ಅಜ್ಜಿ ಮನೆ ಎಂಬ ಮಾಯಾಲೋಕ
ಏಪ್ರಿಲ್ , ಮೇ ತಿಂಗಳು ಬೇಸಿಗೆ ರಜೆ ಎಂದೊಡನೆ ನೆನಪಾಗುವುದು ಎಲ್ಲಾ ಮಕ್ಕಳಿಗೂ ಅಜ್ಜಿ ಮನೆ . ಬೇರೆಲ್ಲೂ ಹೋಗ ಬಯಸುವುದಿಲ್ಲ ಪುಟ್ಟ ಜೀವಗಳು. ಆದರೆ ಅಜ್ಜಿಮನೆ ಎಂದರೆ ಪಂಚಪ್ರಾಣ ಅವರಿಗೆ.ಆ ಅಜ್ಜಿಮನೆಯಲ್ಲಿ ಸಿಗುವ ಖುಷಿ, ಸಂತೋಷ, ನೆಮ್ಮದಿ , ಪ್ರೀತಿ , ಸುಂದರ ನೆನಪುಗಳು ಬೇರೆಲ್ಲೂ, ಬೇರೇನೂ ಕೊಟ್ಟರು ಸಿಗುವುದಿಲ್ಲವೇನೋ.
ನನ್ನ ಬಾಲ್ಯದ ದಿನಗಳೂ ಇದರಿಂದ ಹೊರತಾಗಿರಲಿಲ್ಲ . ಹೆಚ್ಚುಕಮ್ಮಿ ನಾನು ನನ್ನ ಅಜ್ಜಿಮನೆಯಿಂದಲೇ ಶಾಲೆಗೇ ಹೋಗುತ್ತಾ ಬರುತ್ತಾ ಬೆಳೆದೆ. ಬೆರಳೆಣಿಕೆಯಷ್ಟು ದಿನಗಳಷ್ಟೇ ಅಪ್ಪ -ಅಮ್ಮನ ಜೊತೆಗಿದ್ದೆ ಎನ್ನಬಹುದು. ಆ ಮನೆಯೊಂದಿಗೆ , ಆ ಅಜ್ಜಿ ಎಂಬ ಜೀವದೊಂದಿಗೆ ಬೆಸೆದ ನನ್ನ ನಂಟು, ನೆನಪುಗಳು ಯಾವತ್ತೂ ಮಾಸಲಾರದಂತಹವು, ಅಮೂಲ್ಯ.
ಅಜ್ಜಿ ಮನೆಯ ಆಕರ್ಷಣೆಯೇ ಹಾಗೆ ಪದಗಳಿಗೆ ನಿಲುಕದ್ದು . ಆ ಹಿರಿ ಜೀವ ತೋರೋ ಕಾಳಜಿ,ಪ್ರೀತಿ, ಮುದ್ದು ಅದೆಷ್ಟೊಂದು ಅಪ್ಯಾಯಮಾನ…… ರಜೆಯಲ್ಲಿ ಮೊಮ್ಮಕ್ಕಳು ಬರುವರೆಂದು ಆ ಹಿರಿ ಜೀವಗಳಿಗೂ ಸಂಭ್ರಮ . ಬಗೆ ಬಗೆಯ ಸಿಹಿ ತಿನಸುಗಳು, ಕರಿದ ತಿಂಡಿಗಳು ರೆಡಿಯಾಗಿ ಡಬ್ಬದೊಳಗೆ ಕುಳಿತಿರುತಿದ್ದವು. ನಾವೂ ಅಷ್ಟೇ ರಜೆಯಲ್ಲಿ ಮನೆಯೊಳಗೆಯೇ ಇರುತ್ತಿರಲಿಲ್ಲ . ಹರಿಯುವ ತೊರೆ, ಕೆರೆ, ಗದ್ದೆ ಬದಿ, ಗುಡ್ಡೆ, ಕಾಡು ಮೇಡಿನಲ್ಲಿನ ಮಾವಿನ ಹಣ್ಣು, ನೇರಳೆ ಹಣ್ಣು ಮುಂತಾದುವುಗಳನ್ನು ಆರಿಸುತ್ತಾ, ಕೊಯ್ಯುತ್ತಾ ಬಿಸಿಲನ್ನೂ ಲೆಕ್ಕಿಸದೆ ಓಡಾಡಿಕೊಂಡಿದ್ದೆವು. ಈ ಸಮಯದಲ್ಲಿ ನನಗೆ ಸಾಥಿ ನನ್ನ ಬಾಲ್ಯದ ಗೆಳೆಕಾರ , ಮಾವನ ಮಗ , ತಮ್ಮನಂತಹ ಸುಭಾಷ್.
ನಮ್ಮಿಬ್ಬರ ತುಂಟಾಟಗಳಿಗೆ ಇತಿಮಿತಿಯೇ ಇರಲಿಲ್ಲ . ಆ ನೆನಪುಗಳೆಲ್ಲಾ ಈಗ ಹಚ್ಚ ಹಸಿರು ಮನಸಿನೊಳಗೆ . ಹಳ್ಳಿ ಮನೆಯಾದ ಕಾರಣ ದನಕರು, ಎಮ್ಮೆ , ಕೋಣಗಳನ್ನು ಸಾಕಿಕೊಂಡಿದ್ದರು ನಮ್ಮ ಅಜ್ಜಿ. ಅವುಗಳನ್ನು ಮೇಯಲು ಗುಡ್ಡೆಗೆ ಅಟ್ಟುತ್ತಿದ್ದರು. ಅವು ಮನೆಗೆ ಬರದೇ ಇದ್ದಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಲ್ಲಿ ನಮ್ಮನ್ನು ಅವುಗಳನ್ನು ಅಟ್ಟಿಸಿಕೊಂಡು ಮನೆಗೆ ಕರೆತರಲು ಕಳುಹಿಸುತ್ತಿದ್ದರು.
ಹೀಗೆಯೇ ಒಂದು ದಿನ ನಾನೂ, ಸುಭಾಷ್ ಅಜ್ಜಿಯ ಎಮ್ಮೆಯನ್ನು ಹುಡುಕಿಕೊಂಡು ಹೊರಟೆವು .ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನ ದಿನ ಅಷ್ಟೇ ನೋಡಿದ್ದ ರಾಜಣ್ಣನ “ಸಂಪತ್ತಿಗೆ ಸವಾಲ್ ” ನ ಹಾಡು “ ಯಾರೇ ಕೂಗಾಡಲಿ “ ನೆನಪಾಗಿ ಅದರ ಬಗ್ಗೆಯೇ ಮಾತಾಡಿಕೊಂಡು ಸಾಗಿದ್ದೆವು. ಅದರಲ್ಲಿ ರಾಜಣ್ಣ ಎಮ್ಮೆಯ ಮೇಲೆ ಕುಳಿತು ಹಾಡುವ ದೃಶ್ಯ . ಎಮ್ಮೆ ಸಿಕ್ಕಿದ ನಂತರ ಅದನ್ನು ಅಟ್ಟಿಸಿಕೊಂಡು ಮನೆಯ ದಾರಿ ಹಿಡಿದೆವು . ಬಿರು ಬಿಸಿಲಿನ ಸಮಯ .ಎಮ್ಮೆ ಒಂದು ವಿಶಾಲವಾದ ಮರ ಸಿಕ್ಕಿದ ಕೂಡಲೇ ಅಲ್ಲಿ ಹೋಗಿ ನಿಂತಿತು. ಆಗ ನನಗೆ ಮತ್ತೊಮ್ಮೆ ರಾಜಣ್ಣನ ಹಾಡು ನೆನಪಾಗಿ ಸುಭಾಷ್ ಹತ್ರ ನಾನು ಎಮ್ಮೆ ಮೇಲೆ ಹತ್ತಿ ಕುಳಿತುಕೊಳ್ಳುತ್ತೇನೆ ನೀನು ಹಿಂದಿನಿಂದ ಅದಕ್ಕೆ ಮೆಲ್ಲಗೆ ಹೊಡಿ ಅಂದೆ . ಅವನು ಮೊದಲು ಬೇಡ ಅಂದವನನ್ನು ಜೋರು ಮಾಡಿ ಒಪ್ಪಿಸಿದೆ . ಆ ಮೇಲೆ ಹತ್ತಿ ಕುಳಿತು ಹ್ಞೂ….. ಹೊಡಿ ಅಂದೆ. ಅವ ಮೆಲ್ಲ ಹೊಡೆದ ಆದರೆ ಅದು ಮುಂದೆ ಹೋಗಲಿಲ್ಲ. ಅದರ ಕತ್ತಿಗೆ ಹಗ್ಗ ಏನೂ ಹಾಕದೆ ಹಾಗೇನೇ ಕುಳಿತಿದ್ದೆ . ಮತ್ತೊಮ್ಮೆ ಜೋರಾಗಿ ಹೊಡಿ ಅಂದೆ. ಅವನು ಕೋಲು ತಗೊಂಡು ಜೋರಾಗಿ ರಪ್ ಎಂದು ಬಾರಿಸಿದ. ನನಗೆ ಏನಾಯಿತು ಅಂತಾನೇ ಗೊತ್ತಾಗಲಿಲ್ಲ. ಮೆಲ್ಲ ಕಣ್ಣು ಬಿಡುವಾಗ ನಾನು ನೆಲದ ಮೇಲೆ ಬಿದ್ದಿದ್ದೆ , ಎಮ್ಮೆ ಅಷ್ಟು ದೂರದಲ್ಲಿ ಹೆದರಿ, ಒಂದೇ ಸಮನೆ ಓಟ ಕಿತ್ತಿತ್ತು .
PC: ಸಾಂದರ್ಭಿಕ, ಅಂತರ್ಜಾಲ
ಕೆಳಗೆ ಬಿದ್ದ ರಭಸಕ್ಕೆ ನನಗೆ ಮೇಲೆ ಏಳಲಾಗದಷ್ಟು ಸೊಂಟ ಜಜ್ಜಿ ಹೋಗಿತ್ತು . ಈ ಸುಭಾಷ್ ದೂರದಲ್ಲಿ ನಿಂತು ಹೊಟ್ಟೆ ಹುಣ್ಣಾಗುವಷ್ಟು ನಗುತಿದ್ದಾನೆ . ನನಗೆ ನಗು , ಸಿಟ್ಟು ಎರಡೂ ಒಟ್ಟಿಗೆ ಬರುತಿತ್ತು. ಆ ನಡುವೆಯೂ ಅವನೊಂದಿಗೆ ಜಗಳಕ್ಕೆ ನಿಂತೇ.ನನ್ನನ್ನು ಬೀಳಿಸಿ ನಗ್ತಿದ್ದೀಯಾ ಅಂತ ಬೈದೆ . ಅವನೋ ಮೊದಲಿನಿಂದಲೂ ಸೌಮ್ಯ ಸ್ವಭಾವದವನು . ತನ್ನ ನಗುವನ್ನು ತಡೆಯಲು ಪ್ರಯತ್ನಿಸುತ್ತಾ ನೀನು ಹೇಳಿದ್ದಕ್ಕೆ ತಾನೇ ನಾನು ಹೊಡೆದಿದ್ದು ಅಂತ ಹೇಳಿ ನನ್ನನ್ನು ಎಬ್ಬಿಸಿ , ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋದ .
ಮನೆಗೆ ಹೋಗಿ ಮನೆ ಮಂದಿಯ ಮುಂದೆಲ್ಲಾ ಹೇಳಿ ಮತ್ತೆ ನಗು. ಈ ಬಾಲ್ಯದ ಘಟನೆ ಯಾವತ್ತೂ ಮನಸ್ಸಿನಿಂದ ಮರೆಯಾಗದು. ಈಗಲೂ ಎಲ್ಲರು ಒಟ್ಟು ಸೇರಿದಾಗ ಅವನು ಈ ವಿಷಯ ತೆಗೆದು ಎಲ್ಲರೂ ಸೇರಿ ಬಿದ್ದು ಬಿದ್ದು ನಗುತ್ತೇವೆ . ಇದು ಬೇಸಿಗೆಯ ರಜೆಯ ಸುಂದರ ನೆನಪುಗಳ ಬುತ್ತಿಯಲ್ಲಿನ ನನ್ನ ಯಾವಾಗಲೂ ನೆನಪಾಗಿ ನಗಿಸುವಂತಹ ಒಂದು ಘಟನೆ , ನೆನಪು.
ಸ್ನೇಹಿತರೇ, ನಮ್ಮೆಲ್ಲರ ಬಾಲ್ಯ ಎಷ್ಟೊಂದು ಸುಂದರವಾಗಿತ್ತು ? ಆದರೆ ಈಗಿನ ಹೆಚ್ಚಿನ ಮಕ್ಕಳು ಇಂತಹ ಅನುಭವಗಳಿಂದ ವಂಚಿತರಾಗುತ್ತಿದ್ದಾರೆ . ತಾಂತ್ರಿಕ ಜಗತ್ತು ತನ್ನ ಬಾಹುಗಳನ್ನು ಎಲ್ಲೆಲ್ಲೂ ಹಬ್ಬಿರುವುದು ಇದಕ್ಕೆ ಒಂದು ಕಾರಣ . ಮೊಬೈಲ್ , ಕಂಪ್ಯೂಟರ್ ಗೇಮ್ ನ ಒಳಗೆ ಸೇರಿ ಹೋಗೋ ಮಕ್ಕಳಿಗೆ ಹೊರಗಿನ ಜಗತ್ತಿನ ಪರಿಚಯವೇ ಇಲ್ಲ . ಸಂಬಂಧಗಳೆಂಬ ಬಂಧದ ಅನುಬಂಧವೇ ಇಲ್ಲ . ಇದು ಬಹಳ ನೋವಿನ ಸಂಗತಿ . ನಮ್ಮ ಮಕ್ಕಳು ಕೂಡ ಯಂತ್ರಗಳಂತೆ ದಿನದಿಂದ ದಿನಕ್ಕೆ ಯಾಂತ್ರಿಕವಾಗುತ್ತಿದ್ದಾರೆ. ಇದನ್ನು ಆದಷ್ಟು ತಡೆಯಲು ಪ್ರಯತ್ನಿಸಿ ಅವರ ಮನಗಳಲ್ಲೂ ಸಂಬಂಧಗಳ ನವಿರಾದ ಸೊಗಡನ್ನು ತುಂಬೋಣ . ಅವರ ಬಾಲ್ಯವನ್ನೂ ಹಸಿರಾಗಿಸೋಣ.
– ನಯನ ಬಜಕೂಡ್ಲು
ಮುಗ್ಧತೆ, ಪ್ರಾಮಾಣಿಕತೆಗಳು ತುಂಬಿ ತುಳುಕುವ ಲೇಖನ..ಸೂಪರ್