ಮೊದಮೊದಲ ರಾಖಿ, ನೆನಪುಗಳಷ್ಟೇ ಬಾಕಿ
‘ರೀ, ರತ್ನಮ್ಮೋರೇ, ನಾಳೆ ರಾಖಿ ಹಬ್ಬ, ನನಗಿರುವವರು ಇಬ್ಬರು ಗಂಡು ಮಕ್ಕಳು, ನಿಮ್ಮ ಹೆಣ್ಣುಮಕ್ಕಳ ಕೈಯಿಂದ ರಾಖಿ ಕಟ್ಟಿಸ್ರೀ’ ಎಂದು ಈಗ್ಗೆ ಮೂರು ದಶಕಗಳ ಕೆಳಗೆ ಹೊಸದಾಗಿ ಅಪ್ಪನಿಗೆ ಕೆಲಸ ಸಿಕ್ಕು ಹುಬ್ಬಳ್ಳಿಯ ಕ್ವಾಟ್ರಸ್ಸಿನಲ್ಲಿ ಶಿಫ್ಟ್ ಆಗಿದ್ದಾಗ ಮನೆಯ ಪಕ್ಕದ ಆಂಟಿ ಹೀಗೆ ಕೇಳಿಕೊಂಡಿದ್ದರು. ಅಮ್ಮನಿಗೆ ಆಶ್ಚರ್ಯವಾಗಿತ್ತು. ಆಕೆಗೆ ಸಿನೆಮಾ ಹೀರೋಯಿನ್ ರಾಖಿ ಮತ್ತು ಕೆಲ ಹಿಂದಿ ಸಿನೆಮಾಗಳಲ್ಲಿ ರಾಖಿ ಕಟ್ಟಿದ್ದನ್ನು ನೋಡಿದ್ದರೇ ಹೊರತು, ಹುಬ್ಬಳ್ಳಿಯಲ್ಲಿ ಆ ಹಬ್ಬ ಆಚರಿಸುವುದು ಗೊತ್ತಿರಲಿಲ್ಲ. ನಾವಿದ್ದ ಚಿತ್ರದುರ್ಗ ಮತ್ತು ಸುತ್ತ ಮುತ್ತ ಊರುಗಳಲ್ಲಿ ಆಗ ಈ ಆಚರಣೆ ಗೊತ್ತೇ ಇರಲಿಲ್ಲ.
ಹಬ್ಬದ ದಿನ ನಾನು ಮತ್ತು ತಂಗಿ ಅವರ ಮನೆಗೆ ಹೋಗಿದ್ದೆವು. ಅವರು ಕಟ್ಟುವುದಕ್ಕೆ ರಾಖಿ, ಆರತಿ ತಟ್ಟೆ, ಕುಂಕುಮ, ಅಕ್ಷತೆ, ಸಿಹಿತಿಂಡಿ ಎಲ್ಲ ತಯಾರು ಮಾಡಿ ಅವರ ಮಕ್ಕಳ ಜೊತೆ ನನ್ನ ತಮ್ಮನನ್ನೂ ಕೂಡಿಸಿ ನಮ್ಮಿಬ್ಬರ ಕೈಯ್ಯಲ್ಲಿ ರಾಖಿ ಕಟ್ಟಿಸಿದ್ದರು. ಹೀಗೇ ಮಾತನಾಡುತ್ತಾ ಅಮ್ಮನಿಗೆ ‘ನಾನು ಬಂಗಾರದ ಎಳೆಯ ರಾಖಿ ಮಾಡಿಸಿದ್ದೇನೆ ರೀ, ನನಗೊಂದು ಹೆಣ್ಣುಮಗು ಹುಟ್ಟಿದಾಗ ಅದರ ಕೈಯ್ಯಲ್ಲಿ ನಮ್ಮ ಹುಡುಗರಿಗೆ ರಾಖಿ ಕಟ್ಟಿಸಬೇಕು ಎಂಬ ಆಸೆ’ ಎಂದಿದ್ದರು. ಆದರೆ ಮೂರನೆಯ ಬಾರಿಗೆ ಅವರಿಗೆ ಅವಳಿ ಜವಳಿ ಗಂಡುಮಕ್ಕಳಾದವು. ಆಗಂತೂ ತುಂಬಾ ಅತ್ತುಬಿಟ್ಟಿದ್ದರು. ಅಮ್ಮ ಅಂತೂ ಅವರಿಗೆ ಸಮಾಧಾನ ಮಾಡುತ್ತಾ ಎಲ್ಲರೂ ಹೆಣ್ಣು ಬೇಡ ಎನ್ನುವ ಕಾಲದಲ್ಲಿ ನೀವು ಗಂಡು ಮಕ್ಕಳು ಹುಟ್ಟಿದ್ದಕ್ಕೆ ಅಳುತ್ತಿದ್ದೀರಿ ಎಂದಾಗ ಹೆಣ್ಣು ಮಗುವಿದ್ದ ಮನೆ ತಣ್ಣಗೆ ಅಂತಾರೆ ಎಂದು ಕಣ್ಣೊರೆಸಿಕೊಂಡಿದ್ದರು. ಮುಂದೆ ಹುಬ್ಬಳ್ಳಿ ಬಿಟ್ಟು ಬರುವ ತನಕವೂ ಅವರ ಮಕ್ಕಳಿಗೆ ನಾವು ಖಾಯಂ ರಾಖಿ ಕಟ್ಟುವ ಸಹೋದರಿಗಳಾಗಿಬಿಟ್ಟಿದ್ದೆವು. ಅಂದಿನಿಂದ ಶುರುವಾದ ಈ ರಾಖಿ ಹಬ್ಬದ ಬಾಂಧವ್ಯ ನಿರಂತರವಾಗಿತ್ತು.
