ನಿನ್ನೊಲುಮೆ
ದೂರವಿದ್ದೂ ಜೊತೆಯಾಗಿ ಬಂದು ,
ಹೋಗದಿರು ಜೀವವೇ ಮನಸಾ ಕೊಂದು,
ಇನ್ನಿಲ್ಲದಂತೆ ಪ್ರೀತಿಯಲ್ಲಿ ಮಿಂದು,
ಹೋಗಲರಿಯದು ಹೃದಯ ನೋವಿನ ಬೆಂಕಿಯಲ್ಲಿ ಬೆಂದು.
ನಿಜ ,….. ಮೊದಲೊಮ್ಮೆ ಸ್ನೇಹವ ಬೆಸೆಯಲು ಹಿಂಜರಿದೆ ,
ಆದರೂ ಬಿಡದಂತೆ ನೀ ನನ್ನ ಆವರಿಸಿದೆ ,
ಇಂದೋ ಈ ಒಲವಾಗಿದೆ ,
ಜೊತೆಗೀ ಸ್ನೇಹದ ಪಯಣ ಸಾಗಿದೆ .
ಮನದ ತುಂಬಾ ಬರೀ ತುಂಟಾಟ,
ಇಷ್ಟವಾಯಿತು ನೀ ಕಲಿಸಿದ ಬದುಕಿನ ಪಾಠ,
ಮೂಡಿಹುದಿಂದು ನಿನ್ನಂತೆ ಎಲ್ಲವ ಬಂದಂತೆ ಎದುರಿಸೋ ಹಠ ,
ಜೊತೆಗೆ ಆಡಿ ಗೆಲ್ಲುವಾಸೆ ಈ ಬಾಳೆಂಬ ಚದುರಂಗದಾಟ.
ಯಾವುದಕ್ಕೂ ಜಗ್ಗದೆ ಸಾಗೋ ನಿನ್ನ ಛಾತಿ,
ಸೆರೆ ಹಿಡಿಯಿತಲ್ಲೇ ಮನವ ಗೆಳತೀ,
ನಿಷ್ಟೂರವಾಗಿದ್ದರೂ ನಿನ್ನ ಮಾತುಗಳೆನಗೆ ಸಮ್ಮತಿ ,
ಸುಂದರ, ಹೂವಂತೆ
ಮನಗಳಲ್ಲಿ ಅರಳೋ ಈ ಪ್ರೀತಿ.
ದೂರವಿದ್ದರೂ ಬೆಸೆಯತೊಡಗಿವೆ ಮನಸುಗಳು,
ಬದುಕೋ ಈಗಂತೂ ಸದಾ ಇರುಳಲ್ಲೂ ಬೆಳದಿಂಗಳಿನಿಂದಾವೃತ ಮುಗಿಲು ,
ಪ್ರತಿ ಮಾತಲ್ಲೂ ನೀ ಹರಿಸೋ ಒಲವ ಧಾರೆ, ಜೀವನ ಪ್ರೀತಿಯ ಹೊನಲು,
ಸಾಕು ಎಲ್ಲಿದ್ದರೂ ಈ ಸ್ನೇಹ ಬಂಧವ ಬೆಸೆಯುತ್ತಾ ಸಾಗಲು .
– ನಯನ ಬಜಕೂಡ್ಲು
‘ದೂರವಿದ್ದರೂ ಬೆಸೆಯತೊಡಗಿವೆ ಮನಸುಗಳು,
ಬದುಕೋ ಈಗಂತೂ ಸದಾ ಇರುಳಲ್ಲೂ ಬೆಳದಿಂಗಳಿನಿಂದಾವೃತ ಮುಗಿಲು ..’ ನಿಷ್ಕಪಟ ಮನಸ್ಸಿನ ಭಾವ ಇಷ್ಟವಾಯಿತು
Thank you ಹೇಮಕ್ಕ