ಒಂದೇ ಒಂದು ಕಿಡಿ ಸಾಕು
ಈ ರಣ ಬಿಸಿಲಿಗೆ
ಕರುಣೆಯೂ ಇಲ್ಲ
ಭೇಧವೂ ಇಲ್ಲ
ಏಕ ಪ್ರಕಾರವಾಗಿ ವ್ಯಾಪಿಸುತ್ತಿದೆ.
ಬಿಸಿಲ ಚಾದರದೊಳಗೆ
ಹೆಂಚು ಮಾಡು
ಬಹು ಮಹಡಿಯ ತಾರಸಿ
ಮುಳಿ ಹುಲ್ಲಿನ ಜೋಪಡಿ
ಒಂದೇ ಸಮಗೆ ಬೆವರಿಳಿಸಿ
ಬೇಯುತ್ತಿದೆ.
ನಿಗಿ ನಿಗಿ ಉರಿಯುವ
ನಡು ಹಗಲಿನೊಳಗೆ
ರೆಪ್ಪೆ ಅಲುಗದೇ ನಿಂತು
ಕಾಲು ನಡೆಯದೇ ಸೋತು
ಬಿಟ್ಟ ನಿಟ್ಟುಸಿರ ಬೇಗೆ
ಸುಡದೇ ಉಳಿಸೀತೇ ಒಳಗೂ..
ಹೊರಗೂ..?
ಹೊತ್ತೇರಿ ಕಂತುವ ಹೊತ್ತಿಗೆ
ಸಂಜೆ ಬೂದಿ ಮುಚ್ಚಿದ ಕೆಂಡ
ಹಾಗೇ ಸುಳಿದ ಗಾಳಿಗೆ ದಡಬಡಿಸಿ ಎದ್ದು
ಬೆಂಕಿ ಊದಲು ಶುರುವಿಟ್ಟಿದೆ
ಮತ್ತೊಂದು ನಸು ಬೆಳಗು.
ಉರಿ ತಡೆಯಲಾರದ ತರಗೆಲೆ
ದಿಕ್ಕು ದೆಸೆಯಿಲ್ಲದೆ ಹಾರುವಾಗ
ಮರಗಿಡಗಳು ನಿಶ್ಚಲ ನಿಂತ ಪ್ರತಿಮೆಗಳಾಗಿವೆ.
ಅಲ್ಲೊಂದು ತಣ್ಣಗೆಯ ನದಿ ಹರಿದಿತ್ತು
ಎನ್ನುವುದ್ದಕ್ಕೆ ಯಾವ ಕುರುಹು ಉಳಿಯದೆ
ಬಂಡೆಗಲ್ಲ ಮೇಲೆ ಬಿಸಿಲು ಝಳಪಳಿಸುತ್ತ
ಕತ್ತಿ ಮಸೆಯುತ್ತಿದೆ.
ನೆಲ ಕಾದ ಓಡು
ಕಾಣುವುದಿಲ್ಲ ಬರಿಗಣ್ಣಿಗೆ
ಹಾಗಂತ ಕಾಲೂರಲಾದೀತೇ?
ಗೊತ್ತಿರುವಂತದ್ದೆ, ಹಸಿ ಬೇಗ ಕಾಯುವುದಿಲ್ಲ
ಕಾದರೆ ಬೇಗನೇ ತಣಿಯುವುದೂ ಇಲ್ಲ.
ಬಟಾ ಬಯಲಿನಲ್ಲಿ ರಾಚುವ ಬಿಸಿಲಿನಲ್ಲಿ
ಬಿಸಿಲ ಪಕ್ಷಿಯೊಂದು ಚುಂಚದಲ್ಲಿ
ಕಿಡಿ ಚೂರು ಹಿಡಿದುಕೊಂಡು ಬಿಸಿಲ ಉಗುಳುತ್ತಾ
ದಣಿವೇ ಇರದೆ ಉದ್ದಗಲಕ್ಕೂ ಹಾರುತ್ತಿದೆ.
ಈಗ ಒಂದೇ ಒಂದು ಕಿಡಿ ಸಾಕು
ಧರೆ ಹೊತ್ತಿ ಉರಿಯಲು
ಧಾರೆ ಧಾರೆ ಸುರಿಯ ಬೇಕು
ಕಾವು ತಣಿಯಲು.
-ಸ್ಮಿತಾ ಅಮೃತರಾಜ್, ಸಂಪಾಜೆ
ಬೆವರಿಳಿತು ಕವನ!…ಚೆನ್ನಾಗಿದೆ.
ಸ್ಮಿತಾ ಜೀ ಬಹಳ ಚೆನ್ನಾಗಿದೆ… ಪ್ರಕೃತಿಯನ್ನು ಚೆನ್ನಾಗಿ ಕಂಡಿರಿಸಿದ್ದೀರಿ…
ನೈಸ್. ಪ್ರಸ್ತುತ ಪರಿಸ್ಥಿತಿ ಹೀಗೇನೆ ಇದೆ . ಕವನ ಓದುವಾಗ ನಾಗರಹೊಳೆಯ ಘಟನೆ ನೆನಪಾಯಿತು .
“ಬಿಸಿಲ ಪಕ್ಷಿಯೊಂದು ಚುಂಚದಲ್ಲಿ
ಕಿಡಿ ಚೂರು ಹಿಡಿದುಕೊಂಡು ಬಿಸಿಲ ಉಗುಳುತ್ತಾ
ದಣಿವೇ ಇರದೆ ಉದ್ದಗಲಕ್ಕೂ ಹಾರುತ್ತಿದೆ.” ಅದ್ಭುತ ಪರಿಕಲ್ಪನೆ!
ವಂದನೆಗಳು ತಮಗೆಲ್ಲ -ಸ್ಮಿತಾ
ಉರಿಬಿಸಿಲ ಬೇಗೆಯ ಬವಣೆಯ ಬಣ್ಣಿಸಿದ ಪರಿ
ಚೆಂದವಾಗಿದೆˌ ಸ್ಮಿತಾˌ