ಈ ದಸರಾ ರಜೆಯಲ್ಲಿ ನಾನು ನೋಡಿದ ಪ್ರವಾಸಿ ಸ್ಥಳಗಳು
ಈ ಸಲ ದಸರಾ ರಜೆಯಲ್ಲಿ ನಾನು ಮತ್ತು ನನ್ನ ಅಪ್ಪ-ಅಮ್ಮ ಬಳ್ಳಾರಿಯಿಂದ ನಮ್ಮ ಊರಾದ ಸುಳ್ಯಕ್ಕೆ ಕಾರಿನಲ್ಲಿ ಹೋಗಿದ್ದೆವು. ಹೋಗುವ ದಾರಿಯಲ್ಲಿ ಕೆಲವು ಪ್ರವಾಸಿ ಸ್ಥಳಗಳನ್ನು ನೋಡಿದೆವು. ಶಿವಮೊಗ್ಗದಲ್ಲಿ ಮಧ್ಯಾಹ್ನ ಊಟ ಮಾಡಿ ತೀರ್ಥಹಳ್ಳಿ ಕಡೆ ಹೊರಟಿದ್ದೆವು.ಸ್ವಲ್ಪ ದೂರ ಹೋಗುವಾಗ ಗಾಜನೂರು ಡ್ಯಾಂ ಎಂಬ ದೊಡ್ಡ ಬೋರ್ಡ್ ಕಾಣಿಸಿತು. ರಸ್ತೆ ಸಮೀಪ ಇದ್ದ ಕಾರಣ ಅಪ್ಪ ಕಾರು ನಿಲ್ಲಿಸಿ ನೋಡಿ ಬರೋಣ ಎಂದು ಹೇಳಿದರು. ಅಣೆಕಟ್ಟು ತುಂಬಾ ದೊಡ್ಡದಾಗಿತ್ತು. ಇದನ್ನು ತುಂಗಾ ನದಿಗೆ ಅಡ್ಡವಾಗಿ ಕಟ್ಟಿದ್ದಾರೆ. ಆರು ಕ್ರಸ್ಟ್ ಗೇಟ್ ಗಳಿಂದ ನೀರನ್ನು ಬಿಟ್ಟಿದ್ದರು. ನೀರು ಹಾಲಿನಂತೆ ಬಹಳ ಸುಂದರವಾಗಿ ಹೊರಗೆ ಬರುತ್ತಿತ್ತು.ಆದರೆ ಡ್ಯಾಂನ ಮೇಲೆ ಹೋಗಲು ಬಿಡುತ್ತಿರಲಿಲ್ಲ.
ಅಲ್ಲಿಂದ ಮುಂದೆ ಹೋಗುವಾಗ ಮಂಡಗದ್ದೆ ಪಕ್ಷಿಧಾಮ ಕಾಣಿಸಿತು. ಅಪ್ಪ ಸುಸ್ತಾಗಿದೆ ಎಂದು ಕಾರಿನಲ್ಲಿಯೇ ವಿಶ್ರಾಂತಿ ಮಾಡಿದರು. ನಾನು ಮತ್ತು ಅಮ್ಮ ತುಂಗಾ ನದಿಯ ದಡದಲ್ಲಿ ನಿಂತು ಮರಗಳಲ್ಲಿದ್ದ ಹಲವಾರು ಹಕ್ಕಿಗಳನ್ನು ನೋಡಿದೆವು. ಜೋರಾಗಿ ಮಳೆ ಇದ್ದಕಾರಣ ನದಿ ಕೆಂಪಾಗಿ ರಭಸದಿಂದ ಹರಿಯುತ್ತಿತ್ತು.ಮತ್ತೆ ಪುನ: ಪ್ರಯಾಣ ಮುಂದುವರೆಸಿದೆವು.
ತೀರ್ಥಹಳ್ಳಿ ದಾಟಿ ಮುಂದೆ ಹೋಗುವಾಗ ಆಗುಂಬೆ ಹತ್ತಿರ ಗುಡ್ಡೆಕೇರಿ ಎಂಬಲ್ಲಿ ಕುಂದಾದ್ರಿಬೆಟ್ಟ ಎಂಬ ಬೋರ್ಡ್ ಇತ್ತು.ಆ ಬೆಟ್ಟ ಬಹಳ ಸುಂದರವಾಗಿದೆ ಎಂದು ಅಪ್ಪ ಹೇಳಿದ್ದರು. ಅವರು ಮೊದಲೇ ಅಲ್ಲಿಗೆ ಹೋಗಿದ್ದರು. ನನಗೂ ನೋಡಬೇಕು ಹೋಗೋಣ ಎಂದು ಒತ್ತಾಯ ಮಾಡಿದೆ. ಅಲ್ಲಿಗೆ ಹೋಗುವ ದಾರಿ ಬಹಳ ಸಪೂರ ಮತ್ತು ತುಂಬ ತಿರುವುಗಳು ಇವೆ ಎಂದು ಅಪ್ಪ ಹೇಳಿದರೂ ಕೊನೆಗೆ ಒಪ್ಪಿದರು. ಕಾರಿನಲ್ಲಿ ಬೆಟ್ಟ ಏರುತ್ತಿದ್ದಂತೆಯೇ ನನಗೆ ನಿಜವಾಗಿಯೂ ಭಯವಾಯಿತು. ಎದುರಿನಿಂದ ಯಾವ ವಾಹನವೂ ಬಾರದೇ ಇರಲಿ ಎಂದು ಪ್ರಾರ್ಥಿಸಿದೆ.ಕೆಲವು ಕಡೆ ಅಪ್ಪನಿಗೂ ಕಾರು ಬಿಡಲಿಕ್ಕೆ ಕಷ್ಟವಾಯಿತು. ಅಂತೂ ಬೆಟ್ಟದ ಮೇಲೆ ಪಾರ್ಕಿಂಗ್ ಸ್ಥಳವನ್ನು ತಲುಪಿ ಕಾರನ್ನು ಅಲ್ಲಿ ನಿಲ್ಲಿಸಿದಾಗ ಸಮಾಧಾನವಾಯಿತು. ಅಲ್ಲಿಂದ ಮುಂದೆ ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಯನ್ನು ತಲುಪಿದೆವು. ಅಲ್ಲಿಂದ ಕೆಳಗೆ ನೋಡಿದಾಗ ಹಸಿರು ಗದ್ದೆ, ತೋಟ, ಬೆಟ್ಟಗಳು ಬಹಳ ಸುಂದರವಾಗಿ ಕಾಣಿಸುತ್ತಿತ್ತು.
ಗಾಳಿಯೂ ಜೋರಾಗಿ ಬೀಸುತ್ತಿತ್ತು. ಕೆಳಗೆ ನೋಡುವಾಗ ಭಯವಾಗುತ್ತಿತ್ತು. ಸುತ್ತಲೂ ಕಬ್ಬಿಣದ ಬೇಲಿಯನ್ನು ಹಾಕಿದ್ದರು. ಅಲ್ಲಿ ಒಂದು ಸಣ್ಣ ಜೈನ ಬಸದಿ ಇದೆ. ಅದಕ್ಕೆ ಒಂದು ಚಿಕ್ಕದಾದ ಬಾಗಿಲು ಇದೆ.ಅದರಲ್ಲಿ ಬಗ್ಗಿ ಒಳಗೆ ಹೋಗಿ ಪಾರ್ಶ್ವನಾಥರ ಮೂರ್ತಿಗೆ ನಮಸ್ಕಾರ ಮಾಡಿದೆವು. ಆ ಬೆಟ್ಟದ ಮೇಲೆ ಕೆಲವು ಸಣ್ಣ ಕೆರೆಗಳು ಇವೆ. ಅವುಗಳಲ್ಲಿ ನೀರು ಎಷ್ಟು ಉಪಯೋಗ ಮಾಡಿದರೂ ಖಾಲಿಯಾಗುವುದಿಲ್ಲ ಎಂದು ದೇವಸ್ಥಾನದ ಸಹಾಯಕರು ಹೇಳಿದರು. ಈ ಬೆಟ್ಟ ಸಮುದ್ರ ಮಟ್ಟದಿಂದ 3200 ಫೀಟ್ ಎತ್ತರದಲ್ಲಿದೆ, ಇದು ಕರ್ನಾಟಕದ ಎರಡನೇ ಅತಿ ಎತ್ತರದ ಬೆಟ್ಟ ಎಂದು ಅವರು ಹೇಳಿದರು. ಅಲ್ಲಿ ಸ್ವಲ್ಪ ಸಮಯ ಕಳೆದು ಬೆಟ್ಟದಿಂದ ಇಳಿದು ಆಗುಂಬೆಯ ಕಡೆಗೆ ಹೊರಟೆವು.
ಆಗುಂಬೆ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ಒಂದು ದೊಡ್ಡದಾದ ಹಳೆಕಾಲದ ಮನೆ ಇತ್ತು. ಬಹಳ ಹಿಂದೆ ದೂರದರ್ಶನದಲ್ಲಿ ಮಾಲ್ಗುಡಿ ಡೇಸ್ ಎಂಬ ಸೀರಿಯಲ್ ಬರುತ್ತಿತ್ತು. ಅದು ಅಲ್ಲಿಯೇ ಶೂಟ್ ಮಾಡಿದ್ದು ಎಂದು ಅಪ್ಪ-ಅಮ್ಮ ಹೇಳಿದರು. ಕಾರಿನಿಂದ ಇಳಿದು ಆ ಮನೆಯನ್ನು ನೋಡಿ ಬಂದೆವು. ನಂತರ ಆಗುಂಬೆ ಘಾಟಿಯ ಮೂಲಕ ಉಡುಪಿಯ ಕಡೆಗೆ ಪ್ರಯಾಣ ಮಾಡಿದೆವು.
-ಚಿಂತನ್ ಕೃಷ್ಣ ವಿ.ಸಿ
5 ನೇ ತರಗತಿ,
ಬಾಲಭಾರತಿ ಕೇಂದ್ರೀಯ ವಿದ್ಯಾಲಯ, ಬಳ್ಳಾರಿ
That’s very cute!! Lovely writing! ❤️
ಚೆಂದದ ಬರಹ ಚಿಂತನ್ ಪುಟ್ಟ, ಆಗಾಗ ಬರೆಯುತ್ತಿರು ..ಒಳ್ಳೆಯದಾಗಲಿ.
Oh so cute Chintan Putta. Lovely article.
ಪುಟ್ಟ ಬಾಲಕನೊಬ್ಬ ಬರೆಯುತ್ತಾನೆ ಎನ್ನುವುದೇ ಒಂದು ತೆರನಾದ ಖುಷಿ.
ತುಂಬಾ ಚೆನ್ನಾಗಿ ಬರೆದಿದ್ದೀಯಾ ಚಿಂತನ್ ಪುಟ್ಟಾ..ಹೀಗೇ ಬರೆಯುತ್ತಿರು.. Good Luck!
Mam Very Good writing by Chintan…May God Bless him.
ಪುಟ್ಟ ಮಕ್ಕಳು ಬರವಣಿಗೆಯಲ್ಲಿ ತೊಡಿಗಿಕೊಳ್ಳುವುದು ವಿಶೇಷ.
ಅಭಿನಂದನೆಗಳು ಚಿರಂತ್.ಬರವಣಿಗೆ ಮುಂದುವರೆಸು, ಕನ್ನಡದ ತೇರಿಗೆ ನಿನ್ನದೊಂದು ಹೆಗಲು.
Congratulations my grandson CHINTHAN GOD BIESS YOU
Congratulations to my grandson go-ahead God Bless u
ಬರಹವನ್ನು ಮೆಚ್ಚಿ ಪ್ರೋತ್ಸಾಹಿಸಿ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು..
ಬಹಳ ಸುಂದರವಾಗಿ ಬರೆದಿದ್ದೀಯ ಚಿಂತನ್ ಬೆಟ್ಟದ ಮೇಲೆ ವಾಹನ ತೆಗೆದುಕೊಂಡು ಹೋಗುವಾಗಿನ ಚಿತ್ರಣ ಕುತೂಹಲ ಕೆರಳಿಸುವಂತಿದೆ . ಸಾಹಿತ್ಯ ಲೋಕದಲ್ಲಿ ನಿನ್ನ ಬರವಣಿಗೆಯ ಪಯಣ ಇನ್ನೂ ಹೆಚ್ಚು ಹೆಚ್ಚು ಮುಂದುವರೆಯಲಿ . All the best ಪುಟ್ಟ . ಇನ್ನು ಮುಂದೆಯೂ ನಿನ್ನ ಬರಹಗಳ ನಿರೀಕ್ಷೆಯಲ್ಲಿ …….
ಚಿಂತನ್ ನಿನ್ನ ವಯೋಮಾನಕ್ಕೆ ಅತ್ಯುತ್ತಮವಾಗಿ ಬರಹ ಮೂಡಿಬಂದಿದೆ. ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ಮನತಳದ ಶುಭಹಾರೈಕೆಗಳು.
ಬಾಲಬರಹ ಚೆನ್ನಾಗಿದೆ.ಬರಹಕ್ಕೆ ಅಗತ್ಯವಾದ ಮಾಹಿತಿಸಂಗ್ರಹವೂ ಚೆನ್ನಾಗಿದೆ..ಇದೇ ರೀತಿ ಮುಂದುವರಿಸು ಪುಟ್ಟಾ.
Waah…nice one! Keep growing
ಸೂಪರ್
ಗುಡ್
ಲಕ್
ಚೆನ್ನಾಗಿದೆ
ಉತ್ತಮ ಗುಣಮಟ್ಟದ ಬರಹ. ಪು಼ಟ್ಟನಿಗೆ ಶುಭವಾಗಲಿ.
Great writing Chintana. Keep writing.
ಎಲ್ಲರಿಗೂ ಧನ್ಯವಾದಗಳು
ಬರವಣಿಗೆ ತುಂಬಾ ಚೆನ್ನಾಗಿದೆ ಪುಟ್ಟ. ಒಳ್ಳೆಯ ಭವಿಷ್ಯವಿದೆ. God bless you.
ಬೆಳೆಯುವ ಸಿರಿ ಮೊಳಕೆಯಲ್ಲಿ
ಪ್ರೀತಿಯ ಚಿಂತನ್.., ಬಹಳ ಚೆಂದ ಬರೆದಿದ್ದೀಯ ಮಗೂ. ನೀನು ಬಳಸಿರುವ ಭಾಷೆ.., ನಿರೂಪಿಸಿರುವ ಶೈಲಿ ನಿಜಕ್ಕೂ ನಿನ್ನ ಬರವಣಿಗೆಯ ತಾಕತ್ತನ್ನು ತೋರುತ್ತಿದೆ. ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಬರೆಯುತ್ತಿರು.. ಶುಭವಾಗಲಿ ..
ಬಹಳ ಚೆನ್ನಾಗಿ ಬರೆದಿದ್ದೇ ಮಗೂ..ಇನ್ನೂ ಬರೆಯುತ್ತಾ ಇರು.