ಆದಿಕವಿ ವಾಲ್ಮೀಕಿ

Share Button

ಮನುಷ್ಯ ತನ್ನ ಜೀವಿತದಲ್ಲಿ ಏನು ಬೇಕಾದರೂ ಸಾಧಿಸಿಕೊಳ್ಳಬಹುದು. ತನ್ನ ಸಾಧನೆ, ಗುರಿ, ಅಗತ್ಯ. ಒಳ್ಳೆಯವನು ಕೆಟ್ಟವನಾಗಬಹುದು, ಕೆಟ್ಟವನು ಒಳ್ಳೆಯವನಾಗಲೂಬಹುದು. ಎಷ್ಟೋ ಹೀನರಾಗಿ ಬಾಳಿದವರೂ ಸಮಯ ಸನ್ನಿವೇಶಗಳಿಂದ ಪ್ರೇರಿತರಾಗಿ ಸತ್ಪುರುಷರಾಗಿ ಲೋಕದಲ್ಲಿ ಆಚಂದ್ರಾರ್ಕವಾಗಿ ಬೆಳಗುತ್ತಾರೆ, ಇಂತಹ ನಿದರ್ಶನಗಳು ನಮ್ಮ ಪುರಾಣಗಳಲ್ಲಿ ಸಾಕಷ್ಟಿವೆ. ಹಾಗಾದರೆ ಆ ಪುರಾಣವನ್ನು ಬರೆದವರೋ… ಹೌದು. ಈ ನಿಟ್ಟಿನಲ್ಲಿ ಆದಿಕವಿ ವಾಲ್ಮೀಕಿ ಶ್ರೇಷ್ಠರಾಗಿ ಮೊದಲನೆಯವರಾಗಿ ನಮ್ಮೆದುರು ಶೋಭಿಸುತ್ತಾರೆ. ವಾಲ್ಮೀಕಿಯವರು ರಾಮಾಯಣ ಗ್ರಂಥಕರ್ತರು. ವಾಲ್ಮೀಕಿ ರಾಮಾಯಣವೆಂದೇ ಲೋಕ ಪ್ರಸಿದ್ಧ, ಅವರು ಹಿಂದೆ ಹೇಗಿದ್ದರು?  ರಾಮಾಯಣವನ್ನು ಬರೆಯಲು ಪ್ರೇರಣೆ ಯಾರು? ಆ ಸಂದರ್ಭ ಹೇಗುಂಟಾಯಿತು ಎಂಬುದೆಲ್ಲ ತಿಳಿಯೋಣ.

ಬೇಡನೊಬ್ಬ ದರೋಡೆಕೋರನಿದ್ದ. ಅವನು ದಾರಿಹೋಕರನ್ನು ತಡೆದು ಸುಲಿಗೆ ಮಾಡಿ ಬಂದ ಹಣದಿಂದ ಜೀವಿಸುತ್ತಿದ್ದ.  ಹೀಗಿರಲು ಒಂದು ದಿನ ಆ ದಾರಿಯಾಗಿ ನಾರದ ಮಹರ್ಷಿಗಳು ಬಂದರು. ಅವರನ್ನೂ ಅವನು ತಡೆದು ನಿಲ್ಲಿಸಿ ತಲೆ ಒಡೆಯಲು ಹೋದ. ಅವರು ಸಮಾಧಾನ ಚಿತ್ತರಾಗಿ ‘ನೀನು ದರೋಡೆ ಮಾಡಿದ ಈ ಹಣವೆಲ್ಲ ಏನು ಮಾಡುತ್ತಿ’ ಎಂದು ಕೇಳಿದರು. ಆಗ ವ್ಯಾಧ ನನ್ನ ಹೆಂಡತಿ ಮಕ್ಕಳನ್ನೂ ನನ್ನ ಮುದಿ-ತಂದೆ ತಾಯಿಯರನ್ನೂ ಸಾಕುತ್ತೇನೆ ಎಂದ. ‘ಹೀಗೆ ದಾರಿ ಹೋಕರನ್ನು ದರೋಡೆ ಮಾಡಿದರೆ ಅದರಿಂದ ನಿನಗೆ ಮಹಾಪಾಪ ಉಂಟಾಗುತ್ತದೆ. ಅದನ್ನು ನೀನು ಅರಿತೆಯಾ? ‘ಎಂದು ನಾರದರು ಕೇಳಿದಾಗ ಅವನು ‘ಪಾಪವೋ ಪುಣ್ಯವೋ  ನನಗೆ ಗೊತ್ತಿಲ್ಲ. ನನ್ನ ಕಸುಬು ಇದಾಗಿದೆ’ ಎಂದ. ಆದರೆ ನಿನಗೆ ನಾನೋಂದು ಮಾತು ಕೇಳುತ್ತೇನೆ ಯೋಚಿಸಿ ಉತ್ತರ ನೀಡಬೇಕು ಎಂದರು ನಾರದರು.

ಅದಕ್ಕವನು ಆಗಲಿ ಕೇಳಿ ಎಂದ. ನೀನು ಹೀಗೆ ದರೋಡೆ ಮಾಡಿದ ಹಣದಿಂದ ತಂದೆ-ತಾಯಿ, ಹೆಂಡತಿ ಮಕ್ಕಳನ್ನು ಸಾಕುತ್ತೀಯಾ ತಾನೇ ನಿನಗೆ ಬಂದ ಪಾಪದಲ್ಲೂ ಅವರು ಪಾಲು ತೆಗೆದುಕೊಳ್ಳಲು ರೆಡಿಯಿದ್ದಾರೋ ಕೇಳಿ ಬಾ ಎಂದರು. ‘ನನ್ನಿಂದ ತಪ್ಪಿಸಿಕೊಳ್ಳಲು ನೀನು ಈ ರೀತಿ ನಾಟಕವಾಡುತ್ತಿದ್ದೀಯಾ ನಾನು ನಿನ್ನನ್ನು ಬಿಡುವುದಿಲ್ಲ’ ಎಂದ. ‘ನಾನು ತಪ್ಪಿಸಿಕೊಂಡು ಓಡಿಹೋಗಲಾರೆ. ಬೇಕಿದ್ದರೆ ನನ್ನನ್ನು ಈ ಮರಕ್ಕೆ ಕಟ್ಟಿ ಬಿಗಿದು ನೀನು ತಂದೆ-ತಾಯಿಯರಲ್ಲಿ ಕೇಳಿ ಬಾ’ ಎಂದರು ನಾರದರು. ಅವರು ಹೇಳಿದಂತೆ ನಾರದರ ಕೈಕಾಲುಗಳನ್ನು ಒಂದು ಮರಕ್ಕೆ ಕಟ್ಟಿ ಬಿಗಿದು ತನ್ನ ಮನೆಗೆ ಹೋಗಿ ಮೊದಲು ತಂದೆಯಲ್ಲಿ ಕೇಳಿದ “ಅಪ್ಪಾ.. ನಾನು ಇದುವರೆಗೆ ದಾರಿ ಹೋಕರನ್ನು ತಡೆದು ತಲೆಯೊಡೆದು ಸುಲಿಗೆ ಮಾಡಿ ನಿಮ್ಮನ್ನೆಲ್ಲ ಸಾಕುತ್ತಾ ಇದ್ದೆ. ನನಗೆ ಬಂದ ಹಣದಿಂದ ಜೀವಿಸಿದಂತೆ ನನ್ನ ಪಾಪದಲ್ಲೂ ಪಾಲು ಪಡೆಯಲಾರಿರಾ ಎಂದ. ಆಗ ಅವನ ತಂದೆ ‘ಎಲವೋ ದುಷ್ಟಾ… ನೀನು ದಾರಿಹೋಕರನ್ನು ಸುಲಿಗೆ ಮಾಡಿ ನಮ್ಮನ್ನು ಸಾಕುತ್ತೀಯೇ ? ಅದು ಮಹಾಪಾಪ, ನನಗೆ ಇದುವರೆಗೆ ಈ ಸಂಗತಿ ತಿಳಿದಿರಲಿಲ್ಲ. ನಮ್ಮನ್ನು ಸಾಕುವುದು ನಿನ್ನ ಧರ್ಮ. ಆದರೆ ನಿನ್ನ ಪಾಪದಲ್ಲಿ ನಾನು ಪಾಲು ಪಡೆಯಲಾರೆವು’ ಎಂದ ತಂದೆ.

ಕೂಡಲೇ ತಾಯಿಯಲ್ಲಿ ಕೇಳಿದ. ತಾಯಿಯೂ  ತಂದೆಯ ಮಾತನ್ನೇ ಪುನರುಚ್ಚರಿಸಿ ‘ನಿನ್ನ ಪುಣ್ಯದಲ್ಲಿ ನಾವು ಪಾಲು ಪಡೆಯಬಹುದೇ ಹೊರತು ಪಾಪದಲ್ಲಿ ನನಗೆ ಪಾಲು ಬೇಡ’ ಎಂದಳು. ಹಾಗೆಯೇ ಬಂದು ಅವರು ಹೇಳಿದುದನ್ನು ನಾರದರಿಗೆ ಒಪ್ಪಿಸಿದ. ‘ಓಹೋ ತಂದೆ-ತಾಯಿ ಪಾಲು ಪಡೆಯದಿದ್ದರೆ ಬೇಡ, ಈಗ ಹೋಗಿ ನಿನ್ನ ಹೆಂಡತಿ ಮಕ್ಕಳಲ್ಲಿ ಕೇಳಿ ಬಾ’ ಎಂದರು. ಹಾಗೆಯೇ ಹಿಂದಿರುಗಿ ಹೆಂಡತಿ-ಮಕ್ಕಳಲ್ಲಿ ಅದೇ ಪ್ರಶ್ನೆಯನ್ನು ಕೇಳಿದಾಗ ಅವರಾರೂ ಇವನ ಪಾಪದಲ್ಲಿ ಸಹಭಾಗಿಗಳಾಗಲು ಒಪ್ಪದೆ ಪುಣ್ಯದಲ್ಲಿ ಮಾತ್ರ ಪಾಲು ಪಡೆಯುತ್ತೇವೆ ಎಂದರು. ಅದನ್ನೂ ನಾರದರ ಮುಂದೆ ಹೇಳಿದಾಗ ಅವರು ‘ನೋಡು, ಲೋಕವೇ ಹಾಗೆ, ಮಕ್ಕಳು-ಮರಿ, ಬಂಧು-ಬಳಗ ಎಲ್ಲರೂ ನಾವು ಗಳಿಸಿದ ದುಡ್ಡಿಗೂ ಪುಣ್ಯಕ್ಕೂ ಅವರೆಲ್ಲ ಭಾಗಿಯಾಗುವರೇ,  ವಿನಹ ಬರುವ ಪಾಪ ಹೊತ್ತುಕೊಳ್ಳಲು ಯಾರೂ ತಯಾರಿಲ್ಲ. ಹೀಗಿದ್ದ ಮೇಲೆ  ಈ ರೀತಿ ಮಾಡಿ ಯಾಕೆ ಮತ್ತೂ ಮತ್ತೂ ಪಾಪ  ಹೊತ್ತುಕೊಳ್ಳುತ್ತಿ ಯೋಚಿಸಿ ನೋಡು’ ಎಂದರು. ಈಗ ವ್ಯಾಧನ ಕಣ್ಣು ತೆರೆಯಿತು.

