ಚಂದ್ರು ಆರ್ ಪಾಟೀಲರ ಕಥಾ ಸಂಕಲನ “ಬಡ್ತಿ”

Share Button

ಜೆಸ್ಸಿ ಪಿ ವಿ

ಚಂದ್ರು ಆರ್ ಪಾಟೀಲರ “ಬಡ್ತಿ” ಕಥಾ ಸಂಕಲನ ಓದಿಯಾಯ್ತು.  ವಿಭಿನ್ನ  ಕಥಾವಸ್ತುಗಳನ್ನೊಳಗೊಂಡ ಹನ್ನೆರಡು ಕತೆಗಳು ಈ ಸಂಕಲನದಲ್ಲಿವೆ. ಮೂಢನಂಬಿಕೆಯ ಕಾರಣಕ್ಕಾಗಿ ನಡೆಯಲಿರುವ ತನ್ನ ಬಲಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗೀತಾ ಎಂಬ ಹುಡುಗಿಯ ಕತೆ ಹೇಳುವ ನೆಲವೆ ಹಸಿದು ನಿಂತೊಡೆ” ಎಂಬ ಕತೆಯ ಕ್ಲೈಮ್ಯಾಕ್ಸ್ ತನಕವೂ ಅವಳ ಆತ್ಮಹತ್ಯೆಗೆ ಇಂತದ್ದೊಂದು ಕಾರಣ ಇರಬಹುದೆಂದು ಯಾರಿಗೂ ಅನಿಸದು. ಕೊನೆಯಲ್ಲಷ್ಟೇ ಸಸ್ಪೆನ್ಸ್ ತಿಳಿಯುತ್ತದೆ. “ದೇವ ನಿನ್ನ ಇರವ ನಂಬಿ” ಎಂಬ ಕತೆಯಲ್ಲಿ ಹಳ್ಳಿಯ ಜನರ ಮುಗ್ಧ ಭಕ್ತಿ ಹಾಗೂ ಆಚರಣೆಗಳ ಬಗ್ಗೆ ತಿಳಿಯುತ್ತದೆ.ಈರಪ್ಪ ತಾತ ಎಂಬ ಕಥಾನಾಯಕ ಊರಜನರ ಕಷ್ಟ ಪರಿಹಾರಕ್ಕಾಗಿ ಮಾಡುವಂತಹ ತಂತ್ರ ಅದ್ಭುತವಾಗಿ ನಿರೂಪಿಸಲಾಗಿದೆ. ಇದು ಸುಂದರವಾದ ಒಂದು ಕತೆ.

“ಕಾಯದ ಕಿಚ್ಚು” ನನ್ನನ್ನು ಬಹುವಾಗಿ ಕಾಡಿದ ಕತೆ ಜೊತೆಗೆ ಹೆಚ್ಚು ಯೋಚಿಸುವಂತೆ ಮಾಡಿದ ಕತೆ. ಚೆನ್ನಿ ಎಂಬ ಹುಡುಗಿಗೆ ಕೊನೆಯಲ್ಲಿ ಬಂದೊದಗುವ ದುರ್ವಿಧಿ ನನ್ನ ನೋವಿಗೆ ಕಾರಣವಾದರೆ, ಕತೆಗಾರ ಕಾಮದ ಕುರಿತು ಯಾಕಿಷ್ಟು ಬರೆದ ಎಂಬುದು ಇರಿಸುಮುರಿಸಿಗೂ ಕಾರಣವಾಯ್ತು. ಆದರೆ ಈ ಕತೆಯಲ್ಲಿ ಒಬ್ಬ ವ್ಯಕ್ತಿ ಹಂತಹಂತವಾಗಿ ಒಬ್ಬ ವಿಕೃತ ಕಾಮಿಯಾಗಿ ಬದಲಾಗುತ್ತಾನೆ ಎಂಬ ಕತೆಯನ್ನು ಇದು ಹೇಳುತ್ತದೆ. ಒಂದು  Psychological approach ನ್ನು ಈ ಕತೆಯಲ್ಲಿ ಬಳಸಿದ್ದಾರೆ ಎಂದರೆ ತಪ್ಪಲ್ಲ. ಮನುಷ್ಯನ ಭಾವನೆಗಳನ್ನು ಯಥಾವತ್ತಾಗಿ ಬಿಂಬಿಸುವಲ್ಲಿ ಈ ಕತೆ ಯಶಸ್ವಿಯಾಗಿದೆ. ಕತೆಯ ಹರಿವು ಇಲ್ಲಿ ನಿರರ್ಗಳವಾಗಿದೆ. ಹರವು ವಿಸ್ತೃತವಾಗಿದೆ.

“ಮಾವಿನ ಹೊಲ” ಎಂಬ ಕತೆ ಪ್ರಸ್ತುತ ಸಮಾಜದಲ್ಲಿ ಹಳ್ಳಿಯ ರೈತರು ಅನುಭವಿಸುವ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ. ತಲೆಮಾರಿನ ಅಂತರದಿಂದ ಆ ಹೊಲಕ್ಕಾಗುವ ಸ್ಥಿತಿ, ಕೃಷಿ ಹಾಗೂ ಕೃಷಿಭೂಮಿಯ ಕುರಿತು ಹೊಸತಲೆಮಾರಿನ ವರ್ತನೆ ಏನೆಂಬುದನ್ನು ಬಿಂಬಿಸುತ್ತದೆ. ಸ್ವಂತ ಮನೆಗಾಗಿ ಹಂಬಲಿಸುವ ರೈತ ಕಟುಂಬವೊಂದರ ಕಷ್ಟ-ದುಃಖಗಳ ಸಹಜ ವರ್ಣನೆಯಿರುವ “ಗೂಡು ಇಲ್ಲದ ಹಕ್ಕಿಗಳು” ಕೂಡಾ ಚೆನ್ನಾಗಿದೆ. ಹರೆಯದ ಹೊಸ್ತಿಲಲ್ಲಿ ಯುವಮನಸ್ಸುಗಳಿಗಾಗುವ ತೊಯ್ದಾಟದ ಕುರಿತಾದ ಕತೆ “ಲಯ ಲಹರಿ” ರಾಮು ಎಂಬ ಹುಡುಗನ ವ್ಯರ್ಥ ಪ್ರೇಮದ  ಕುರಿತಾಗಿಯೂ ಕೊನೆಗೆ ಅವನು ತಗೊಂಡ ನಿರ್ಣಯದ ಕುರಿತೂ ಹೇಳುತ್ತದೆ. ಹದಿಹರೆಯದವರು ಓದಬೇಕಾದ ಕತೆಯಿದು. ಒಂದು ಕಂಪೆನಿಯ ಇಬ್ಬರು ಕೆಲಸಗಾರರ ನಡುವಿನ ಪರಸ್ಪರ ಸಂಬಂಧ ಆಪ್ತವಾದ ಬಗೆ, ಕೊನೆಗೆ ಬಡ್ತಿಯ ಕಾರಣಕ್ಕಾಗಿ ಅವರ ಸಂಬಂಧ ಶಿಥಿಲವಾದ ಬಗೆ ಈ ಎಲ್ಲವನ್ನೂ ವಿವರಿಸುವ ಚಂದದ ಕತೆ ಈ ಸಂಕಲನದ ಹೆಸರು ಹೊತ್ತ/ಹೆಸರಿಗೆ ಕಾರಣವಾದ “ಬಡ್ತಿ” ಕತೆ. ಈ ಕತೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಪದವಿಗೆ ಪಠ್ಯವಾಗಿದೆ. ದಿನವೂ ದೇವರಲ್ಲಿ ತನಗೊಬ್ಬ ಗರ್ಲ್ ಫ್ರೆಂಡ್ ಕರುಣಿಸು ಎಂದು ಬೇಡುತ್ತಿದ್ದ ಯುವಕನಿಗೆ ಕೊನೆಗೊಬ್ಬಳು ಗರ್ಲ್ ಫ್ರೆಂಡ್ ಸಿಗುವ ನಾಟಕೀಯ ತಿರುವಿನ ಕತೆ “ಗರ್ಲ್ ಫ್ರೆಂಡ್”, ” ಒಲವಿನ ಓಲೆ” ಕತೆಯಲ್ಲಿ ಯುವಕನೊಬ್ಬ ತನ್ನ ಗೆಳತಿಗೆಂದು ಲವ್ ಲೆಟರ್ ಬರೆದಿರುತ್ತಾನೆ. ಆದರೆ ಕೊನೆಗೂ ಅವನಿಗೆ ಅದನ್ನು ಕೊಡಲಾಗುವುದಿಲ್ಲ. ಅದಕ್ಕೆ ಕಾರಣವಾದ ಪರಿಸ್ಥಿತಿಯನ್ನು ವಿವರಿಸಲಾಗಿದೆ.

“ರೂಂ ಮೇಟ್” ಕತೆಯಲ್ಲಿ ಒಂಟಿಯಾಗಿ ನಿರ್ಜನ ಓಣಿಯಲ್ಲಿ ರೂಂ ಮಾಡಿಕೊಂಡವನೊಬ್ಬ ರೂಂ ಮೇಟಿಗಾಗಿ ಕಾತರಿಸುವುದು, ರೂಂ ಮೇಟ್ ಸಿಕ್ಕಿದಾಗ ಆಗುವ ಫಜೀತಿ ಇತ್ಯಾದಿ ಇದೆ. ಬಹುಶಃ ಕತೆಗಾರನ ಸ್ವಂತ ಬದುಕನ್ನೇ ಬಿಂಬಿಸುವ ಕತೆ ಅಥವಾ ಅದಕ್ಕೆ ಹತ್ತಿರವಾದ ಕತೆ “ಬಿಸಿಲುಂಡವನು”. ಕೊನೆಯ ಕತೆ ” ಒಂದು ಹಳೆ ಮೆಶೀನು” . ಆ ಹಳೆಯ ಮೆಶೀನ್ ಕಂಪೆನಿ ಓನರಿಗೆ ಲಕ್ಕಿಯಾದರೂ, ಕೆಲಸಗಾರರು ಅದರಿಂದ ಪಡುವ ಬವಣೆಗಳೇನು ಎಂಬುದರ ಕತೆ ಹೇಳುತ್ತದೆ. ಹುಡುಗನೊಬ್ಬ ತನ್ನ ಬಲಗೈಯನ್ನು ಕಳೆದುಕೊಳ್ಳುವುದು ಮನ ಕಲಕುತ್ತದೆ.

ಖ್ಯಾತ ಲೇಖಕ ನಾಗರಾಜ ವಸ್ತಾರೆಯವರ ಮುನ್ನುಡಿ ಈ ಕೃತಿಯ ಲಘು ವಿಮರ್ಶೆಯನ್ನು ಓದುಗರಿಗೆ ನೀಡುತ್ತದೆ. ‘ಮನದ ಮಾತು’ ಎಂಬ ಕತೆಗಾರನ ಮಾತು ಅವರ ಮನಸ್ಸನ್ನು ತೆರೆದಿಟ್ಟಿದೆ.

ಚಂದ್ರು ಅವರ ಈ ಕಥಾ ಸಂಕಲನ ಒಂದು ಅತ್ಯುತ್ತಮ ಸಂಕಲನ ಎಂಬುದರಲ್ಲಿ ಸಂದೇಹವಿಲ್ಲ. ಇವರಿಗೆ ಕತೆ ಕಟ್ಟುವ ಕಲೆ ಚೆನ್ನಾಗಿ ಕರಗತವಾಗಿದೆ. ಕತೆಗಳಲ್ಲಿ ಬರುವ ವರ್ಣನೆಗಳು ತುಂಬಾ ಸಹಜವಾಗಿದ್ದು, ಕತೆಯ ಹರಿವಿಗೆ ಚೂರೂ  ಧಕ್ಕೆಯಾಗಿಲ್ಲ. ಸಹಜವಾದ ವರ್ಣನೆ ಆ ಘಟನೆಗಳಿಗೆ ನಾವೂ ಸಾಕ್ಷಿಯೇನೋ ಎಂಬ ಭಾವನೆ ಮೂಡಿಸುತ್ತದೆ. ಚಂದ್ರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಇವರಿಂದ ಹಲವು ಉತ್ತಮ ಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.

– ಜೆಸ್ಸಿ ಪಿ ವಿ, ಪುತ್ತೂರು

2 Responses

  1. Shankari Sharma says:

    ಕಥಾ ವಿಮರ್ಶೆಗಳು ಚೆನ್ನಾಗಿವೆ ಮೇಡಂ.

  2. Nayana Bajakudlu says:

    ಚೆನ್ನಾಗಿದೆ ಕಥಾಸಂಕಲನದ ಕುರಿತಾಗಿ ನಿಮ್ಮ ಅನಿಸಿಕೆಗಳನ್ನೊಳಗೊಂಡ ಬರಹ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: