ರಕ್ಷಾ ಬಂಧನದ ಹೊರಗಿನ ರಕ್ಷಕರು

Spread the love
Share Button


ರಕ್ಷಾ ಬಂಧನ –  ಹೆಸರೇ ಸೂಚಿಸುವಂತೆ ಇದು ಅಣ್ಣ ತಂಗಿ , ಅಕ್ಕ ತಮ್ಮ ಎಂಬ ಪವಿತ್ರ ಸಂಬಂಧವನ್ನು  ಇನ್ನಷ್ಟು ಭದ್ರ ಗೊಳಿಸುವ  ಹಬ್ಬ . ರಕ್ಷೆ ಅನ್ನೋ ದಾರದ  ಎಳೆಯಲ್ಲಿ ಸಹೋದರ ಸಹೋದರಿ ಪ್ರೀತಿಯ, ಬಾಂಧವ್ಯದ, ರಕ್ಷಣೆಯ  ಪರಿಭಾಷೆ ಅಡಗಿದೆ. ಇದೊಂದು ಮನಸ್ಸುಗಳನ್ನು  ಬೆಸೆಯುವ ಪವಿತ್ರವಾದ ಹಬ್ಬ. ಅಣ್ಣ ಅಥವಾ ತಮ್ಮನೆನಿಸಿಕೊಳ್ಳಲು  ಒಡ ಹುಟ್ಟಿದ ರಕ್ತ ಸಂಬಂಧಿಗಳೇ ಆಗಬೇಕೆಂದೇನೂ  ಇಲ್ಲ . ಹಲವಾರು ಬಾರಿ ರಕ್ತ ಸಂಬಂಧಿಗಳು  ಅಲ್ಲದವರು  ಕೂಡ ಹೆಣ್ಣು ಮಕ್ಕಳ ಪಾಲಿಗೆ ಅಣ್ಣನಾಗಿ, ತಮ್ಮನಾಗಿ  ಬೆಂಬಲವಾಗಿ  ನಿಂತ ಉದಾಹರಣೆಗಳೂ ಇವೆ.

ಸುಮಾರು ವರ್ಷಗಳ ಹಿಂದೆ ನಡೆದ ಒಂದು ಘಟನೆ . ನನಗೆ ಆಗ 13 ವರ್ಷ ವಯಸ್ಸು . ತುಂಬಾ ತುಂಟಾಟದ ಹುಡುಗಿ ನಾನು ಆವಾಗ. ಎಷ್ಟೇ ತುಂಟಾಟವಿದ್ದರೂ  ಮನಸ್ಸಿನ ಒಂದು ಮೂಲೆಯಲ್ಲಿ ನಾನೂ ಹೆಣ್ಣು ಅನ್ನೋ ಭಾವ ಸದಾ ಜಾಗೃತವಾಗಿ ಇರುತಿತ್ತು . ನಾನು ನನ್ನ ಅಜ್ಜಿ ಮನೆಯಿಂದ ಶಾಲೆಗೆ ಹೋಗಿ ಬರುತ್ತಿದ್ದೆ . ಹೆಚ್ಚಾಗಿ ನಾನು ನನ್ನ ಅಜ್ಜಿ ಹಾಗೂ ಸೋದರ ಮಾವನ ಆಶ್ರಯದಲ್ಲೇ ಬೆಳೆದವಳು . ಅಲ್ಲಿ ನನ್ನ ಮಾವನ ಮಗ (ಸುಭಾಷ್ )  ವಯಸ್ಸಲ್ಲಿ ನನಗಿಂತ ಚಿಕ್ಕವನು, ನನ್ನ ಗೆಳೆಕಾರ, ಸಾಥಿ, ತುಂಟಾಟಗಳಲ್ಲಿ ಜೊತೆಗಾರ , ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪ್ರೀತಿಯ ತಮ್ಮ. ಅವನು ನನ್ನೆಲ್ಲಾ ಕಿತಾಪತಿ, ತುಂಟಾಟಗಳಲ್ಲೂ  ಕೈ ಜೋಡಿಸುತಿದ್ದ .

ಹೀಗಿರಲು ಒಂದು ದಿನ ಅಜ್ಜಿ ನಮ್ಮೆಲ್ಲರನ್ನೂ ಒಬ್ಬರು ಸಂಬಂಧಿಕರ ಮನೆಗೆ ಕರೆದುಕೊಂಡು ಹೊರಟರು. ಬಸ್ಸಿನಲ್ಲಿ  ಪ್ರಯಾಣಿಸಬೇಕಿತ್ತು . ನಾವು ಹತ್ತಿ ಕುಳಿತ ಬಸ್ಸಲ್ಲಿ ತುಂಬಾ ರಶ್ ಇತ್ತು .ನಾನೂ, ನನ್ನ ಮಾವನ ಮಗ ಇಬ್ಬರೂ ಅಜ್ಜಿಯ ಪಕ್ಕ ಕುಳಿತಿದ್ದೆವು. ಬಸ್ಸು  ಹೊರಟಿತು . ಸ್ವಲ್ಪ ದೂರ ಹೋದ ನಂತರ ಒಂದು ಕೈ ಸೀಟಿನ ಹಿಂಬದಿಯಿಂದ  ನನಗೆ ತೊಂದರೆ ಕೊಡಲು ಶುರು ಮಾಡಿತು . ಬೆನ್ನು ಸವರುವುದು, ಕುತ್ತಿಗೆಯ ಸುತ್ತ ಕೈ ಬಳಸುವುದು  ಹೀಗೆ . ಅದೊಂದು ಕೆಟ್ಟ ಉದ್ದೇಶ ಹೊಂದಿದ ಸ್ಪರ್ಶವಾಗಿತ್ತು ಅನ್ನುವುದು ಅರಿವಾಗಿತ್ತು  ಆ ವಯಸ್ಸಲ್ಲಿ . ತೊಂದರೆ ಕೊಡುತ್ತಿರುವವರು ಯಾರು ಅಂತ ಹಿಂದಿರುಗಿ ನೋಡಿದಾಗ ಅದು ನಮ್ಮದೇ ಊರಿನ , ನಮ್ಮ ಪಕ್ಕದ ಮನೆಯ ಒಬ್ಬ  ಹುಡುಗ. ಅಂತಹ ಪರಿಸ್ಥಿತಿಯಲ್ಲಿ ಯಾವ ಹೆಣ್ಣಾದರೂ  ಧೃತಿ  ಗೆಡುವುದು  ಸಹಜ. ನನಗೂ ಕ್ಷಣ ಕಾಲ ಹಾಗೆಯೇ ಆಯಿತು . ಆ ಒಂದು ಕ್ಷಣ ಏನೇನೋ ಆಲೋಚನೆಗಳು ಆವರಿಸಿದ್ದವು  ತಲೆಯಲ್ಲಿ . ನಮ್ಮದೇ ಊರಿನವನು  ಈಗ ಇಷ್ಟೆಲ್ಲಾ ತೊಂದರೆ ಕೊಡುವವನು  ನಾನು ಸುಮ್ಮನಿದ್ದರೆ  ನನ್ನನ್ನು ನಾಳೆ ಸುಮ್ಮನೆ ಬಿಡುತ್ತಾನಾ  ಅನ್ನೋ ಪ್ರಶ್ನೆ ಕಾಡಿತ್ತು . ಅವನ ಕೆಟ್ಟ ನಡತೆಯನ್ನು  ವಿರೋಧಿಸು ಅಂತ ಮನ ಚೀರಿ  ಚೀರಿ ಹೇಳಿತ್ತು. ಜೊತೆಗೆ ಒಂದು ಅವ್ಯಕ್ತ  ಭಯ, ಯಾರು ಬರುತ್ತಾರೆ ನನ್ನ ಸಹಾಯಕ್ಕೆ ಅನ್ನೋ ಆಲೋಚನೆ . ಕೊನೆಗೆ ಆಲೋಚನೆಗಳಿಂದ  ಕಂಗೆಟ್ಟು  ನನ್ನ ಪಕ್ಕ ಕುಳಿತಿದ್ದ ಮಾವನ ಮಗನ ಬಳಿ ನನಗಾಗುತಿದ್ದ  ಅನ್ಯಾಯವನ್ನೂ, ತೊಂದರೆಯನ್ನೂ, ಅಸಹಾಯಕತೆಯನ್ನೂ ಹೇಳಿಕೊಂಡೆ. ಅವನೂ ಆಗ ಚಿಕ್ಕವನು . ಏನು ಬೇಕಾದರೂ ಆಗಲಿ ನೀನು ಅವನನ್ನು ಬಿಡಬೇಡ , ಮುಖ ಮೂತಿ ನೋಡದೆ ಚಚ್ಚು, ನಾನು ನಿನ್ನ ಪರವಾಗಿ ಇದ್ದೇನೆ , ಏನಾಗುತ್ತೋ ನೋಡೋಣ ಅಂತ ನನ್ನಲ್ಲಿ ಧೈರ್ಯ ತುಂಬಿದ. ಅವನು ಅಷ್ಟು ಹೇಳಿದ್ದೆ ಸಾಕೆಂದು ನಾನು ಮತ್ತೇನನ್ನೂ ಯೋಚಿಸದೆ ತೊಂದರೆ ಕೊಡುತಿದ್ದವನ  ಕೆನ್ನೆಗೆ  ಚೆನ್ನಾಗಿ ಎಕ್ಕಡ ತಗೊಂಡು ಥಳಿಸಿದೆ . ಅವನು ನನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ . ಕ್ಷಣ ಕಾಲ ಸ್ತಬ್ದನಾದ. ಆಮೇಲೆ ನನ್ನ ಮೇಲೆ ಹಲ್ಲೆ  ನಡೆಸಲು  ಪ್ರಯತ್ನಿಸಿದ. ಅಷ್ಟು ಹೊತ್ತಿಗೆ ವಿಷಯದ ಗಂಭೀರತೆ ಅರಿವಾದ ಸಹಪ್ರಯಾಣಿಕರು  ಅವನನ್ನು ಹಿಡಿದು ಬೆಂಡೆತ್ತಿದರು. ಕೊನೆಗೆ ಬಸ್ ಪೊಲೀಸ್ ಸ್ಟೇಷನ್ ಗೆ ಹೋಗಿ ಪೊಲೀಸರು  ಮುಂದೆ ಯಾವತ್ತೂ ಅವನನ್ನು ನನ್ನ ತಂಟೆಗೆ ಬಾರದ ಹಾಗೆ ವಾರ್ನ್ ಮಾಡಿ ಬಿಟ್ಟರು .

ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳೂ ಎದುರಿಸುವ  ಸಮಸ್ಯೆ ಇದು. ಇದರ ಮುಂದೆ ನಾವು ಸೋತು ತಲೆಬಾಗಿದಲ್ಲಿ ಬದುಕೇ ಮುಗಿದಂತೆ . ಇದನ್ನು ಎದುರಿಸುವ ಧೈರ್ಯವನ್ನು ಎಲ್ಲಾ ಹೆಣ್ಣು ಮಕ್ಕಳು ಬೆಳೆಸಿಕೊಳ್ಳಬೇಕು. ಇಂತಹ ಸಮಯದಲ್ಲಿ ಮನೆಯವರೂ ಆ ಹೆಣ್ಣಿಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಬೇಕು. ಕರಾಟೆಯಂತಹ  ರಕ್ಷಣಾತ್ಮಕ  ವಿದ್ಯೆ ಹೆಣ್ಣು ಮಕ್ಕಳ ಸಲುವಾಗಿಯೂ ಇರುವುದು ಇತ್ತೀಚಿನ ಒಂದು ಉತ್ತಮ ಬೆಳವಣಿಗೆ .

ನಾನು ಈ ಘಟನೆಯನ್ನು ಉಲ್ಲೇಖಿಸಲು ಕಾರಣ,  ಒಡಹುಟ್ಟಿದವಳು  ಅಲ್ಲದಿದ್ದರೂ ಮಾವನ ಮಗ ನನ್ನ ಪರ ನಿಂತ ರೀತಿ , ತುಂಬಿದ ಧೈರ್ಯ, ನೀಡಿದ ಪ್ರೋತ್ಸಾಹ ಸ್ವಂತ ತಮ್ಮನಿಗಿಂತ ಏನೇನೂ ಕಮ್ಮಿ ಅಲ್ಲ ಅನ್ನುವುದನ್ನು ಹೇಳಲು. ಅವನು ಆ ದಿನ ತುಂಬಿದ ಧೈರ್ಯವೇ  ಈ ಜಗತ್ತಲ್ಲಿ ಇವತ್ತಿಗೂ ಎಲ್ಲವನ್ನು ಯಾವ ಭಯವೂ ಇಲ್ಲದೆ, ನಿರ್ಭೀತಿಯಿಂದ ಎದುರಿಸುತ್ತಾ ನಾನು ಬದುಕಲು ಕಾರಣ .

(ಸಾಂದರ್ಭಿಕ ಚಿತ್ರ: ಅಂತರ್ಜಾಲದಿಂದ )

ಇವತ್ತು ಅವನ ಮನೆಯೇ ನನ್ನ ತವರು. ಅಲ್ಲಿ ಏನೇ ಇದ್ದರೂ ಅವನೂ, ಅವನ ಹೆಂಡತಿಯೂ ನನ್ನನ್ನು ಪ್ರೀತಿಯಿಂದ ,ಆಹ್ವಾನಿಸಿ  ಅವರ ಸಂತೋಷದಲ್ಲಿ ಪಾಲ್ಗೊಳ್ಳುವಂತೆ  ಮಾಡುತ್ತಾರೆ . ನನ್ನ ಕಷ್ಟ ಸುಖಗಳಲ್ಲೂ ಭಾಗಿಗಳಾಗುತ್ತಾರೆ. ಒಂದು ಹೆಣ್ಣಿಗೆ ಇದಕ್ಕಿಂತ ಮಿಗಿಲಾದ ಸೌಭಾಗ್ಯ  ಬೇರೇನಿದೆ?, ಪ್ರತೀ ರಕ್ಷಾಬಂಧನಕ್ಕೂ  ರಕ್ಷೆ ಕಟ್ಟದಿದ್ದರೂ ಮನದಲ್ಲಿ ಅವನನ್ನು ಸ್ಮರಿಸದೆ  ಇರುವುದಿಲ್ಲ . ಒಡಹುಟ್ಟಿದವ, ಸ್ವಂತ ತಮ್ಮ ಬದುಕಿದ್ದರೂ ಅವನ ಒಡನಾಟ ,ಅವನ ಕೆಟ್ಟ ಚಟ, ದುರ್ಗುಣಗಳಿಂದಾಗಿ  ನನ್ನ ಪಾಲಿಗೆ ಮರೀಚಿಕೆಯಾಯಿತು. ಮಾವನ ಮಗನಾಗಿದ್ದರೂ ಇವನು ಮಾತ್ರ ನನ್ನ ಪಾಲಿಗೆ ಒಡಹುಟ್ಟಿದವನಂತೆ ಜೊತೆ ನೀಡಿದ್ದಾನೆ, ವಾತ್ಸಲ್ಯ ತೋರುತ್ತಾನೆ, ಇದೂ ನನ್ನ ಪಾಲಿಗೆ ಅದೃಷ್ಟವೇ ಸರಿ.

ಇನ್ನೊಬ್ಬರು  ಅಣ್ಣನನ್ನೂ ನಾನು ಇಲ್ಲಿ ನೆನೆಯುತ್ತೇನೆ . ಅವರು ಆಗರ್ಭ  ಶ್ರೀಮಂತರು. ಸ್ವಂತ ಕಂಪನಿ ಇದೆ. ಹಲವಾರು ಕುಟುಂಬಗಳಿಗೆ ಉದ್ಯೋಗ  ನೀಡಿ ಆಧಾರಸ್ತಂಭ ಆಗಿದ್ದಾರೆ. ಇಂತಹ ಸಾಹುಕಾರನಿಗೂ  ನನ್ನ ಮೇಲೆ ತಂಗಿ ಅನ್ನೋ ಮಮಕಾರ . ಎಷ್ಟೇ ಶ್ರೀಮಂತಿಕೆ ಇದ್ದರೂ ಬಹಳ ಸೀದಾ ಸಾದಾ ಸಾಮಾನ್ಯರಂತೆ ಎಲ್ಲರೊಡನೆ ಬೆರೆಯುತ್ತಾರೆ . ಪ್ರತೀ ರಕ್ಷಾಬಂಧನದ  ದಿನ ತಪ್ಪದೆ ಅವರಿಗೆ ನಾನು ಶುಭಾಶಯ ಕಳುಹಿಸುತ್ತೇನೆ. ಅದಕ್ಕೆ ಪ್ರತಿಯಾಗಿ  ಅವರು ನನ್ನನ್ನು ಹರಸುವ ಪರಿಯಂತೂ ನನ್ನ ಪಾಲಿಗೊಂದು ಉಡುಗೊರೆಯೇ ಸರಿ . ನನ್ನ ಯಜಮಾನರ ಭಾವಂದಿರೂ (ಅಕ್ಕನ ಗಂಡ)  ನನಗೆ ಪ್ರೀತಿಯ ಅಣ್ಣಂದಿರೇ. ಅವರು ತೋರೋ ವಾತ್ಸಲ್ಯವನ್ನೂ  ಪದಗಳಲ್ಲಿ ವಿವರಿಸಲಾರೆ .

ಎಲ್ಲಾ ಸಂಬಂಧಗಳೂ ಇಷ್ಟೇ ಗೆಳೆಯರೇ, ಬಯಸುವುದು ಹಿಡಿಯಷ್ಟು ಪ್ರೀತಿಯನ್ನು, ಮುಷ್ಟಿಯಷ್ಟು ವಾತ್ಸಲ್ಯವನ್ನು . ಇದರ ಹೊರತಾಗಿ ಬೇರೇನನ್ನೂ ಅಲ್ಲ . ಇದರ ಮುಂದೆ ಬೇರೆ ಯಾವುದೂ ಶ್ರೇಷ್ಠವಲ್ಲ  ಜಗದಲ್ಲಿ . ಈ ನಡುವೆ ಬಂದು ಹೋಗಿ ಮಾಡುತ್ತಿರುವ ಸಂಪತ್ತು ಕೇವಲ ಅಲ್ಪ , ತಾತ್ಕಾಲಿಕ , ಬದುಕಿನ ಒಂದು ಅವಶ್ಯಕತೆ  ಅಷ್ಟೇ . ಅದೇ ಸರ್ವಸ್ವ  ಅಲ್ಲ . ಗೆದ್ದರೆ  ಮನಸ್ಸುಗಳನ್ನು ಗೆಲ್ಲಬೇಕು  ನಾವಿಲ್ಲಿ ಬದುಕಿರುವಷ್ಟು  ದಿನ ಅನ್ನುವುದು ನನ್ನ ಅನಿಸಿಕೆ .

–  ನಯನ ಬಜಕೂಡ್ಲು.

2 Responses

  1. Shankari Sharma says:

    ಹೌದು ನಯನ ಮೇಡಂ..ಜೀವನದಲ್ಲಿ, ರಾಖಿ ಕಟ್ಟದೆಯೇ ಅಣ್ಣನಾಗಿ, ಕಷ್ಟ ಕಾಲದಲ್ಲಿ ಸಹಾಯ ಹಸ್ತ ಚಾಚುವ ಅಣ್ಣಂದಿರು ಕೆಲವರು ಸಿಗುತ್ತಾರೆ. ಅವರೇ ಭಾಗ್ಯವಂತರು ಅಲ್ವಾ? ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಎನಿಸುತ್ತದೆ..ಶಾಭಾಷ್! ನಿಜ ಜೀವನದ ಲೇಖನ ಚೆನ್ನಾಗಿದೆ.. ಸ್ಪೂರ್ತಿದಾಯಕವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: