ ಎರಡು ವಿಧದ ಪರೀಕ್ಷೆಗಳು ಜಾರಿಯಲ್ಲಿವೆ. ಗುಟ್ಟಿನ ಸಂಗತಿ ಏನೆಂದರೆ ಇವೆಲ್ಲ ಕೇವಲ ದಾಖಲೆಗಳಲ್ಲಿ ಮಾತ್ರ!. ಅವೆಲ್ಲ ಕಾರ್ಯ ರೂಪಕ್ಕೆ ತರಲಾಗದ ಸ್ಥಿತಿಯಲ್ಲಿದ್ದು ,ಕೇವಲ ಶಿಕ್ಷಕರಿಗೆ ಕಿರಿಕಿರಿ ಮಾಡುವುದಕ್ಕೆ ಇರುವಂತೆ ಕಾಣುತ್ತದೆ.
ಇಲ್ಲಿ ನಾನು ಹೇಳಿದ ವಿಚಾರಗಳು ಯಾವುದೂ ಹೊಸತಲ್ಲ. ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ,ಸಾಮರ್ಥ್ಯ ಆಧರಿಸಿ ಬೋಧನಾ ವ್ಯವಸ್ಥೆ ಇದೆಯಂತೆ. ವೃತ್ತಿಪರ ಕೋರ್ಸಿನ ಉನ್ನತ ವ್ಯಾಸಂಗ ಮಾಡಬೇಕಾದಲ್ಲಿ ಸಂಬಂಧಿಸಿದ ಕಂಪೆನಿಗಳಲ್ಲಿ ದುಡಿದ ಅನುಭವ ಬೇಕಂತೆ . ಪ್ರತಿಷ್ಠಿತ ಶಾಲಾ ಕಾಲೇಜಿಗಳಿಗೆ ಅದರಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಗೆ ಮಕ್ಕಳನ್ನು ಸೇರಿಸಿ ಅಲ್ಲಿ ಸಿಗುವ ಅಂಕಗಳಿಗಷ್ಟೆ ಪ್ರಾಮುಖ್ಯತೆ ನೀಡುವ ಜನರಿಗೆ ಈ ವಿಚಾರ ಮನವರಿಕೆ ಆದರೆ ತೊತ್ತೊ-ಚಾನ್ ಬಯಸುವ ಶಿಕ್ಷಣ ವ್ಯವಸ್ಥೆ ಇಲ್ಲಿಯೂ ಸಿಗಬಹುದು ಮತ್ತು ಹಾಗೆ ಆಗಲಿ ಎಂಬುದು ಹಾರೈಕೆ .ಈ ಬಗ್ಗೆ ಹೆಚ್ಚಿನ ಪ್ರಚಾರ ಹಾಗೂ ಚರ್ಚೆಗಳಾಗಬೇಕು. ಹೀಗೆ ಬದಲಾಗಬಹುದಾದ ಶಿಕ್ಷಣ ವ್ಯವಸ್ಥೆ ಮುಂದಿನ ಪೀಳಿಗೆಗೆ ಸುಂದರ ಭವಿಷ್ಯ ನಿರ್ಮಿಸೀತು .
;
– ಕಾನ ವಿಶ್ವನಾಥ ಭಟ್.
ಚಿಂತನೆಗೆ ಹಚ್ಚುವ ಬರಹ. ಬಹಳ ಚೆನ್ನಾಗಿದೆ.
ಉತ್ತಮ ಮಾಹಿತಿಯುಳ್ಳ, ಸ್ಪೂರ್ತಿದಾಯಕ ಬರಹ. ವಿದ್ಯಾರ್ಥಿಗಳು ಒತ್ತಡದಿಂದ ಬಳಲುತ್ತಿರುವ ಈ ದಿನಗಳಲ್ಲಿ ಇಂತಹ ಬರಹಗಳು ಅವರಿಗೆ ಆತ್ಮವಿಶ್ವಾಸ ತುಂಬಲು ಸಹಕಾರಿ.
ಚೆನ್ನಾಗಿದೆ . ಶಿಕ್ಷಣ ಪದ್ಧತಿ ಈಗಲೂ ಹೇಗಿದೆ ಅಂದ್ರೆ ಕಲಿಯುವುದೇ ಒಂದು, ಕಲಿತಾದ ಮೇಲೆ ಬದುಕಲು ಮಾಡುವ ಕೆಲಸ ಬೇರೊಂದು , ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ . ಆದರೂ ಇತ್ತೀಚಿಗೆ ಹಲವಾರು ವೃತ್ತಿ ಪರ ಕೋರ್ಸುಗಳಿವೆ, ಅವುಗಳಿಂದಲೂ ಜೀವನ ಸಾಗುತ್ತದೆ . ಯೋಚನೆಗೆ ತಳ್ಳುವಂತಹ ಬರಹ .