ಕೆಲವು ವರ್ಷಗಳ ನಂತರ ನಾವು ಹುಬ್ಬಳ್ಳಿ ಬಿಟ್ಟು ಮತ್ತೆ ಚಿತ್ರದುರ್ಗಕ್ಕೆ ವಾಪಾಸಾದೆವು. ಮರೆಯದೆ ರಾಖಿ ಕಳಿಸಬೇಕೆಂದು ಹೇಳಿ ಕಳುಹಿಸಿದ್ದರು. ನಾವು ಬಂದ ಕೆಲದಿನಗಳಲ್ಲೇ ಆಂಟಿ, ಅಂಕಲ್ ಬೈಕಿನಲ್ಲಿ ಹೋಗುವಾಗ ಕಿಮ್ಸ್ ಹತ್ತಿರ ಅಪಘಾತವಾಗಿ ಇಬ್ಬರೂ ಸ್ಪಾಟ್ ಡೆತ್ ಎಂಬ ಆಘಾತಕಾರಿ ಸುದ್ದಿ ತಲುಪಿತ್ತು. ಇನ್ನೂ ಸ್ವಲ್ಪ ದಿನಕ್ಕೆ ಬಾಗಲಕೋಟೆಯಲ್ಲಿ ಅವರ ಅಜ್ಜಿಯ ಮನೆಯಲ್ಲಿದ್ದ ಅವರ ನಾಲ್ಕು ಮಕ್ಕಳನ್ನೂ ದತ್ತು ಕೊಟ್ಟಿದ್ದಾರೆಂಬ ಸುದ್ದಿ ಮನ ಕಲಕಿತ್ತು. ರಾಘವೇಂದ್ರ, ವೆಂಕಟೇಶ, ಸಂದೀಪ, ಪ್ರದೀಪ ಈಗಲೂ ರಾಖಿಯ ಹಬ್ಬ ಬಂದಾಗ ಮೊದಲು ನೆನಪಾಗುವುದು ಈ ಮಕ್ಕಳೇ. ಈಗ ಎಲ್ಲಿದ್ದಾರೋ, ಹೇಗಿದ್ದಾರೋ ಗೊತ್ತಿಲ್ಲ. ಆದರೆ ರಾಖಿಯ ದಿನ ಅವರನ್ನು ನೆನಪಿಸಿಕೊಳ್ಳುವುದು ಮಾತ್ರ ಮರೆತಿಲ್ಲ.
ಮತ್ತೆ ರಾಖಿ ಬಂದಿದೆ. ತಮ್ಮಂದಿರಿಗೆ ರಾಖಿ ಕಳಿಸಿಯಾಯ್ತು. ರಾಖಿಯ ಹಬ್ಬಕ್ಕೆ ನಾಂದಿ ಹಾಡಿದ ಆಂಟಿ, ಮೊದಲು ರಾಖಿ ಕಟ್ಟಿದ ಆ ಸಹೋದರರ ನೆನಪು ಅಚ್ಚ ಹಸಿರಾಗಿ ಉಳಿದಿದೆ.
-ನಳಿನಿ. ಟಿ. ಭೀಮಪ್ಪ, ಧಾರವಾಡ
ಚೆಂದದ ಬರಹ ..ಭಾವಪೂರ್ಣ ..ಆ ತಮ್ಮಂದಿರು ಈಗ ಎಲ್ಲಿ/ಹೇಗಿದ್ದಾರೆ ಎಂದು ತಿಳಿಯಬೇಕೆನಿಸಿತು..
ಚೆನ್ನಾಗಿದೆ. ರಕ್ಷಾ ಬಂಧನ ಬೆಸೆಯೋ ಬಾಂಧವ್ಯ ಅತ್ಯಮೂಲ್ಯವಾದದ್ದು .
ರಕ್ಷಾಬಂಧನ ಹಬ್ಬ ನಿಜವಾಗಿಯೂ ಮಾನವನ ಪವಿತ್ರ ಬಂಧನದ ದ್ಯೋತಕವಾಗಿದೆ. ದಕ್ಷಿಣ ಕನ್ನಡದಲ್ಲಿ ಈ ಹಬ್ಬ ಅಷ್ಟಾಗಿ ಆಚರಣೆಯಲ್ಲಿಲ್ಲದ ಕಾರಣ ನಮಗೆ ಅದನ್ನು ಕಂಡಾಗ ವಿಶೇಷ ಎನ್ನಿಸುವುದು ಸಹಜ. ನನಗೂ ನಿಮ್ಮಂತಹದೇ ಅನುಭವವಾಗಿತ್ತು. ಒಳ್ಳೆಯ ಲೇಖನ.