ಹೌದು, ನನ್ನವರಿಗಾಗಿ ನಾನೆಷ್ಟು ದುಡಿದಿದ್ದೇನೆ.  ಅವರ ಹೊಟ್ಟೆ ತುಂಬಿಸಲು ಎಷ್ಟು ಜನರಿಗೆ ಹಿಂಸೆ ನೀಡಿ ಸುಲಿಗೆ ಮಾಡಿದ್ದೇನೆ. ಆದರೆ ನನ್ನವರಾರೂ ನನ್ನ ಪಾಪದಲ್ಲಿ ಪಾಲು  ಪಡೆಯಲು ತಯಾರಿಲ್ಲ ಎಂದ ಮೇಲೆ ನಾನ್ಯಾಕೆ ಅವರಿಗಾಗಿ ಈ ಕೆಲಸ ಮಾಡಿ ಪಾಪ ಹೊತ್ತುಕೊಳ್ಳಲಿ! ಎಂದು ಚಿಂತಿಸಿದವನೇ ‘ಈಗ ನಾನೇನು ಉಮಾಡಲಿ’ ಎಂದು ನಾರದರನ್ನು ಕೇಳಿದವನೇ ನಾರದರನ್ನು ಕಟ್ಟಿದ ಹಗ್ಗವನ್ನು ಬಿಚ್ಚಿದ. ‘ನೀನು ಈ ತನಕ ಮಾಡಿದ ತಪ್ಪಿಗೆ ಭಗವಂತನನ್ನು ಧ್ಯಾನ ಮಾಡು’  ಎಂದರು ನಾರದರು. ‘ಭಗವಂತನನ್ನು ಹೇಗೆ ಧ್ಯಾನ ಮಾಡಲಿ ನನಗೆ ಗೊತ್ತಿಲ್ಲ’ ಎಂದ ವ್ಯಾಧ, ‘ಭಗವಂತನನ್ನುಧ್ಯಾನಮಾಡಲು ತಿಳಿಯದಿದ್ದರೆ ಮರ, ಮರ, ಮರ ಎಂದು ಧ್ಯಾನ ಮಾಡುತ್ತಾ ಈ ಮರದ ಬುಡದಲ್ಲಿ ಕುಳಿತುಕೋ’ ಎಂದರವರು. ನಾರದರು ಹೇಳಿದಂತೆ ಮರವನ್ನು ಜಪಿಸುತ್ತಾ ಅದರ ಬುಡದಲ್ಲಿ ಕುಳಿತ. ಅವನದೆಷ್ಟು ತಪಸ್ಸಿನಲ್ಲಿ ತಲ್ಲೀನನಾಗಿದ್ದನೆಂದರೆ ಕೆಲವು ಕಾಲದಲ್ಲಿ ಅವನ ಮೈಮೇಲೆ ಹುತ್ತ ಬೆಳೆದಿದ್ದೂ ಅವನಿಗೆ ತಿಳಿಯದಾಯಿತಂತೆ. ಮರ ಮರ ಎಂಬುದು ರಾಮ, ರಾಮ ಆಗಿ ಅದೆಷ್ಟೋ ಕೋಟಿಗಟ್ಟಲೆ ರಾಮನಾಮ ಜಪಿಸಿದ್ದ.  ಹೀಗೊಂದು ದಿನ ನಾರದರು ವಾಪಾಸು ಅಲ್ಲಿಗೆ ಬಂದು ‘ಏಳು ಎದ್ದೇಳು. ನೀನೀಗ ಮೊದಲಿನಂತೆ ದರೋಡೆಕೋರನಲ್ಲ ನಿನ್ನ ತಪಸ್ಸಿನ ತನ್ಮಯತೆಯಿಂದ ನಿನ್ನ ಸುತ್ತಲೂ ಹುತ್ತ ಬೆಳೆದ ಕಾರಣ (ವಲ್ಮೀಕ-ಹುತ್ತ) ನೀನು ವಾಲ್ಮೀಕಿ ಎನಿಸಿಕೊಂಡೇ. ರಾಮನಾಮ ಜಪಿಸುತ್ತಿದ್ದ ನೀನು ರಾಮಾಯಣವೆಂಬ ಮಹಾಕಾವ್ಯ ಬರೆದು ಲೋಕಕ್ಕೆ ಮಹದುಪಕಾರವನ್ನು ಮಾಡು’ ಎಂದು ಎಚ್ಚರಿಸಿ ಹೋದರು.

ಮುಂದೆ ಒಂದು ದಿನ ವಾಲ್ಮೀಕಿ ತಮಸಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾಗ ಕ್ರೌಂಚಪಕ್ಷಿಗಳೆರಡು ಒಟ್ಟಿಗೆ ಇರುವುದನ್ನು ಕಂಡರು. ನೋಡುತ್ತಿದ್ದಂತೆಯೇ ಒಬ್ಬ ಬೇಡನು ಬಂದು ಅವುಗಳಿಗೆ ಬಾಣ ಹೊಡೆಯಲು ಗಂಡು ಹಕ್ಕಿಗೆ ತಾಗಿ ಅದು ಸತ್ತಿತ್ತು. ಆಗ ಹೆಣ್ಣು ಹಕ್ಕಿ ವಿರಹದಿಂದ ಗೋಳಾಡಿತು. ಕೂಡಲೇ ವಾಲ್ಮೀಕಿ ಮುನಿಗಳೂ ಶೋಕತಪ್ತರಾಗಿ ಅವರ ಬಾಯಿಯಿಂದ ಈ ಶ್ಲೋಕ ಹೊರಹೊಮ್ಮಿತು.

ಮಾ ನಿಷಾದ ಪ್ರತಿಷ್ಠಾತ್ವವಾಗಮಃ ಶಾಶ್ವತೀ ಸಮಾಃ
ಯತ್  ಕ್ರೌಂಚ  ಮಿಥುನಾದೇಕಮವಧೀಃ ಕಾಮ ಮೋಹಿತಮ್!

ಎಲೈ ಬೇಡನೇ ನೀನು ಚಿರಕಾಲ ಜೀವಿಸಲು ಯೋಗ್ಯನಲ್ಲ. ಯಾಕೆಂದರೆ ಈ  ಕ್ರೌಂಚ ಪಕ್ಷಿಗಳು ಮಿಥುನದಲ್ಲಿದ್ದಾಗ ನೀನೊಂದನ್ನು ಕೊಂದೆಯಲ್ಲ ಎಂದರ್ಥ. ವಾಲ್ಮೀಕಿ ಮಹರ್ಷಿ ತನ್ನ ಬಾಯಿಯಿಂದ ಹೊರಟ ಶ್ಲೋಕಕ್ಕೆ ತಾನೇ ವಿಸ್ಮಯ ಪಡುತ್ತಾನೆ. ಈ ಶ್ಲೋಕವು ಮುಂದೆ ರಾಮಾಯಣ ಬರೆಯುವುದಕ್ಕೆ ನಾಂದಿಯಾಯಿತು. ರಾಮಾಯಣ ಎಂಬುದು ಮಹಾನದಿ. ಅದು ಹುಟ್ಟುವುದು ವಾಲ್ಮೀಕಿಯಲ್ಲಿ ಅದು ಸೇರುವುದು ರಾಮನಲ್ಲಿ. ರಾಮಾಯಣ ಆದಿಕಾವ್ಯ, ವಾಲ್ಮೀಕಿ ಆದಿಕವಿ, ಸಂಸ್ಕೃತ ಸಾಹಿತ್ಯಕ್ಕೆ ವಾಲ್ಮೀಕಿ ರಾಮಾಯಣವು ಕಿರೀಟಪ್ರಾಯವಾದುದು. ಶ್ರೀರಾಮ ದೇವತಾ ಮನುಷ್ಯ. ಅವನು ಪ್ರಜಾಹಿತ ಚಿಂತಕ, ಧರ್ಮರಕ್ಷಕ, ಸೀತಾದೇವಿ ಲಕ್ಷ್ಮೀ ಸ್ವರೂಪಳು. ಅವಳು ಪತಿವ್ರತೆ. ಅಣ್ಣನನ್ನು ವನವಾಸ ಸಮಯದಲ್ಲೂ ನೆರಳಿನಂತೆ ಹಿಂಬಾಲಿಸಿದವ ಲಕ್ಷ್ಮಣ ರಾಮನ ರಕ್ಷಣೆಗಾಗಿ, ಅಗ್ರಜನ ಪ್ರೀತಿಗೆ ಪಾತ್ರನಾದವ ಭರತ, ಸೋದರ ಪ್ರೇಮಕ್ಕೆ ಹೆಸರಾದವನೆಂದರೆ ರಾಮಾಯಣದ ಭರತ. ಇನ್ನು ಆಂಜನೇಯ ರಾಮಭಕ್ತ. ರಾಮನ ಸೇವಕನೂ ಹೌದು. ಇವರೆಲ್ಲರ ಜೀವನವು ಮಾನವ ಕುಲಕ್ಕೆ ಆದರ್ಶವಾದುದು. ಇವರುಗಳು ಭಾರತ ಸಂಸ್ಕೃತಿಯ ಪ್ರತೀಕಗಳು. ರಾಮಾಯಣವೆಂಬುದು ನಿತ್ಯನೂತನವಾದುದು. ಅದು ನಮ್ಮ ನಿಮ್ಮೆಲ್ಲರ ಮಧ್ಯೆ ನಡೆಯುತ್ತಾ ಇದೆ. ಅದನ್ನು ಅರಿತು ತಿದ್ದಿ ಬೆಳೆಯುವ ಒಳಗಣ್ಣು ನಮಗೆ ಬೇಕಾಗಿದೆ. ರಾಮಾಯಣದಲ್ಲಿ ಸನಾತನ (ನಾಶವಿಲ್ಲದ) ಧರ್ಮ ಇದೆ. ಆದಿಕವಿಗೆ ಆದಿಯೇ ಹೊರತು ಕೊನೆಯಿಲ್ಲ. ರಾಮನಿಗೂ ರಾಮಾಯಣಕ್ಕೂ ಅದನ್ನು ಬರೆದ ವಾಲ್ಮೀಕಿಗೂ ಸಾವಿಲ್ಲ ಅಲ್ಲವೇ ಹೀಗೆ ಮರ ಮರ ಎಂದು ಜಪಿಸಿ ರಾಮಾಯಣ ಬರೆದ ವಾಲ್ಮೀಕಿ ಅಮರನಾದ.

– ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

  1. ನಯನ ಬಜಕೂಡ್ಲು says:

    Very nice. ಗೊತ್ತಿದ್ದ ವಿಚಾರಗಳಾದರೂ ಮನದ ಮೂಲೆಯಲ್ಲೆಲ್ಲೋ ಅವಿತಿದ್ದವು. ಈಗ ನಿಮ್ಮ ಬರಹದ ಮೂಲಕ ಮತ್ತೊಮ್ಮೆ ನೆನಪಾಗಿ ವಾಲ್ಮೀಕಿ ಮಹಾಶಯನ ಜೊತೆ ಜೊತೆಗೆ ಬದುಕಿನ ಉದ್ದೇಶವನ್ನು ನೆನೆಯುವಂತಾಯಿತು .

  2. ವಿಜಯಾಸುಬ್ರಹ್ಮಣ್ಯ , says:

    ಧನ್ಯವಾದಗಳು ನಯನ ಬಜಕ್ಕೂಡೆಲು

  3. Shankari Sharma says:

    ಬರಹ ಚೆನ್ನಾಗಿದೆ.

  4. ಶಿವಮೂರ್ತಿ.ಹೆಚ್. says:

    ತುಂಬ ಅರ್ಥಪೂರ್ಣ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: