ಕಾವ್ಯ ಮೋಹಿಗೆ
ನಿದ್ದೆಯಿಂದೇಳು ಗದ್ದುಗೆಯನಾಳು
ಗುದ್ದು ಆಲಸಿಗಳ ಬೆನ್ನ ಮೇಲೊಂದು
ಎದ್ದು ಮದ್ದಾನೆಗಳ ಹಿಂಡ ಮುನ್ನೆಡಸು
ಎತ್ತ ಹೋಗಿವೆ ಇಂದು
ಚಿತ್ತ ಬಿಟ್ಟಿಲ್ಲಿ
ಬಟ್ಟಬಯಲಿನ ತುಂಬಾ
ಚಿಟ್ಟೆ ಹಿಡಿಯುತಲಿಹರೇ
ಅಟ್ಟ ಹತ್ತಿರಿ ಎಂದು
ಅಲವತ್ತುಕೊಂಡರೂ
ಉಟ್ಟ ಪತ್ತಲದಲ್ಲೆ
ಬೆಟ್ಟ ಏರುವ ತವಕ
ಮನವ ಬಾಧಿಸುತಿಹುದೇ
ಬುಟ್ಟಿ ಹಣ್ಣುಗಳೇನು
ತಟ್ಟನೇ ದಕ್ಕುವವೇ?
ನೆಟ್ಟ ನೋಟವು ಕದಲದಂತಿರೇ ಸಾಕೆ?
ಮರವನೇರಲು ಇರದ ಕಸುವು
ಬೆರಗು ಹೂಗಳ ಶಂಕೆ ಸುಳಿವು
ಜಡಜಂಜಡದಿ ಕುಸಿದ ಮನವು
ಎದ್ದು ಜಾಡಿಸಿ ಬಂದು
ತಗಣಿತಂಡವ ಕೊಂದು
ಹರನ ಹಾಲ್ಗಡಲನ್ನೆ
ಉಂಡು ಬನ್ನಿ
ಚಂದದೌತಣವನ್ನೆ ಕಾವ್ಯ ಸುಧೆಗೆ ತನ್ನಿ
-ನಾಗರೇಖಾ ಗಾಂವ್ಕರ್
ಚೆಂದದ ಕವನ
ಸೊಗಸಾದ ಕವಿತೆ.
ಸುಂದರವಾಗಿದೆ ಕವನ . ಯಾವುದೇ ಕೆಲಸದಲ್ಲೂ ಪರಿಶ್ರಮವೇ ಮುಖ್ಯ ಅನ್ನುವ ಸಾರವನ್ನು ಇಡೀ ಕವನ ವಿವರಿಸುತ್ತದೆ .”ಬೆಟ್ಟ ಹತ್ತುವ ತವಕ ” – ಈ ಸಾಲುಗಳು ಬಹಳ ಇಷ್ಟವಾಯಿತು .
ವಿನೂತನ ದೃಷ್ಟಿಕೋನದ ಕವಿತೆ