ಪ್ರೀತಿಯ ನಲವತ್ತು ರೀತಿ :ಶಾಮ್-ಎ-ತಬ್ರಿಜಿ : ಭಾಗ 1

Spread the love
Share Button

ತಬ್ರೀಝಿ

 

ಜಗತ್ಪ್ರಸಿದ್ಧ ಚಿಂತಕ ಜಲಾಲ್-ಉದ್ದಿನ್ ರೂಮಿಯ ಗುರುವೇ ತಬ್ರೀಝಿ. 1185 ರಲ್ಲಿ ಇರಾನದ ತಬ್ರೀಝಿಯಲ್ಲೇ ಹುಟ್ಟಿದ ಈತ, ವೃತ್ತಿಯಿಂದ ನೇಕಾರ, ಪ್ರವೃತ್ತಿಯಿಂದ ಕವಿ ಮತ್ತು ತತ್ವಜ್ಞಾನಿ. ಎಂದೂ ಸಂತೆಯಲ್ಲಿ ನಿಂತು ಮಾತನಾಡಿದವನಲ್ಲ. ಈತನ ಶಿಷ್ಯ ಜಲಾಲ್-ಉದ್ದಿನ ರೂಮಿಯಷ್ಟೂ ಪ್ರಸಿದ್ಧನಾಗದ ಈತ 1248 ರಲ್ಲಿ ಖೋಯ್‍ದಲ್ಲಿ ನಿಧನನಾದ. 15 ನವೆಂಬರ್, 1244 ರಲ್ಲಿ ಭೇಟ್ಟಿಯಾದ ರೂಮಿ ಮತ್ತು ಈತನ ಮಧ್ಯದ ಸ್ನೇಹ ಕೇವಲ 40 ದಿನಗಳದ್ದು. ಶಾಮ್ಸ್ ತಬ್ರೀಝಿಯ ಮನಸ್ಸು ಸೂಫಿಗಳದ್ದು. ನಿರಂತರ ಅಲೆಮಾರಿಯಾಗಿದ್ದ ಈತ, ಬುಟ್ಟಿ-ಕೈಚೀಲುಗಳನ್ನು ಹೆಣೆದು ಮಾರಾಟಮಾಡುತ್ತ ಹೊಟ್ಟೆ ತುಂಬಿಸಿಕೊಂಡ.  ಜಗಳಗಂಟನಾಗಿದ್ದ  ತಬ್ರೀಝಿ ಯಾರನ್ನೂ, ಯಾವುದನ್ನೂ ಸರಳವಾಗಿ ಒಪ್ಪಿಕೊಳ್ಳಲಿಲ್ಲ. ತಬ್ರೀಝಿಯ ಬದುಕಿನಲ್ಲಿ ಕುತೂಹಲಕಾರಿಯಾದ ಎರಡೇ ಸಂಗತಿಗಳಿವೆ. ಒಂದು ಪ್ರೀತಿಯ ಆತನ 40 ರೀತಿಗಳು ಮತ್ತೊಂದು ಆತನ ನಿಗೂಢ ಸಾವು.

ಸಮಕಾಲೀನ ಸೂಫಿಗಳ ಪ್ರಕಾರ ನಿಗೂಢನಾಗಿದ್ದ ತಬ್ರೀಝಿ ಇದ್ದಕ್ಕಿದ್ದಂತೆ ನಿಗೂಢವಾಗಿಯೇ ಮರೆಯಾದ. ಕೆಲವರ ಪ್ರಕಾರ ತಬ್ರೀಝಿಯ ಪರಮಶಿಷ್ಯನೆಂದು ಕರೆಯಿಸಿಕೊಳ್ಳುವ ಜಲಾಲ್-ಉದ್ದಿನ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾದ. ಏನಾದರೂ ಆಗಿರಲಿ ಇರಾನದ ಖೋಯ್‍ದಲ್ಲಿ ಆತನ ಸಮಾಧಿ ಮಾತ್ರ ಇದೆ. ರೂಮಿಯ ಮಗ ಸುಲ್ತಾನ್ ವಾಲದ್ ಈ ಸಮಾಧಿಯನ್ನು ಸುಂದರ ಕಲಾಕೃತಿಯನ್ನಾಗಿ ಅಮರಗೊಳಿಸಿದ್ದಾನೆ.

‘ಮಕಾಲತ್-ಎ-ಶಾಮ್ಸ್-ಎ ತಬ್ರೀಝಿ’ ಎನ್ನುವುದು ಆತನ ಏಕೈಕ ರಚನೆ. ಗದ್ಯ ರೂಪದಲ್ಲಿರುವ ಈ ಪರ್ಶಿಯನ್ ಪುಸ್ತಕ ಆತನ ವೃದ್ಧಾಪ್ಯದಲ್ಲಿ ರಚನೆಯಾಗಿದ್ದು, ಮಾಗಿದ ಮನಸ್ಸೊಂದರ ಮಹಾನ್ ಸ್ವಗತವಾಗಿದೆ. ಆತ ಹೇಳುವ ಪ್ರೀತಿಯ 40 ರೀತಿಗಳು ಹೀಗಿವೆ :

 1. ನಾವು ದೇವರನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದನ್ನೇ ಅವಲಂಬಿಸಿದೆ. ಆತನ ಸ್ಮರಣೆ, ಭಯ ಮತ್ತು ಆಪಾದನೆಗಳಿಂದಲೇ ತುಂಬಿರುವುದಾದರೆ ಅಷ್ಟೇ ಭಯ ಮತ್ತು ಆರೋಪಗಳು ನನ್ನೊಳಗೂ ಇವೆ ಎಂದರ್ಥ. ದೇವರು ಪ್ರೇಮಸ್ವರೂಪಿ ಹಾಗೂ ಸಹಾನುಭೂತಿಯಾಗಿ ಕಾಣುವುದಾದರೆ ನಾವೂ ಅದೇ ಆಗಿದ್ದೇವೆ ಎನ್ನುವುದು ದಿಟ.
 1. ಸತ್ಯದ ದಾರಿ ಹೃದಯವನ್ನವಲಂಬಿಸಿದೆ, ಬುದ್ಧಿಯನ್ನಲ್ಲ. ಕಾರಣ ಹೃದಯವೇ ನಿಮ್ಮ ಗುರುವಾಗಿರಲಿ. ಬದುಕಿನ ಎಲ್ಲ ನಿರ್ಧಾರಗಳು ಹೃದಯದಿಂದ ನಿರ್ದೇಶಿಸಲ್ಪಡಲಿ. ಇಲ್ಲದೇ ಹೋದಲ್ಲಿ, ಅಹಂಕಾರ ನಿಮ್ಮನ್ನು ದೇವರಿಂದ ವಂಚಿತರನ್ನಾಗಿಸುತ್ತದೆ.
 1. ಪ್ರಪಂಚದಲ್ಲಿ ಎಲ್ಲರಿಂದ ಎಲ್ಲವುಗಳಿಂದ ಪ್ರೇಮಸ್ವರೂಪಿ ದೇವರನ್ನು ಅರಿಯಬಹುದಾಗಿದೆ. ಇಂಥ ದೇವರು ಮಠ, ಮಸೀದೆ ಮತ್ತು ಚರ್ಚುಗಳಲ್ಲಿಲ್ಲ. ಆತÀ ಪ್ರೇಮಿಯ ಹೃನ್ಮಮಂದಿರದಲ್ಲಿ ಮುಗುಳ್ನಗುತ್ತಿದ್ದಾನೆ.
 1. ಬುದ್ಧಿ ಮತ್ತು ಪ್ರೇಮ ಭಿನ್ನ ವಸ್ತುಗಳಿಂದ ಮಾಡಲ್ಪಟ್ಟಿವೆ. ಬುದ್ಧಿ ನಮ್ಮನ್ನು ಸಮಸ್ಯೆಗಳಿಗೆ ಸಿಲುಕಿಸಿ, ತೊಡಕು ಬಿಳುವಂತೆ ಮಾಡುತ್ತದೆ. ಪ್ರೇಮ ಎಲ್ಲ ತೊಡಕುಗಳಿಂದ ಅತೀತರನ್ನಾಗಿಸುತ್ತದೆ. ಬುದ್ಧಿ ಯಾವಗಲೂ ಎಚ್ಚರವಾಗಿದ್ದು ಸಲಹೆಗಳಿಗೆ ಕಿವಿಗೊಡುತ್ತದೆ. ಪ್ರೇಮ, ಭಯ ಬೇಡ ನಿಚ್ಚಿಂತನಾಗಿರು, ಧುಮುಕು ಮತ್ತು ಮುನ್ನುಗ್ಗು ಎಂದು ಪ್ರೋತ್ಸಾಹಿಸುತ್ತದೆ. ಬುದ್ಧಿ ನಿಸ್ಸೋತು ಕತ್ತರಿಸಿ ಬಿಳುತ್ತದೆ, ಪ್ರೇಮ ರಬ್ಬರಿನಂತೆ ಬಾಳುತ್ತದೆ. ಪ್ರೇಮ ಹಾಳು ಬಿದ್ದ ಸಾಮ್ರಾಜ್ಯದಂತೆ, ಹಾಳು ಬಿದ್ದರೂ ಅದು ಸಾಮ್ರಾಜ್ಯವೆ. ಭಗ್ನ ಪ್ರೇಮಿಯ ಹೃದಯ ಅನಘ್ರ್ಯ ಆಸ್ತಿ ಹುದುಗಿಸಿಕೊಂಡ ನೆಲದಂತೆ.
 1. ಭಾಷಿಕ ಸಮಸ್ಯಗಳಿಂದಾಗಿಯೇ ಎಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಶಾಬ್ಧಿಕವಾಗಿ ಶಬ್ಧಗಳನ್ನು ಅರ್ಥೈಸಿಕೊಳ್ಳುವುದನ್ನು ನಿಲ್ಲಿಸಿದರೆ, ಗಂಡಾಂತರಗಳನ್ನು ಗೆದ್ದಂತೆಯೆ. ಮೌನದಿಂದ ಹೀರಬಹುದಾದ ಸುಧೆಯನ್ನು ಶಬ್ಧಗಳಿಂದ ಹೀರಲಾಗದು.
 1. ಒಂಟಿತನ ಮತ್ತು ಏಕಾಂಗಿತನ ಎರಡು ಭಿನ್ನ ಸ್ಥಿತಿಗಳು. ಒಂಟಿಯಾಗಿದ್ದಾಗ ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎನ್ನುವ ಭ್ರಮೆಯಲ್ಲಿರತ್ತೇವೆ. ಆದರೆ ಅದು ಹುಚ್ಚು ಭ್ರಮೆ. ಒಂಟಿಯಾಗಿರುವುದಕ್ಕಿಂತ ಏಕಾಂಗಿಯಾಗಿರುವುದು ಒಳಿತು. ಯಾಕೆಂದರೆ, ಅದು ಏಕಾಂಗಿತನ ಸತ್ಯ, ಆದರೆ ಒಂಟಿತನವಲ್ಲ. ಈ ಏಕಾಂಗಿತನದಲ್ಲಿ ನಿಮ್ಮತನಕ್ಕೊಂದು ಕನ್ನಡಿ ಇದೆ. ಈ ನಿಮ್ಮತನ ಆ ಭಗವಂತನ ಸ್ವರೂಪವೇ ಆಗಿದೆ.
 1. ಬದುಕಿನಲ್ಲಿ ಏನೆಲ್ಲ ಘಟಿಸಲಿ, ಎಷ್ಟೇ ಗೋಳಾಡಿಸಲಿ ಹಾಗಂತ ಹತಾಶದ ನೆಲೆಯನ್ನು ನಂಬಬೇಡಿ. ಎಲ್ಲ ದಾರಿಗಳೂ ಮುಚ್ಚಿದಾಗ ನಿಮಗಾಗಿಯೇ ಒಂದು ದಾರಿಯನ್ನು ದೇವರು ಖಂಡಿತ ತೆರೆಯುತ್ತಾನೆ. ಋಣಿಯಾಗಿರಿ, ಎಲ್ಲವೂ ಒಳ್ಳೆಯದಾಗಿರುವಾಗ ಋಣಿಯಾಗಿರುವುದು ಸಹಜ. ಆದರೆ ಜ್ಞಾನಿ ಬರೀ ಒಳಿತಾದುದುಕಷ್ಟೇ ಅಲ್ಲ, ತಾನು ಯಾವುದರಿಂದ ವಂಚಿಸಲ್ಪಟ್ಟನೋ ಅದಕ್ಕಾಗಿಯೂ ದೇವರಲ್ಲಿ ಋಣಿಯಾಗಿದ್ದಾನೆ.
 1. ಸಹನೆ ಎಂದರೆ ನಿರ್ವೀರ್ಯತೆ ಅಲ್ಲ. ಸಮಸ್ಯೆಯ ಕೊನೆಯ ತುದಿಯನ್ನೂ ನೋಡುವುದು ಎಂದರ್ಥ. ಅದು ಹೂವಿನೊಂದಿಗೆ ಮುಳ್ಳನ್ನೂ, ರಾತ್ರಿಯೊಂದಿಗೆ ಬೆಳಗನ್ನೂ ನಿರೀಕ್ಷಿಸುವ ಸುಖ. ಅಸಹನೆ ಇರುಳು ಗಣ್ಣಿನ ರೋಗ. ದೇವರನ್ನು ಪ್ರೀತಿಸುವವರು ಅಸಹಿಷ್ಣುಗಳಾಗಿರಲು ಸಾಧ್ಯವಿಲ್ಲ. ಯಾಕೆಂದರೆ, ಅರ್ಧ ಚಂದ್ರ ಒಂದು ದಿನ ಪೂರ್ಣಗೊಳ್ಳುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿರುತ್ತದೆ.
 1. ಪೂರ್ವ-ಪಶ್ಚಿಮ, ದಕ್ಷಿಣ-ಉತ್ತರಗಳ ಮಧ್ಯ ಸಣ್ಣ ವ್ಯತ್ಯಾಸವಿದೆ. ನಿಮ್ಮ ದಿಕ್ಕಿನ ಬಗೆಗೆ ದುಃಖಿತರಾಗಬೇಡಿ. ಪ್ರವಾಸ ಪ್ರಾರಂಭವಾಗಿದೆ ಸಂತಸ ಪಡಿ. ಈ ಪಯಣ ನಿಮ್ಮೊಳಗೂ ಆಗಲು ಬಿಡಿ. ನಿಮ್ಮೊಳಗಿನ ಪಯಣ ನಿಮಗೆ ವಿಶ್ವವನ್ನೇ ಸುತ್ತುವ ಮತ್ತು ಅದನ್ನು ಮೀರಿದ ಪ್ರಪಂಚವನ್ನು ಪಯಣಿಸುವ ಅನಂತದ ಅನುಭವವನ್ನು ನೀಡುತ್ತದೆ.
 1. ನೋವಿಲ್ಲದೆ, ಶಿಶುವಿಗೆ ಹುಟ್ಟಿನ ಹೊಸ ಮಾರ್ಗವಿಲ್ಲ ಎನ್ನುವುದು ಸೂಲಗಿತ್ತಿಗೆ ಗೊತ್ತು. ಹಾಗೆಯೇ ಸಂಕಷ್ಟವಿಲ್ಲದೆ ನಮಗೊಂದು ಹೊಸ ಹುಟ್ಟು ಸಾಧ್ಯವಿಲ್ಲ. ಹದ ಬೆಂಕಿ ಇಲ್ಲದೆ ಮಡಕೆಯಾಗುವುದಿಲ್ಲ. ಪ್ರೀತಿ ಯಾವಾಗಲೂ ಸಂಕಟದಂತೆ ಮತ್ತು ಹದಗೊಳಿಸುವ ಬೆಂಕಿಯಂತೆ.
 2. ಪ್ರೀತಿಯನ್ನು ಹುಡುಕುವವನು ಹುಡುಕುತ್ತಲೆ ಹೊಸ ಮಾರ್ಪಾಟಕ್ಕೊಳಪಡುತ್ತಾನೆ. ಹುಡುಕುವುದನ್ನು ನಿಲ್ಲಿಸಿದವನು ಪ್ರಬುದ್ಧನಾಗಲು ಸಾಧ್ಯವಿಲ್ಲ. ನೀವು ಪ್ರೀತಿಯನ್ನು ಹುಡಕಲಾರಂಭಿಸಿದ ಮರುಕ್ಷಣವೇ, ನಿಮ್ಮೊಳಗೆ ಮತ್ತು ನಿಮ್ಮ ಹೊರಗೆ ಬದಲಾವಣೆಯ ಪರ್ವ ಪ್ರಾರಂಭವಾಯಿತು.
 3. ಈ ಪ್ರಪಂಚವೆನ್ನುವುದು ಖೊಟ್ಟಿ ಗುರುಗಳ ಮತ್ತು ಸುಳ್ಳು ಶಿಕ್ಷಕರ ಒಂದು ಅಗಣಿತ ಲೋಕ. ಅಧಿಕಾರಕ್ಕಾಗಿ ಆಸೆ ಪಡುವವರು ಮತ್ತು ದುರಹಂಕಾರಿಗಳು ಗುರು ಅಲ್ಲ ಒಬ್ಬ ಸಾಮಾನ್ಯ ಗೆಳೆಯನೂ ಆಗಲು ಸಾಧ್ಯವಿಲ್ಲ. ನಿಜವಾದ ಗುರು ನಿಮ್ಮನ್ನು ತನ್ನೆಡೆಗೆ ಕೇಂದ್ರಕರಿಸಿಕೊಳ್ಳುವುದಿಲ್ಲ, ಆತ ನಿಮ್ಮನ್ನೆಂದೂ ಹೊಗಳುವುದಿಲ್ಲ, ಆತ ನಿಮ್ಮ ನಿಷ್ಠೆಯನ್ನೂ ಇಷ್ಟಪಡುವುದಿಲ್ಲ. ಬದಲಾಗಿ ನಿಮ್ಮೊಳಗನ್ನು ಆರಾಧಿಸುವ ಮಾರ್ಗ ತೋರಿಸುತ್ತಾನೆ. ಗ್ಲಾಸಿನಂತೆ ಪಾರದರ್ಶಕವಾಗಿರುತ್ತಾನೆ. ತನ್ಮೂಲಕ ದೇವರ ಬೆಳಕು ನಿಮ್ಮೆಡೆಗೆ ಹರಿಯುವಂತೆ ಮಾಡಿ, ಸದ್ಗುರುವಾಗುತ್ತಾನೆ.
 1. ಬದಲಾವಣೆಯನ್ನು ತಡೆಯಬೇಡ. ಬದಲಾವಣೆಯಂತೆ ನಿನ್ನ ಬದುಕು ಬದಲಾಗಲು ಬಿಡು. ಅದರ ತಲೆ ಕೆಳಗಾಗುತ್ತಿದೆಯೊ? ಭಯ ಬೇಡ? ಯಾರಿಗೆ ಗೊತ್ತು, ಯಾವ ತುದಿಯಿಂದ ನಿನ್ನ ಉದ್ಧಾರದ ಕಥೆ ಆರಂಭವಾಗಿ ಇನ್ನ್ಯಾವ ಮಹಾ ಉದ್ಧಾರದೆಡೆಗೆ ಸಾಗುತ್ತಿದೆ ಎಂದು.
 1. ನಿನ್ನ ಕೆಲಸಗಳನ್ನೇ ಪೂರ್ಣಗೊಳಿಸುವುದರಲ್ಲಿ ಭಗವಂತ ತನ್ಮಯನಾಗಿದ್ದಾನೆ. ಅವನ ಕಣ ಕಣವೂ ನೀನೆ, ಅವನ ಮಯ್ಯ ಮತ್ತೂ ನೀನೆ. ಪ್ರತಿ ಮನುಷ್ಯರನ್ನು ಸೃಷ್ಠಿಸುವುದೆಂದರೆ ಆತನಿಗೆ ಪರಿಪೂರ್ಣನೊಬ್ಬನನ್ನು ಸಿದ್ಧಪಡಿಸುವ ಹಠ. ನಾವೆಲ್ಲರೂ ಅಪೂರ್ಣರಿದ್ದು ಆತನಿಂದ ಪೂರ್ಣಗೊಳ್ಳಲು ಕಾಯ್ದುನಿಂತ ಕಲಾಕೃತಿಗಳು. ದೇವರು ನಮ್ಮೆಲ್ಲರೊಂದಿಗೆ ಪ್ರತ್ಯೇಕವಾಗಿಯೇ ವ್ಯವಹರಿಸಿದ್ದಾನೆ. ಯಾಕೆಂದರೆ ನಾವು ನಮ್ಮದೇ ಕೊರತೆಗಳಿಂದ ಬಳಲುವ ಅನನ್ಯ ರಚನೆಗಳು. ಈ ಕೊರತೆಗಳನ್ನು ನೀಗಿಸಿದಂತೆ ಆತನಿಗೊಂದು ಸಮಗ್ರ ಚಿತ್ರಣ ಸಿಗುತ್ತದೆ.
 1. ಪರಿಪೂರ್ಣನಾದ ದೇವರನ್ನು ಪ್ರೀತಿ ಮಾಡುವುದು ಸಹಜ. ಆದರೆ ನ್ಯೂನ್ಯತೆಗಳಿಂದ ನರಳುವ ನಮ್ಮೊಡನಾಡಿಯನ್ನು ಪ್ರೀತಿಸುವುದು ಕಷ್ಟ. ನಮ್ಮ ಪ್ರೀತಿಯ ಸಾಮಥ್ರ್ಯದ ಪರೀಕ್ಷೆ ಇರುವುದು ಇಲ್ಲಿಯೇ. ಇಂಥ ಪ್ರೀತಿ ಇಲ್ಲದ ಜ್ಞಾನವೂ ಅಪೂರ್ಣ. ದೇವರ ಇಂಥ ಅಪೂರ್ಣ ಸೃಷ್ಠಿಗಳನ್ನು ಅಪ್ಪಿಕೊಳ್ಳದವನು ದೇವರನ್ನು ಬಿಡಿ, ತನ್ನನ್ನೂ ತಾನು ಒಪ್ಪಿಕೊಳ್ಳಲಾರ.
 1. ಒಂದೆಡೆ ಇರುವುದೇ ನಿಜವಾದ ವಿಶ್ವಾಸ. ಉಳಿದಿದೆಲ್ಲವೂ ಹೊಳೆಯೊಳಗಿನ ಹುಣಸೆ. ಶುದ್ಧ ನೀರಿನಿಂದಲೂ ಸ್ವಚ್ಚಗೊಳಿಸಲಾಗದ ಪಾಪ ಕೃತ್ಯ ಮೋಸ. ಉಪವಾಸ ಮತ್ತು ವೃತಗಳಿಂದ ಶರೀರವನ್ನು ಶುದ್ಧೀಕರಿಸಬಹುದು ಆದರೆ ಹೃದಯವ ಶುದ್ಧಿ ಮಾತ್ರ ಕೇವಲ ಪ್ರೇಮದಿಂದ.
 2. ಇಡೀ ವಿಶ್ವವನ್ನು ವ್ಯಾಪಿಸಿದ ವ್ಯಕ್ತಿ ನಿನೊಬ್ಬನೆ. ನಿನ್ನ ಸುತ್ತಲೂ ನೀನು ನೋಡುತ್ತಿರುವುದೆಲ್ಲವೂ ನಿನ್ನೊಳಗೇ ಇದೆ, ನಿನ್ನಿಂದಲೇ ಹುಟ್ಟಿಕೊಂಡಿದೆ. ಹೀಗಾಗಿ ರಾಕ್ಷಸನನ್ನೂ ಹೊರಗೆ ಹುಡುಕಬೇಡ, ಅದು ನಿನ್ನೊಳಗಿನ ಧ್ವನಿಯೆ. ನಿನ್ನಷ್ಟಕ್ಕೇ ನೀನು ಪ್ರಾಮಾಣಿಕನಾಗಿ, ಕಟುವಾಗಿ ವಿಮರ್ಶಿಸಿಕೊಳ್ಳಬಲ್ಲವನಾದರೆ ಅದು ನಿನಗೆ ಗೊತ್ತಾಗುತ್ತದೆ.
 3. ನಿನ್ನನ್ನು ನೋಡಬೇಕಾದ ಅನ್ಯರ ದಾರಿಗಳು ಬದಲಾಗಬೇಕು ಎಂದು ನೀನು ಬಯಸುವುದಾದರೆ, ನಿನ್ನ ನೋಡುವ ನಿನ್ನ ರೀತಿಗಳೇ ಮೊದಲು ಬದಲಾಗಬೇಕು. ಆಗ ಅನ್ಯರು ನಿನ್ನೆಡೆಗೆ ಎಸೆಯುವ ಮುಳ್ಳುಗಳಿಗಾಗಿಯೂ ನೀನು ವಿಧೆಯನಾಗಿರುತ್ತಿ. ಇದು ಮುಂದೊಮ್ಮೆ ಹೂ-ಮಳೆಯಾಗುವುದರ ಸಂಕೇತ.
 4. ಕರೆದುಕೊಂಡು ಹೋಗುವ ದಾರಿಯ ಬಗೆಗೆ ಚಿಂತೆ ಬೇಡ. ಇಡುವ ಮೊದಲ ಹೆಜ್ಜೆಯ ಬಗೆಗೆ ಚಿಂತಿಸು. ಅದು ಅತ್ಯಂತ ಕಷ್ಟಕರ ಮತ್ತು ಜವಾಬ್ದಾರಿಯ ಕೆಲಸ. ನಿನ್ನ ಮೊದಲ ಹೆಜ್ಜೆ ಸರಿ ಇದ್ದರೆ ಉಳಿದಿದ್ದೆಲ್ಲವೂ ತಾನಾಗಿಯೇ ಅನುಸರಿಸುತ್ತದೆ. ಪ್ರವಾಹದಲ್ಲಿ ಕೊಚ್ಚಿಹೋಗಬೇಡ, ಪ್ರವಾಹವೇ ಆಗು.
 1. ನಾವೆಲ್ಲ ಆತನ ಕಲ್ಪನೆಯ ಕೂಸುಗಳು, ಆದಾಗ್ಯೂ ಭಿನ್ನ ಮತ್ತು ಅನನ್ಯ. ಒಬ್ಬರಿನ್ನೊಬ್ಬರಂತಿಲ್ಲ, ಪ್ರತಿ ಹೃದಯದ ಸಂಗೀತವೂ ಭಿನ್ನ. ಆತ ಬಯಸಿದ್ದರೆ ನಮ್ಮನ್ನೆಲ್ಲ ಒಂದೇತೆರನಾಗಿಸಬಹುದಿತ್ತು, ಅಂತೆಯೇ, ಅನ್ಯರನ್ನು ಅಗೌರವಿಸುವುದು ಮತ್ತು ಅವರ ಮೇಲೆ ನಮ್ಮ ವಿಚಾರವನ್ನು ಹೇರುವುದು ಸಮಾನತೆಯ ನಮ್ಮ ಸೃಷ್ಠಿಕರ್ತನಿಗೆ ಅಪಮಾನ ಮಾಡಿದಂತೆಯೆ.

-ಡಾ.ರಾಜಶೇಖರ ಮಠಪತಿ (ರಾಗಂ )

ಮುಂದುವರಿಯುವುದು

1 Response

 1. Hema says:

  ಇದುವರೆಗೆ ಓದಿರದ/ಕೇಳಿರದ ಜ್ಞಾನಭಂಡಾರವಿದು… ತಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: