ಅಕ್ಕ-ತಂಗಿಯರ, ಪ್ರಕೃತಿಯ ರಕ್ಷಾಬಂಧನ
ಅದು ನಾನು ಚಿಕ್ಕವಳಿರುವಾಗಿನ ದಿನ.ಸಿರಸಿಯ ನಾವಿರುವ ಮನೆಯ ಆವರಣದಲ್ಲಿ ಸುಮಾರು ಐದು ಮನೆಗಳಿದ್ದವು.ಅದರಲ್ಲಿ ನಾಲ್ಕೂ ಮನೆಯಲ್ಲಿ ಗಂಡುಮಕ್ಕಳಿದ್ದರು. ಓನರ್ ಮನೆಯಲ್ಲಂತೂ ಮೂರು ಹೆಣ್ಣು ಮಕ್ಕಳಾದ ಮೇಲೆ ಒಂದು ಗಂಡು ಮಗನಿದ್ದ. ಹಾಗಾಗಿ ರಕ್ಷಾ ಬಂಧನವನ್ನು ಎಲ್ಲರೂ ಜೋರಾಗೇ ಆಚರಿಸುತ್ತಿದ್ದರು.ಹಬ್ಬದ ದಿನ ಸಂಜೆಯಂತೂ ಆಟವಾಡಲು ಸೇರಿದ ಮಕ್ಕಳು ತಾವು ರಾಖಿ ಕಟ್ಟಿದ ಬಗೆ, ಕಟ್ಟಿಸಿಕೊಂಡ ಬಗೆ ವರ್ಣಿಸುತ್ತಿದ್ದದ್ದು ಅಸಾಧಾರಣವಾಗಿರುತ್ತಿತ್ತು.
ಅದು ಅಣ್ಣ-ತಮ್ಮಂದಿರಿಗೆ ಅಕ್ಕ-ತಂಗಿಯರು ಕಟ್ಟುತ್ತಾರೆ ಎನ್ನುವದೂ ತಿಳಿಯದ ವಯಸ್ಸು.ಅವರೆಲ್ಲಾ ರಾಖಿ ಕಟ್ಟಿದ್ದಾರಂತೆ, ಕಟ್ಟಿಸಿಕೊಂಡಿದ್ದಾರಂತೆ, ನಮಗೂ ರಾಖಿ ಬೇಕು ಎಂದು ಹಠಮಾಡುತ್ತಿದ್ದ ನನಗೆ ಸ್ಪಂಜಿನ ದೊಡ್ಡ ರಾಖಿ ತಂದುಕೊಡುವಂತೆ ಹೇಳುತ್ತಿದ್ದೆ. ಆಗ ಪಪ್ಪ ನನಗೊಂದು ನನ್ನ ಅಕ್ಕನಿಗೊಂದು ಎನ್ನುವಂತೆ ಎರಡು ದೊಡ್ಡ ರಾಖಿ ತಂದು ಕೊಟ್ಟಿದ್ದನ್ನು ಅಮ್ಮ ಒಬ್ಬರಿಗೊಬ್ಬರು ಕಟ್ಟಿಕೊಳ್ಳುವಂತೆ ನಮಗೆ ಹೇಳುತ್ತಿದ್ದಳು. ನಾವೂ ಹಾಗೇ ಒಬ್ಬರಿಗೊಬ್ಬರು ಕಟ್ಟಿಕೊಂಡು ಸಂಜೆ ಆಟವಾಡಲು ಹೋಗುತ್ತಿದ್ದದ್ದಲ್ಲದೇ ಮಾರನೇ ದಿನ ಸ್ಕೂಲಿಗೂ ಅದನ್ನು ಕಟ್ಟಿಕೊಂಡು ಹೋಗಿ ಸಂಭ್ರಮಿಸುತ್ತಿದ್ದೆವು.
ಹಬ್ಬಗಳನ್ನು ಹೊತ್ತು ತರುವ ಶ್ರಾವಣ ಮಾಸದಲ್ಲಿ, ಮೊದಲು ಉತ್ತರ ಭಾರತದಲ್ಲಿ ಮಾತ್ರ ಪ್ರಚಲಿತದಲ್ಲಿದ್ದ `ರಕ್ಷಾ ಬಂಧನ’ ನಂತರ ಭಾರತದಾದ್ಯಂತ ಪ್ರಚಲಿತಕ್ಕೆ ಬಂದಿದ್ದಂತೆ,ಈ ಹಬ್ಬದಂದು ಅಕ್ಕ-ತಂಗಿಯರು ತಮ್ಮ ಅಣ್ಣ-ತಮ್ಮಂದಿರ ಕೈಗೆ ರಾಖಿ ಕಟ್ಟಿ ಸಮಾಜದ ದುಷ್ಟ ಶಕ್ತಿಗಳಿಂದ ತಮ್ಮನ್ನು ಕಾಪಾಡೆಂದು ಕೇಳಿಕೊಳ್ಳುತ್ತಾರೆ ಎಂದು ರಾಖಿ ಕಟ್ಟುವ ಹಿಂದಿನ ಕಥೆಗಳಲ್ಲೊಂದಾದ ಇದನ್ನು ಕೇಳಿದ ಮೇಲೆ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಲು ಸಮರ್ಥರಿದ್ದೇವೆ ಎನ್ನುವ ಸ್ವಾಭಿಮಾನವೋ ಅಥವಾ ಕಾಲ ಕಳೆದಂತೆ ರಾಖಿಯ ಮೇಲೆ ಆಕರ್ಷಣೆ ಕಡಿಮೆಯಾಯಿತೋ? ಮಧ್ಯದಲ್ಲಿ ಒಬ್ಬರಿಗೊಬ್ಬರು ರಾಖಿ ಕಟ್ಟುವದನ್ನು ಬಿಟ್ಟಿದ್ದೆವು.ಇದರ ಮಧ್ಯೆ ಮನೆಯ ಹತ್ತಿರವೇ ಇದ್ದ ಚಿಕ್ಕಮ್ಮನ ಮಗ ರೋಹಿತ, ಬೀನಾಕ್ಕ-ಭವ್ಯಕ್ಕ ನನಗೂ ರಾಖಿ ಕಟ್ಟಿ ಎ೦ದು ಪ್ರತಿವರ್ಷ ಕಟ್ಟಿಸಿಕೊ೦ಡು ಹೋಗುತ್ತಿದ್ದ.
ಈ ನಡುವೆ ನನ್ನ ಅಮ್ಮನೂ, ೫ ಹೆಣ್ಣು ಮಕ್ಕಳ ನ೦ತರ ಹುಟ್ಟಿದ ತನ್ನ ಒಬ್ಬನೇ ಮುದ್ದಿನ ತಮ್ಮನಿಗೂ ರಾಖಿ ಕಟ್ಟಲು ಇತ್ತೀಚೆಗೆ ಪ್ರಾರ೦ಭಿಸಿದ್ದಳು.ಇವೆಲ್ಲವುಗಳ ಜೊತೆಗೆ ವಾಟ್ಸಪ್, ಫೇಸಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಫೊಟೋಗಳ ಹಾವಳಿ ನೋಡಿ ಸುಮ್ಮನಿರಲಾಗದೆಯೋ ಅಥವಾ ನಾವು ಬೆಳೆದ೦ತೆ ನಮ್ಮ ನಡುವಿನ ಬಾ೦ಧವ್ಯ ಬೆಳೆದಿದ್ದರಿ೦ದಲೋ ಒಬ್ಬರಿಗೊಬ್ಬರು ರಕ್ಷಣೆ ಮಾಡುತ್ತೇವೆ ಎ೦ದುಕೊ೦ಡು ಹೋದ ವರ್ಷ ರಾಖಿ ಕಟ್ಟಿಕೊ೦ಡು ಸ೦ಭ್ರಮಿಸಿದ್ದಲ್ಲದೇ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ಸಂಭ್ರಮಿಸಿದ್ದೂ ಆಯಿತು.
`ಯಾರದೇ ಅಜ್ಜ ಸತ್ತರೂ ನಗುವಿನ ಅಜ್ಜನಿಗೆ ಮಾತ್ರ ಸಾವಿಲ್ಲವಂತೆ’, ಅಂತೆಯೇ ಭೀಕರ ಪ್ರವಾಹದಿಂದ ಅನೇಕ ಸಾವು-ನೋವಾದರೂ ನಡುವೆಯೇ ಮತ್ತೆ ಈ ವರ್ಷ ರಕ್ಷಾ ಬ೦ಧನ ಬ೦ದಿದೆ. ಅಕ್ಕ-ತ೦ಗಿಯರ(ಅಣ್ಣ-ತಂಗಿಯರ) ಈ ಬ೦ಧ ಎ೦ದು ರಾಖಿ ಹಬ್ಬ ಆಚರಿಸುವದರ ಜೊತೆಗೆ ಈ ಪ್ರಕೃತಿಗೂ ಒಂದು ರಾಖಿಯನ್ನು ಕಟ್ಟಿ ಅದರ ಆಯಸ್ಸನ್ನೂ ನಾವು ರಕ್ಷಿಸುವದರ ಜೊತೆಗೆ,ಅದೂ ನಮ್ಮನ್ನು ಕಾಪಾಡಲೆಂದು ಈ ರಕ್ಷಾಬಂಧನವನ್ನು ಆಚರಿಸೋಣ.
– ಬೀನಾ ಶಿವಪ್ರಸಾದ
ಸುಂದರವಾದ ಬರಹ, ರಕ್ಷಾ ಬಂಧನ ಬಾಂಧವ್ಯಗಳನ್ನು ಬೆಸೆಯೋ ಹಬ್ಬ .
ಬಾಂಧವ್ಯ ಬೆಸೆಯುವ ಹಬ್ಬದ ಲೇಖನ ಚೆನ್ನಾಗಿ ಮೂಡಿಬಂದಿದೆ.