‘ಮರಳಿ ಬಾ, ಮತ್ತೊಂದವತಾರದಲಿ’
ಹೇ ದೇವಾ…
ಹತ್ತವತಾರಗಳಲಿ ಮತ್ತೊಮ್ಮೆಯೂ
ಹೆಣ್ಣಾಗದ ನಿನಗೆ ಬೇಕು –
ಹೊಸದೊಂದವತಾರ ; ಹೆಣ್ಣ ಅರಿಯಲು.
ನಿನ್ನ ನಾಟಕ ಶಾಲೆಗೆ ನೀನೇ
ಸೂತ್ರ, ನಿನ್ನದೇ ಮುಖ್ಯ ಪಾತ್ರ.
ಉಳಿದ ಖಾಲಿಯ ತುಂಬಲು
ತಂದ ಹಾಗಿದೆ ಇತರೆ ಸ್ತ್ರೀ ಪಾತ್ರ..
ಒಂದೊಂದು ಗುಣಗಳಿಗೆ ಬೇಕಾಯ್ತು
ಒಬ್ಬೊಬ್ಬ ದೇವ ! ಸೃಷ್ಟಿಗೊಬ್ಬ ಸ್ಥಿತಿಗೊಬ್ಬ
ಲಯಕ್ಕೊಬ್ಬ.., ಅಬ್ಬಬ್ಬಾ..!!
ಹೆಣ್ಣಿಗೆ ಬೇಕಿಲ್ಲ ಈ ಅವತಾರಗಳು,
ನಿನ್ನಂತೆ ಬಹುರೂಪಗಳು..
ಜನ್ಮದೊಂದನುಭವ ಸಾಕವಳಿಗೆ
ಸ್ವಯಂ ದೇವರಾಗಲು..
ಹೆಣ್ಣಾಗುವುದು ಅಷ್ಟು ಸುಲಭವಲ್ಲ,
ಮಣ್ಣು ಹದವಾಗುವಂತೆ ಆಗಬೇಕು.
ಅರ್ಥವಾಗಿರಬೇಕಲ್ಲ ನಿನಗೆ ಇಷ್ಟರಲ್ಲೇ..!
ಹೆಣ್ಣ ಅವತಾರವನು ಹೊಂದಲಾರದಲೇ..
ಹೆಣ್ಣ ಅವತಾರಕೆ ನೀನೇ ಮನಸು
ಮಾಡಲಿಲ್ಲ ಎಂಬುದೆಲ್ಲಾ ಹಸೀ ಸುಳ್ಳು.
ಒಂದವತಾರವೇ ಸಾಕಿತ್ತಲ್ಲ ನಿನ್ನ
ಹಿರಿಮೆಗೆ… ಹತ್ತೇಕೆ ಬೇಕಾಯ್ತು
ಏನೆಂಥಾ ನಿನಗೆ?!
ಅಷ್ಟು ಸುಲಭವಲ್ಲ ಹೆಣ್ಣಾಗುವುದು
ಕಾಯಿ ಹಣ್ಣಾಗುವಂತೆ.. ಕಾಯಬೇಕು,
ಕಾಯ-ಬೇಕು. ಹೆಣ್ಣಾಗಲು
ನೀನೂ ಅಷ್ಟೇ ಕಾಯಬೇಕು..
ಮತ್ತೊಂದವತಾರವಾದರೂ
ಎತ್ತಿ ಬಾ ನೀನು; ಕಡೆಯ ಪಕ್ಷ
ಒಂದು ಹೆಣ್ಣಾಗುವುದು ಏನೆಂದು,
ಹೇಗೆಂದು ಅರಿವಾಗಲು. ಸೃಷ್ಟಿಕ್ರಿಯೆಯು
ಹದವಾಗಲು, ಸಮವಾಗಲು…
– ವಸುಂಧರಾ ಕೆ. ಎಂ., ಬೆಂಗಳೂರು
ಹೌದು…ಭಗವಂತ ಕಷ್ಟದ (ಹೆಣ್ಣಿನ) ಅವತಾರ ಎತ್ತಲೇ ಇಲ್ಲ! ಕವನ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದಗಳು..
ಸುಪರ್ಬ್. ಬಹಳ ಚೆನ್ನಾಗಿ ಬರೆದಿದ್ದೀರಿ ಹೆಣ್ಣಿನ ಬಗ್ಗೆ. ನಿಜ ಹೆಣ್ಣು ನಿಗೂಢ, ಅವಳನ್ನು ಅರ್ಥೈಸಿಕೊಳ್ಳುವುದು ಸುಲಭವಲ್ಲ
ಧನ್ಯವಾದಗಳು..