ಬೆಳಕು-ಬಳ್ಳಿ

ಅವನು-ನಾನು

Share Button
ಆಗಲೇ ಬೆಳಗಾಯಿತೇ?
ಅದೊ, ಗಿಡ ಮರಗಳ ಸಂದಿನಿಂದ
ಸೂರ್ಯ, ಹಾ ಅವನೇ
ಅದೆಷ್ಟು ನಾಚುತ್ತ ಹುಟ್ಟುತ್ತಿದ್ದಾನೆ!
ಅಬ್ಬಾ…ಅವನ ಕಿರಣ ರೇಖುಗಳದೆಷ್ಟು ಚೆನ್ನ
ಎಲ್ಲಿ, ನಾನೆಲ್ಲಿ?
ಇನ್ನೂ ಹುಟ್ಟೇ ಇಲ್ಲವಲ್ಲ!
.
ಅಂತೂ ಅವನು ನಾಚಿಕೆ ಬಿಟ್ಟು ಮೇಲೆದ್ದ!
ಅದೊ, ನಾನೂ ಹುಟ್ಟಿದೆ!
ಆಶ್ಚರ್ಯ…ಎಂಥ ಬೆಳವಣಿಗೆ ನನ್ನದು?
ಅದೆಷ್ಟು ದೂರದವರೆಗೆ ನಾನು!
ಹೌದು ನಾನು, ನಾನೇ!
ಯಾರು ಸಾಟಿ ನನಗೀ ಜಗದಲ್ಲಿ!
.
ಅಯ್ಯೋ… ಇದೇನು?
ನೆತ್ತಿ ಮೇಲೆ ಅವನು … ವಿರಾಜಮಾನ!
ಎಷ್ಟು ಬೇಗ ಕುಬ್ಜನಾಗಿಬಿಡುತ್ತಿದ್ದೇನೆ ಏಕೆ?
ಕರಗುತ್ತಿದ್ದೇನೆ ನಾನು…
ಒಹ್! ಕರಗಿ ಹೋದೆ..
ಅಹಂಕಾರ ಪಡಬಾರದಿತ್ತು ನಾನು!
.
ಬುದ್ಧಿ ಹೇಳಿ ಸರಿದನೇನು ಅವನು?
ನಾನೀಗ ನಿಧಾನವಾಗಿ ನಡೆಯುತ್ತಿದ್ದೇನೆ
ಅವನೂ ನಿಧಾನವಾಗಿ ಅತ್ತ ಸರಿಯುತ್ತಿದ್ದಾನೆ
ನಾನು ಮತ್ತೆ ಬೆಳೆಯುತ್ತಿದ್ದೇನೆ, ನಿಧಾನವಾಗಿ,
ಆದರೆ ಖಂಡಿತವಾಗಿ!
.
ಅವನು ನಗುತ್ತಿದ್ದಾನೆ.
ನಾನೂ ನಸುನಗುತ್ತಿದ್ದೇನೆ.
ಅವನಿಗೇಕೆ ಮತ್ತೆ ನಾಚಿಕೆ?
ನಾಚಿಕೆ ನನಗಿರಬೇಕಿತ್ತು.
ಮರೆಯಾಗುತ್ತಿದ್ದಾನಲ್ಲ!
.
ನಾನು ಎಲ್ಲಿ?
ಕಾಣುತ್ತಲೇ ಇಲ್ಲವಲ್ಲ!
ಮತ್ತೆ ಕರಗಿ ಹೋದೆನೇ?
ಕತ್ತಲಾವರಿಸುತ್ತಿದೆ ಸುತ್ತ
ಅಹುದು…
ಆಗ ಮೇಲಿದ್ದ ಅವನು,
ಈಗ ಅವನಿಲ್ಲ ಅಲ್ಲಿ…
ಬದಲಿಗೆ,
ಬೆಳಕಿನನುಭೂತಿ  ನೆತ್ತಿಯಲ್ಲಿ!
“ನಾನು?”…
ಕತ್ತಲಲ್ಲಿ ಕರಗಿಹೋಗಿದ್ದೇನೆ
ಈಗ!

.

– ಕೆ.ಆರ್. ಎಸ್. ಮೂರ್ತಿ

4 Comments on “ಅವನು-ನಾನು

  1. ಈಗ ಅವನಿಲ್ಲ ಅಲ್ಲಿ…
    ಬದಲಿಗೆ,
    ಬೆಳಕಿನನುಭೂತಿ ನೆತ್ತಿಯಲ್ಲಿ!
    “ನಾನು?”…
    ಕತ್ತಲಲ್ಲಿ ಕರಗಿಹೋಗಿದ್ದೇನೆ
    ಈಗ! ”’ … ಕವನದ ವಿನೀತ ಭಾವ, ಇಷ್ಟವಾಯಿತು ..
    .

  2. ಬುದ್ಧಿ ಹೇಳಿ ಸರಿದನೇನು ಅವನು?
    ನಾನೀಗ ನಿಧಾನವಾಗಿ ನಡೆಯುತ್ತಿದ್ದೇನೆ
    ಅವನೂ ನಿಧಾನವಾಗಿ ಅತ್ತ ಸರಿಯುತ್ತಿದ್ದಾನೆ
    ನಾನು ಮತ್ತೆ ಬೆಳೆಯುತ್ತಿದ್ದೇನೆ, ನಿಧಾನವಾಗಿ,
    ಆದರೆ ಖಂಡಿತವಾಗಿ!
    ಹೌದು ನಾವು ಬೆಳೆಯಲು ಬೇಕಾದ ಹಿತ, ಮಧುರ ಆದರೆ ಸ್ಪಷ್ಟ ಮಾತು.

  3. ತುಂಬಾ ಸ್ಪಷ್ಟವಾದ ಆದರೆ ಸರಳ ಮಾತುಗಳಲ್ಲಿ ಮೂಡಿ ಬಂದ ಹಿತವಚನ ಸೂರಿ ಮಳ್ವಳ್ಳಿ

  4. ಕವನವು ಅದೆಷ್ಟೋ ಸ್ತರಗಳಲ್ಲಿ ಚಿಂತನೆಗೆ ಹಚ್ಚಿತು. ಬರೆಯುತ್ತಿರಿ 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *